ಕೋಟಿ ಖರ್ಚು ಮಾಡಿ ಡಾಕ್ಟರ್ ಆದ ವ್ಯಕ್ತಿ ಕೋಟಿ ಕೋಟಿ ಲೂಟಿ ಮಾಡಲು ಕೆಲಸ ಮಾಡುತ್ತಾನೆಯೇ ಹೊರತು ಸೇವೆ ಮಾಡುವುದಿಲ್ಲ. ಖಾಸಗೀಕರಣ ಸಮಾಜಕ್ಕೆ ಮಾರಕ. ರಾಜಕೀಯ ಪಕ್ಷಗಳು ಬದಲಾಗುವುದರಿಂದ ಅಧಿಕಾರ ವಹಿಸುವ ವ್ಯಕ್ತಿಗಳು ಬದಲಾಗುತ್ತಾರೆಯೇ ಹೊರತು ವ್ಯವಸ್ಥೆ ಬದಲಾಗುವುದಿಲ್ಲ. ಬದಲಾವಣೆ ಜನರಿಂದ, ಜನ ಸಂಘಟನೆಗಳಿಂದ ಮಾತ್ರ ಸಾಧ್ಯ.
ನಾವು ನಿತ್ಯವೂ ನಮ್ಮ ಕನ್ನಡ ನಾಡು ಏಳಿಗೆ ಕಾಣುವುದನ್ನು ಬಯಸುತ್ತ ನಾವು ಸಂಘಟನೆಗಳಾದಿಯಾಗಿ(ಯಾವುದೇ ಸರ್ಕಾರ ಮತ್ತು ರಾಜಕೀಯ ವ್ಯಕ್ತಿಗಳನ್ನು ನಿರೀಕ್ಷಿಸದೆ) ನಮ್ಮ ನಾಡಿಗೆ ಒಳಿತಾಗಲಿ ಎಂಬುದನ್ನು ಬಯಸಿ ಕೆಲಸ ಮಾಡುತ್ತೇವೆ. ನಾಡು ಏಳಿಗೆಯಾಗಬೇಕೆಂದು ಬಯಸುವಾಗ ಕೆಲವೊಂದು ಮಾದರಿಗಳು ನಮ್ಮ ಕಣ್ಣ ಮುಂದೆ ಬರುತ್ತವೆ. ಉದಾ: ಯುರೋಪಿಯನ್ ದೇಶಗಳು, ನುಡಿಯನ್ನಾಡುವ ಪ್ರದೇಶಕ್ಕೆ ಗಡಿಯನ್ನು ನಿರ್ಮಿಸಿ, ನುಡಿಯಾಧಾರಿತ ದೇಶಗಳಾಗಿರುವುದನ್ನು ಕಾಣಬಹುದು. ಅಲ್ಲಿನ ಜನರ ಜೀವನ ಶೈಲಿ, ಅವರ ತಲಾದಾಯ, ಆ ದೇಶಗಳಲ್ಲಿರುವ ಸುಸ್ಥಿರ ವ್ಯವಸ್ಥೆ, ಕಾನೂನು ಭದ್ರತೆ, ಅಪರಾಧಗಳ ಸಂಖ್ಯೆ ತೀರಾ ಕಡಿಮೆ ಇರುವುದರಿಂದ ಅಲ್ಲಿಯ ಜನರು ನೆಮ್ಮದಿಯ ಬದುಕನ್ನು ಕಂಡುಕೊಂಡಿದ್ದಾರೆ.
ನಮ್ಮ ಕನ್ನಡ ನಾಡಿಗೆ ಯುರೋಪಿಯನ್ ದೇಶಗಳು ಮಾದರಿ. ಆದರೆ ಅಲ್ಪಮತಿಯುಳ್ಳವರು, ʼಒಕ್ಕೂಟ ಸರ್ಕಾರದಲ್ಲಿರುವ ಬೇರೊಂದು ರಾಜ್ಯವಾದ ಉತ್ತರ ಪ್ರದೇಶ ನಮಗೆ ಮಾದರಿ, ರಾಮ ಮಂದಿರ, ಹಿಂದುತ್ವ, ಹಿಂದೂ ರಾಷ್ಟ್ರ, ಯುಪಿ ಮಾಡೆಲ್, ಅಲ್ಲಿನ ಡಬಲ್ ಎಂಜಿನ್ ಸರ್ಕಾರʼ….. ಹೀಗೆಲ್ಲ ಬಾಯಿ ಬಡಿದುಕೊಳ್ಳುತ್ತ ತಿರುಗುವವರು ಸಾಕಷ್ಟು ಮಂದಿ ಇದ್ದಾರೆ.
