ಸುಪ್ರೀಂ ಕೋರ್ಟ್ ಆದೇಶದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಸ್ಥರ ತೆರವು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

Date:

ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್‌ ಯಾವುದೇ ನೇರ ಆದೇಶ ನೀಡಿಲ್ಲ. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ಮತ್ತು ಹಿತರಕ್ಷಣಾ ಕಾಯ್ದೆ-2014ನ್ನು ಪಾಲಿಸದೇ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ.

- Advertisement -

ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ಹಾಗೂ ಇತರರ ವಿರುದ್ಧ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘದ ಪರವಾಗಿ ಹಿರಿಯ ವಕೀಲ ಎಸ್. ಬಾಲನ್‌ ಹಾಗೂ ವಕೀಲೆ ರಕ್ಷಿತಾ ಸಿಂಗ್‌ ವಾದ ಮಂಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮಂಗಳೂರು ಟೌನ್‌ಹಾಲ್‌ ಸಮೀಪದ ಪಾದಚಾರಿ ಮಾರ್ಗದ ಬಳಿ ಇದ್ದ ಬೀದಿ ಬದಿ ವ್ಯಾಪಾರಿಗಳನ್ನು ಸುಪ್ರೀಂ ಕೋರ್ಟ್‌ ತೀರ್ಪಿನ ಹಿನ್ನೆಲೆಯಲ್ಲಿ ತೆರವುಗೊಳಿಸುವ ಕಾರ್ಯಾಚರಣೆಯನ್ನು ಮಂಗಳೂರು ಮಹಾನಗರ ಪಾಲಿಕೆ ನಡೆಸಿತ್ತು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯಾಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ಹಾಗೂ ಇತರ ಪದಾಧಿಕಾರಿಗಳು ಕಾರ್ಯಾಚರಣೆಯನ್ನು ತಡೆದಿದ್ದರು. ಈ ಹಿನ್ನೆಲೆಯಲ್ಲಿ ಮಂಗಳೂರು ಪಾಲಿಕೆಯ ವಲಯ ಆಯುಕ್ತ (ಪ್ರಭಾರ) ಭಾರತಿ ಅವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

‘ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಆಧಾರವಿಲ್ಲ’

ಪ್ರಕರಣ ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಹಿರಿಯ ವಕೀಲ ಎಸ್. ಬಾಲನ್‌, ತೆರವು ಕಾರ್ಯಾಚರಣೆ ವೇಳೆ ಇಮ್ತಿಯಾಜ್‌ ಹಾಗೂ ಇತರರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ, ಇಡೀ ಘಟನೆ ವಿಡಿಯೋದಲ್ಲಿ ದಾಖಲಾಗಿದೆ. ಅದರಲ್ಲಿ ಇಮ್ತಿಯಾಜ್‌ ಅವರು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸದೆ ತೆರವು ಕಾರ್ಯಾಚರಣೆ ಮುಂದುವರಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡಿರುವುದು ಮಾತ್ರ ಕಂಡುಬರುತ್ತದೆ ಎಂದು ವಾದಿಸಿದರು.

ದೂರಿನಲ್ಲಿ ಹಲ್ಲೆಗೊಳಗಾದ ವ್ಯಕ್ತಿಯ ಗುರುತು, ಹಲ್ಲೆಯ ಸ್ವರೂಪ ಅಥವಾ ಯಾವುದೇ ಗಾಯವಾಗಿರುವ ಬಗ್ಗೆ ವಿವರಗಳಿಲ್ಲ. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್‌ 132 ಮತ್ತು 115(2)ರ ಮೂಲಭೂತ ಅಂಶಗಳು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದು ಬಾಲನ್‌ ವಿವರಿಸಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ತಪ್ಪು ವ್ಯಾಖ್ಯಾನ

ಸುಪ್ರೀಂ ಕೋರ್ಟ್‌ ಆದೇಶದ ಆಧಾರದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಪಾಲಿಕೆ ದೂರಿನಲ್ಲಿ ತಿಳಿಸಿದೆ. ಆದರೆ, ಯಾವ ತೀರ್ಪಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ ಎಂದು ಬಾಲನ್‌ ವಾದಿದರು.

