ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿರುವ ಸಾರ್ವಜನಿಕರಿಗೆ ಹೊಸ ಭರವಸೆಯನ್ನು ಮೂಡಿಸಿದೆ ಎನ್ನುತ್ತಾರೆ ಹೋರಾಟಗಾರರು.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ಕೇವಲ ಒಂದು ಅಪರಾಧ ಘಟನೆಯಾಗಿ ಉಳಿಯದೆ, ಕರಾವಳಿ ಭಾಗದಲ್ಲಿ ಸಾರ್ವಜನಿಕ ಆಕ್ರೋಶ ಮತ್ತು ಸುದೀರ್ಘ ಸಾಮಾಜಿಕ-ನ್ಯಾಯಾಂಗ ಹೋರಾಟದ ಪ್ರತೀಕವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನ್ಯಾಯಾಲಯದ ತೀರ್ಪು ಬಂದ ನಂತರ ಮತ್ತು ಬುರುಡೆ ಎಸ್‌ಐಟಿ ತನಿಖೆಯ ಘಟನಾವಳಿಗಳ ಬಳಿಕ, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲು ಧ್ವನಿ ಎತ್ತುವ ಹೋರಾಟವು ‘ಕೊಂದವರು ಯಾರು?’ ತಂಡದ ಹುಟ್ಟಿನ ಮೂಲಕ ಹೊಸ ಆಯಾಮವನ್ನು ಪಡೆದುಕೊಂಡಿತು. ಇದೀಗ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶ ನೀಡಿರುವುದು ಹೋರಾಟಕ್ಕೆ ಹೊಸ ಭರವಸೆಯ ಚಿರುಗಿ ಬಿತ್ತಿದೆ.
ಸುಪ್ರೀಂ ಕೋರ್ಟ್ ಐತಿಹಾಸಿಕ ಆದೇಶ ನೀಡುವ ಮೂಲಕ ನೊಂದ ಕುಟುಂಬ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವ ಜನರಲ್ಲಿ ಹೊಸ ಭರವಸೆ ಮೂಡಿಸಿದೆ. 14 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಸಿಕ್ಕ ಈ ಆದೇಶವನ್ನು ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಸ್ವಾಗತಿಸಿದ್ದು, ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಾ, “ಕೊನೆಗೂ ನ್ಯಾಯ ಸಿಗುವ ಭರವಸೆ ಮೂಡಿದೆ” ಎಂದು ಭಾವುಕರಾಗಿದ್ದಾರೆ.
ಸದ್ಯ ಪ್ರಕರಣದ ಸಂಪೂರ್ಣ ಮರುತನಿಖೆಗಾಗಿ ಹೊಸದಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲು ಆದೇಶಿಸಲಾಗಿದೆ. ಈ ಹಿಂದೆ ಸಿಐಡಿ ಅಥವಾ ಸಿಬಿಐ ತನಿಖಾ ತಂಡದಲ್ಲಿದ್ದ ಯಾವುದೇ ಅಧಿಕಾರಿಯನ್ನು ಹೊಸ ಎಸ್‌ಐಟಿಗೆ ಸೇರಿಸಬಾರದು ಎಂದು ಕೋರ್ಟ್ ಕಟ್ಟುನಿಟ್ಟಾಗಿ ಸೂಚಿಸಿದೆ. ಸಂಪೂರ್ಣವಾಗಿ ಪ್ರಾಮಾಣಿಕ ಹಾಗೂ ಹೊಸ ಅಧಿಕಾರಿಗಳ ತಂಡವೇ ತನಿಖೆ ನಡೆಸಬೇಕಿದೆ. ಮೂರು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಮಗ್ರ ವರದಿ ಸಲ್ಲಿಸಬೇಕು ಎಂದು ಗಡುವು ವಿಧಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದ ಮತ್ತೊಂದು ನಿರ್ಣಾಯಕ ಅಂಶವೆಂದರೆ ಸಂತೋಷ್ ರಾವ್ ಅವರನ್ನು ಈ ಪ್ರಕರಣದಲ್ಲಿ ಮತ್ತೆ ತನಿಖೆಗೆ ಒಳಪಡಿಸುವಂತಿಲ್ಲ ಎಂಬುದು. ಸಂತೋಷ್ ರಾವ್ ಅವರನ್ನು ಈಗಾಗಲೇ ವಿಚಾರಣೆಗೊಳಪಡಿಸಿ, ಸೆಷನ್ಸ್ ಕೋರ್ಟ್ ಖುಲಾಸೆಗೊಳಿಸಿರುವುದರಿಂದ ಅವರಿಗೆ ಸಂವಿಧಾನದ ಅನುಚ್ಛೇದ 20(2) ಹಾಗೂ CrPCಯ ಸೆಕ್ಷನ್ 300 ಅಡಿಯಲ್ಲಿ ರಕ್ಷಣೆ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಸೌಜನ್ಯ ಪ್ರಕರಣ | ಮರು ತನಿಖೆ ಬಗ್ಗೆ ನಿಲುವು ತಿಳಿಸಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ
ಈ ಬಗ್ಗೆ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿರುವ ಕೊಂದವರು ಯಾರು? ತಂಡದ ಪ್ರಮುಖ ಮಹಿಳಾ ಹೋರಾಟಗಾರ್ತಿ ಮಲ್ಲಿಗೆ ಸಿರಿಮನೆ, “ಈವರೆಗೆ ಕೊಂದವರು ಯಾರು ತಂಡ ಯಾವೆಲ್ಲ ವಿಚಾರವನ್ನು ಪ್ರಶ್ನಿಸುತ್ತಿತ್ತೋ ಮತ್ತು ಹೇಳುತ್ತಿತ್ತೋ, ಅದನ್ನೇ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಧರ್ಮಸ್ಥಳದಲ್ಲಿ ನಡೆದಿರುವುದು ಒಂದೆರಡು ಪ್ರಕರಣವಲ್ಲ. ಹಲವು ಪ್ರಕರಣಗಳಿವೆ. ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸಿದರೂ ತನಿಖೆಯ ದಿಕ್ಕನ್ನು ಇಷ್ಟೊಂದು ಬಾರಿ ತಪ್ಪಿಸಲು ಹೇಗೆ ಸಾಧ್ಯ ಎಂಬುದು ನಮ್ಮ ಪ್ರಶ್ನೆಯಾಗಿತ್ತು. ಒಂದು ಪ್ರಕರಣದಲ್ಲಿ ಸಾಕ್ಷಿ ನಾಶ ಮಾಡಬಹುದು. ಆದರೆ ಸರಣಿಯಾಗಿ ಹೆಣ್ಣುಮಕ್ಕಳ ಕೊಲೆಯಾಗುತ್ತದೆ, ಭಕ್ತಾದಿಗಳು ಶವವಾಗಿ ಪತ್ತೆಯಾಗುತ್ತಾರೆ, ಅಸಹಜವಾಗಿ ನೂರಾರು ಸಾವು ಸಂಭವಿಸುತ್ತದೆ. ಆದರೆ ಯಾವುದೇ ಒಬ್ಬ ತನಿಖಾಧಿಕಾರಿಗೂ ಈ ಒಟ್ಟಾರೆ ಸನ್ನಿವೇಶ ಅನುಮಾನಾಸ್ಪದವಾಗಿದೆ ಎಂದು ಅನಿಸಲಿಲ್ಲವೇ? ಇದು ಹೇಗೆ ಸಾಧ್ಯ ಎಂಬುದು ನಮ್ಮ ಪ್ರಧಾನವಾದ ಪ್ರಶ್ನೆಯಾಗಿತ್ತು. ಸೌಜನ್ಯ ತಾಯಿ ಕುಸುಮಾವತಿ, ಅವರ ಕುಟುಂಬಸ್ಥರ ಪ್ರಶ್ನೆಯೂ ಇದೇ ಆಗಿತ್ತು” ಎಂದು ಹೇಳಿದ್ದಾರೆ.

