ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 45 ವರ್ಷದ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿಯ ಕಡೆಯ 7 ಮಂದಿ ಸಂಬಂಧಿಕರನ್ನು ಒರಳು ಕಲ್ಲಿನಿಂದ ಜಜ್ಜಿ ಅಮಾನುಷವಾಗಿ ಹತ್ಯೆಗೈದಿರುವ ಭೀಕರ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಆರೋಪಿಯನ್ನು ರಾಜಾಜಿನಗರ ಠಾಣೆ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಶೇಖರ್ ಅಲಿಯಾಸ್ ಇಂದುಶೇಖರ್ ಬಂಧಿತ ಆರೋಪಿ. ಈತ 20 ವರ್ಷಗಳ ಹಿಂದೆ ಸುನೀತಾ ಎಂಬುವರನ್ನು ವಿವಾಹವಾಗಿದ್ದನು. ಆದರೆ, ಇವರಿಬ್ಬರ ನಡುವೆ ಕಳೆದ ಕೆಲ ಕಾಲದಿಂದ ದಾಂಪತ್ಯ ಕಲಹಗಳು ನಡೆಯುತ್ತಿದ್ದವು. ಈ ಜಗಳಗಳ ಸಂದರ್ಭದಲ್ಲಿ ಸುನೀತಾ ಅವರ ಕುಟುಂಬದವರು ಹಲವು ಬಾರಿ ಮಧ್ಯಪ್ರವೇಶಿಸಿ ಆಕೆಗೆ ಬೆಂಬಲ ನೀಡುತ್ತಿದ್ದರು. ತನ್ನ ದಾಂಪತ್ಯ ಜೀವನದಲ್ಲಿ ಪತ್ನಿಯ ಕುಟುಂಬದವರು ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ ಶೇಖರ್, ಅವರನ್ನು ಸಂಪೂರ್ಣವಾಗಿ ಮುಗಿಸಲು ನಿರ್ಧರಿಸಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹತ್ಯೆ ಮಾಡಲು ಸಂಚು ರೂಪಿಸಿದ ಆರೋಪಿ ಶೇಖರ್, ರಾಜಾಜಿನಗರದ ಭಾಷ್ಯಂ ವೃತ್ತದ ಬಳಿ ಇರುವ ತನ್ನ ಮನೆಗೆ ಸಂತ್ರಸ್ತರನ್ನು ಒಬ್ಬೊಬ್ಬರನ್ನಾಗಿ ಕರೆಸಿಕೊಂಡಿದ್ದನು. ಹೀಗೆ ಬಂದವರನ್ನು ಒರಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾನೆ. ಮೊದಲು ತನ್ನ ಪತ್ನಿ ಸುನೀತಾಳನ್ನು ಕೊಂದ ಈತ, ನಂತರ ಅತ್ತೆ ಹಾಗೂ ಇತರ ಸದಸ್ಯರನ್ನು ಗುರಿಯಾಗಿಸಿ ಹತ್ಯೆಗೈದಿದ್ದಾನೆ. ತನ್ನ ಬಾವ-ಮೈದುನರಿಗೆ ಮನೆಯಲ್ಲಿ ಪಾರ್ಟಿ ಇದೆ ಎಂದು ನಂಬಿಸಿ ಕರೆಸಿಕೊಂಡಿದ್ದನು. ಮೃತರನ್ನು ಪತ್ನಿ ಸುನೀತಾ, ಅತ್ತೆ ರೂಪಾವತಿ, ಬಾವ-ಮೈದುನರಾದ ಶಿವಕುಮಾರ್ ಮತ್ತು ಶಂಕರ್, ರೂಪಾವತಿ ಅವರ ಸೊಸೆಯಂದಿರಾದ ದಿವ್ಯಾ ಮತ್ತು ನಳಿನಿ, ಹಾಗೂ ಶಿವಕುಮಾರ್ ಅವರ 7 ವರ್ಷದ ಪುತ್ರ ಪುನೀತ್ ಎಂದು ಗುರುತಿಸಲಾಗಿದೆ. ಈ ಎಲ್ಲಾ ಕೊಲೆಗಳನ್ನು ಆರೋಪಿ ಎರಡು ದಿನಗಳ ಅವಧಿಯಲ್ಲಿ ಮಾಡಿದ್ದಾನೆ.
ನಳಿನಿ ಅವರು ನಾಪತ್ತೆಯಾದ ನಂತರ ಈ ಭೀಕರ ಘಟನೆ ಬೆಳಕಿಗೆ ಬಂದಿದೆ. ನಳಿನಿ ಅವರ ತಾಯಿ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಆರಂಭಿಸಿದ ಪೊಲೀಸರು, ಶೇಖರ್ ಮೇಲೆ ಅನುಮಾನಗೊಂಡು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈ ಏಳು ಕೊಲೆಗಳ ರಹಸ್ಯ ಬಯಲಾಗಿದೆ. ಕೊಲೆಯಾದ ನಂತರ ಆರೋಪಿಯು ಕೆಲವು ಮೃತದೇಹಗಳನ್ನು ಚಿಕ್ಕಬಳ್ಳಾಪುರ ಬಳಿಯ ವಿವಿಧ ಕಡೆಗಳಲ್ಲಿ ಬಿಸಾಕಿದ್ದಾನೆ. ಈ ಪೈಕಿ 7 ವರ್ಷದ ಬಾಲಕ ಪುನೀತ್‌ನ ಮೃತದೇಹ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ (ನಂದಿ ಹಿಲ್ಸ್) ಬಳಿ ಪತ್ತೆಯಾಗಿದೆ. ಉಳಿದ ಮೃತದೇಹಗಳನ್ನು ಆರೋಪಿ ಎಲ್ಲಿ ಬಿಸಾಕಿದ್ದಾನೆ ಎಂಬ ಬಗ್ಗೆ ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.