ಬಹಳ ಮುಖ್ಯವಾಗಿ ರಾಜಕೀಯ ರಂಗದಲ್ಲಿ, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ಲೋಕಸಭೆಯಲ್ಲಿ ಪರಮಾಧಿಕಾರ ಇದೆ. ಸಂಸದರಿಂದ ಲೋಕಸಭೆ ನಡೆಯುತ್ತದೆ. ಆ ವಿಷಯದಲ್ಲಿ ಉತ್ತರ ಪ್ರದೇಶ, ಭಾಗಶಃ ರಾಜಕಾರಣಿಗಳ ಮತ್ತು ಅವರ ಚೇಳಾಗಳಿಗೆ ಅದ್ವಿತೀಯವಾಗಿ ಕಾಣಿಸುತ್ತದೆ. ಕಾರಣ, ಲೋಕಸಭೆಗೆ ಉತ್ತರ ಪ್ರದೇಶದಿಂದ ಜನಸಂಖ್ಯೆಗೆ ತಕ್ಕಂತೆ ಲೋಕಸಭೆಗೆ 80 ಮಂದಿ ಸಂಸದರು ಮತ್ತು ರಾಜ್ಯಸಭೆಗೆ 31 ಮಂದಿ ಸಂಸದರು ಆಯ್ಕೆಯಾಗುತ್ತಾರೆ. ಒಟ್ಟಿನಲ್ಲಿ 111 ಸಂಸದರು, ಇಂಡಿಯಾ ಒಕ್ಕೂಟದಲ್ಲೇ ಅತಿಹೆಚ್ಚು ಸಂಸದರನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ ಒಂದೇ. ಉತ್ತರ ಪ್ರದೇಶದ ಮೇಲೆ ಹಿಡಿತ ಸಾಧಿಸಿದ ರಾಜಕೀಯ ಪಕ್ಷವು ಭಾರತೀಯ ಒಕ್ಕೂಟದ ಮೇಲೆ ಹಿಡಿತ ಸಾಧಿಸಬಹುದು ಎಂಬ ಮಾತೇ ಇದೆ. ಒಕ್ಕೂಟ ಸರ್ಕಾರ ಮುಂದಿಟ್ಟಿದ್ದ ಡಿಲಿಮಿಟೇಶನ್ ನಲ್ಲಿಯೂ ಉತ್ತರಪ್ರದೇಶಕ್ಕೆ ಸಿಂಹಪಾಲು ಸಿಗುತ್ತಿತ್ತು ಮತ್ತು ಅತಿಹೆಚ್ಚು ರಾಜಕೀಯವಾಗಿ ಲಾಭವಾಗುತ್ತಿತ್ತು.
ಭಾರತೀಯ ಒಕ್ಕೂಟದಲ್ಲಿರುವ ಉತ್ತರ ಪ್ರದೇಶ ಬಹಳಷ್ಟು ವಿಷಯಗಳಿಗೆ ಮತ್ತು ಘಟನೆಗಳಿಗೆ(ಒಳ್ಳೆಯದಕ್ಕಿಂತ ಕೆಟ್ಟದ್ದಕ್ಕೆ ಹೆಚ್ಚು) ಸುದ್ದಿಯಾಗುತ್ತದೆ. ಮತ್ತು ಜನರ ಗಮನ ಸೆಳೆಯುತ್ತದೆ. ಏಕೆಂದರೆ ಉತ್ತರ ಪ್ರದೇಶವನ್ನು ರಾಜಕೀಯವಾಗಿ ಕಡೆಗಣಿಸುವಂತಿಲ್ಲ…… ಕೆಲವು ದಿನಗಳ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿ ನಡೆದ ಅಮಾನವೀಯ, ಕ್ರೂರ ಕೃತ್ಯ ಘಟನೆಗಳಿಗೆ ಸುದ್ದಿಯಾಗಿತ್ತು.