“ಪದ್ಮಲತಾ ಅಕ್ಕ ಇಂದ್ರಾವತಿ ಅವರಂತು ಉತ್ತರಿಸಲಾಗದ ಪ್ರಶ್ನೆಯನ್ನು ಕೇಳಿದ್ದರು. ಇವು ಪತ್ತೆಹಚ್ಚಲಾಗದ ಪ್ರಕರಣಗಳಾ ಅಥವಾ ಪತ್ತೆಹಚ್ಚದೆ ಬಿಟ್ಟಿರುವ ಪ್ರಕರಣಗಳಾ ಎಂದು ಪ್ರಶ್ನಿಸಿದ್ದರು. ಇದು ನೊಂದ ಕುಟುಂಬಗಳ ಸದಸ್ಯರ ಪ್ರಶ್ನೆಗಳೂ ಆಗಿತ್ತು. ಇಂದು ಸುಪ್ರೀಂ ಕೋರ್ಟ್‌ಗೆ ಹೇಗನಿಸಿದೆಯೋ, ನಮಗೆಲ್ಲರಿಗೂ ಹಾಗೆಯೇ ಅನಿಸಿದೆ” ಎಂದರು.
“ನಾವು ಬೆಳ್ತಂಗಡಿಯಲ್ಲಿ ಮಹಿಳಾ ನ್ಯಾಯ ಸಮಾವೇಶ ನಡೆಸಿದ್ದು ಇದೊಂದೇ ವಿಚಾರದಲ್ಲಿ ಅಲ್ಲ. ಗುಜರಾತ್, ಜಮ್ಮು, ದೆಹಲಿ, ಕೇರಳ, ಕರ್ನಾಟಕ ಎಲ್ಲೇ ಆದರೂ ಧರ್ಮ, ಪಿತೃಪ್ರಧಾನತೆ ಒಂದಕ್ಕೊಂದು ಸೇರಿಕೊಂಡಿದೆ. ಅದು ಯಾವುದೇ ಧರ್ಮವಾಗಲಿ ಮಹಿಳೆಯರನ್ನೇ ಬಲಿಪಶುಗಳನ್ನಾಗಿಸುತ್ತಾ ಬಂದಿದೆ, ಧಮನಿತರನ್ನೇ ಧಮನಿಸುತ್ತಾ ಬಂದಿದೆ. ಅಂತಹ ಅನ್ಯಾಯದ ವಿಚಾರದಲ್ಲಿ ನ್ಯಾಯ ಸಿಗಬೇಕು ಎಂದು ಕೇಳುವುದು ಮುಖ್ಯ ಎಂಬುದನ್ನು ನಾವು ಹೇಳಿದ್ದು. ಈಗ ಸುಪ್ರೀಂ ಕೋರ್ಟ್ ಕೂಡಾ ಅದನ್ನೇ ಹೇಳಿದೆ” ಎಂದು ತಿಳಿಸಿದ್ದಾರೆ.
