ಬಾಲಕಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಮತ್ತು ಬೇಜವಾಬ್ದಾರಿತನ ತೋರಿದ ಆರೋಪದ ಹಿನ್ನೆಲೆಯಲ್ಲಿ, ಧಾರವಾಡ ಜಿಲ್ಲೆಯ ಗರಗ ವಲಯದ ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತು ಮಾಡಲಾಗಿದೆ.
ಕಿಡಿಗೇಡಿಗಳು ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಬಾಲಕಿಗೆ ರಕ್ಷಣೆ ಒದಗಿಸಬೇಕೆಂದು ಬಾಲಕಿಯ ಪೋಷಕರು ಗರಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ, ಪೊಲೀಸ್ ಅಧಿಕಾರಿಗಳು ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯ ಒದಗಿಸುವ ಬದಲು, ಪ್ರಕರಣವನ್ನು ಮುಚ್ಚಿಹಾಕಲು ರಾಜಿ ಸಂಧಾನಕ್ಕೆ ಮುಂದಾಗಿದ್ದರು ಎಂದು ಆರೋಪಿಸಲಾಗಿದೆ. ಈ ಗಂಭೀರ ಆರೋಪದ ಹಿನ್ನೆಲೆ, ಶಿವಯೋಗಿ ಅವರನ್ನು ಅಮಾನತು ಮಾಡಿ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಗುಂಜನ್ ಆರ್ಯ ಆದೇಶ ಹೊರಡಿಸಿದ್ದಾರೆ.
“ಗ್ರಾಮದ ಕೆಲವು ಕಿಡಿಗೇಡಿಗಳು ನಿರಂತರವಾಗಿ ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಪೀಡನೆಯಿಂದ ನಮ್ಮ ಮಗಳು ನೊಂದಿದ್ದಳು. ಪೊಲೀಸ್ ಠಾಣೆಯ ಮೆಟ್ಟಿಲೇರಿದರೂ ರಕ್ಷಣೆ ದೊರೆಯಲಿಲ್ಲ. ನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ” ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.
ಸಿಪಿಐ ಶಿವಯೋಗಿ ಲೋಹಾರ್ ಅವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದೆ ಸಂಧಾನ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಪೊಲೀಸರ ಈ ಉದಾಸೀನತೆಯೇ ಬಾಲಕಿಯ ಆತ್ಮಹತ್ಯೆಗೆ ಪರೋಕ್ಷ ಕಾರಣವೆಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಲೇಖನ ಓದಿದ್ದೀರಾ?: ರಾಮಮಂದಿರ ದೇಣಿಗೆ ದುರುಪಯೋಗ: ಬಿಜೆಪಿಯ ಬ್ರಿಜ್ ಭೂಷಣ್ ಆರೋಪಗಳ ಸುತ್ತ
ಬಾಲಕಿಯ ಸಾವಿನ ಬಳಿಕ ಎಚ್ಚೆತ್ತ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ. ಕಿರುಕುಳ ನೀಡಿದ ಆರೋಪದಲ್ಲಿ ಆರೋಪಿಗಳಾದ ನಯೀಮ್ ಬೇಗ್ ಜೋರಮ್ಮನವರ್ (25) ಮತ್ತು ಸೊಹೈಲ್ ಮುಲ್ಲಾ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿ ಸಾವಿನ ಸೂಕ್ಷ್ಮ ಪ್ರಕರಣದಲ್ಲಿ ಪೊಲೀಸರ ಕರ್ತವ್ಯ ಲೋಪವೂ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದ್ದು, ಸಿಪಿಐ ಶಿವಯೋಗಿ ಲೋಹಾರ್ ಅವರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಈ ಪ್ರಕರಣದಲ್ಲಿ ಇಲಾಖೆಯ ಇನ್ನೂ ಯಾರೆಲ್ಲ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಸಮಗ್ರ ಇಲಾಖಾ ತನಿಖೆಗೂ ಆದೇಶಿಸಲಾಗಿದೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104.



