ಈ ದಿನ ಸಂಪಾದಕೀಯ | ವರದಕ್ಷಿಣೆ ಎಂಬ ಬಲಿಪೀಠದಿಂದ ಹೆಣ್ಣುಮಕ್ಕಳ ರಕ್ಷಣೆ ಯಾವಾಗ?

Date:

ಶಿಕ್ಷಣವು 'ವರದಕ್ಷಿಣೆ' ಪಿಡುಗನ್ನು ತಡೆಯುವ ಬದಲು ಅದಕ್ಕೊಂದು ‘ಬೆಲೆ’ ನಿಗದಿಪಡಿಸುವ ಸಾಧನವಾಗಿದೆ. ‘ಹೆಚ್ಚು ಅರ್ಹತೆ ಹೊಂದಿರುವ ವರ’ನಿಗೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯ ಬೇಡಿಕೆಯೂ ಹೆಚ್ಚಿರುತ್ತದೆ. ಮಗನ ಶಿಕ್ಷಣಕ್ಕೆ ಮಾಡಿದ ಹೂಡಿಕೆಯನ್ನೂ ಸೊಸೆಯ ಮನೆಯವರಿಂದ ವಸೂಲಿ ಮಾಡುವ ಒಂದು ವ್ಯವಹಾರದ ತಂತ್ರವಾಗಿ ಶಿಕ್ಷಣ ಬಳಕೆಯಾಗುತ್ತಿದೆ. 

ಒಂದು ಅತ್ಯಾಧುನಿಕ ಎಸ್‌ಯುವಿ ಕಾರು, ರಾಯಲ್ ಎನ್‌ಫೀಲ್ಡ್ ಮೋಟಾರ್ ಸೈಕಲ್, ಅರ್ಧ ಕೆಜಿಯಷ್ಟು ಚಿನ್ನ ಹಾಗೂ ಅಪಾರ ಪ್ರಮಾಣದ ನಗದು—ಇಷ್ಟೆಲ್ಲವನ್ನೂ ಕೊಟ್ಟ ಮೇಲೂ ನಿಕ್ಕಿ ಭಾಟಿ ಎಂಬ ಯುವತಿಯ ಪತಿ ವಿಪಿನ್ ಭಾಟಿ ಮನೆಯವರ ಆಸೆ ತೀರಲಿಲ್ಲ. ಮತ್ತಷ್ಟು ಹಣಕ್ಕಾಗಿ ಆಕೆಯ ಮೇಲೆ ನಿರಂತರ ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡದವು. ಕೊನೆಗೆ, ಆಕೆಯ ಪುಟ್ಟ ಮಗುವಿನೆದುರೇ ಆಕೆಯನ್ನು ಜೀವಂತವಾಗಿ ಸುಟ್ಟು ಹಾಕಿತು ಆ ವಿಕೃತ ಕ್ರೂರ ಭಾಟಿ ಕುಟುಂಬ.

- Advertisement -

ಅಂತೆಯೇ, ಇತ್ತೀಚೆಗೆ ಭೋಪಾಲ್‌ನಲ್ಲಿ ಎಂಬಿಎ ಪದವೀಧರೆ ತ್ವಿಶಾ ಶರ್ಮಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ದೀಪಿಕಾ ನಾಗರ್ ಅವರ ನಿಗೂಢ ಸಾವುಗಳು ಕೇವಲ ವೈಯಕ್ತಿಕ ದುರಂತಗಳಲ್ಲ; ಇವು ಭಾರತೀಯ ಸಮಾಜದ ಆಳದಲ್ಲಿ ಬೇರೂರಿರುವ ವರದಕ್ಷಿಣೆ ಮತ್ತು ಸಂಗಾತಿಯ ಹಿಂಸಾಚಾರದ ಭೀಕರ ಮುಖಗಳು. 65 ವರ್ಷಗಳ ಹಿಂದೆಯೇ ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟ ‘ವರದಕ್ಷಿಣೆ’ ಎಂಬ ಅನಾಧಿಕಾಲದ ಕ್ರೂರ ಪದ್ಧತಿ, ಇಂದಿಗೂ ಪ್ರಗತಿಪರ ದೇಶದ ಅಂತರ್ಯದಲ್ಲಿ ಹೆಣ್ಣುಮಕ್ಕಳ ಮಾರಣಹೋಮ ನಡೆಸುತ್ತಿದೆ. ಕ್ರೌರ್ಯ ಮುಂದುವರೆದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ರಸಾಯನವಿಜ್ಞಾನದ ʼಅಸಮಮಿತಿʼ (Chirality)ಯ...

ರಸಾಯನವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಈ ಬಾರಿ ಹೆನ್ರಿ ಕಗಾನ್‌ ಮತ್ತು ಕೆನ್ಸೊ ಸುಆಯ್‌ ಅವರಿಗೆ ನೀಡಲಾಗಿದೆ. ಅವರ ಸಂಶೋಧನೆಯ ಕೇಂದ್ರ ಬಿಂದು ರಸಾಯನವಿಜ್ಞಾನದಲ್ಲಿ ಶತಮಾನಗಟ್ಟಲೆ ಅತ್ಯಂತ ಕುತೂಹಲಕಾರಿ ಪ್ರಶ್ನೆಯಾಗಿದ್ದ- ಒಂದಕ್ಕೊಂದು ಕನ್ನಡಿಯ ಪ್ರತಿಬಿಂಬದಂತಿರುವ...

