ಅರಾವಳಿಯಿಂದ ಮೋರ್ಬಿಯವರೆಗೆ; ಕಾರ್ಪೊರೇಟ್ ಕಪಿಮುಷ್ಠಿಯಲ್ಲಿ ಭಾರತದ ನೈಸರ್ಗಿಕ ಸಂಪತ್ತು!

Date:

ಅರಾವಳಿಯ ಬೆಟ್ಟಸಾಲುಗಳಿಂದ ಹಿಡಿದು ನಿಕೋಬಾರ್‌ ದ್ವೀಪಗಳವರೆಗೆ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಭೂ-ಕಬಳಿಕೆಯ ಸರಣಿಗೆ ಇದೀಗ ಗುಜರಾತ್‌ನ ಮೋರ್ಬಿ ಜಿಲ್ಲೆಯೂ ಸೇರ್ಪಡೆಯಾಗಿದೆ. ಅದಾನಿ ಎನರ್ಜಿ ಯೋಜನೆಗಾಗಿ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಬಲವಂತವಾಗಿ ಕಸಿದುಕೊಳ್ಳಲು ಕೇಂದ್ರ ಸರ್ಕಾರ ಹವಣಿಸುತ್ತಿದ್ದು, ಈ ದಬ್ಬಾಳಿಕೆಯ ವಿರುದ್ಧ ಅನ್ನದಾತರು ಉಪವಾಸ ಸತ್ಯಾಗ್ರಹದ ರಣಕಹಳೆ ಮೊಳಗಿಸಿದ್ದಾರೆ.

- Advertisement -

ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಸಂಸ್ಥೆಯು ಗುಜರಾತ್‌ನ ಕಚ್‌ನ ಖವ್ಡಾದಿಂದ ವಿದ್ಯುತ್ ಪ್ರಸರಣಕ್ಕಾಗಿ 756 kV ಸಾಮರ್ಥ್ಯದ ಡಬಲ್ ಸರ್ಕ್ಯೂಟ್ ವಿದ್ಯುತ್ ಮಾರ್ಗವನ್ನು ನಿರ್ಮಿಸಲು ಯೋಜಿಸುತ್ತಿದೆ. ಈ ಬೃಹತ್ ಯೋಜನೆಯು ರೈತರ ಜಮೀನಿನ ಮೂಲಕವೇ ಹಾದುಹೋಗಲಿದೆ. ತಮ್ಮ ಭೂಮಿಯಲ್ಲಿ ಟವರ್‌ಗಳನ್ನು ಸ್ಥಾಪಿಸುವುದರಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತದೆ ಎಂಬುದು ರೈತರ ಆತಂಕ. ಕೇವಲ ಟವರ್ ಮಾತ್ರವಲ್ಲದೆ, ಕೇಬಲ್‌ಗಳು ಹಾದುಹೋಗುವ ಮಾರ್ಗದಲ್ಲಿ (Right of Way) ಉಂಟಾಗುವ ಭೂಮಿಯ ಮೌಲ್ಯದ ಕುಸಿತ ಮತ್ತು ಆರ್ಥಿಕ ಹೊರೆ ಈ ಪ್ರತಿಭಟನೆಯ ಮುಖ್ಯ ತಿರುಳು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಭಾರತಕ್ಕೆ ಬರದ ಬುಲೆಟ್ ಟ್ರೈನ್: ತಡವಾಗುತ್ತಿರುವುದು ಮೋದಿಯಿಂದಲೋ, ಜಪಾನ್‌ನವರಿಂದಲೋ?

