ವಚನ ಕಲ್ಯಾಣ | ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ

Date:

ಕಾಲುಗಳೆಂಬುವು ಗಾಲಿ ಕಂಡಯ್ಯಾ
ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾ.
ಬಂಡಿಯ ಹೊಡೆವರೈವರು ಮಾನಿಸರು,
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಆದರಿಚ್ಛೆಯನರಿದು ಹೊಡೆಯದರ‍್ದಡೆ,
ಅದರಚ್ಚು ಮುರಿಯಿತ್ತು, ಗುಹೇಶ್ವರಾ

- Advertisement -

ಕಲ್ಯಾಣ ನೆಲದಲ್ಲಿ ಬಸವಣ್ಣನವರ ನೇತ್ರತ್ವದಲ್ಲಿ ರಚನೆಯಾದ ಅನುಭವ ಮಂಟಪ ಎಂಬುದು ಸಾಮಾಜಿಕ ಬದಲಾವಣೆಯ ಕೇಂದ್ರ. ಅನುಭವ ಮಂಟಪ ಎಂಬುದು ಒಂದು ಸ್ಥಳವಲ್ಲ. ಅದು ಜಾತಿ, ವರ್ಗ, ವರ್ಣ ಭೇದ-ಭಾವಗಳನ್ನು ದಾಟಿ ಬಂದ ಶರಣರು ಒಂದೆಡೆ ಸೇರಿ ಚಿಂತನ-ಮಂಥನ ನಡೆಸಿದ ಆಧ್ಯಾತ್ಮಿಕ, ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಯ ಸ್ಥಳ. ಅನುಭವ ಮಂಟಪ ಮುಖ್ಯಸ್ಥರೂ ಆಗಿದ್ದ ಅಲ್ಲಮಪ್ರಭು ವಚನ ಚಳವಳಿಯ ಬಹುದೊಡ್ಡ ಬೆರಗು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಅಲ್ಲಮಪ್ರಭುಗಳು ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಬಳ್ಳಿಗಾವಿ. ಶರಣರ ನಡೆ-ನುಡಿ ಮತ್ತು ಸಿದ್ಧಾಂತಗಳಿಂದ ಪ್ರಭಾವಿತರಾಗಿ ಕಲ್ಯಾಣದತ್ತ ಬಂದ ಅವರು ಶರಣರೊಂದಿಗೆ ಅನುಸಂಧಾನ ನಡೆಸಿದ ಅನುಭಾವಿ ವಚನಕಾರ, ತತ್ವಜ್ಞಾನಿ. ಅಲ್ಲಮನ 1670 ವಚನಗಳು ನಮಗೆ ಓದಲು ಲಭ್ಯವಾಗಿವೆ. ಅನೇಕ ವಚನಗಳಲ್ಲಿ ರೂಪಕ ಬಳಸಿ ಧರ್ಮಚಿಂತನೆ, ಆಧ್ಯಾತ್ಮ ಹಾಗೂ ವ್ಯಕ್ತಿತ್ವ ವಿಕಸನದಂತಹ ಗಂಭೀರ ವಿಚಾರಗಳನ್ನು ಸರಳವಾಗಿ ಮನದಟ್ಟು ಮಾಡಿಕೊಟ್ಟಿದ್ದಾರೆ. ‘ಗುಹೇಶ್ವರಾʼ ಅಲ್ಲಮಪ್ರಭುಗಳ ವಚನಾಂಕಿತನಾಮ.