ಉತ್ತರ ಪ್ರದೇಶದ ಮುಝಪ್ಫರ್ ನಗರದಲ್ಲಿ, ಕೆಲವು ದಿನಗಳ ಹಿಂದೆ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಾನಸಿಕವಾಗಿ ಅಸ್ವಸ್ಥವಾಗಿದ್ದ 14 ವರ್ಷದ ಮಗಳ ಕಾಲಿಗೆ ಚಿಕಿತ್ಸೆ ಕೊಡಿಸಲೆಂದು ತಾಯಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆ ಸಂದರ್ಭದಲ್ಲಿ ವೈದ್ಯರು ಮಗಳ ಕಾಲಿಗೆ ಸರ್ಜರಿ ಮಾಡುವುದಾಗಿ ಹೇಳಿ, 25,000 ರೂ. ಲಂಚವನ್ನು ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಆ ಹೆಣ್ಣುಮಗಳಿಗೆ ತಂದೆ ಇಲ್ಲ, ವಿಧವೆಯಾದ ತಾಯಿ ಒಬ್ಬರೇ. ಆ ತಾಯಿಗೆ ಅಷ್ಟು ಹಣವನ್ನು ಹೊಂದಿಸಲು ಸಾಧ್ಯವಾಗದ ಕಾರಣ ಡಾಕ್ಟ್ರು ಚಿಕಿತ್ಸೆ ಮಾಡುವುದಕ್ಕೆ ಒಪ್ಪಲಿಲ್ಲ. ಆಗ ನಿಶಕ್ತರಾದ ಆ ತಾಯಿ ರೇಷ್ಮಾ, ಜಿಲ್ಲಾ ವೈದ್ಯಕೀಯ ಅಧಿಕಾರಿಯ ಬಳಿ ಹೋಗಿ ಈ ವಿಷಯವನ್ನು ತಿಳಿಸುತ್ತಾರೆ. ಆಗ ಅಧಿಕಾರಿಯು ಉಚಿತವಾಗಿ ಚಿಕಿತ್ಸೆ ನೀಡುವಂತೆ ನಿರ್ದೇಶಿಸಿದರು. ಅವರ ಮಾತಿನ ಮೇರೆಗೆ ಡಾಕ್ಟ್ರು ಚಿಕಿತ್ಸೆ ಮಾಡಿದರೂ ಕೂಡ 8,000 ರೂ. ಲಂಚ ಪಡೆದಿದ್ದರು. ಬಾಕಿ ಲಂಚಕ್ಕೆ ಒತ್ತಾಯಿಸಿದಾಗ ಆ ಮಹಿಳೆಯಿಂದ ಹಣ ಹೊಂದಿಸಲು ಸಾಧ್ಯವಾಗದೇ ಲಂಚ ಕೊಡಲು ಆಗಲಿಲ್ಲ. ಆಗ ಕ್ರೂರ ಬುದ್ಧಿಯ ಡಾಕ್ಟರ್ ಮರು ತಪಾಸಣೆಗೆಂದು ಆ ಹೆಣ್ಣುಮಗಳನ್ನು ಕರೆದು, ಸರ್ಜರಿಯಾಗಿದ್ದ ಕಾಲನ್ನು ಬಲವಂತವಾಗಿ ಬಗ್ಗಿಸಿದ್ದಾನೆ. ನೋವು ತಳಲಾರದೆ ಮಗಳು ಕಿರುಚಿಕೊಂಡಿದ್ದನ್ನು ಕೇಳಿಸಿಕೊಂಡ ತಾಯಿ ಓಡಿಬಂದು ನೋಡಿದಾಗ ಕಾಲು ಮುರಿದಿತ್ತು.
ಈ ವಿಷಯವಾಗಿ ಆ ತಾಯಿ ಜಿಲ್ಲಾ ಕಲೆಕ್ಟರ್ ಆಫೀಸಿನ ಮುಂದೆ ಕುಳಿತು ತನಗಾಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲೆಂದು ಹೋರಾಟ ಮಾಡಿದ್ದರು. ನಂತರ ಈ ವಿಷಯ ಸುದ್ದಿಯಾಗಿ ಬಹಳ ಚರ್ಚೆಗೆ ಗ್ರಾಸವಾಯಿತು.