ಮುಂಬೈ ಮತ್ತು ಅಹಮದಾಬಾದ್ ನಡುವಿನ 508 ಕಿ.ಮೀ ಉದ್ದದ ಈ ಮಾರ್ಗವು ಭಾರತೀಯ ರೈಲ್ವೆಯನ್ನು ಆಧುನೀಕರಿಸುವ ಯೋಜನೆಯ ಭಾಗವಾಗಿ ನರೇಂದ್ರ ಮೋದಿಯವರು ಘೋಷಿಸಿದ್ದರು. ಅದಾಗಿ ಹತ್ತು ವರ್ಷವಾದರೂ ಸುದ್ದಿಯೇ ಇಲ್ಲ. ಬುಲೆಟ್ ಟ್ರೈನ್...

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಗುಜರಾತ್‌ನ ಮೋರ್ಬಿ ಜಿಲ್ಲೆಯ ಜೆಟ್ಪಾರ್‌ನಲ್ಲಿ ಅದಾನಿ ಎನರ್ಜಿ ಸೊಲ್ಯೂಷನ್ಸ್ ಲಿಮಿಟೆಡ್ (AESL) ಸಂಸ್ಥೆಯು 756 kV ಡಬಲ್ ಸರ್ಕ್ಯೂಟ್ ವಿದ್ಯುತ್ ಪ್ರಸರಣ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕಚ್‌ನ ಖವ್ಡಾದಿಂದ ವಿದ್ಯುತ್ ಸಾಗಿಸುವ ಈ ಯೋಜನೆಯು ರೈತರ ಕೃಷಿ ಭೂಮಿಯ ಮೂಲಕವೇ ಹಾದುಹೋಗಬೇಕು. ತಮ್ಮ ಫಲವತ್ತಾದ ಭೂಮಿಯಲ್ಲಿ ವಿದ್ಯುತ್ ಟವರ್‌ಗಳನ್ನು ಸ್ಥಾಪಿಸುವುದರಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗುತ್ತದೆ ಮತ್ತು ಭೂಮಿಯ ಮೌಲ್ಯ ಕುಸಿಯುತ್ತದೆ ಎಂಬ ಆತಂಕದಿಂದ ಜೆಟ್ಪಾರ್ ಗ್ರಾಮದ ರೈತರು ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ಆರಂಭಿಸಿದ್ದಾರೆ.

image 2026 07 08T180129.889

ಯೋಜನೆಯ ಪ್ರಸ್ತಾವನೆಯ ಮೊದಲಲ್ಲೇ ವಿರೋಧ ವ್ಯಕ್ತಪಡಿಸಲಾಗಿತ್ತು. ಆದರೂ ಯೋಜನೆ ಮುಂದುವರಿಯುವ ಲಕ್ಷಣಗಳು ಕಂಡುಬಂದಾಗ, ರೈತರು ತಮ್ಮ ಹೋರಾಟವನ್ನು ತೀವ್ರಗೊಳಿಸಿದರು. ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಪ್ರತಿಭಟನೆಯ ಸಂಕೇತವಾಗಿ ಗ್ರಾಮದ ಬಸ್ ನಿಲ್ದಾಣದ ಬಳಿ ‘ಉಪವಾಸ ಛಾವಣಿ’ ನಿರ್ಮಿಸಿ, ಡೇರೆ ಹೂಡಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