ಅಲ್ಲಮಪ್ರಭುವಿನ ವಚನಗಳ ವೈಶಿಷ್ಟ್ಯವೆಂದರೆ, ಸರಳ ಜೀವನದ ವಸ್ತುಗಳನ್ನೇ ರೂಪಕವನ್ನಾಗಿ ಮಾಡಿಕೊಂಡು ಅಸಾಮಾನ್ಯವಾದ ಜೀವನಸತ್ಯಗಳನ್ನು ತೆರೆದಿಡುವುದು. ಮಾನವನ ದೇಹವನ್ನು ಬಂಡಿಗೆ ಹೋಲಿಸಿ, ಬದುಕಿನ ಪಯಣವನ್ನು ವಿಶಿಷ್ಟವಾಗಿ ವಿಶ್ಲೇಷಿಸಿರುವ ಅವರ ಮೇಲಿನ ವಚನ ವರ್ತಮಾನ ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಅಲ್ಲಮಪ್ರಭುಗಳ ʼಕಾಲುಗಳೆಂಬುವು ಗಾಲಿ ಕಂಡಯ್ಯ, ದೇಹವೆಂಬುದು ತುಂಬಿದ ಬಂಡಿ ಕಂಡಯ್ಯಾʼ ಎಂಬ ರೂಪಕದಲ್ಲಿ ಮಾನವನ ದೇಹವನ್ನು ಒಂದು ಬಂಡಿಗೆ ಹೋಲಿಸಲಾಗಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಲು ಎತ್ತಿನ ಬಂಡಿಗೆ ಎರಡು ಗಾಲಿಗಳು ಹೇಗೆ ಅಗತ್ಯವೋ, ಬದುಕಿನ ಪಯಣಕ್ಕೂ ದೇಹವೇ ಸಾಧನ. ಎರಡು ಕಾಲುಗಳು ಬಂಡಿಯ ಗಾಲಿಗಳಂತೆ ನಮ್ಮನ್ನು ಮುನ್ನಡೆಸುತ್ತವೆ. ಬಂಡಿ ಇದ್ದ ಮಾತ್ರಕ್ಕೆ ಅದು ಸರಿಯಾದ ದಿಕ್ಕಿನಲ್ಲಿ ಸಾಗುವುದಿಲ್ಲ. ಅದಕ್ಕೆ ಸಮರ್ಥ ಸಾರಥಿ ಬೇಕು. ಅದೇ ವಿಚಾರವನ್ನು ಅಲ್ಲಮ ಮಾನವನ ಬದುಕಿಗೆ ಅನ್ವಯಿಸುವಂತೆ ತಿಳಿ ಹೇಳುತ್ತಾನೆ.

ಈ ದೇಹವೆಂಬ ಬಂಡಿಯಲ್ಲಿ ಪಂಚೇಂದ್ರಿಯಗಳಿವೆ. ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ಚರ್ಮ- ಈ ಐದು ಇಂದ್ರಿಯಗಳು ಮನುಷ್ಯನ ಬದುಕಿನ ಅನುಭವಗಳಿಗೆ ದಾರಿ ಮಾಡಿಕೊಡುತ್ತವೆ. ಆದರೆ ಅವುಗಳ ಆಸೆ, ಆಕರ್ಷಣೆ ಮತ್ತು ಚಂಚಲತೆಯನ್ನು ನಿಯಂತ್ರಿಸದೆ ಅವುಗಳ ಹಿಂದೆ ಸಾಗಿದರೆ ಬದುಕಿನ ಬಂಡಿ ದಿಕ್ಕು ತಪ್ಪುವುದು ನಿಶ್ಚಿತ. ಬಹುದೂರ ಕ್ರಮಿಸಬೇಕಾದ ಬಂಡಿ ಚಲನಶೀಲತೆ ಕಳೆದುಕೊಳ್ಳುತ್ತದೆ.

ಐವರು ಸಾರಥಿಗಳು ಒಂದೇ ಬಂಡಿಯನ್ನು ತಮ್ಮ ತಮ್ಮ ದಿಕ್ಕಿಗೆ ಎಳೆಯಲು ಆರಂಭಿಸಿದರೆ ಬಂಡಿ ಸರಾಗವಾಗಿ ಸಾಗಲು ಸಾಧ್ಯವೇ? ಒಬ್ಬನು ಎಡಕ್ಕೆ, ಮತ್ತೊಬ್ಬನು ಬಲಕ್ಕೆ ಎಳೆದರೆ ಬಂಡಿ ಮುಂದೆ ಹೋಗುವುದಕ್ಕಿಂತ ಅಡ್ಡದಾರಿ ಹಿಡಿಯುತ್ತದೆ. ಮಾನವನ ಬದುಕಿನ ಸ್ಥಿತಿಯೂ ಇದೇ. ಪಂಚೇಂದ್ರಿಯಗಳ ಮೇಲೆ ನಿಯಂತ್ರಣ ಇಲ್ಲದಿದ್ದರೆ ಬದುಕಿನಲ್ಲಿ ಅಸ್ಥಿರತೆ, ಗೊಂದಲ ಮತ್ತು ಅಧಃಪತನ ಉಂಟಾಗುವುದು ಸಹಜ ಎಂಬುದು ಅಲ್ಲಮ ತಿಳಿಸುತ್ತಾನೆ.