“ಸುಪ್ರೀಂ ಕೋರ್ಟ್ ತನಿಖೆಗೆ ಮೂರು ತಿಂಗಳ ಗಡುವು ನೀಡಿರುವುದು ಸ್ವಾಗತಾರ್ಹ. ಇವೆಲ್ಲವನ್ನು ಕೊಂದವರು ಯಾರು? ಆಂದೋಲನ ಸ್ವಾಗತಿಸುತ್ತೇವೆ. ಎಲ್ಲ ನೊಂದ ಕುಟುಂಬದ ಸದಸ್ಯರು, ಸೌಜನ್ಯ ತಾಯಿ ಕುಸುಮಾವತಿ ಅವರು ಧೈರ್ಯದಿಂದ, ಬಿಡದಂತೆ ಈ ಹೋರಾಟ ನಡೆಸಿದ್ದಕ್ಕೆ ಅವರಿಗೂ ಹೃದಯಪೂರ್ವಕ ಧನ್ಯವಾದಗಳು. ನ್ಯಾಯದ ನಿರೀಕ್ಷೆ ಹೆಚ್ಚಾಗಿದೆ. ಈಗಾದರೂ ಸೂಕ್ತವಾದ, ನಿಜವಾದ ನ್ಯಾಯ ಸಿಗಬಹುದು ಎಂಬ ಆಶಾವಾದ ನಮ್ಮೆಲ್ಲರಲ್ಲಿ ಬಲವಾಗಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಹಿಳಾ ಫೆಡರೇಷನ್ (NFIW) ಕರ್ನಾಟಕ ರಾಜ್ಯ ಘಟಕದ ಮುಖಂಡೆ ಜ್ಯೋತಿ ಎ ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸುತ್ತಾ, “ಸುಪ್ರೀಂ ಕೋರ್ಟ್ ಆದೇಶವನ್ನು NFIW ಮತ್ತು ಕೊಂದವರು ಯಾರು ತಂಡ ತುಂಬು ಹೃದಯದಿಂದ ಸ್ವಾಗತಿಸುತ್ತದೆ. ಧರ್ಮಸ್ಥಳದಲ್ಲಿ ನಡೆದಿರುವ ಅನ್ಯಾಯಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳಲ್ಲಿ ಸೌಜನ್ಯ ಒಂದು ಭಾಗ. ಹಾಗಾಗಿ ಸುಪ್ರೀಂ ಕೋರ್ಟ್ ಆದೇಶ ಒಂದು ಹೆಜ್ಜೆ ಜಯವಾಗಿದೆ ಎಂದು NFIW ಅಭಿಪ್ರಾಯ. ಈ ವಿಚಾರದಲ್ಲಿ ಸೌಜನ್ಯ ಅವರಿಗೆ ತಾಯಿಗೆ ಅಭಿನಂದನೆ ತಿಳಿಸುತ್ತೇವೆ. ಅವರ ನಿರಂತರ ಹೋರಾಟ ಮೆಚ್ಚುವಂತದ್ದು” ಎಂದು ಹೇಳಿದರು. ಹಾಗೆಯೇ ಎಲ್ಲಾ ಹೋರಾಟಗಾರರಿಗೂ ಅಭಿನಂದನೆ ತಿಳಿಸಿದರು.
“ಈ ಹಿಂದೆ ಈ ಪ್ರಕರಣದಲ್ಲಿ ತನಿಖೆ ನಡೆಸಿದವರು ಮತ್ತೆ ತನಿಖೆಯಲ್ಲಿ ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಸೂಕ್ತವಾದ, ಸರ್ಕಾರಕ್ಕೆ ಚಳಿ ಬಿಡುಸುವಂತಹ ಆದೇಶ. ಸರಿಯಾದ ದಿಕ್ಕಿನಲ್ಲಿ ಸಾಗಿದರೆ ನ್ಯಾಯ ಸಿಗುವ ನಮಗೆ ಭರವಸೆಯಿದೆ. ಸರ್ಕಾರ ಈ ಆದೇಶವನ್ನು ಸರಿಯಾಗಿ ಪಾಲಿಸಬೇಕು ಎಂದು ಒತ್ತಾಯಿಸುತ್ತೇವೆ. ಸರ್ಕಾರ ಯಾವುದೇ ತರಹದ ಆಟವಾಡಬಾರದು. ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಸರ್ಕಾರ ಮಾಡಬಾರದು. ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯಬಾರದು. ಎಸ್‌ಐಟಿ ರಚಿಸುವಾಗ ಆರೋಪಿಗಳಿಗೆ ನಿಷ್ಠೆ ಇರುವವರನ್ನು ಅಲ್ಲ, ಸತ್ಯಕ್ಕೆ ನಿಷ್ಠೆ ಇರುವವರನ್ನು ನೇಮಿಸಬೇಕು. ನ್ಯಾಯಕ್ಕೆ ನಿಷ್ಠೆ ಹೊಂದಿರುವವರು” ಎಂದು ಆಗ್ರಹಿಸಿದರು.