ರೈತರ ಪ್ರತಿಭಟನೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ, ಗುಜರಾತ್‌ನ ಬಿಜೆಪಿ ಸರ್ಕಾರ ಜಾಣ ನಡೆ ಇಡಲು ಮುಂದಾಗಿ ಪರಿಹಾರದ ಪ್ಯಾಕೇಜ್ ಘೋಷಿಸಿತು. ಜುಲೈ 4 ರಂದು ಹೊಸದಾಗಿ ಸರ್ಕಾರಿ ನಿರ್ಣಯ (GR) ಹೊರಡಿಸಿದ ಸರ್ಕಾರ, ರೈತರ ಭೂಮಿಗೆ ಮಾರುಕಟ್ಟೆ ದರದ 2 ಪಟ್ಟು ಪರಿಹಾರ ನೀಡುವುದಾಗಿ ಘೋಷಿಸಿತು. ಭೂಮಿಯ ಬೆಲೆಯನ್ನು ಲಾಟರಿಯ ಮೂಲಕ ನಿರ್ಧರಿಸುವುದು ವೈಜ್ಞಾನಿಕವಲ್ಲ ಎಂಬುದು ರೈತರ ಇನ್ನೊಂದು ವಾದ. ಬಳಿಕ IBBI ನಿಂದ ಮಾನ್ಯತೆ ಪಡೆದ ಮೌಲ್ಯಮಾಪಕರನ್ನು ನೇಮಿಸಲಾಯಿತು. ʼಆ ಪ್ರಕ್ರಿಯೆಯೂ ಸರಿಯಾಗಿ ನಡೆಯುತ್ತಿಲ್ಲ. ಸರ್ಕಾರದ ಅಧಿಕಾರಿಗಳು ಮತ್ತು ಕಂಪನಿಯ ಹಿತಾಸಕ್ತಿಗೆ ಪೂರಕವಾಗಿ ಈ ಮೌಲ್ಯಮಾಪನಗಳು ನಡೆಯುತ್ತಿವೆʼ ಎಂಬುದು ರೈತರ ಸಂಶಯ. ಈ ಹಿನ್ನೆಲೆಯಲ್ಲಿ, ರೈತರು ತಮ್ಮ ಉಪವಾಸವನ್ನು ಕೈಬಿಟ್ಟರೂ, ತಾತ್ಕಾಲಿಕ ‘ಉಪವಾಸ ಛಾವಣಿ’ಯನ್ನು ‘ಸತ್ಯಾಗ್ರಹ ಛಾವಣಿ’ ಎಂದು ಮರುನಾಮಕರಣ ಮಾಡಿ, ರಾಜ್ಯವ್ಯಾಪಿ ಹೋರಾಟಕ್ಕೆ ಅಣಿಯಾಗಿದ್ದಾರೆ.

ಅರಾವಳಿ ಬೆಟ್ಟಗಳು, ಗ್ರೇಟ್‌ ನಿಕೋಬಾರ್‌, ಕೆನ್-ಬೆಟ್ವಾ ನದಿ ಜೋಡಣೆ, ಚಾರ್ ಧಾಮ್ ಹೆದ್ದಾರಿ ಯೋಜನೆ ಸೇರಿದಂತೆ ಕಾರ್ಪೊರೇಟ್‌ ಕುಳಗಳ ಮೆಗಾ ಪ್ರಾಜೆಕ್ಟ್‌ಗಳಿಗೆ ರೈತರ ಭೂಮಿ ಕಬಳಿಕೆ, ಅರಣ್ಯ ನಾಶ ಎಲ್ಲವೂ ಸಾಮಾನ್ಯವಾಗಿಬಿಟ್ಟಿದೆ.

