ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ, ‘ಬೆಂಗಳೂರಿನಾಚೆಗೆ ಮತ್ತಷ್ಟು ಬೆಂಗಳೂರು’ಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಘೋಷಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ನಡೆದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನಾಯಕರ ‘ಟಾರ್ಗೆಟ್ ಇಂಡಿಯಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಲಭ್ಯವಿರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಕಚೇರಿ ಜಾಗದ ಬಾಡಿಗೆ ದರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. “ಅಲ್ಲಿ ಉದ್ಯಮಗಳಿಗೆ ಕಡಿಮೆ ಬೆಲೆಯಲ್ಲಿ ಜಾಗ ಒದಗಿಸುವುದಲ್ಲದೆ, ಬಹುಮಹಡಿ ಕಟ್ಟಡಗಳ ನಿರ್ಮಾಣಕ್ಕೆ ಅನುಕೂಲವಾಗುವಂತೆ ಡಬಲ್ ಎಫ್‌ಎಆರ್ (FAR) ಸೌಲಭ್ಯ ನೀಡಲಾಗುವುದು” ಎಂದರು.
ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಸರ್ಕಾರ ಭಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮೆಟ್ರೋ ಜಾಲವನ್ನು ಮುಂದಿನ ವರ್ಷದ ವೇಳೆಗೆ 500 ಕಿ.ಮೀ.ಗೆ ವಿಸ್ತರಿಸುವುದು, 40 ಕಿ.ಮೀ. ಉದ್ದದ ಟನಲ್ ರಸ್ತೆ, 44 ಕಿ.ಮೀ. ಡಬಲ್ ಡೆಕ್ಕರ್ ಯೋಜನೆ, 133 ಕಿ.ಮೀ. ಮೇಲ್ಸೇತುವೆ ಮತ್ತು 123 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ನಿರ್ಮಾಣ ಸೇರಿದಂತೆ ನಗರದ ಅಭಿವೃದ್ಧಿಗೆ ಒಟ್ಟು 1.5 ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ ಎಂದು ಸಿಎಂ ವಿವರಿಸಿದರು.
‘ಟೀಮ್ ಕರ್ನಾಟಕ’ದ ಧ್ಯೇಯ: “ಉದ್ಯಮಿಗಳೆಲ್ಲರೂ ಕರ್ನಾಟಕದ ಪ್ರಗತಿಯ ಪಾಲುದಾರರು ಮತ್ತು ರಾಯಭಾರಿಗಳು. ನಾವೆಲ್ಲರೂ ಒಂದೇ ತಂಡವಾದ ‘ಟೀಮ್ ಕರ್ನಾಟಕ’ವಾಗಿ ಒಟ್ಟಾಗಿ ಕೆಲಸ ಮಾಡೋಣ” ಎಂದು ಕರೆ ನೀಡಿದರು. ರಾಜ್ಯದಲ್ಲಿ ವಾರ್ಷಿಕ 1.5 ಲಕ್ಷ ಎಂಜಿನಿಯರ್‌ಗಳನ್ನು ಸಿದ್ಧಪಡಿಸುವ ಸಾಮರ್ಥ್ಯವಿದ್ದು, ಪ್ರತಿಭಾವಂತ ಮಾನವ ಸಂಪನ್ಮೂಲವೇ ನಮ್ಮ ಶಕ್ತಿ ಎಂದು ತಿಳಿಸಿದರು.
ಇದನ್ನೂ ಓದಿ: ಅರಾವಳಿಯಿಂದ ಮೋರ್ಬಿಯವರೆಗೆ; ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ ಭಾರತದ ನೈಸರ್ಗಿಕ ಸಂಪತ್ತು!
ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಜಗತ್ತಿಗೆ ಬೇಕಾದ ತಂತ್ರಜ್ಞಾನವನ್ನು ಬೆಂಗಳೂರಿನಿಂದಲೇ ಒದಗಿಸುವ ಗುರಿ ಹೊಂದಿದ್ದು, ಈ ನಿಟ್ಟಿನಲ್ಲಿ ‘AI ಯೂನಿವರ್ಸಿಟಿ’ ಸ್ಥಾಪಿಸುವ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು. ಅಲ್ಲದೆ, ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕಾರ್ಯ ನಡೆಯುತ್ತಿದೆ ಎಂದರು.
ಸುಮಾರು 200ಕ್ಕೂ ಹೆಚ್ಚು ಜಿಸಿಸಿ ರಾಯಭಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ರಾಜ್ಯದ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಕುರಿತು ಸಲಹೆಗಳನ್ನು ನೀಡಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವ ಎಂ ಬಿ ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ರಿತೇಶ್ ಕುಮಾರ್ ಸಿಂಗ್, ಸಿಎಂ ಆರ್ಥಿಕ ಸಲಹೆಗಾರ ಎಲ್ ಕೆ ಅತೀಕ್ ಮತ್ತಿತರರು ಇದ್ದರು.