“ಈ ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರೆ ಈ ಸರ್ಕಾರಕ್ಕೆ ಉಳಿಗಾಲವಿರಲ್ಲ ಎಂಬುದು ಪ್ರಜ್ಞಾವಂತರು ಸರ್ಕಾರಕ್ಕೆ ನೀಡುವ ಎಚ್ಚರಿಕೆ. ಯಾರಿಗೂ ಮಣಿಯದ ಪ್ರಣಬ್ ಮೊಹಂತಿ ಅವರಂತಹ ಅಧಿಕಾರಿಗಳನ್ನು ಈ ತನಿಖೆಗೆ ನೇಮಿಸಬೇಕು ಎಂಬುದು ನನ್ನ ಅಭಿಪ್ರಾಯ. ಹಾಗೆಯೇ ಎಸ್‌ಐಟಿ ತಂಡಕ್ಕೆ ಕೆಲಸ ಮಾಡಲು ಬಿಡಬೇಕು. ಸರ್ಕಾರ, ಹಿರಿಯ ಅಧಿಕಾರಿಗಳು ಪದೇ ಪದೇ ಒತ್ತಡ ಹಾಕದೆ, ನ್ಯಾಯವಾಗಿ ಕೆಲಸ ಮಾಡಲು ಬಿಡಬೇಕು” ಎಂದು ಒತ್ತಾಯಿಸಿದರು.
ಇನ್ನು ಈದಿನ ಡಾಟ್ ಕಾಮ್‌ಗೆ ಪ್ರತಿಕ್ರಿಯಿಸಿದ ಕೊಂದವರು ಯಾರು ತಂಡದ ಭಾಗವಾಗಿರುವ ಸ್ತ್ರೀವಾದಿ ಲೇಖಕಿ, ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷೆ ಪ್ರೊ. ಆರ್. ಸುನಂದಮ್ಮ, “ಕೊಂದವರು ಯಾರು ಅಭಿಯಾನಕ್ಕೆ ಭರವಸೆ ನೀಡಿದೆ. ನಿಸ್ಪಕ್ಷಪಾತವಾಗಿ ತನಿಖೆ ನಡೆಸುವ ಅಧಿಕಾರಿಗಳನ್ನು ಎಸ್‌ಐಟಿಯಲ್ಲಿ ನೇಮಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆಯುವಾಗ ಸೌಜನ್ಯ ತಾಯಿ, ಕುಟುಂಬಸ್ಥರ ಹೇಳಿಕೆಯನ್ನೇ ಪ್ರಧಾನವಾಗಿ ಪರಿಗಣಿಸಬೇಕು” ಎಂದು ಆಗ್ರಹಿಸಿದರು.

