ಮಲೇಷ್ಯಾದಲ್ಲಿ ನಡೆದ ಪ್ರತಿಷ್ಠಿತ ಅಂತರಾಷ್ಟ್ರೀಯ ನೃತ್ಯ ಸ್ಪರ್ಧೆಯಲ್ಲಿ ಮೈಸೂರಿನ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಆರು ವಿದ್ಯಾರ್ಥಿಗಳು ಆರು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಶಾಲೆ, ಮೈಸೂರು ಜಿಲ್ಲೆ, ಕರ್ನಾಟಕ ರಾಜ್ಯ ಹಾಗೂ ಭಾರತ ದೇಶಕ್ಕೆ ಹೆಮ್ಮೆಯ ಕೀರ್ತಿ ತಂದಿದ್ದಾರೆ.
ಜೂನ್ 26ರಿಂದ 30ರವರೆಗೆ ಮಲೇಷ್ಯಾದ ಕ್ವಾಲಾಲಂಪುರದಲ್ಲಿ Sports Dance Federation of Malaysia ಆಯೋಜಿಸಿದ್ದ 7th International Sports Dance Championship 2026-27 ಸ್ಪರ್ಧೆಯಲ್ಲಿ ವಿಶ್ವದ ವಿವಿಧ ರಾಷ್ಟ್ರಗಳ ಸ್ಪರ್ಧಿಗಳು ಭಾಗವಹಿಸಿದ್ದರು. ಈ ಪ್ರತಿಷ್ಠಿತ ವೇದಿಕೆಯಲ್ಲಿ ಮೈಸೂರಿನ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಗಮನ ಸೆಳೆದರು.
12 ವರ್ಷ ವಯೋಮಿತಿಯ ಹಿಪ್ ಹಾಪ್ ಮಿಕ್ಸ್ ವಿಭಾಗದಲ್ಲಿ ಹನೀಷಾ, ಶಿಖಾ ಆರ್., ಹಂಸಪ್ರಿಯಾ, ಹೇಮಂತ್, ಶಾಶ್ವಿತಾ ಹಾಗೂ ಚಾಂದಿನಿ ಅವರು ಅದ್ಭುತ ನೃತ್ಯ ಪ್ರದರ್ಶನ ನೀಡಿ ತಲಾ ಚಿನ್ನದ ಪದಕ ಗೆಲ್ಲುವ ಮೂಲಕ ಒಟ್ಟು ಆರು ಚಿನ್ನದ ಪದಕಗಳನ್ನು ಭಾರತದ ಪಾಲಾಗಿಸಿದರು.
ಈ ಸಾಧನೆಯ ಹಿಂದೆ ವಿದ್ಯಾರ್ಥಿಗಳ ನಿರಂತರ ಅಭ್ಯಾಸ, ಶಿಸ್ತು, ಕಠಿಣ ಪರಿಶ್ರಮ ಹಾಗೂ ನೃತ್ಯದ ಮೇಲಿನ ಅಪಾರ ಆಸಕ್ತಿ ಪ್ರಮುಖ ಕಾರಣವಾಗಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಜಿಲ್ಲಾ ಮಟ್ಟದಿಂದ ಅಂತರಾಷ್ಟ್ರೀಯ ಮಟ್ಟದವರೆಗೆ ಅಗತ್ಯ ತರಬೇತಿ, ಆರ್ಥಿಕ ನೆರವು ಮತ್ತು ನೈತಿಕ ಬೆಂಬಲ ನೀಡಿದ ಪೋಷಕರ ಪಾತ್ರವೂ ಈ ಯಶಸ್ಸಿನಲ್ಲಿ ಮಹತ್ವದ್ದಾಗಿದೆ. ಸ್ಪರ್ಧೆಯ ವೇಳೆ ಮಕ್ಕಳೊಂದಿಗೆ ಮಲೇಷ್ಯಾಕ್ಕೆ ತೆರಳಿ ಪ್ರತಿಯೊಂದು ಹಂತದಲ್ಲೂ ಪ್ರೋತ್ಸಾಹ ನೀಡಿದ ಪೋಷಕರ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಿಲಿಕಾನ್ ಸಿಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನ ಆಡಳಿತ ಮಂಡಳಿ, ಪ್ರಾಂಶುಪಾಲರಾದ ಡಾ. ದೀಪ್ತಿ ಚತುರ್ವೇದಿ, ಶಿಕ್ಷಕ ವೃಂದ ಹಾಗೂ ಸಿಬ್ಬಂದಿಯವರ ಮಾರ್ಗದರ್ಶನ ಮತ್ತು ನಿರಂತರ ಪ್ರೋತ್ಸಾಹವೂ ಪ್ರಮುಖ ಕಾರಣವಾಗಿದೆ.
ವಿದ್ಯಾರ್ಥಿಗಳ ಈ ಐತಿಹಾಸಿಕ ಸಾಧನೆಯು ಮೈಸೂರು ಜಿಲ್ಲೆ, ಕರ್ನಾಟಕ ರಾಜ್ಯ ಹಾಗೂ ಭಾರತ ದೇಶದ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೇರಿಸಿದ್ದು, ವಿಶ್ವ ವೇದಿಕೆಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸುವಂತಾಗಿದೆ.
ಈ ಸುದ್ಧಿ ಓದಿದ್ದೀರಾ?ಚಾಮರಾಜನಗರ | ಆಹಾರ ಸ್ವಾವಲಂಬನೆಗೆ ಬಾಬು ಜಗಜೀವನ ರಾಮ್ ಕೊಡುಗೆ ಸ್ಮರಣೀಯ: ಶ್ರೀರೂಪ
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು, ಪೋಷಕರು, ಕುಟುಂಬಸ್ಥರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದು, ಭವಿಷ್ಯದಲ್ಲಿಯೂ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡುವಂತೆ ಶುಭ ಹಾರೈಸಿದ್ದಾರೆ.