ಅಧಿಕಾರಿಗಳು Maniyar Iliyaz v. P. Ayyappan & Others, Civil Appeal Nos. 4665-4666 of 2025 ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧಾರವಾಗಿಸಿಕೊಂಡಿದ್ದಾರೆ ಎಂದು ತಿಳಿಸಿದ ಅವರು, “ಈ ತೀರ್ಪು ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸುವುದಕ್ಕೆ ಸಂಬಂಧಿಸಿದ್ದು, ರಾಜ್ಯ ಮತ್ತು ಸ್ಥಳೀಯ ಸಂಸ್ಥೆಗಳು ಸೂಕ್ತ ಪಾದಚಾರಿ ಮೂಲಸೌಕರ್ಯ ಒದಗಿಸಬೇಕು ಎಂದು ನಿರ್ದೇಶಿಸುತ್ತದೆ. ಆದರೆ ಬೀದಿ ವ್ಯಾಪಾರಿಗಳು ಅಥವಾ ವಾರದ ಮಾರುಕಟ್ಟೆಗಳನ್ನು ತೆರವುಗೊಳಿಸುವಂತೆ ಯಾವುದೇ ನಿರ್ದೇಶನವಿಲ್ಲ” ಎಂದು ವಾದಿಸಿದರು.

ಅಲ್ಲದೆ, ಸುಪ್ರೀಂ ಕೋರ್ಟ್‌ ತೀರ್ಪು Street Vendors (Protection of Livelihood and Regulation of Street Vending) Act, 2014 ಅಡಿಯಲ್ಲಿ ಬೀದಿ ವ್ಯಾಪಾರಿಗಳಿಗೆ ನೀಡಿರುವ ಕಾನೂನುಬದ್ಧ ರಕ್ಷಣೆಯನ್ನು ರದ್ದುಪಡಿಸಿಲ್ಲ. ಹೀಗಾಗಿ ಮೇಲ್ಕಂಡ ತೀರ್ಪನ್ನು ಆಧರಿಸಿ ವ್ಯಾಪಾರಿಗಳನ್ನು ತೆರವುಗೊಳಿಸುವುದು ತಪ್ಪು ವ್ಯಾಖ್ಯಾನವಾಗಿದೆ ಎಂದು ಬಾಲನ್‌ ಹೇಳಿದರು.

ನೋಟಿಸ್‌ ನೀಡದೆ ತೆರವು

“ಸಂಡೇ ಬಜಾರ್‌ನ ಬೀದಿ ವ್ಯಾಪಾರಿಗಳ ತಾತ್ಕಾಲಿಕ ಅಂಗಡಿಗಳಿಗೆ ಯಾವುದೇ ನೋಟಿಸ್‌ ನೀಡದೆ ಅಥವಾ ವಿಚಾರಣೆಗೆ ಅವಕಾಶ ನೀಡದೆ ತೆರವು ಮತ್ತು ಧ್ವಂಸ ಕಾರ್ಯಾಚರಣೆ ನಡೆಸಲಾಗಿದೆ. ಇದು ನೈಸರ್ಗಿಕ ನ್ಯಾಯದ ತತ್ವಗಳಿಗೆ ಹಾಗೂ Street Vendors Act, 2014ರಲ್ಲಿ ನಿಗದಿಪಡಿಸಿರುವ ಕಾನೂನುಬದ್ಧ ಪ್ರಕ್ರಿಯೆಗೆ ವಿರುದ್ಧವಾಗಿದೆ” ಎಂದು ಬಾಲನ್‌ ವಾದಿಸಿದರು.

“ಯಾವುದೇ ಬೀದಿ ವ್ಯಾಪಾರಿಯನ್ನು ತೆರವುಗೊಳಿಸುವ ಅಥವಾ ಸ್ಥಳಾಂತರಿಸುವ ಮೊದಲು ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಸುಪ್ರೀಂ ಕೋರ್ಟ್‌ ತೀರ್ಪನ್ನು ಆಧಾರವಾಗಿಸಿಕೊಂಡು ಅಧಿಕಾರಿಗಳು ಈ ಕಾನೂನುಬದ್ಧ ರಕ್ಷಣೆಗಳನ್ನು ಕಡೆಗಣಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದರು.