“ಈ ಪ್ರಕರಣದಲ್ಲಿ ನ್ಯಾಯ ಸಿಕ್ಕಿದರೆ ಮುಂದೆ ಈ ತರಹದ ಅಪರಾಧ ಎಸಗುವವರಿಗೆ ಪಾಠವಾಗಲಿದೆ. ಎಷ್ಟೇ ವರ್ಷವಾದರೂ ಶೋಧಿಸಿ ಇಂತಹ ಪ್ರಕರಣಗಳನ್ನು ಹೊರತರಬಹುದು ಎಂಬ ಭಯವನ್ನು ಅಪರಾಧ ಎಸಗುವವರಲ್ಲಿ ಮೂಡಿಸಲೂ ಸಾಧ್ಯವಾಗುತ್ತದೆ. ಇಂದಿಗೂ ಹಲವು ಹೆಣ್ಣುಮಕ್ಕಳು ಇಂತಹ ಅಪರಾಧಕ್ಕೆ ಒಳಗಾಗುತ್ತಿದ್ದಾರೆ. ಈ ಪಿತೃಪ್ರಭುತ್ವ ಸಮಾಜದಲ್ಲಿ ಗಂಡಿನ ಮೇಲೆ ಸೇಡು ತೀರಿಸಬೇಕು ಎಂಬ ಸಿಟ್ಟಿಗೂ ಕೊನೆಗೆ ಹೆಣ್ಣೇ ಬಲಿಯಾಗುವುದು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಏನಿದು ಸೌಜನ್ಯ ಕೊಲೆ ಪ್ರಕರಣ?
2012ರ ಅಕ್ಟೋಬರ್ 9ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಧರ್ಮಸ್ಥಳದ ಬಳಿ 17 ವರ್ಷದ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿತ್ತು. ಮರುದಿನ ಆಕೆಯ ಮೃತದೇಹ ನೇತ್ರಾವತಿ ಸ್ನಾನಘಟ್ಟದ ಬಳಿಯ ಪೊದೆಯಲ್ಲಿ ಸಿಕ್ಕಿತ್ತು. ಅಂದಿನಿಂದ ಇಂದಿನವರೆಗೂ ಸೌಜನ್ಯ ಕುಟುಂಬ ಮತ್ತು ಮಹಿಳಾಪರ ಹೋರಾಟಗಾರರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಕಳೆದೊಂದು ವರ್ಷದಿಂದ ಮಹಿಳಾಪರ ಹೋರಾಟಗಾರರು, ಲೇಖಕಿಯರು ‘ಕೊಂದವರು ಯಾರು?’ ಎಂಬ ಆಂದೋಲನ ಕಟ್ಟಿಕೊಂಡು ಸೌಜನ್ಯ ಮಾತ್ರವಲ್ಲದೆ ಧರ್ಮಸ್ಥಳ ಆಸುಪಾಸಿನಲ್ಲಿ ನಡೆದ ಮಹಿಳೆಯರ ಅಸಹಜ ಸಾವಿನ ತನಿಖೆಗೆ ಆಗ್ರಹಿಸಿ ನಿರಂತರವಾಗಿ ಹೋರಾಟ ನಡೆಸುತ್ತಿದ್ದಾರೆ.
ಸೌಜನ್ಯ ಪ್ರಕರಣವನ್ನು 2013ರಲ್ಲಿ ಸಿಬಿಐಗೆ ವರ್ಗಾಯಿಸಲಾಗಿತ್ತು. ನಂತರ 2015ರಲ್ಲಿ ಮಂಗಳೂರಿನಿಂದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಈ ನಡುವೆ ಪ್ರಕರಣದ ಸಾಕ್ಷಿಯಾಗಿದ್ದ ರವಿ ಪೂಜಾರಿ ಎಂಬುವವರು ನಿಗೂಢವಾಗಿ ಸಾವನ್ನಪ್ಪಿದ್ದರು. ಸೌಜನ್ಯ ಅತ್ಯಾಚಾರ ಕೊಲೆ ನಡೆದ ಎರಡು ದಿನದಲ್ಲೇ ಸಂತೋಷ್ ರಾವ್ ಎಂಬಾತನ ಬಂಧನ ಮಾಡಲಾಗಿತ್ತು. ಸುಮಾರು 11 ವರ್ಷಗಳ ಕಾಲ ಸಂತೋಷ್ ಜೈಲಿನಲ್ಲಿದ್ದರು. ಆದರೆ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಿ.ಬಿ ಸಂತೋಷ್ ಅವರು 2023ರಲ್ಲಿ ಸಂತೋಷ ರಾವ್ ಪ್ರಕರಣದಲ್ಲಿ ನಿರ್ದೋಷಿ ಎಂದು ಘೋಷಿಸಿದ್ದರು. ಇವಿಷ್ಟು ನಡೆಯುತ್ತಿದ್ದಂತೆ ನಿಜಕ್ಕೂ ಈ ನೀಚ ಕೃತ್ಯವನ್ನು ಎಸಗಿದವರು ಯಾರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ.