ಇದೇ ಮುಝಪ್ಫರ್ ನಗರದಲ್ಲಿ ಈ ಘಟನೆ ನಡೆಯುವ ಆಸುಪಾಸಿನಲ್ಲಿ ಕೌಸರ್ ಎಂಬ ಮಹಿಳೆಯು ತನ್ನ ಗಂಡ ಉಸ್ಮಾನ್ ಜತೆ ಹೆರಿಗೆಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿನ ಸರ್ಕಾರಿ ವೈದ್ಯರು ಆ ಸಮಯದಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು, ಲಂಚವನ್ನು ಕೊಡಲು ಅವರು ಶಕ್ತವಾಗಿರಲಿಲ್ಲ. ಆಗ ಡಾಕ್ಟರ್‌ಗಳು ಆ ಮಹಿಳೆಗೆ ಹೆರಿಗೆ ಮಾಡಿಸದೆ ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದರು. ಆಸ್ಪತ್ರೆಯಿಂದ ಹೊರಗೆ ಬಂದ ಆ ಮಹಿಳೆಗೆ ರಸ್ತೆ ಮಧ್ಯದಲ್ಲಿಯೇ ಹೆರಿಗೆಯಾಯಿತು.
ಈ ತರಹದ ಘಟನೆಗಳು ದೇಶದ ಒಕ್ಕೂಟ ಸರ್ಕಾರದಾದ್ಯಂತ ಸಾಕಷ್ಟು ಘಟನೆಗಳು ಕಂಡುಬರುತ್ತವೆ. ಕೆಲವು-ಹಲವು ಸಂದರ್ಭಗಳಲ್ಲಿ ಈ ತರಹದ ಘಟನೆಗಳು ನಡೆದರೂ ಕೂಡ ಬೆಳಕಿಗೆ ಬರುವುದಿಲ್ಲ. ಇಂತಹ ಘಟನೆಗಳಿಗೆ ನಮ್ಮ ಕರ್ನಾಟಕವೂ ಕೂಡ ಹೊರತಾಗಿಲ್ಲ. ಡಾಕ್ಟರ್‌ಗಳು ಯಾವಾಗ ಇಂತಹ ನೀಚ ಮಟ್ಟಕ್ಕೆ ಇಳಿದು ಕ್ರೂರಿಗಳಾದರೆಂಬುದನ್ನು ಗಮನಿಸುತ್ತ ಹೋದರೆ, ನಮಗೆ ಸಿಗುವ ನೈಜ ಕಾರಣ ಶಿಕ್ಷಣ, ವೈದ್ಯಕೀಯ ಕ್ಷೇತ್ರಗಳಲ್ಲಿನ ಖಾಸಗೀಕರಣ ಮತ್ತು ಕಾನೂನು ಬಿಗಿ ಭದ್ರತೆ ಇಲ್ಲದಿರುವುದು ಗೋಚರವಾಗುತ್ತದೆ.