ಸಂಡೇ ಬಜಾರ್‌ ವಾರಕ್ಕೆ ಒಂದು ದಿನ ನಡೆಯುವ ಮಾರುಕಟ್ಟೆಯಾಗಿದ್ದು, ಇಲ್ಲಿ ಶಾಶ್ವತ ಕಟ್ಟಡ ಅಥವಾ ಶಾಶ್ವತ ಅತಿಕ್ರಮಣಗಳಿಲ್ಲ. ಇಂತಹ ತಾತ್ಕಾಲಿಕ ವ್ಯಾಪಾರ ಚಟುವಟಿಕೆಯನ್ನು ಶಾಶ್ವತ ಅಕ್ರಮ ಅತಿಕ್ರಮಣವೆಂದು ಪರಿಗಣಿಸುವುದು ಕಾಯ್ದೆಯ ಉದ್ದೇಶ ಮತ್ತು ನಿಬಂಧನೆಗಳಿಗೆ ವಿರುದ್ಧ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇಮ್ತಿಯಾಜ್‌ ಅವರು ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಸ್ಥರ ಸಂಘದ ಪದಾಧಿಕಾರಿಯಾಗಿದ್ದು, ವ್ಯಾಪಾರಿಗಳ ಹಕ್ಕು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಸ್ಥಳದಲ್ಲಿ ಹಾಜರಿದ್ದರು . “ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆ ಅನುಸರಿಸದೆ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಬಾರದು ಎಂದು ಅಧಿಕಾರಿಗಳಿಗೆ ಮನವಿ ಮಾಡುವ ಉದ್ದೇಶದಿಂದ ಸಂಘದ ಪ್ರತಿನಿಧಿಗಳಾಗಿ ಅವರು ಸ್ಥಳಕ್ಕೆ ತೆರಳಿದ್ದರು. ಆದರೆ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.

ಇದೇ ವೇಳೆ, ಎಫ್‌ಐಆರ್‌ ದಾಖಲಿಸಿದ ಬಳಿಕ ಮಹಾನಗರ ಪಾಲಿಕೆಯೇ ದಕ್ಷಿಣ ಕನ್ನಡ ಜಿಲ್ಲಾ ಬೀದಿ ವ್ಯಾಪಾರಸ್ಥರ ಸಂಘವನ್ನು ಸಭೆಗೆ ಆಹ್ವಾನಿಸಿ, ವ್ಯಾಪಾರಿಗಳ ಅಹವಾಲು ಮತ್ತು ಸಮಸ್ಯೆಗಳ ಕುರಿತು ಚರ್ಚಿಸಲು ನೋಟಿಸ್‌ ನೀಡಿದೆ. ಇದರಿಂದ ಪಾಲಿಕೆಯೇ ಸಂಘವನ್ನು ಬೀದಿ ವ್ಯಾಪಾರಿಗಳ ಪ್ರತಿನಿಧಿ ಸಂಸ್ಥೆಯಾಗಿ ಗುರುತಿಸಿರುವುದು ಸ್ಪಷ್ಟವಾಗುತ್ತದೆ. ಹೀಗಿರುವಾಗ ವ್ಯಾಪಾರಿಗಳ ಪರವಾಗಿ ಸಮಸ್ಯೆಗಳನ್ನು ಮುಂದಿಟ್ಟ ಅದೇ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿರುವುದು ಕ್ರಿಮಿನಲ್‌ ಕಾನೂನು ಪ್ರಕ್ರಿಯೆಯ ದುರುಪಯೋಗ ಎಂದು ಬಾಲನ್‌ ವಾದಿಸಿದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ನ್ಯಾಯಾಲಯ

‘ಫುಟ್‌ಪಾತ್‌ ನಿರ್ಮಿಸುವಂತೆ ಮಾತ್ರ ಆದೇಶ’

ವಾದ ಆಲಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು, “ಸುಪ್ರೀಂ ಕೋರ್ಟ್‌ ಆದೇಶ ಇರುವುದು ರಸ್ತೆಗಳ ಜೊತೆಗೆ ಸೂಕ್ತ ಫುಟ್‌ಪಾತ್‌ ಇರಬೇಕು ಎಂಬುದಕ್ಕೆ ಮಾತ್ರ. ಸುಪ್ರೀಂ ಕೋರ್ಟ್‌ ಬೀದಿ ಬದಿ ವ್ಯಾಪಾರಿಗಳ ಹಿತರಕ್ಷಣಾ ಕಾಯ್ದೆಯನ್ನು ರದ್ದುಪಡಿಸಿಲ್ಲ” ಎಂದು ಸ್ಪಷ್ಟಪಡಿಸಿದರು.