ಇದಾದ ಬಳಿಕ ಸೌಜನ್ಯ ಕುಟುಂಬ ಪ್ರಕರಣದ ಮರುತನಿಖೆಗೆ ಕೋರಿ ಹೈಕೋರ್ಟ್ ಮೊರೆ ಹೋಯಿತು. ಒಂದು ವರ್ಷಗಳ ಕಾಲ ದೀರ್ಘ ಹೋರಾಟ ನಡೆಸಿತು. ಆದರೆ 2024ರ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್ ಈ ಪ್ರಕರಣದ ಮರುತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು. ಈ ಆದೇಶವನ್ನು ಪ್ರಶ್ನಿಸಿ ತಾಯಿ ಕುಸುಮಾವತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಹೊಸ ಭರವಸೆ ನೀಡುವ ಆದೇಶ ಹೊರಬಿದ್ದಿದೆ.
ಬರುಡೆ ಎಸ್‌ಐಟಿ ಎಂಬ ಟೀಕೆಗೆ ಗುರಿಯಾದ ಎಸ್‌ಐಟಿ ತನಿಖೆ
ಅಕ್ರಮವಾಗಿ ಹಲವು ಮಂದಿಯ ಮೃತದೇಹವನ್ನು ಹೂಳಲಾಗಿದೆ ಎಂಬ ದೂರಿನ ತನಿಖೆಗೆ ಸಂಬಂಧಿಸಿದಂತೆ ಈ ಹಿಂದೆ ಸರ್ಕಾರ ರಚಿಸಿದ್ದ ಎಸ್‌ಐಟಿ (ವಿಶೇಷ ತನಿಖಾ ತಂಡ) ತನಿಖೆಯು ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಲು ವಿಫಲವಾಯಿತು ಎಂಬ ಟೀಕೆಗಳು ಕೇಳಿಬಂದವು. ಸಾರ್ವಜನಿಕರು ಮತ್ತು ಸಾಮಾಜಿಕ ಹೋರಾಟಗಾರರು ಈ ತನಿಖಾ ಪ್ರಕ್ರಿಯೆಯನ್ನು ‘ಬುರುಡೆ ಎಸ್‌ಐಟಿ’ ಎಂದು ಕಟುವಾಗಿ ಟೀಕಿಸಿದರು. ಈ ತನಿಖಾ ಪ್ರಹಸನವು ಸಾರ್ವಜನಿಕರ ಅಪನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿತು. ಇದರಿಂದಾಗಿ, ಪ್ರಕರಣವನ್ನು ಸಂಪೂರ್ಣವಾಗಿ ಮರುತನಿಖೆ ನಡೆಸಿ, ನೈಜ ಆರೋಪಿಗಳನ್ನು ಪತ್ತೆಹಚ್ಚಬೇಕೆಂಬ ಒತ್ತಾಯ ಕರಾವಳಿಯಾದ್ಯಂತ ತೀವ್ರ ಸ್ವರೂಪ ಪಡೆದುಕೊಂಡಿತು.
