ರೈತರ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆಪ್ಟೆಂಬರ್ 29ರಂದು ಸಾವಿರಾರು ರೈತರು ಭಾಗವಹಿಸುವ ‘ಹುಬ್ಬಳ್ಳಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಭಾಲ್ಕಿ ನಗರದಲ್ಲಿ ಸೋಮವಾರ ಜಿಲ್ಲಾ ರೈತ ಸಂಘದ ವತಿಯಿಂದ ಆಯೋಜಿಸಿದ ಸಂಘದ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
“ಗಡಿಜಿಲ್ಲೆ ಬೀದರ್‌ನಲ್ಲಿ ಪ್ರಸಕ್ತ ವರ್ಷ ಮುಂಗಾರು ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಗೆ ಬಂದ ಬೆಳೆ ಉಳಿಸಿಕೊಳ್ಳಲು ಪರದಾಡುವಂತಾಗಿದೆ. ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಕಬ್ಬು ಕೂಡ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಕೃಷಿಗಾಗಿ ಸಾಲಶೂಲ ಮಾಡಿರುವ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ವೇಳೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ಬೆನ್ನಿಗೆ ನಿಲ್ಲಬೇಕು” ಎಂದು ಒತ್ತಾಯಿಸಿದರು.
ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಕಾರ್ಯಕ್ಕೆ ಸಕ್ಕರೆ ಕಾರ್ಖಾನೆಗಳು ಸಿದ್ಧತೆ ನಡೆಸುತ್ತಿವೆ. ಇದಕ್ಕೂ ಮುನ್ನ ಎಂಎಸ್‌ಪಿ ಆಧಾರದ ಮೇಲೆ ಪ್ರತಿ ಕ್ವಿಂಟಲ್ ಸಕ್ಕರೆಗೆ ₹6 ಸಾವಿರ ಬೆಲೆ ನಿಗದಿಪಡಿಸಬೇಕು. ಅಲ್ಲದೆ, ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸಬೇಕು ಎಂದು ಆಗ್ರಹಿಸಿದರು.
ಎಥೆನಾಲ್ ಉತ್ಪಾದನೆಯನ್ನು ಹೆಚ್ಚಿಸಿ, ಸರ್ಕಾರವೇ ಅದನ್ನು ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಬೇಕು. ರೈತರ ಹತ್ತಾರು ನ್ಯಾಯಯುತ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಮನ್ನಣೆ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಸೆಪ್ಟೆಂಬರ್ 29ರಂದು ‘ಹುಬ್ಬಳ್ಳಿ ಚಲೋ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ನಿವಾಸದ ಎದುರು ಸಾವಿರಾರು ರೈತರ ಸಮ್ಮುಖದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲೆಯ ರೈತರು ತಮ್ಮ ಕೆಲಸ ಕಾರ್ಯಗಳನ್ನು ಒಂದೆರಡು ದಿನ ಬದಿಗೊತ್ತಿ, ಸ್ವಂತ ವಾಹನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುಬ್ಬಳ್ಳಿಗೆ ತೆರಳಿ ‘ಹುಬ್ಬಳ್ಳಿ ಚಲೋ’ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ, ಸಂಘಟನಾ ಕಾರ್ಯದರ್ಶಿ ಅಶೋಕ ಕಾರಬಾರಿ, ಕಾರ್ಯಾಧ್ಯಕ್ಷ ನಾಗಶೆಟೆಪ್ಪ ಲಂಜವಾಡೆ, ಪ್ರಮುಖರಾದ ಭವರಾವ ನೆಲವಾಡೆ, ಗಣಪತಿ ಕುಂಟೆ, ಖಾಸಿಂ ಅಲಿ, ಮುಖಿಮೋದ್ದಿನ್, ಧೂಳಪ್ಪ ಆಣದೂರ, ವೀರಾರೆಡ್ಡಿ ಪಾಟೀಲ್, ವಿಠಲರೆಡ್ಡಿ ಅಣದೂರ, ಬಸವರಾಜ ಅಷ್ಟೂರ, ಸಂತೋಷ ಗುದಗೆ, ರುದ್ರಯ್ಯ ಸ್ವಾಮಿ, ರಾಜಕುಮಾರ ಬೇಲೂರ, ಶಿವು ಜಲ್ದೆ, ಅಶೋಕ ಪಾಟೀಲ್, ಲಿಂಗರಾಜ ಬಿರಾದಾರ, ಬಾಬುರಾವ ಭಾಸ್ಲೆ, ಚಂದ್ರಕಾಂತ ಮೋರೆ, ಎ. ಧನರಾಜ, ವಿಠಲರಾವ ಮೇತ್ರೆ, ಷನ್ಮುಖಪ್ಪ, ಶಾಂತಮ್ಮ ಮೂಲಗೆ, ಪ್ರಭಾವತಿ ಚನ್ಮಮಲ್ಲ, ಅನ್ನಪೂರ್ಣೇಶ್ವರಿ ಬಿರಾದಾರ, ಶಿವನಂದಾ ತುಳೆ, ಓಂಪ್ರಕಾಶ ಕಟ್ಟಾಳೆ, ಶಿವಾಜಿ ಭಾಟಸಾಂಗವಿ, ಧನರಾಜ ಮೇತ್ರೆ ಸಂಗಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.





