” ಆರ್ಎಸ್ಎಸ್ನಿಂದ ದೇಶಕ್ಕೆ ಯಾವುದೇ ಗಂಡಾಂತರವಿಲ್ಲ. ಹಿಂದೆ ನಾನೂ ಆರ್ಎಸ್ಎಸ್ ಬಗ್ಗೆ ಟೀಕೆ ಮಾಡಿದ್ದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಆದರೆ ಈಗ ಅವರ ಉದ್ದೇಶ ಮತ್ತು ಕಾರ್ಯವೈಖರಿ ನನಗೆ ಸ್ಪಷ್ಟವಾಗಿ ಅರ್ಥವಾಗಿದೆ. ನಮ್ಮ ದೇಶಕ್ಕೆ ನಿಜವಾದ ಅಪಾಯ ಇರುವುದು ಕಾಂಗ್ರೆಸ್ ಪಕ್ಷದಿಂದ” ಎಂದು ಕೇಂದ್ರ ಸಚಿವ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಹಿಂದೆ, ದೇಶಕ್ಕೆ ಆರ್ಎಸ್ಎಸ್ಸೇ ಅಪಾಯ ಎಂದಿದ್ದರು ಕುಮಾರಸ್ವಾಮಿ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಪಥಸಂಚಲನದಲ್ಲಿ ಭಾಗವಹಿಸಿದ ಆರೋಪದ ಮೇಲೆ ಯಾದಗಿರಿ ಜಿಲ್ಲೆಯ ಇಬ್ಬರು ಸರ್ಕಾರಿ ಶಿಕ್ಷಕರನ್ನು ಅಮಾನತುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಟೀಕಿಸಿದ್ದಾರೆ.
“ಪ್ರಿಯಾಂಕ್ ಖರ್ಗೆ ಅವರು ಪದೇ ಪದೇ ಆರ್ಎಸ್ಎಸ್ ಬಗ್ಗೆ ಮಾತನಾಡುತ್ತಾರಲ್ಲ, ಸಂಘ ಮಾಡಿರುವ ತಪ್ಪಾದರೂ ಏನು? ಶಿಕ್ಷಕರು ಪಥಸಂಚಲನದಲ್ಲಿ ಭಾಗವಹಿಸಿದ್ದರಿಂದ ಸಾರ್ವಜನಿಕ ಶಿಸ್ತು ಭಂಗವಾಗಿದೆಯೇ ಅಥವಾ ಹಿಂಸಾಚಾರ ನಡೆದಿದೆಯೇ?” ಎಂದಿದ್ದಾರೆ.
ಅಂದಹಾಗೆ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕುಪ್ಪಿ ಶಾಲೆಯ ಮುಖ್ಯ ಶಿಕ್ಷಕ ಅಣ್ಣಾ ಸಾಹೇಬ್ ದೇಶಮುಖ್ ಮತ್ತು ಹುಣಸಗಿ ಶಾಲೆಯ ಸಹಾಯಕ ಶಿಕ್ಷಕ ಗುರುರಾಜ್ ಜೋಶಿ ಅವರನ್ನು ಶಾಲಾ ಶಿಕ್ಷಣ ಇಲಾಖೆ ಅಮಾನತುಗೊಳಿಸಿದೆ. ಈ ಇಬ್ಬರೂ 2025ರ ಅಕ್ಟೋಬರ್ನಲ್ಲಿ ನಡೆದ ಆರ್ಎಸ್ಎಸ್ ಪಥಸಂಚಲನಗಳಲ್ಲಿ ಭಾಗವಹಿಸಿದ್ದರು. ಶಿಕ್ಷಕರು ಕರ್ನಾಟಕ ನಾಗರಿಕ ಸೇವೆಗಳ (ನಡತೆ) ನಿಯಮ-2021ರ 3(1), 3(2), 3(3), 5 ಮತ್ತು 7ಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಮೇಲೆ ಇಲಾಖಾ ತನಿಖೆ ಬಾಕಿಯಿಟ್ಟು, ಅವರಿಬ್ಬರನ್ನೂ ಅಮಾನತುಗೊಳಿಸಿದೆ.
ಈ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕೂಡ ಸರ್ಕಾರದ ವಿರುದ್ಧ ಮಾತನಾಡಿದ್ದರು. ಅಮಾನತು ಆದೇಶವನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದರು.