image 2026 07 08T180146.697

ಉತ್ತರದ ದೆಹಲಿಯಿಂದ, ರಾಜಸ್ಥಾನ ಮತ್ತು ಹರಿಯಾಣ, ದಕ್ಷಿಣದ ಗುಜರಾತಿನವರೆಗೂ ಹಬ್ಬಿರುವ ಅರಾವಳಿ ಬೆಟ್ಟಗಳು ಭಾರತದ ಭೌಗೋಳಿಕ ಮತ್ತು ನೈಸರ್ಗಿಕ ಇತಿಹಾಸದಲ್ಲಿ ಪ್ರಮುಖ ಪಾತ್ರಧಾರಿಗಳು. ಸುಮಾರು ಎರಡು ಶತಕೋಟಿ ವರ್ಷಗಳಿಗಿಂತ ಹಳೆಯದಾದ ಅರಾವಳಿ ಪರ್ವತ ಶ್ರೇಣಿಗಳು “ಭಾರತದ ಶ್ವಾಸಕೋಶ”ಗಳೆಂದೇ ಪರಿಗಣಿಸಲ್ಪಡುತ್ತವೆ. ರಾಜಸ್ಥಾನದ 15 ಜಿಲ್ಲೆಗಳಲ್ಲಿ ನಿಂತಿರುವ ಈ ಬೆಟ್ಟದ ಸಾಲುಗಳು ಭಾರತೀಯ-ಗಂಗಾ ಬಯಲು ಪ್ರದೇಶ ಮರುಭೂಮಿಯಾಗದಂತೆ ಪ್ರಮುಖ ಪರಿಸರ ತಡೆಗೋಡೆಯಾಗಿ ನಿಂತಿವೆ. ಅರಾವಳಿಯ ಬೆಟ್ಟಗಳ ಸಾಲುಗಳಲ್ಲಿ ಶೇ 90% ಕ್ಕಿಂತ ಹೆಚ್ಚಿನ ಬೆಟ್ಟಗಳು 100 ಮೀಟರ್‌ಗಿಂತ ಕೆಳಗಿವೆ. ಆದರೆ, ಈ ಸಮೃದ್ಧ ಜೀವನಾಡಿಯ ನಾಶಕ್ಕೆ ಸರ್ಕಾರವೇ ಮುಂದೆ ನಿಂತು ಗಣಿಗಾರಿಕೆಗೆ ಅವಕಾಶ ಮಾಡಿಕೊಟ್ಟಿದೆ.

ಭಾರತದ ಅತ್ಯಂತ ಹಳೆಯದಾದ ಈ ಪರ್ವತ ಶ್ರೇಣಿ, ಪೂರ್ವಕ್ಕೆ ಹರಿಯಾಣ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಿಗೆ ಥಾರ್ ಮರುಭೂಮಿ ಹರಡುವುದನ್ನು ತಡೆಯುತ್ತದೆ. ಹವಾಮಾನವನ್ನು ಸ್ಥಿರವಾಗಿಟ್ಟುಕೊಳ್ಳುವ, ಜೀವವೈವಿಧ್ಯತೆಯನ್ನು ಕಾಪಾಡುವ ಮತ್ತು ಅಂತರ್ಜಲವನ್ನು ಮರುಸೃಷ್ಟಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೆಹಲಿಯಿಂದ ಗುಜರಾತ್ ವರೆಗೆ ಸುಮಾರು 650 ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ಅರಾವಳಿ ಬೆಟ್ಟಗಳು, ಮರಳು ಶಿಲೆ, ಸುಣ್ಣದ ಕಲ್ಲು, ಅಮೃತಶಿಲೆ, ಬೆಣಚುಕಲ್ಲು ಮತ್ತು ಸೀಸ ತಾಮ್ರ, ಸತು, ಚಿನ್ನ ಮತ್ತು ಟಂಗ್‌ಸ್ಟನ್‌ ನಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇಷ್ಟೊಂದು ಸಮೃದ್ಧವಾಗಿರುವ ಬೆಟ್ಟಗಳ ಒಡಲಿಗೆ ಕಲ್ಲು ಮತ್ತು ಮರಳಿಗಾಗಿ ಕೊಡಲಿ ಹಾಕಲಾಗುತ್ತಿದೆ. ದಶಕಗಳಿಂದ ಅಲ್ಲಿ ಅತಿಯಾಗಿ ಗಣಿಗಾರಿಕೆ ಮಾಡಲಾಗಿದೆ. ಇದರಿಂದ ಅಂತರ್ಜಲ ಮತ್ತು ಗಾಳಿಯ ಮಟ್ಟ ಕುಸಿಯಲು ಶುರುವಾಗಿದೆ.

ಇದನ್ನೂ ಓದಿ: ಭಾರತದ ಮೆಗಾ ಪ್ರಾಜೆಕ್ಟ್‌ಗಳು ಮತ್ತು ಪರಿಸರದ ಆಹುತಿ!

