ವಾಲ್ಮೀಕಿ ನಿಗಮದ ಅಕ್ರಮ ಹಗರಣದ ಆರೋಪ ಎದುರಿಸುತ್ತಿದ್ದ ಬಿ. ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ತನಿಖೆಯ ಅಧಿಕೃತ ವರದಿಯಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾದ ನಂತರವೇ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಮುಂದಿನ ಒಂದೆರಡು ದಿನಗಳಲ್ಲಿ ರಾಜ್ಯ ಸಂಪುಟಕ್ಕೆ ಮಹಿಳಾ ಸಚಿವೆಯೊಬ್ಬರ ಸೇರ್ಪಡೆಯಾಗಲಿದೆ ಎಂದೂ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮಕ್ಕೆ ಒಳಗಾಗಿದ್ದ ಹಣದಲ್ಲು 95% ರಷ್ಟನ್ನು ತನಿಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಹಗರಣದಲ್ಲಿ ನಾಗೇಂದ್ರ ಅವರ ಪಾತ್ರವಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ತಿಳಿಸಿದ್ದಾರೆ.
“ಸಂಪುಟದಲ್ಲಿನ ಒಟ್ಟು 34 ಸಚಿವ ಸ್ಥಾನಗಳ ಪೈಕಿ 33 ಭರ್ತಿಯಾಗಿದ್ದು, ಬಾಕಿ ಇರುವ ಒಂದು ಸ್ಥಾನವನ್ನು ಮಹಿಳಾ ಶಾಸಕರಿಗೆ ನೀಡಲು ಕಾಯ್ದಿರಿಸಲಾಗಿದೆ. ಕಾಂಗ್ರೆಸ್ ಪಕ್ಷವು ಮಹಿಳಾ ಸಬಲೀಕರಣದ ಸಿದ್ಧಾಂತಕ್ಕೆ ಬದ್ಧವಾಗಿದೆ” ಎಂದು ಪುನರುಚ್ಚರಿಸಿದ್ದಾರೆ.
“ಯುವಕರನ್ನು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿ, ಮಾದಕ ವಸ್ತುಗಳಿಂದ ದೂರವಿಡಲು ರಾಜ್ಯಾದ್ಯಂತ 10,000 ‘ಭಾರತ್ ಜೋಡೋ ಯೂತ್ ಕ್ಲಬ್’ಗಳನ್ನು ಸ್ಥಾಪಿಸುವುದು ಸರ್ಕಾರದ ಗುರಿಯಾಗಿದೆ” ಎಂದಿದ್ದಾರೆ.
“ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡುವ ನಿರ್ದೇಶನವನ್ನು ಸಂಪೂರ್ಣವಾಗಿ ಗೌರವಿಸಿ ತಮಿಳುನಾಡಿಗೆ ನೀರು ಹರಿಸಲಾಗುತ್ತದೆ. ಕಾವೇರಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ಯೋಜನೆಯು ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆ ಮತ್ತು ತಮಿಳುನಾಡಿನ ಹಿತಾಸಕ್ತಿ ಎರಡಕ್ಕೂ ಪೂರಕವಾಗಿದೆ” ಎಂದು ಹೇಳಿದ್ದಾರೆ.
“ಅಪ್ಪರ್ ಭದ್ರಾ ಏತ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ 5,400 ಕೋಟಿ ರೂಪಾಯಿ ಘೋಷಿಸಿದ್ದರೂ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ” ಎಂದು ಅವರು ಆರೋಪಿಸಿದ್ದಾರೆ.
ಪಕ್ಷದ ಆಂತರಿಕ ವಿಚಾರಗಳ ಕುರಿತು ಮಾತನಾಡಿದ ಶಿವಕುಮಾರ್, “ನಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವೆ ಯಾವುದೇ ಪ್ರತ್ಯೇಕ ಬಣಗಳಿಲ್ಲ. ಇಡೀ ಪಕ್ಷ ಒಗ್ಗಟ್ಟಾಗಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೆ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ 20 ಕ್ಷೇತ್ರಗಳನ್ನು ಗೆದ್ದು ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲಿದ್ದಾರೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