ಕಾಮ ಸತ್ಯವ ತಿಂದಿತ್ತು, ಕ್ರೋಧ ಜ್ಞಾನ ತಿಂದಿತ್ತು,
ಲೋಭ ಧರ್ಮವ ತಿಂದಿತ್ತು, ಮೋಹ ವಿರಕ್ತಿಯ ತಿಂದಿತ್ತು,
ಮದ ಭಕ್ತಿಯ ತಿಂದಿತ್ತು, ಮತ್ಸರ ಯುಕ್ತಿಯ ತಿಂದಿತ್ತು…

ಅಲ್ಲಮಪ್ರಭು ಮತ್ತೊಂದು ವಚನದಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಿದ್ದಾರೆ. ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ತು ಮತ್ಸರಗಳು ಮನುಷ್ಯನಲ್ಲಿರುವ ಸತ್ಯ, ಜ್ಞಾನ, ಧರ್ಮ, ವಿರಕ್ತಿ, ಭಕ್ತಿ ಮತ್ತು ಯುಕ್ತಿಯಂತಹ ಸದ್ಗುಣಗಳನ್ನು ನಾಶಪಡಿಸುತ್ತವೆ ಎಂಬುದನ್ನು ಈ ರೂಪಕದ ಮೂಲಕ ಅಲ್ಲಮ ಎಚ್ಚರಿಸುತ್ತಾನೆ.

ಮಾನವನ ಬದುಕಿನ ಪಯಣದಲ್ಲಿ ಅನೇಕ ಸವಾಲು ಎದುರಾಗುವುದು ಸಹಜ. ಸವಾಲುಗಳಿಗಿಂತ ಅವುಗಳನ್ನು ಎದುರಿಸುವ ಮನೋಭಾವ ಮುಖ್ಯ. ಜೀವನದ ಬಂಡಿಯನ್ನು ಮುನ್ನಡೆಸುವ ಸಾರಥಿ ಅನುಭಾವಿಯಾಗಿರಬೇಕು, ಪ್ರಜ್ಞಾವಂತನಾಗಿರಬೇಕು ಮತ್ತು ಬದುಕಿನ ಸತ್ಯ-ಮಿಥ್ಯಗಳ ಕುರಿತಾಗಿ ಎಚ್ಚರ ಇರಬೇಕು. ಪಂಚೇಂದ್ರಿಯಗಳು ಬದುಕಿನ ಚಾಲಕರು ಆಗಬಾರದು; ವಿವೇಕ ಮತ್ತು ಆತ್ಮಪ್ರಜ್ಞೆ ಅವುಗಳನ್ನು ನಿಯಂತ್ರಿಸುವ ಸಾರಥಿಯಾಗಬೇಕು.

ವಿವೇಕವಂತ ಸಾರಥಿಯಿಲ್ಲದ ಬಂಡಿ ದಾರಿ ತಪ್ಪಿ ಹಳ್ಳಕ್ಕೆ ಬೀಳುವಂತೆ, ಇಂದ್ರಿಯಗಳನ್ನು ನಿಯಂತ್ರದಲ್ಲಿ ಇಟ್ಟುಕೊಳ್ಳದ ವ್ಯಕ್ತಿಯ ಬದುಕು ವಿನಾಸದತ್ತ ಸಾಗುತ್ತದೆ. ಬದುಕಿನ ಹಳಿ ತಪ್ಪಿದ ವ್ಯಕ್ತಿಯು ಗೌರವ, ಘನತೆ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಾನೆ. ಇಂದ್ರಿಯಗಳನ್ನು ನಿಗ್ರಹಿಸುವುದು ಎಂದರೆ ಅವುಗಳನ್ನು ನಾಶಪಡಿಸುವುದಲ್ಲ; ಅವುಗಳ ಮೇಲೆ ವಿವೇಕದ ನಿಯಂತ್ರಣ ಸಾಧಿಸುವುದು. ಬದುಕು ಹಾಳಾಗದಂತೆ ಅನುದಿನವೂ ಎಚ್ಚರಿಕೆ ವಹಿಸುವುದು ಎಂದರ್ಥ.

