ಸರ್ಕಾರದ ತಪ್ಪುಗಳು ಹಾಗೂ ಸಂಪನ್ಮೂಲ ಸೋರಿಕೆಯನ್ನು ಸರಿಪಡಿಸಲು ಸಲಹೆ ನೀಡುವುದರ ಜತೆಗೆ, ರಾಜ್ಯದ ಆದಾಯ ಸಂಗ್ರಹ ಹೆಚ್ಚಿಸಲು ಮಾರ್ಗದರ್ಶನ ನೀಡುವಂತೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಕರೆ ನೀಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಶುಕ್ರವಾರ ಆಯೋಜಿಸಿದ್ದ ‘ಸಂವಾದ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, “ನಮ್ಮ ಸರ್ಕಾರ ತೆರೆದ ಪುಸ್ತಕ. ಹೊಸ ವಿಚಾರ ಹಾಗೂ ಪರಿಹಾರಗಳಿಗೆ ನಾವು ಮುಕ್ತವಾಗಿದ್ದೇವೆ. ಸರ್ಕಾರದ ತಪ್ಪುಗಳು ಮತ್ತು ಸಂಪನ್ಮೂಲ ಸೋರಿಕೆಯನ್ನು ತಡೆಗಟ್ಟಲು ನಿಮ್ಮ ಸಲಹೆ ಅಗತ್ಯವಿದೆ” ಎಂದರು.
ನಮ್ಮ ಸರ್ಕಾರ ತೆರೆದ ಪುಸ್ತಕ. ಹೊಸ ವಿಚಾರ, ಪರಿಹಾರಕ್ಕೆ ನಾವು ಮುಕ್ತರಾಗಿದ್ದೇವೆ. ನಮ್ಮ ತಪ್ಪುಗಳು, ಸಂಪನ್ಮೂಲ ಸೋರಿಕೆ ತಡೆಗಟ್ಟಲು ನಿಮ್ಮ ಸಲಹೆಗಳನ್ನು ನೀಡಿ. ನಿಂಬೆಗಿಂತ ಶ್ರೇಷ್ಠವಾದ ಹುಳಿ, ದುಂಬಿಗಿಂತ ಶ್ರೇಷ್ಠವಾದ ಕಪ್ಪು, ಶಿವನಿಗಿಂತ ದೊಡ್ಡ ದೇವರು, ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ ಎಂದು ಸರ್ವಜ್ಞ ಹೇಳಿದ್ದಾರೆ. ನೀವು ನಂಬಿಕೆಯ ರಕ್ಷಕರು. ನಂಬಿಕೆ ಎಂಬುದು ನಿಮ್ಮ ರಕ್ತದಲ್ಲೇ ಬಂದಿದ್ದು, ನೀವು ಅದನ್ನು ಉಳಿಸಿಕೊಳ್ಳಬೇಕು. ನೀವು ಹೇಳಿದ್ದನ್ನು ನಾವು ನಂಬುತ್ತೇವೆ. ನೀವು ನಮ್ಮ ಬದುಕು, ಆಸ್ತಿ ರಕ್ಷಿಸಿ ಆದಾಯಕ್ಕೆ ಮಾರ್ಗದರ್ಶನ ನೀಡಬೇಕು. ನಮ್ಮ ತಪ್ಪುಗಳನ್ನು ನಿವಾರಣೆ ಮಾಡುವ ಸಾಮಾರ್ಥ್ಯ ನಿಮಗಿದೆ. ನೀವು ದೇಶ ಕಟ್ಟುತ್ತಿದ್ದು, ನಿಮ್ಮ ಬಗ್ಗೆ ದೇಶಕ್ಕೆ ಹೆಮ್ಮೆ ಇದೆ ಎಂದು ಪ್ರಶಂಸಿಸಿದರು.
ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಅಧಿಕಾರಿಗಳು ಮಾನಸಿಕ ಕಿರುಕುಳ ನೀಡಿ ಕುಗ್ಗಿಸುತ್ತಾರೆ. ಯಾರು ಕಳ್ಳತನ ಮಾಡುತ್ತಾರೆ ಅವರಿಗೆ ಪ್ರಶ್ನೆ ಮಾಡುವುದಿಲ್ಲ. ಈ ದೇಶದಲ್ಲಿ 12 ಲಕ್ಷ ಉದ್ಯಮಿಗಳು ಈ ದೇಶವನ್ನು ತ್ಯಜಿಸಿದ್ದಾರೆ. ಐಟಿ, ಇಡಿ, ಸಿಬಿಐ ಸಹವಾಸ ಸಾಕು ಎಂದು ಹೋಗುತ್ತಿದ್ದಾರೆ. ತೊಂದರೆ ಕೊಡುವುದೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕೆಲಸ. ಕೆಲವು ವರ್ಷಗಳ ಹಿಂದೆ ಗುಜರಾತ್ ಗೆ ಹೋಗಿದ್ದಾಗ ಅಲ್ಲಿ 70% ನಗದಿನಲ್ಲೇ ನಡೆಯುತ್ತಿದೆ. ಕೇವಲ 30% ಮಾತ್ರ ವೈಟ್ ಅಲ್ಲಿ ನಡೆಯುತ್ತಿದೆ. ನಮ್ಮ ಕರ್ನಾಟಕದಲ್ಲಿ 90% ವೈಟ್ ಮೂಲಕ ವ್ಯವಹಾರಗಳು ನಡೆಯುತ್ತಿವೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಾವು ಶಿಸ್ತುಬದ್ಧರಾಗಿದ್ದೇವೆ ಎಂದರು.
ಕರ್ನಾಟಕ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ನಿಮ್ಮ ಮಾರ್ಗದರ್ಶನವಿಲ್ಲದೇ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ದಕ್ಷಿಣ ಭಾರತ ಇಡಿ ದೇಶದ ಪ್ರಗತಿಯ ಇಂಧನವಾಗಿದೆ. ದಕ್ಷಿಣ ಭಾರತವಿಲ್ಲದೆ ಭಾರತದ ಪ್ರಗತಿ ಸಾಧ್ಯವಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮುಂದೆ ವಾದ ಮಂಡಿಸಿದೆವು. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ದಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ರಾಜ್ಯಗಳಿಂದ ಬರುವ ಬಂಡವಾಳ ಹೂಡಿಕೆದಾರರಿಗೆ ನೀವು ಉತ್ತಮ ಸಲಹೆ ನೀಡುತ್ತಿದ್ದೀರಿ. ಹೊಸ ಹೂಡಿಕೆ, ಉದ್ಯಮ, ಉದ್ಯೋಗ ಸೃಷ್ಟಿ, ಅನ್ವೇಷಣೆ, ರಫ್ತಿಗೆಗೆ ಕರ್ನಾಟಕ ಅತ್ಯುತ್ತಮ ಕೇಂದ್ರವಾಗಿದೆ ಎಂದು ಹೇಳಿದರು.