ಸುಪ್ರೀಂ ಕೋರ್ಟ್ 2023ರ ತೀರ್ಪಿನಲ್ಲಿ ಅರಾವಳಿಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಈ ನಿಷೇಧಿತ ಪ್ರದೇಶಗಳಲ್ಲಿ 110 ಗಣಿಗಳಿದ್ದು, ಅವುಗಳಲ್ಲಿ 68 ಸಕ್ರಿಯವಾಗಿವೆ ಎಂದು ಸ್ವತಃ ಸರ್ಕಾರ 2024ರಲ್ಲಿ ಸಲ್ಲಿಸಿದ ವರದಿಗಳೇ ಹೇಳುತ್ತವೆ. ಆದರೆ NDTV ನಡೆಸಿದ ತನಿಖಾ ವರದಿ ಬೇರೆಯದೇ ಸತ್ಯ ಹೇಳುತ್ತದೆ. ಅರಾವಳಿ ಶ್ರೇಣಿಯ ಭಾಗವಾಗಿರುವ ಅಲ್ವಾರ್ ಜಿಲ್ಲೆಯ ಸರಿಸ್ಕಾ ಹುಲಿ ಅಭಯಾರಣ್ಯದಲ್ಲಿ ಗಣಿಗಾರಿಕೆ ಮುಂದುವರೆದಿರುವುದು ಕಂಡು ಬರುತ್ತದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಯಂತ್ರಗಳು ನಿಷ್ಕ್ರಿಯದಂತೆ ಕಂಡರೂ, ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳೀಯರು ದೃಢಪಡಿಸಿದ್ದಾರೆ ಎಂದು ಈ ವರದಿ ತಿಳಿಸಿದೆ.

ಗ್ರೇಟ್‌ ನಿಕೋಬಾರ್‌ ಪ್ರಾಜೆಕ್ಟ್‌ ಕೂಡ ಇದಕ್ಕಿಂತ ಬೇರೆಯಾಗಿಲ್ಲ. ಕೇಂದ್ರ ಸರ್ಕಾರ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿ ಜಾರಿಗೆ ತರುತ್ತಿರುವ ಈ ಬೃಹತ್ ಯೋಜನೆ ಹೆಚ್ಚು ಚರ್ಚೆಗೆ ಹಾಗೂ ವಿವಾದಕ್ಕೆ ಒಳಗಾಗಿದೆ. ಅಂತಾರಾಷ್ಟ್ರೀಯ ಕಂಟೈನರ್ ಸಾಗಣೆ ಟರ್ಮಿನಲ್, ಮಿಲಿಟರಿ-ನಾಗರಿಕ ಜಂಟಿ ವಿಮಾನ ನಿಲ್ದಾಣ, ಗ್ಯಾಸ್ ಆಧಾರಿತ ವಿದ್ಯುತ್ ಸ್ಥಾವರ ಮತ್ತು ಪ್ರವಾಸೋದ್ಯಮ ನಗರವನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಈ ಯೋಜನೆಗಾಗಿ ಸುಮಾರು 130 ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ದಟ್ಟವಾದ ಮಳೆಕಾಡುಗಳನ್ನು ನಾಶಪಡಿಸಲಾಗುತ್ತಿದೆ. ಇಲ್ಲಿ ವಾಸಿಸುವ ಜಗತ್ತಿನ ಅಪರೂಪದ ಪ್ರಾಣಿ ಸಂಕುಲ ಮತ್ತು ನಶಿಸಿಹೋಗುತ್ತಿರುವ ‘ಶೋಂಪೆನ್’ ಬುಡಕಟ್ಟು ಜನಾಂಗದ ಅಸ್ತಿತ್ವಕ್ಕೆ ಕುತ್ತು ತಂದಿದೆ.