ನಮ್ಮ ಭಾರತೀಯ ಒಕ್ಕೂಟದಲ್ಲಿ ಅಳವಡಿಸಿಕೊಂಡಿರುವ ಸಂವಿಧಾನವು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳನ್ನು ಖಾಸಗೀಕರಣ ಮಾಡಲು ಅವಕಾಶ ಕೊಟ್ಟಿದ್ದರಿಂದಲೇ ಇಂತಹ ಅವಾಂತರಗಳು ನಡೆಯುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದರೂ ಕೂಡ ಶಿಕ್ಷಣ ಖಾಸಗೀಕರಣವಾದ ಕಾರಣ ಒಂದನೇ ತರಗತಿ, ಎರಡನೇ ತರಗತಿಗೆ, ಕನಿಷ್ಠ ಪಕ್ಷ ಮೂರು ವರ್ಷದ ಮಗುವನ್ನು ಬೇಬಿ ಸಿಟ್ಟಿಂಗ್‌ಗೆ ದಾಖಲಿಸಲು ಲಕ್ಷಾಂತರ ರೂಪಾಯಿಗಳನ್ನು ಶಾಲಾ ಶುಲ್ಕವಾಗಿ ಕಟ್ಟಬೇಕಾದ ಸಂದರ್ಭದಲ್ಲಿ ನಾವಿದ್ದೇವೆ. ಇನ್ನು ಆ ಮಗು ಬೆಳೆದು ವೈದಕೀಯವನ್ನು ಅಧ್ಯಯನ ಮಾಡಬೇಕೆಂದರೆ ಅದು ಕೋಟಿ ರೂಪಾಯಿಯ ಮಾತು. ವೈದ್ಯಕೀಯ ಶಿಕ್ಷಣಕ್ಕೆ ದಾಖಲಾಗಬೇಕೆಂದರೆ ನೀಟ್ ಪರೀಕ್ಷೆ ಕಡ್ಡಾಯವಾಗಿದೆ. ಆ ನೀಟ್ ಪರೀಕ್ಷೆ ಪಾಸ್ ಆಗಲು ಲಕ್ಷಾಂತರ ರೂಪಾಯಿ ತೆತ್ತು ಕೋಚಿಂಗ್ ಸೆಂಟರ್‌ಗಳಿಗೆ ಸೇರಬೇಕು. ಇಲ್ಲ ಮ್ಯಾನೇಜ್ಮೆಂಟ್ ಕೋಟಾದಲ್ಲಿ ದಾಖಲಾತಿ ಮಾಡಿಕೊಳ್ಳಲು ಕೋಟ್ಯಂತರ ರೂಪಾಯಿಯನ್ನು ಸುರಿಯಬೇಕು. ಯಾವುದೇ ಕೋಚಿಂಗ್ ಸೆಂಟರ್‌ಗೆ ಸೇರದೆ ಮನೆಯಲ್ಲೇ ಕುಳಿತು ನೀಟ್ ಪಾಸ್ ಮಾಡಿದವರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ, ಒಂದಂಕಿ ದಾಟಿ ಎರಡಂಕಿಗಳಿಗೆ ಹೋಗುವುದೂ ಕೂಡ ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿದ್ದೇವೆ.
ನೀಟ್ ಪರೀಕ್ಷೆ 2013ರಲ್ಲಿ ಜಾರಿಯಾದರೂ, ಪರೀಕ್ಷೆ ಕಡ್ಡಾಯವಾಗಿ ನಡೆಯಲು ಶುರುವಾದದ್ದು 2017ರಿಂದ. ಅಲ್ಲಿಂದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಕೋಟ್ಯಂತರ ರೂಪಾಯಿ ತೆತ್ತು ವೈದ್ಯಕೀಯ ಶಿಕ್ಷಣವನ್ನು ಅಧ್ಯಯನ ಮಾಡಿದ್ದರಿಂದ ಮತ್ತು ಈ ನೀಟ್ ಪರೀಕ್ಷೆಯಿಂದಾಗಿ ಲಂಚಗುಳಿತನ ಡಾಕ್ಟರ್‌ಗಳು ಉತ್ಪತ್ತಿಯಾಗುತ್ತಿದ್ದಾರೆ. ಕಾನೂನು ಬಿಗಿ ಭದ್ರತೆ ಇಲ್ಲದೆ ಇರುವುದು, ಶಾಸಕಾಂಗ, ಕಾರ್ಯಂಗ, ನ್ಯಾಯಾಂಗಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದೆ ಮೈ ಮರೆತಿರುವುದು ಕೂಡ ಇದಕ್ಕೆ ಕಾರಣ.
ಖಾಸಗೀಕರಣದ ಹಿನ್ನೆಲೆಯಲ್ಲಿ ಅಧಿಕಾರ ಹಿಡಿದ ವ್ಯಕ್ತಿಗಳು ಸಮಾಜಕ್ಕೆ ಮಾರಕವಾಗಿಯೇ ಕೆಲಸ ಮಾಡುತ್ತಾರೆ. ಸಮಾಜ ಲೂಟಿಯಾಗುವುದು ಕೂಡ ಅಂಥವರಿಂದಲೇ. ಹಾಗಾಗಿ ಖಾಸಗೀಕರಣ ಡಾಕ್ಟರ್‌ಗಳು ಡಾಕುಗಳಾಗಲು- ಡಾಕುಗಳು ಡಾಕ್ಟರ್‌ಗಳಾಗಲು ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ.
