ಚಳ್ಳಕೆರೆಯಲ್ಲಿ ಶಿಕ್ಷಕನೇ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕೃತ್ಯ ಬೆಳಕಿಗೆ ಬಂದಿದೆ. ಆರೋಪಿ ಓ. ರಾಜಣ್ಣ ಚಳ್ಳಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಶಿಕ್ಷಕನಾಗಿದ್ದು, ಶಾಲೆಯ 16 ವರ್ಷದ ಬಾಲಕಿಯನ್ನು ಸತತವಾಗಿ ತನ್ನ ವಾಂಛೆಗೆ ಬಳಸಿಕೊಂಡಿದ್ದಾನೆ. ಬಾಲಕಿ ಗರ್ಭ ಧರಿಸಿದ ಮೇಲೆ ಆಕೆಗೆ ಗರ್ಭಪಾತ ಮಾಡಿಸಿದ್ದಾನೆಂಬ ಆರೋಪ ಕೇಳಿ ಬಂದಿದೆ. ಪೋಷಕರ ದೂರು ಆಧರಿಸಿ POCSO ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಳ್ಳಕೆರೆಯ ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹೀನ ಕೃತ್ಯ ಹೊರ ಸಮಾಜಕ್ಕೆ ತಿಳಿಯದಂತೆ ತಡೆಯಲು ಪ್ರಯತ್ನಿಸಿದ ರಾಜಣ್ಣ, ಗರ್ಭಪಾತ ಮಾಡಿಸಲು ಚಳ್ಳಕೆರೆಯ ಲಕ್ಷ್ಮಿ ಶ್ರೀನಿವಾಸ ನರ್ಸಿಂಗ್ ಆಸ್ಪತ್ರೆಗೆ ಬಾಲಕಿಯನ್ನು ಕರೆದೊಯ್ದಿದ್ದ ಎನ್ನಲಾಗಿದೆ. ಆಸ್ಪತ್ರೆಯ ವೈದ್ಯೆ ಶಂಕರ ಲಕ್ಷ್ಮಿ ಅಪ್ರಾಪ್ತ ಬಾಲಕಿಗೆ ಮಾತ್ರೆ ನೀಡಿ ಗರ್ಭಾಪಾತ ಮಾಡಿಸಿದ್ದು, ಇದರಿಂದ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಯವಾದದ್ದು ಪೋಷಕರ ಗಮನಕ್ಕೆ ಬಂದಿದೆ. ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಆರೋಪಿ ಎಸಗಿದ್ದ ದುಷ್ಕೃತ್ಯ ಅನಾವರಣಗೊಂಡಿದೆ.
ಇದನ್ನೂ ಓದಿ>ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; RSS ಮುಖಂಡನ ಬಂಧನ
ಸದ್ಯ ಗರ್ಭಪಾತ ಮಾಡಿಸಿದ ವೈದ್ಯೆ ಶಂಕರ ಲಕ್ಷ್ಮಿ ವಿರುದ್ಧವೂ ದೂರು ದಾಖಲಾಗಿದೆ. ವಿದ್ಯೆ ಕಲಿಸುವ ಶಿಕ್ಷಕನೇ ಈ ಅಮಾನವೀಯ ಕೃತ್ಯಕ್ಕೆ ಕೈ ಹಾಕಿರುವುದರಿಂದ ಆಕ್ರೋಶಗೊಂಡಿರುವ ಬಾಲಕಿಯ ಪೋಷಕರು ಹಾಗೂ ಸ್ಥಳೀಯರು ಆರೋಪಿ ಶಿಕ್ಷಕ ರಾಜಣ್ಣನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.