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಧೀರೌಲಿ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯು ಭಾರಿ ವಿವಾದಕ್ಕೆ ಕಾರಣವಾಗಿದೆ. ಸುಮಾರು 1,400 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಈ ಯೋಜನೆಗಾಗಿ ಬಳಸಿಕೊಳ್ಳಲಾಗುತ್ತಿದ್ದು, ಇಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಮರಗಳನ್ನು ಕಡಿಯುವ ಭೀತಿಯಿದೆ. ಇದು ಆನೆ ಕಾರಿಡಾರ್ ಮತ್ತು ಪರಿಸರ ಸೂಕ್ಷ್ಮ ವಲಯಕ್ಕೆ ಧಕ್ಕೆ ತರುತ್ತದೆ ಎಂದು ಪರಿಸರವಾದಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

image 2026 07 08T180223.920

ಅದಾನಿ ಸಮೂಹದ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳು ಬಹುತೇಕ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲೇ ಹೆಚ್ಚು ತಲೆ ಎತ್ತುತ್ತವೆ. ಅಲ್ಲಿ ಆಗುವ ಪರಿಸರ ನಾಶಕ್ಕಾಗಲೀ, ರೈತರಿಗಾಗುವ ಅನ್ಯಾಯದ ಬಗೆಗಾಲೀ ಈ ಕಾರ್ಪೊರೇಟ್‌ ಕುಳಗಳು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಸರ್ಕಾರ ಕೂಡ. ಭೂಮಿ ಕಬಳಿಕೆಗೆ, ಅರಣ್ಯ ನಾಶಕ್ಕೆ ಬದಲಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳುವಂತೆ ಯೋಜನೆ ರೂಪಿಸುವವರಿಗೆ ಹೇಳುವುದೇ ಇಲ್ಲ, ಬದಲಾಗಿ ಸುಪ್ರೀಂ ಕೋರ್ಟ್‌ನಿಂದಲೂ ಅನುಮತಿ ತಂದುಕೊಡುತ್ತದೆ.

ಪರಿಸರವಾದಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿರುವುದು ಕೇಂದ್ರ ಸರ್ಕಾರ ತಂದಿರುವ ‘ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2023’. ಈ ಹೊಸ ತಿದ್ದುಪಡಿಯ ಪ್ರಕಾರ, ದೇಶದ ಗಡಿಭಾಗದ 100 ಕಿಲೋಮೀಟರ್ ವ್ಯಾಪ್ತಿಯಲ್ಲಿ ರಕ್ಷಣಾತ್ಮಕ ಮತ್ತು ಕಾರ್ಯತಂತ್ರದ ಯೋಜನೆಗಳಿಗಾಗಿ ಅರಣ್ಯ ಭೂಮಿಯನ್ನು ಬಳಸಿಕೊಳ್ಳಲು ಯಾವುದೇ ಕಠಿಣ ಪರಿಸರ ಅನುಮತಿಯ ಅಗತ್ಯವಿಲ್ಲ. ಇದು ಈಶಾನ್ಯ ಭಾರತದ ರಾಜ್ಯಗಳು ಮತ್ತು ಹಿಮಾಲಯದ ಅತ್ಯಂತ ಸೂಕ್ಷ್ಮ ಕಾಡುಗಳನ್ನು ಕಾನೂನುಬದ್ಧವಾಗಿಯೇ ನಾಶಪಡಿಸಲು ಕಾರ್ಪೊರೇಟ್ ಕಂಪನಿಗಳಿಗೆ ಹಾದಿ ಮಾಡಿಕೊಟ್ಟಂತಾಗಿದೆ.

