ಪದ್ಮಶ್ರೀ ಪುರಸ್ಕೃತ ಹಾಗೂ ಅಕ್ಷರ ಸಂತ ಎಂದೇ ಖ್ಯಾತರಾಗಿರುವ ಎಂ. ಅಂಕೇಗೌಡ ಅವರ ಸಂಗ್ರಹದಲ್ಲಿರುವ 20 ಲಕ್ಷಕ್ಕೂ ಅಧಿಕ ಪುಸ್ತಕಗಳ ರಕ್ಷಣೆಗೆ ಸೂಕ್ತ ಜಾಗ ಗುರುತಿಸಿ, ಸುಸಜ್ಜಿತ ಕಟ್ಟಡ ವ್ಯವಸ್ಥೆ ಕಲ್ಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಅಂಕೇಗೌಡರು, ದಶಕಗಳಿಂದ ತಾವು ಸಂಗ್ರಹಿಸಿರುವ ಅಪರೂಪದ ಪುಸ್ತಕಗಳ ಸಂರಕ್ಷಣೆಗೆ ಹಾಗೂ ಸೂಕ್ತ ನಿರ್ವಹಣೆಗೆ ಸರ್ಕಾರದ ವತಿಯಿಂದ ಜಾಗ ಮತ್ತು ಕಟ್ಟಡದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು. ಇದೇ ವೇಳೆ ಅಂಕೇಗೌಡರನ್ನು ಮುಖ್ಯಮಂತ್ರಿಯವರು ಸನ್ಮಾನಿಸಿ ಗೌರವಿಸಿದರು.
ಇದನ್ನು ಓದಿದ್ದೀರಾ? ‘ಐಪಿಎಲ್‌ಗೆ ಸೀಮಿತ’ ಎಂಬ ಟೀಕೆಗೆ ತಕ್ಕ ಉತ್ತರ: ಯುವ ತಾರೆ ಸೂರ್ಯವಂಶಿಯ ವಿಶ್ವದಾಖಲೆಯಾಟ
ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ‘ಅಂಕೇಗೌಡ ಜ್ಞಾನ ಪ್ರತಿಷ್ಠಾನ’ವನ್ನು ಸ್ಥಾಪಿಸಿರುವ ಅವರು, ತಮ್ಮ ಜೀವಿತಾವಧಿಯಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಭೇಟಿಯ ಸಂದರ್ಭದಲ್ಲಿ ಮಾತನಾಡಿದ ಅಂಕೇಗೌಡರು, “ಇದು ದೇಶದ ಅತಿದೊಡ್ಡ ಖಾಸಗಿ (ಪರ್ಸನಲ್) ಗ್ರಂಥಾಲಯವಾಗಿದೆ. ನನ್ನ ಸಂಗ್ರಹದಲ್ಲಿರುವ ಅಪರೂಪದ ಪುಸ್ತಕಗಳು ಅತ್ಯುತ್ತಮ ದಾಖಲೆಗಳಾಗಿವೆ. ಸರ್ಕಾರ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿಕೊಟ್ಟರೆ, ಇದು ಮುಂದಿನ ಪೀಳಿಗೆಯ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ದೊಡ್ಡ ಅರಿವಿನ ತಾಣವಾಗಿ ರೂಪುಗೊಳ್ಳಲಿದೆ” ಎಂದು ವಿವರಿಸಿದರು.
ಪುಸ್ತಕಗಳಷ್ಟೇ ಅಲ್ಲದೆ, ತಮ್ಮ ಬಳಿ ಇರುವ ಅಪರೂಪದ ಹಳೆಯ ನಾಣ್ಯಗಳು ಹಾಗೂ ಅಂಚೆ ಚೀಟಿಗಳ ಸಂಗ್ರಹವನ್ನು ಅಂಕೇಗೌಡರು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಯವರಿಗೆ ಪ್ರದರ್ಶಿಸಿದರು. ಈ ಅಪರೂಪದ ವಸ್ತುಗಳನ್ನು ಸಿಎಂ ಡಿ.ಕೆ. ಶಿವಕುಮಾರ್ ಅವರು ತೀವ್ರ ಕುತೂಹಲದಿಂದ ವೀಕ್ಷಿಸಿ, ಅವುಗಳ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರು ಉಪಸ್ಥಿತರಿದ್ದರು.