‘ಕೊಂದವರು ಯಾರು?’ ಸಂಘಟನೆಯ ಹುಟ್ಟು; ಆಶಾಕಿರಣ
ಬುರುಡೆ ಎಸ್‌ಐಟಿ ತನಿಖೆಯ ವಿಫಲತೆ ಮತ್ತು ಮರುತನಿಖೆಯ ತೀವ್ರ ಒತ್ತಾಯದ ಹಿನ್ನೆಲೆಯಲ್ಲಿ “ಕೊಂದವರು ಯಾರು?” ಎಂಬ ಹೆಸರಿನಲ್ಲಿ ಜನಸಾಮಾನ್ಯರು, ಯುವಕರು ಮತ್ತು ಸಾಮಾಜಿಕ ಹೋರಾಟಗಾರರು ಒಂದಾಗಿ ಬೃಹತ್ ಸಂಘಟನೆಯನ್ನು ರೂಪಿಸಿದರು. ಈ ಸಂಘಟನೆಯು ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಹತ್ತಾರು ಹಂತದ ಹೋರಾಟಗಳನ್ನು ಹಮ್ಮಿಕೊಂಡಿತು.
‘ಸೌಜನ್ಯಗೆ ನ್ಯಾಯ ಸಿಗಲೇಬೇಕು’ ಮತ್ತು ‘ಕೊಲೆಗಾರರನ್ನು ತಕ್ಷಣ ಪತ್ತೆ ಹಚ್ಚಿ’ ಎಂಬ ಬೇಡಿಕೆಯನ್ನಿಟ್ಟುಕೊಂಡು ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಕ ಸಹಿ ಅಭಿಯಾನವನ್ನು ನಡೆಸಲಾಯಿತು. ಲಕ್ಷಾಂತರ ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು. ಪ್ರಕರಣಕ್ಕೆ ಮರು ಜೀವ ನೀಡಲು ಮತ್ತು ಉನ್ನತ ಮಟ್ಟದ ಸ್ವತಂತ್ರ ತನಿಖೆ ನಡೆಸಲು ಒತ್ತಾಯಿಸಿ ಸಂಘಟನೆಯ ನೇತೃತ್ವದಲ್ಲಿ ಅಂದಿನ ರಾಜ್ಯ ಮುಖ್ಯಮಂತ್ರಿಗಳಿಗೆ ಹಾಗೂ ಕೇಂದ್ರ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮನವಿ ಪತ್ರಗಳನ್ನು ಬರೆದು ಒತ್ತಡ ಹೇರಲಾಯಿತು. ಸೌಜನ್ಯ ಹೋರಾಟದ ಚರಿತ್ರೆಯಲ್ಲಿ ‘ಬೆಳ್ತಂಗಡಿ ಚಲೋ’ ಒಂದು ಪ್ರಮುಖ ಮೈಲಿಗಲ್ಲಾಯಿತು. ಸಾವಿರಾರು ಜನರು ರಸ್ತೆಗಿಳಿದು ನಡೆಸಿದ ಈ ಬೃಹತ್ ಕಾಲ್ನಡಿಗೆ ಜಾಥಾ ಮತ್ತು ಪ್ರತಿಭಟನಾ ಸಮಾವೇಶವು ಸರ್ಕಾರದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು. ಇವೆಲ್ಲವುದರ ನಡುವೆ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ತಾಯಿ ಸುಪ್ರೀಂ ಮೆಟ್ಟಿಲೇರಿದ್ದರು. ಕೊಂದವರು ಯಾರು ತಂಡವೂ ಅವರ ಬೆಂಬಲಕ್ಕೆ ನಿಂತಿತು.
ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಮತ್ತು ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ತನಿಖಾ ಪ್ರಕ್ರಿಯೆಗಳು ಪಾರದರ್ಶಕವಾಗಿ ನಡೆಯಲಿದ್ದು, ಸತ್ಯಾಂಶ ಹೊರಬರಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸೌಜನ್ಯ ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ ಮತ್ತು ನ್ಯಾಯಕ್ಕಾಗಿ ಕಾಯುತ್ತಿರುವ ಸಾರ್ವಜನಿಕರಿಗೆ ಹೊಸ ಭರವಸೆಯನ್ನು ಮೂಡಿಸಿದೆ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.



