ಭಾರತೀಯ ವಾಣಿಜ್ಯ ಹಡಗು ‘ವಿರಾಟ್ 1’ ಒಮಾನ್ ಕರಾವಳಿಯ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿದ್ದು, ಹಡಗಿನಲ್ಲಿದ್ದ 14 ಮಂದಿ ಸಿಬ್ಬಂದಿಯ ರಕ್ಷಣೆಗಾಗಿ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಹಡಗಿನ ಎಂಜಿನ್‌ನಲ್ಲಿ ಉಂಟಾದ ದಿಢೀರ್ ವೈಫಲ್ಯವೇ ಈ ಅವಘಡಕ್ಕೆ ಕಾರಣ ಎಂದು ತಿಳಿದುಬಂದಿದೆ.
ಸಮುದ್ರ ಮಧ್ಯೆ ಸಂಚರಿಸುತ್ತಿದ್ದಾಗ ಹಡಗಿನ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಪರಿಣಾಮವಾಗಿ ಹಡಗು ನಿಯಂತ್ರಣ ಕಳೆದುಕೊಂಡು ಮುಳುಗಲಾರಂಭಿಸಿದೆ. ಅಪಾಯದ ಮುನ್ಸೂಚನೆ ಅರಿತ ಕೂಡಲೇ ಸಿಬ್ಬಂದಿ ಕರಾವಳಿ ಕಾವಲು ಪಡೆಗಳಿಗೆ ತುರ್ತು ಸಂದೇಶ ರವಾನಿಸಿದ್ದಾರೆ.
ಇದನ್ನು ಓದಿದ್ದೀರಾ? ಫಿಫಾ ಜಗತ್ತಿನಲ್ಲಿ ಭಾರತದ ಹೆಜ್ಜೆಗುರುತು – ಕನ್ನಡಿಗ ಕೆಂಪಯ್ಯನವರ ಮರೆಯಲಾಗದ ಸಾಧನೆ
ಸಂದೇಶ ಲಭ್ಯವಾದ ಬೆನ್ನಲ್ಲೇ ಎಚ್ಚೆತ್ತ ರಕ್ಷಣಾ ಪಡೆಗಳು ಸ್ಥಳಕ್ಕೆ ದೌಡಾಯಿಸಿವೆ. ಹಡಗಿನಲ್ಲಿದ್ದ ಒಟ್ಟು 14 ಜನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಪಾರುಮಾಡಲು ಸಮರೋಪಾದಿಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.
ಯಾವುದೇ ಪ್ರಾಣಹಾನಿಯ ಬಗ್ಗೆ ಸದ್ಯಕ್ಕೆ ವರದಿಯಾಗಿಲ್ಲ. ಹವಾಮಾನ ಮತ್ತು ಸಮುದ್ರದ ಅಲೆಗಳ ತೀವ್ರತೆಯ ನಡುವೆಯೂ ಒಮಾನ್ ಕಡಲ ಭದ್ರತಾ ಪಡೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಸಿಬ್ಬಂದಿಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ ನಿರಂತರ ಕಾರ್ಯಾಚರಣೆ ನಡೆಸುತ್ತಿವೆ. ಘಟನೆಯ ಕುರಿತು ಹೆಚ್ಚಿನ ಅಧಿಕೃತ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ.