ಅಲ್ಲಮಪ್ರಭು ಗುರುವಿನ ಮಾರ್ಗದರ್ಶನಕ್ಕೂ ಮಹತ್ವ ನೀಡುತ್ತಾರೆ. ಗುರುವಿನ ಜ್ಞಾನ, ಆತ್ಮವಿಮರ್ಶೆ ಮತ್ತು ವಿವೇಚನೆಯ ಬೆಳಕಿನಲ್ಲಿ ಬದುಕಿನ ಬಂಡಿಯನ್ನು ಮುನ್ನಡೆಸಿದಾಗ ಅದರ ಅಚ್ಚು ಮುರಿಯುವುದಿಲ್ಲ. ಮನಸ್ಸಿನ ಚಂಚಲತೆಗೆ ಕಡಿವಾಣ ಹಾಕಿ, ಆಸೆ-ಆಕಾಂಕ್ಷೆಗಳನ್ನು ಪ್ರಜ್ಷಾವಂತಿಕೆಯಿಂದ ನಿಯಂತ್ರಿಸಿದಾಗ ಮಾತ್ರ ಜೀವನದ ಪಯಣ ಸುಗಮವಾಗುತ್ತದೆ. ಸತ್ಯ ಅರಿಯಲು ಜ್ಞಾನ ಬೇಕು. ಬದುಕಿನಲ್ಲಿ ಜ್ಞಾನಿಯಾಗಬೇಕಾದರೆ ಧರ್ಮದ ಅಗತ್ಯವೂ ಇದೆ. ಧರ್ಮದೊಂದಿಗೆ ಭಕ್ತಿ ಮತ್ತು ಆತ್ಮಪ್ರಜ್ಞೆ ಬೆಳೆದಾಗ ವ್ಯಕ್ತಿತ್ವ ಪರಿಪೂರ್ಣತೆಯತ್ತ ಸಾಗುತ್ತದೆ. ಇದಕ್ಕಾಗಿ ಮೊದಲು ಅಂತರಂಗವನ್ನು ಪರಿಶುದ್ಧಗೊಳಿಸಿಕೊಳ್ಳಬೇಕು ಎಂದು ಒತ್ತಿ ಹೇಳುತ್ತಾರೆ ಅಲ್ಲಮ.

ಅಲ್ಲಮಪ್ರಭುಗಳ ವಚನಗಳು ಕಲ್ಯಾಣ ಚಳವಳಿಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಚಿಂತನೆಯ ದಾಖಲೆಗಳಲ್ಲ. ಅವು ಇಂದಿನ ಮನುಷ್ಯನ ಬದುಕಿಗೂ ದಾರಿದೀಪ. ಇಂದಿನ ವೇಗದ ಜೀವನದಲ್ಲಿ ಹೊರಗಿನ ಸಾಧನೆಗೆ ನಾವು ನೀಡುವಷ್ಟೇ ಮಹತ್ವವನ್ನು ಅಂತರಂಗದ ಬೆಳವಣಿಗೆಗೂ ನೀಡಬೇಕಿದೆ. ಅಂತರಂಗ-ಬಹಿರಂಗ ಶುದ್ಧಿಯಾದರೆ ಸತ್ಯ ಶರಣ ಆಗಬಹುದು.

ನಮ್ಮ ಬದುಕಿನ ಬಂಡಿಗೆ ಪಂಚೇಂದ್ರಿಯಗಳು ಗಾಲಿಗಳಾಗಿರಬಹುದು; ಆದರೆ ಅದರ ದಿಕ್ಕನ್ನು ನಿರ್ಧರಿಸುವ ಸಾರಥಿ ವಿವೇಕವಾಗಬೇಕು. ಮನಸ್ಸು ನಿಯಂತ್ರಣದಲ್ಲಿದ್ದಾಗಲೇ ಬದುಕು ಸರಿಯಾದ ದಾರಿಯಲ್ಲಿ ಸಾಗುತ್ತದೆ. ಸದ್ಗುಣಗಳನ್ನು ಬೆಳೆಸಿಕೊಂಡು, ದುರ್ಗುಣಗಳನ್ನು ಹತೋಟಿಯಲ್ಲಿಟ್ಟುಕೊಂಡು, ಸತ್ಯ, ಜ್ಞಾನ, ಧರ್ಮ, ಭಕ್ತಿಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ.

“ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರೆದು, ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು
ತೊಳಗಿ ಬೆಳಗುತ್ತಿದ್ದಿತ್ತಯ್ಯಾ ಶಿವನ ಪ್ರಕಾಶ! ಆ ಬೆಳಗಿನೊಳಗೆ ಒಪ್ಪುತ್ತಿದ್ದರಯ್ಯಾ ಅಸಂಖ್ಯಾತ ಭಕ್ತಗಣಂಗಳು” ಎನ್ನುವ ಅಲ್ಲಮ ಬಸವಣ್ಣ ಸೇರಿದಂತೆ ಅಸಂಖ್ಯಾತ ಶರಣ ಸಂಕುಲವನ್ನು ಸ್ಮರಿಸುತ್ತಾರೆ. ಕಲ್ಯಾಣ ನೆಲದಲ್ಲಿ ಬಸವಣ್ಣನೆಂಬ ಜ್ಯೋತಿಯಿಂದ ಆಕಾಶದಗಲಕ್ಕೂ ಬೆಳಕು ಹರಿಯಿತು. ಆ ವೈಚಾರಿಕ, ವೈಜ್ಞಾನಿಕ ತತ್ವದ ನೆರಳಿನಲ್ಲಿ ಜಗತ್ತಿನ ಅಸಂಖ್ಯಾತ ಶರಣರು ಕಲ್ಯಾಣಕ್ಕೆ ಬಂದು ಸೇರಿದರು ಎಂಬುದು ಅಲ್ಲಮನ ವಿವರಣೆ.

