ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಬಾಯ್ಲರ್‌ಗೆ ಇಂದು ಅಗ್ನಿಸ್ಪರ್ಶ ಮಾಡಲಾಗಿದ್ದು, ಜುಲೈ 15ರಿಂದ ಕಬ್ಬು ಅರೆಯುವಿಕೆ ಪ್ರಾರಂಭವಾಗಲಿದೆ.
ಜಿಲ್ಲಾಧಿಕಾರಿ ಡಾ. ಕುಮಾರ ಹಾಗೂ ಮೈಷುಗರ್ ಅಧ್ಯಕ್ಷ ಸಿ ಡಿ ಗಂಗಾಧರ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ ಹಾಗೂ ಕಾರ್ಖಾನೆಯ ವ್ಯವಸ್ಥಾಪಕ ಮಂಗಲ್ ದಾಸ್ ಅವರು ಬಾಯ್ಲರ್‌ಗೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಧಿಕೃತವಾಗಿ ಕಾರ್ಖಾನೆ ಆರಂಭಕ್ಕೆ ಇಂದು ಚಾಲನೆ ನೀಡಿದ್ದಾರೆ.
ಬಳಿಕ ಕಾರ್ಖಾನೆಯ ʼಎʼ ಗಿರಣಿಗೆ ಕಬ್ಬನ್ನು ಹಾಕುವ ಮೂಲಕ ಕಬ್ಬು ಅರೆಯುವಿಕೆಗೆ ತಾತ್ಕಾಲಿಕವಾಗಿ ಚಾಲನೆ ನೀಡಲಾಗಿದ್ದು, ಜುಲೈ 15 ರಿಂದ ಅಧಿಕೃತವಾಗಿ ಸಕ್ಕರೆ ಉತ್ಪಾದನೆ ಆರಂಭವಾಗಲಿದೆ.
ಜುಲೈ 15ರಿಂದ ಕಬ್ಬು ಅರೆಯುವಿಕೆಯನ್ನು ಕಡ್ಡಾಯವಾಗಿ ಆರಂಭಿಸಬೇಕೆಂದು ಆಡಳಿತ ಮಂಡಳಿಗೆ ಸೂಚನೆ ನೀಡಲಾಗಿದೆ. ಕಾರ್ಖಾನೆಯು ಸುಸ್ಥಿತಿಯಲ್ಲಿದ್ದು `ಎ’ ಗಿರಣಿಯಲ್ಲಿ ಕಬ್ಬು ನುರಿಸಲಾಗುವುದು. ನಿತ್ಯ 5 ಸಾವಿರ ಟನ್ ಕಬ್ಬು ಅರೆಯುವ ಸಾಮರ್ಥ್ಯವನ್ನು ಎ ಗಿರಣಿ ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ರೈತರಿಂದ 5.44 ಲಕ್ಷ ಟನ್ ಕಬ್ಬನ್ನು ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ನವೆಂಬರ್ ಅಂತ್ಯದೊಳಗೆ ಎಲ್ಲ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್ ಮಾತನಾಡಿ, “ಕಾರ್ಖಾನೆಯು ಹೆಚ್ಚಿನ ಸ್ಥಾಪಿತ ಸಾಮರ್ಥ್ಯವನ್ನು ಹೊಂದಿದ್ದರೂ, ದಿನಕ್ಕೆ 3,500 ಟನ್ ಕಬ್ಬನ್ನು ಅರೆಯುವ ಗುರಿ ಹೊಂದಿದ್ದು, ಶೇ.8.5ರಷ್ಟು ಸಕ್ಕರೆ ಚೇತರಿಕೆಯ ದರವನ್ನು ನಿರೀಕ್ಷಿಸುತ್ತದೆ. ಹಿಂದಿನ ಋತುವಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಎಲ್ಲ ಬಾಕಿಗಳನ್ನು ಪಾವತಿಸಲಾಗಿದೆ. ಈ ಋತುವಿನಲ್ಲಿ, ಕಬ್ಬು ಸರಬರಾಜು ಮಾಡಿದ 15 ದಿನಗಳಲ್ಲಿ ರೈತರಿಗೆ ಪಾವತಿಗಳನ್ನು ಮಾಡಲಾಗುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಕ್ರಮ ಆಸ್ತಿ ಆರೋಪ; ಜೆಸ್ಕಾಂ ಎಇಇ ಅಮೃತರಾವ್ ಲೋಕಾಯುಕ್ತ ಬಲೆಗೆ
ಈ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರ ಘೋಷಿಸಿದಂತೆ, ಹಿಂದಿನ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಟನ್‌ಗೆ ₹50 ಪ್ರೋತ್ಸಾಹ ಧನದ ಚೆಕ್‌ಗಳನ್ನು ವಿತರಿಸಲಾಯಿತು. ಇದೇ ವೇಳೆ ಬಾಯ್ಲರ್ ಅಗ್ನಿ ಸ್ಪರ್ಶಕ್ಕೆ ಜನಪ್ರತಿನಿಧಿಗಳು ಗೈರಾಗಿದ್ದರಿಂದ ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ರಘುನಂದನ್ ರೈತ ಮುಖಂಡರು ಇದ್ದರು.