ಇದನ್ನೂ ಓದಿ: ಗಣಿಗಾರಿಕೆಗೆ ಅನುಮತಿಸಿದ ಸುಪ್ರೀಂ; ʼಅರಾವಳಿ ಬೆಟ್ಟಗಳನ್ನು ಉಳಿಸಿʼ ಹೋರಾಟ ಚುರುಕು

ಗುಜರಾತ್‌ನ ಜೆಟ್ಪಾರ್ ರೈತರ ಉಪವಾಸ ಸತ್ಯಾಗ್ರಹದಿಂದ ಹಿಡಿದು ಅರಾವಳಿಯ ಅಕ್ರಮ ಗಣಿಗಾರಿಕೆ ಮತ್ತು ನಿಕೋಬಾರ್‌ನ ಮಳೆಕಾಡುಗಳ ನಾಶದವರೆಗೆ ನಡೆಯುತ್ತಿರುವ ವ್ಯವಸ್ಥಿತ ದಾಳಿಗಳು, ಭಾರತದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವೆ ಉಂಟಾಗಿರುವ ಗಂಭೀರ ಬಿಕ್ಕಟ್ಟನ್ನು ತೋರಿಸುತ್ತವೆ. ‘ಅರಣ್ಯ ಸಂರಕ್ಷಣಾ (ತಿದ್ದುಪಡಿ) ಕಾಯ್ದೆ 2023’ ಯಂತಹ ನೀತಿಗಳು ಪರಿಸರ ಸಂರಕ್ಷಣೆಯ ನಿಯಮಗಳನ್ನು ಸಡಿಲಗೊಳಿಸಿ, ಕಾರ್ಪೊರೇಟ್ ಸಂಸ್ಥೆಗಳಿಗೆ ಅರಣ್ಯ ಭೂಮಿಯನ್ನು ಸುಲಭವಾಗಿ ಬಳಸಿಕೊಳ್ಳಲು ದಾರಿ ಮಾಡಿಕೊಟ್ಟಿವೆ ಎಂಬುದು ನಿಜ.

ಸಮೃದ್ಧವಾದ ಭೂಮಿ, ಕಾಡು,ಪರಿಸರ, ಜೀವಸಂಕುಲವನ್ನು ಬಲಿಗೊಟ್ಟು ಅದರ ಅವಶೇಷಗಳ ಮೇಲೆ ಸೌಧ ನಿರ್ಮಿಸುವುದು ಮಾನವೀಯತೆಯ ಮೇಲೆ ಸವಾರಿ ಮಾಡಿದಂತೆ. ಅಂತಹ ಯಾವ ಅಭಿವೃದ್ಧಿಯೂ ಸುಸ್ಥಿರವಲ್ಲ. ಮುಂದಿನ ದಿನಗಳಲ್ಲಿ ಮನುಷ್ಯ ಎದುರುಗೊಳ್ಳಲೇಬೇಕಾಗಿರುವ ದೊಡ್ಡ ಆಪತ್ತುಗಳು. ಇದನ್ನ ಕೇಂದ್ರ ಸರ್ಕಾರ ಮೊದಲು ಮನಗಾಣಬೇಕು.

WhatsApp Image 2025 05 16 at 6.54.26 PM
Sub Editor at Eedina.com |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಖಾಸಗಿ ಬಸ್ ಬೆಂಕಿಗಾಹುತಿ!

ಶಿವಮೊಗ್ಗ- ಸಾಗರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು,...

ವಿರೋಧಿಗಳಿಂದ ‘ಸ್ಟಿಂಗ್ ಆಪರೇಷನ್’ ಅಸ್ತ್ರ: ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಡಿ ಕೆ ಶಿವಕುಮಾರ್ ಎಚ್ಚರಿಕೆ

ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ 'ಕುಟುಕು ಕಾರ್ಯಾಚರಣೆ' (ಸ್ಟಿಂಗ್ ಆಪರೇಷನ್) ವಿವಾದ ಕಾವು...

ಶಿವಮೊಗ್ಗ | ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ: ಅರಣ್ಯ ಇಲಾಖೆ ಸಿಬ್ಬಂದಿ ಬಂಧನ

ಶಿವಮೊಗ್ಗ ನಗರದ ವಾದಿ-ಹುದಾ ಸಮೀಪ 8 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ...