ಬೆಂಗಳೂರು ನಗರದ ಕೋಟ್ಯಂತರ ಜನರಿಗೆ ಕುಡಿಯುವ ನೀರು ಪೂರೈಕೆ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಹಗಲು-ರಾತ್ರಿ ಕಾಯುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಗುತ್ತಿಗೆ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಹೋರಾಟಕ್ಕಿಳಿದಿದ್ದಾರೆ. ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ವೇತನ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ BWSSB ಗುತ್ತಿಗೆ ಕಾರ್ಮಿಕರ ಸಂಘ (ರಿ) ಸೆಪ್ಟೆಂಬರ್ 23ರಂದು ಬೆಳಿಗ್ಗೆ 10.00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಹೋರಾಟ ಹಮ್ಮಿಕೊಂಡಿದೆ.
ನಗರ ಮತ್ತು ಗ್ರಾಮೀಣ ಭಾಗದ ವಾಲ್ವ್‌ಮ್ಯಾನ್‌ಗಳು, ಒಳಚರಂಡಿ ಕಾರ್ಮಿಕರು, ಪಂಪ್ ಆಪರೇಟರ್‌ಗಳು ಹಾಗೂ ವಿವಿಧ ವಿಭಾಗಗಳಲ್ಲಿ ಶ್ರಮಿಸುತ್ತಿರುವ ಸಾವಿರಾರು ಕಾರ್ಮಿಕರು ನಿರಂತರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಸಂಘಟನೆ ದೂರಿದೆ. ಅಗತ್ಯ ಸೇವೆಯಲ್ಲಿ ನಿರತರಾಗಿದ್ದರೂ ಕೆಲಸದ ಅಭದ್ರತೆ, ವೇತನದಲ್ಲಿ ಅನ್ಯಾಯ, ಸುರಕ್ಷತಾ ಉಪಕರಣಗಳ ಕೊರತೆ ಹಾಗೂ ಹಕ್ಕುಗಳನ್ನು ಕೇಳಿದರೆ ಕೆಲಸದಿಂದ ತೆಗೆದುಹಾಕುವ ಬೆದರಿಕೆಗಳನ್ನು ಕಾರ್ಮಿಕರು ಎದುರಿಸುತ್ತಿದ್ದಾರೆ ಎಂದು ಹೇಳಿದೆ.
ಇದನ್ನೂ ಓದಿ: ರಾಯಚೂರು | ಜೆಸ್ಕಾಂ ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನ, ಕೆಲಸದ ಭದ್ರತೆಗೆ ಆಗ್ರಹ
ಆರ್‌ಟಿ ನಗರದ ಜಲಮಂಡಳಿ ವ್ಯಾಪ್ತಿಯಲ್ಲಿ ಕರ್ತವ್ಯ ನಿರತರಾಗಿದ್ದಾಗ ಅಪಘಾತಕ್ಕೀಡಾಗಿ ಮೃತಪಟ್ಟ 52 ವರ್ಷದ ವಾಲ್ವ್‌ಮ್ಯಾನ್ ಸುಧೀರ್ ಹಾಗೂ ಬೆಳ್ಳಂದೂರು ಎಸ್‌ಟಿಪಿ ಘಟಕದಲ್ಲಿ ಮೃತಪಟ್ಟ ಕಾರ್ಮಿಕರ ದುರಂತ ಘಟನೆಗಳು ಗುತ್ತಿಗೆ ಕಾರ್ಮಿಕರ ಜೀವರಕ್ಷಣೆಯ ಪ್ರಶ್ನೆಯನ್ನು ಗಂಭೀರವಾಗಿ ಮುನ್ನೆಲೆಗೆ ತಂದಿವೆ. ಕೆಲಸದ ವೇಳೆ ಸಂಭವಿಸುವ ಸರಣಿ ಸಾವುಗಳಿಗೆ ಆಡಳಿತ ಮಂಡಳಿ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದ್ದು, ಈ ಘಟನೆಗಳ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಲಾಗಿದೆ.
This video cannot be played in your browser. Open the video directly
“ಶೋಷಣೆ ಮುಕ್ತಗೊಳಿಸಲು ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಪೌರಕಾರ್ಮಿಕರ ಮಾದರಿಯಲ್ಲಿ ‘ನೇರ ವೇತನ ಪದ್ಧತಿ’ (DPS) ಜಾರಿಗೊಳಿಸಬೇಕು. ರಾಜ್ಯ ಸರ್ಕಾರದ ಕನಿಷ್ಠ ವೇತನ ಜಾರಿ ಮಾಡಬೇಕು. ಬಾಕಿ ಇರುವ ಬೋನಸ್, ಡಿಎ (DA) ಹಾಗೂ ಅರಿಯರ್ಸ್ ತಕ್ಷಣ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳ 1 ರಿಂದ 7ನೇ ತಾರೀಖಿನೊಳಗೆ ಬ್ಯಾಂಕ್ ಖಾತೆಗೆ ವೇತನ ಜಮೆ ಮಾಡಬೇಕು” ಎಂದು BWSSB ಆಗ್ರಹಿಸಿದೆ.
“ಕಚೇರಿಗಳಲ್ಲಿ ಮಹಿಳಾ ಕಾರ್ಮಿಕರ ಮೇಲಿನ ಮಾನಸಿಕ ಕಿರುಕುಳ ತಡೆಯಬೇಕು. 6 ತಿಂಗಳ ಸಂಬಳ ಸಹಿತ ಹೆರಿಗೆ ರಜೆ ಮತ್ತು ಹೆರಿಗೆ ಭತ್ಯೆ ಕಡ್ಡಾಯವಾಗಿ ನೀಡಬೇಕು. ಗ್ರಾಮೀಣ ಭಾಗದ ಕಾರ್ಮಿಕರಿಗೆ ರಿಸ್ಕ್ ಅಲೊಯನ್ಸ್ ನೀಡಬೇಕು ಹಾಗೂ ಎಲ್ಲಾ ಕಚೇರಿಗಳಲ್ಲಿ ಸರಿಯಾದ ESI ಕಾರ್ಡ್ ವಿತರಿಸಬೇಕು. ಕೆಲಸದ ವೇಳೆಯ ಸಾವು/ಅಪಘಾತಗಳಿಗೆ ಜವಾಬ್ದಾರಿ ನಿಗದಿಪಡಿಸಿ ತನಿಖೆ ನಡೆಸಬೇಕು. ಕಾರ್ಮಿಕರ ಕುಂದುಕೊರತೆ ಪರಿಹಾರಕ್ಕಾಗಿ ಪ್ರತಿ 6 ತಿಂಗಳಿಗೊಮ್ಮೆ ಜಲಮಂಡಳಿ ಮತ್ತು ಕಾರ್ಮಿಕ ಸಂಘಟನೆಯ ಜಂಟಿ ಸಭೆ ಕಡ್ಡಾಯಗೊಳಿಸಬೇಕು” ಎಂದು ಒತ್ತಾಯಿಸಿದೆ.
ನಗರದ ಕುಡಿಯುವ ನೀರಿನ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡುವ ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸಲು ಸರ್ಕಾರ ತಕ್ಷಣ ಸ್ಪಂದಿಸಬೇಕೆಂದು ಸಂಘಟನೆಯ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.