ಕರ್ನಾಟಕ ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯವಾಗಿದ್ದು, ಭಾರತದ ಸಾಫ್ಟ್‌ವೇರ್ ರಫ್ತಿನಲ್ಲಿ ರಾಜ್ಯದ ಪಾಲು ಶೇ.42ರಷ್ಟಿದೆ. ಐಟಿ-ಬಿಟಿ, ತಂತ್ರಜ್ಞಾನ, ಏರೋಸ್ಪೇಸ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ವಿಧಾನಸಭೆ ಅಧಿವೇಶನ ನಡೆಯುತ್ತಿರುವುದರಿಂದ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಕಾರ್ಯಕ್ರಮಕ್ಕೆ ಈಗಾಗಲೇ ಒಪ್ಪಿಕೊಂಡಿದ್ದರಿಂದ ಬಂದಿದ್ದೇನೆ ಎಂದು ಹೇಳಿದ ಸಿಎಂ, ಪ್ರತಿಪಕ್ಷ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ವಿರೋಧ ಪಕ್ಷದ ಬಿಜೆಪಿ ಸ್ನೇಹಿತರಿಗೆ ನನ್ನನ್ನು ಹಾಗೂ ನನ್ನ ಸರ್ಕಾರವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಸರ್ಕಾರ ಜನಸಾಮಾನ್ಯರ ಪರವಾಗಿ ಕೈಗೊಳ್ಳುತ್ತಿರುವ ನೀತಿಗಳಿಂದಾಗಿ ನನ್ನ ವಿರುದ್ಧ ಹೋರಾಡಲು ಅವರಿಗೆ ಯಾವುದೇ ಅವಕಾಶ ಸಿಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ. ಹೀಗಾಗಿ ಅವರು ಸದನದಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ” ಎಂದು ಟೀಕಿಸಿದರು.
ಚೆನ್ನೈನಲ್ಲಿ ನಡೆದ ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ರಾಜ್ಯಗಳ ಸಮಸ್ಯೆಗಳನ್ನು ಪ್ರಸ್ತಾಪಿಸಿರುವುದಾಗಿ ತಿಳಿಸಿದ ಅವರು, ರಾಜ್ಯಕ್ಕೆ ನ್ಯಾಯಯುತ ಪಾಲು ನೀಡಬೇಕು ಎಂದು ಒತ್ತಾಯಿಸಿದರು.
ದಕ್ಷಿಣ ಭಾರತ ದೇಶಕ್ಕೆ ನೀಡುತ್ತಿರುವ ಕೊಡುಗೆ ಮತ್ತು ಪಡೆಯುತ್ತಿರುವ ಅನುದಾನದ ನಡುವೆ ವ್ಯತ್ಯಾಸವಿದೆ. ಈ ಬಗ್ಗೆ ಕೇಂದ್ರದ ಮುಂದೆ ನಮ್ಮ ನಿಲುವನ್ನು ಮಂಡಿಸಿದ್ದೇವೆ. ನಾವು ಹಚ್ಚಿರುವ ಅಭಿವೃದ್ಧಿಯ ಜ್ಯೋತಿ ಸುಲಭವಾಗಿ ಆರುವುದಿಲ್ಲ. ಅದು ರಾಜ್ಯದ ಜನರ ಬದುಕಿನಲ್ಲಿ ಬೆಳಕು ತರಲಿದೆ ಎಂದರು.
ರಾಜ್ಯ ಸರ್ಕಾರ ಪ್ರತಿ ವರ್ಷ ಸುಮಾರು ₹52 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ಸುಮಾರು ₹20 ಸಾವಿರ ಕೋಟಿ ವೆಚ್ಚವಾಗುತ್ತಿದೆ. ವಿವಿಧ ಪಿಂಚಣಿ ಯೋಜನೆಗಳಿಗೂ ಹಣ ಖರ್ಚು ಮಾಡಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
ಉದ್ಯಮಗಳಿಗೆ ಸಿಎಸ್ಆರ್ ನಿಧಿಯ ಸದ್ಬಳಕೆ ಕುರಿತು ಮಾರ್ಗದರ್ಶನ ಅಗತ್ಯವಿದೆ. ಸಿಎಸ್ಆರ್ ನಿಧಿಯನ್ನು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚು ಬಳಸಬೇಕು. ಇದಕ್ಕಾಗಿ ಸರ್ಕಾರ ಶಿಕ್ಷಣ ನೀತಿ ರೂಪಿಸುತ್ತಿದೆ ಎಂದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣ: ಸಾಕ್ಷಿಗೆ ಬೆದರಿಕೆ ಕರೆ; ರಕ್ಷಣೆ ನೀಡಲು ಕೋರ್ಟ್ ಸೂಚನೆ
ಉದ್ಯೋಗ ಮತ್ತು ಶಿಕ್ಷಣಕ್ಕಾಗಿ ಜನರು ನಗರಗಳಿಗೆ ವಲಸೆ ಬರುವುದನ್ನು ಕಡಿಮೆ ಮಾಡಬೇಕಿದೆ. 25 ವರ್ಷಗಳ ಹಿಂದೆ ಸುಮಾರು 70 ಲಕ್ಷವಿದ್ದ ಬೆಂಗಳೂರಿನ ಜನಸಂಖ್ಯೆ ಈಗ 1.40 ಕೋಟಿಗೆ ಏರಿಕೆಯಾಗಿದೆ. ವಾಹನಗಳ ಸಂಖ್ಯೆಯೂ 1.35 ಕೋಟಿಗೆ ತಲುಪಿದೆ. ಹೀಗಾಗಿ ನಗರದಲ್ಲಿನ ಸಂಚಾರ ದಟ್ಟಣೆ ಸೇರಿದಂತೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.
ತಾವು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ಬಿಜೆಪಿ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಸಿಎಂ, ನಗರಾಭಿವೃದ್ಧಿ ವಿಚಾರದಲ್ಲಿ ರಾಜಕೀಯಕ್ಕಿಂತ ಸಾಮಾನ್ಯ ಜ್ಞಾನ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂದರು.
“ಆರ್ಥಿಕತೆ ಉತ್ತಮವಾಗಿ ನಡೆಯಲು ದುಡ್ಡು ಮತ್ತು ಬ್ಲಡ್ ಎರಡೂ ಹರಿಯುತ್ತಿರಬೇಕು. ಬ್ಲಡ್ ಒಂದೇ ಕಡೆ ನಿಂತರೆ ಆರೋಗ್ಯ ಹದಗೆಡುತ್ತದೆ. ಹಣ ಒಂದೇ ಕಡೆ ಸೇರಿಕೊಂಡರೆ ಆದಾಯ ತೆರಿಗೆ, ಜಿಎಸ್‌ಟಿ ಹಾಗೂ ಕಳ್ಳರು ಬರುತ್ತಾರೆ” ಎಂದು ಸಾಯಿಬಾಬಾ ಅವರ ಮಾತನ್ನು ಸ್ಮರಿಸಿದರು.
ICAIಗೆ ಜಾಗದ ಅಗತ್ಯವಿದೆ ಎಂಬ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಅವರು, ಅಧಿವೇಶನ ಮುಗಿದ ಬಳಿಕ ತಮ್ಮನ್ನು ಭೇಟಿ ಮಾಡುವಂತೆ ತಿಳಿಸಿದರು. ಸಂಸ್ಥೆಯ ಬೇಡಿಕೆ ರಾಜ್ಯ ಮತ್ತು ಹೊಸ ಪೀಳಿಗೆಯ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿರುವುದರಿಂದ ಅದನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ನಾವು ನಿಮ್ಮ ಚಪ್ಪಾಳೆ ಹಾಗೂ ಹೂವಿನ ಹಾರಕ್ಕಾಗಿ ಬಂದಿಲ್ಲ. ನಾವು ನಿಮ್ಮ ಜತೆಗಿದ್ದೇವೆ, ನೀವು ನಮ್ಮ ಜತೆಗಿರಿ ಎಂಬುದನ್ನು ಹೇಳಲು ಬಂದಿದ್ದೇವೆ. ನಿಮ್ಮಲ್ಲೂ ಈ ಬದ್ಧತೆ ಇರಲಿ. ನಿಮ್ಮ ಮಾರ್ಗದರ್ಶನದಲ್ಲಿ ಇನ್ನಷ್ಟು ಜನ ಸಿರಿವಂತರಾಗಲಿ ಎಂದು ಸಿಎಂ ಹೇಳಿದರು.