ʼಆಸೆಗೆ ಸತ್ತುದು ಕೋಟಿ, ಆಮಿಷಕ್ಕೆ ಸತ್ತುದು ಕೋಟಿ, ಹೊನ್ನು ಹೆಣ್ಣು ಮಣ್ಣಿಂಗೆ ಸತ್ತುದು ಕೋಟಿ. ಗುಹೇಶ್ವರಾ ನಿಮಗಾಗಿ ಸತ್ತವರನಾರನೂ ಕಾಣೆʼ ಹಾಗೂ ಜಲವಿಲ್ಲದ ಕೆರೆ, ಫಲವಿಲ್ಲದ ಬನ, ಭಕ್ತನಿಲ್ಲದ ಗ್ರಾಮ ಸುಡುಗಾಡಯ್ಯಾ, ಅಲ್ಲಿ ಶಿವನಿಲ್ಲ, ಪ್ರೇತಜಡಾರಣ್ಯದಲ್ಲಿ ಹೋಗಬಹುದೆ ಗುಹೇಶ್ವರಾ? ಎನ್ನುವ ವಚನಗಳಲ್ಲಿ ಮನುಷ್ಯನ ದುರಾಸೆಯ ಕುರಿತು ಅಲ್ಲಮ ವಿಶ್ಲೇಷಿಸುತ್ತಾರೆ.

ಊರಿಗೊಬ್ಬ ಭಕ್ತ ಇರಬೇಕೆಂಬುದು ಅಲ್ಲಮನ ನಿಲುವು. ಇಲ್ಲಿ ಊರು ಎಂದರೆ ಮನೆ ಎಂಬ ಒಳರ್ಥವೂ ಇದೆ. ಒಂದು ಮನೆಯಲ್ಲಿ ಕಾಯಕ ನಿಷ್ಠೆ, ಗುರು, ಲಿಂಗ, ಜಂಗಮ ಹಾಗೂ ದಾಸೋಹ ಮನೋಭಾವದ ಯಜಮಾನ ಇಲ್ಲದಿದ್ದರೆ ಆ ಮನೆ ಸುಡುಗಾಡು ಇದ್ದಂತೆ. ನೀರಿಲ್ಲದ ಕೆರೆ, ಫಲವೇ ನೀಡದ ಉದ್ಯಾನದಂತೆ ಒಬ್ಬ ನಿಷ್ಠಾವಂತ ಭಕ್ತ ಊರಿನೊಳಗೊಬ್ಬ ಇರಬೇಕು ಎಂಬುದು ಅಲ್ಲಮನ ಖಚಿತ ನಿಲುವು.

ಇದನ್ನೂ ಓದಿ : ವಚನ ಕಲ್ಯಾಣ | ಹದತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ!

ಅಲ್ಲಮಪ್ರಭುವಿನ ವಚನ ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ, ನಮ್ಮ ಬದುಕಿನ ಬಂಡಿಯೂ ದಿಕ್ಕು ತಪ್ಪದೆ, ಜ್ಞಾನ ಮತ್ತು ವಿವೇಕದ ದಾರಿಯಲ್ಲಿ ಸಾಗಬಹುದು. ವಚನದ ಬೆಳಕಿನಲ್ಲಿ ನಮ್ಮ ಅಂತರಂಗದ ಕಲ್ಯಾಣದೀಪವನ್ನು ಬೆಳಗಿಸೋಣ.

(ಆ.12ರಿಂದ ಶ್ರಾವಣ ಮಾಸ ಆರಂಭಗೊಂಡಿದೆ. ತನ್ನಿಮಿತ್ತ ಪ್ರತಿದಿನ ಬಸವಾದಿ ಶಿವಶರಣರ ವಚನ ಅನುಭಾವವನ್ನು “ವಚನ ಕಲ್ಯಾಣ” ಹೆಸರಿನಲ್ಲಿ ಸರಣಿ ಲೇಖನ ʼಈದಿನ ಡಾಟ್ ಕಾಮ್‌ʼನಲ್ಲಿ ಪ್ರಕಟವಾಗಲಿದೆ. ಓದಿ…ಓದಿಸಿ)

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...