“ಬೀದಿ ಬದಿ ವ್ಯಾಪಾರಿಗಳಿಗೆ ಬೀದಿಯಲ್ಲಿ ವ್ಯಾಪಾರ ಮಾಡುವ ಹಕ್ಕು ಇದೆ. ಅವರನ್ನು ತೆರವುಗೊಳಿಸಬೇಕಾದರೆ ಪುನರ್ವಸತಿ ಸೇರಿದಂತೆ ಕಾನೂನಿನಲ್ಲಿ ನಿಗದಿಪಡಿಸಿರುವ ಎಲ್ಲ ಪ್ರಕ್ರಿಯೆಗಳನ್ನು ಪಾಲಿಸಬೇಕು. ಈಗ ಮಾಡಿರುವುದು ಸರಿಯಲ್ಲ” ಎಂದು ನ್ಯಾಯಮೂರ್ತಿಗಳು ರಾಜ್ಯ ಸರ್ಕಾರಕ್ಕೆ ಸೂಚಿಸಿದರು. ಹೀಗಾಗಿ ಸುಪ್ರೀಂ ಕೋರ್ಟ್‌ ಆದೇಶದ ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಏಕಾಏಕಿ ತೆರವುಗೊಳಿಸುವಂತಿಲ್ಲ ಎಂಬ ಮಹತ್ವದ ಸ್ಪಷ್ಟನೆ ಹೈಕೋರ್ಟ್‌ನಿಂದ ಹೊರಬಿದ್ದಿದ್ದು, ಕಾನೂನುಬದ್ಧ ಪ್ರಕ್ರಿಯೆ ಪಾಲಿಸದೇ ಕೈಗೊಳ್ಳುವ ತೆರವು ಕಾರ್ಯಾಚರಣೆಗಳಿಗೆ ಪ್ರಶ್ನೆ ಎದುರಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯತ್ನಾಳ್ ವಿರುದ್ಧ ಹೊರ್ತಿ ವಾಗ್ದಾಳಿ; ಅರ್ಜಿ ವಾಪಸ್ ಪಡೆದ ಹಿಂದಿನ ಸತ್ಯ ಬಹಿರಂಗಪಡಿಸಲು ಸವಾಲು

ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬರೆದಿರುವ...

ಲೈಂಗಿಕ ಕಿರುಕುಳ ಆರೋಪ; ಪ್ರಾಧ್ಯಾಪಕ ಹುದ್ದೆಯಿಂದ ಕಾಂಗ್ರೆಸ್ ಸಂಸದ ಬಿಮೋಲ್ ವಜಾ

11 ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳ ಹಾಗೂ ಅನುಚಿತ ವರ್ತನೆಯ ಆರೋಪದಡಿ ದೂರು...

ಬೀದರ್‌ | ಕಾನ್ಶಿರಾಂ ಹೋರಾಟ ಬಹುಜನರ ರಾಜಕೀಯ ಜಾಗೃತಿಗೆ ದಾರಿದೀಪ

ಬೀದರ್ ಜಿಲ್ಲಾ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ವಿವಿಧ ಬಹುಜನ ಸಂಘಟನೆಗಳ...

ವಿಜಯನಗರ | ಎಸ್‌ಐಆರ್ ರದ್ದತಿಗೆ ಆಗ್ರಹಿಸಿ ವಿದ್ಯಾರ್ಥಿ-ಯುವಜನ ಸಂಘಟನೆಗಳ ಬೃಹತ್ ಪ್ರತಿಭಟನೆ

ಜನವಿರೋಧಿ ಎಸ್‌ಐಆರ್ (SIR) ರದ್ದುಪಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...