ಇದನ್ನೂ ಓದಿದ್ದೀರಾ? ಬಿಹಾರ ‘ಡಬಲ್ ಇಂಜಿನ್’ ಸರ್ಕಾರದಲ್ಲಿ ಮಹಿಳೆಯರಿಗಿಲ್ಲ ರಕ್ಷಣೆ: ಸುಶಾಸನವೋ, ಜಂಗಲ್ ರಾಜ್ಯವೋ?
ಒಂದು ಉತ್ತಮವಾದ ಸಮಾಜಕ್ಕೆ, ಹಲವಾರು ವಲಯಗಳಿಂದ ಸೇವೆಗಳ ಅವಶ್ಯಕತೆ ಇದೆ. ಡಾಕ್ಟರ್‌ಗಳ ಹುದ್ದೆ ಇರುವುದು ಸೇವೆ ಮಾಡುವುದಕ್ಕಾಗಿಯೇ ಹೊರತು ಡಕಾಯಿತಿತನ ಮಾಡುವುದಕ್ಕಲ್ಲ. ಕರ್ನಾಟಕ ಸ್ವಾಯತ್ತತೆ ಪಡೆದು ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರವನ್ನು ನೂರರಷ್ಟು ಸರ್ಕಾರೀಕರಣ ಮಾಡುವುದರಿಂದ ಕರ್ನಾಟಕದಲ್ಲಿ ಈ ತರದ ಘಟನೆಗಳು ಆಗುವುದನ್ನು ಖಂಡಿತವಾಗಿ ಶೇ.100ರಷ್ಟು ತಪ್ಪಿಸಬಹುದು. ಇಲ್ಲದಿದ್ದರೆ ಕೋಟಿ ಖರ್ಚು ಮಾಡಿ ಡಾಕ್ಟರ್ ಆದ ವ್ಯಕ್ತಿ ಕೋಟಿ ಕೋಟಿ ಲೂಟಿ ಮಾಡಲು ಕೆಲಸ ಮಾಡುತ್ತಾನೆಯೇ ಹೊರತು ಸೇವೆ ಮಾಡುವುದಿಲ್ಲ. ಖಾಸಗೀಕರಣ ಸಮಾಜಕ್ಕೆ ಮಾರಕ. ರಾಜಕೀಯ ಪಕ್ಷಗಳು ಬದಲಾಗುವುದರಿಂದ ಅಧಿಕಾರ ವಹಿಸುವ ವ್ಯಕ್ತಿಗಳು ಬದಲಾಗುತ್ತಾರೆಯೇ ಹೊರತು ವ್ಯವಸ್ಥೆ ಬದಲಾಗುವುದಿಲ್ಲ. ಬದಲಾವಣೆ ಜನರಿಂದ, ಜನ ಸಂಘಟನೆಗಳಿಂದ ಮಾತ್ರ ಸಾಧ್ಯ.
ಕನ್ನಡ ನಾಡು ಕೇಂದ್ರದ ಕಪಿಮುಷ್ಠಿಯಿಂದ ಹೊರಬಂದು ಸ್ವಾಯತ್ತತೆ ಪಡೆಯಬೇಕು. ಆಗ ಕನ್ನಡ ವಿಶ್ವಮಟ್ಟದಲ್ಲಿ ಬೆಳೆಯುತ್ತದೆ ಮತ್ತು ಕನ್ನಡಿಗರ ಜೀವನ ಸುಖಮಯವಾಗಿರುತ್ತದೆ. ಅಕ್ರಮ, ಲೂಟಿಗೆ ಕಡಿವಾಣ ಹಾಕಬಹುದು.
ಬರಹ : ದರ್ಶನ್ ಕುರುಬಾಸ್, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ
ಕೇರಳ ವಿಶ್ವವಿದ್ಯಾಲಯ, ತಿರುವನಂತಪುರಂ