ಅನುದಾನ ಕೊರತೆ: ವಿದ್ಯಾರ್ಥಿಗಳಿಂದ ನಿರ್ವಹಣಾ ಶುಲ್ಕ ವಸೂಲಿ, ಶಿಕ್ಷಕರ...

ಹಾವೇರಿ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ನಿರ್ವಹಣಾ ವೆಚ್ಚದ ಅನುದಾನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಿಕ್ಷಕರು ನಿತ್ಯದ ಖರ್ಚು-ವೆಚ್ಚ ಸರಿದೂಗಿಸಲು ಪರದಾಡುವಂತಾಗಿದೆ. ಶಾಲೆ ನಡೆಸಲು ವಿದ್ಯಾರ್ಥಿಗಳಿಂದಲೇ ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದ್ದು, ಪೋಷಕರಿಂದ ಮತ್ತು...

ಬೀಗರೂಟ ಬಂದ್ ಮಾಡಿ ಸುದ್ದಿಯಾದ ಹರಗಿ ಗ್ರಾಮದಲ್ಲಿ ಸಮಸ್ಯೆಗಳದ್ದೇ...

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿರುವ ಕಟ್ಟೆ ಕಡೆಯ ಕುಗ್ರಾಮ ಎಂದು ಹೇಳಬಹುದಾದ ಹರಗಿ ಗ್ರಾಮ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ ಬೀಗರೂಟ ಹಾಕಿಸಿದರೆ ದಂಡ ವಿಧಿಸುತ್ತೇವೆ ಎಂದು ಗ್ರಾಮಸ್ಥರು ನಿರ್ಧಾರಕ್ಕೆ ಬಂದು ಬಡ...

ನಗರೀಕರಣ ಮತ್ತು ಉನ್ನತ ಶಿಕ್ಷಣವು ಮಹಿಳೆಯರಿಗೆ ಸುರಕ್ಷತೆಯನ್ನು ಒದಗಿಸುತ್ತದೆ ಎಂಬುದು ಕೇವಲ ಒಂದು ಭ್ರಮೆ ಎಂಬುದನ್ನು ಇತ್ತೀಚಿನ ಘಟನೆಗಳು ಮತ್ತು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಸಾಬೀತುಪಡಿಸಿವೆ. ನಿಕ್ಕಿ, ತ್ವಿಶಾ ಹಾಗೂ ದೀಪಿಕಾ – ಈ ಮೂವರ ಪತಿಯಂದಿರು ಕಾನೂನು ಕ್ಷೇತ್ರದಲ್ಲಿ (ವಕೀಲಿಕೆ) ಕೆಲಸ ಮಾಡುತ್ತಿದ್ದವರು ಅಥವಾ ಉನ್ನತ ಶಿಕ್ಷಣ ಪಡೆದವರಾಗಿದ್ದರು. ಅಲ್ಲದೆ ಇವರೆಲ್ಲರೂ ವಾಸಿಸುತ್ತಿದ್ದುದು ಮೆಟ್ರೋಪಾಲಿಟನ್ ನಗರಗಳಲ್ಲಿ. ಉನ್ನತ ಶಿಕ್ಷಣ, ನಗರದ ಬದುಕು, ಆಧುನಿಕ ಜಗತ್ತಿನಲ್ಲಿಯೂ ಅವರೊಳಗಿನ ಗಂಡಾಳ್ವಿಕೆಯ ಮನಸ್ಥಿತಿ ಬದಲಾಗಲಿಲ್ಲ.

ಬಿಬಿಸಿ ವರದಿ ಮಾಡಿದ 2023ರ ಅಧ್ಯಯನದ ಪ್ರಕಾರ, ಶಿಕ್ಷಣವು ಈ ಪಿಡುಗನ್ನು ತಡೆಯುವ ಬದಲು ಅದಕ್ಕೊಂದು ‘ಬೆಲೆ’ ನಿಗದಿಪಡಿಸುವ ಸಾಧನವಾಗಿದೆ. ‘ಹೆಚ್ಚು ಅರ್ಹತೆ ಹೊಂದಿರುವ ವರ’ನಿಗೆ ಮಾರುಕಟ್ಟೆಯಲ್ಲಿ ವರದಕ್ಷಿಣೆಯ ಬೇಡಿಕೆಯೂ ಹೆಚ್ಚಿರುತ್ತದೆ. ಮಗನ ಶಿಕ್ಷಣಕ್ಕೆ ಮಾಡಿದ ಹೂಡಿಕೆಯನ್ನೂ ಸೊಸೆಯ ಮನೆಯವರಿಂದ ವಸೂಲಿ ಮಾಡುವ ಒಂದು ವ್ಯವಹಾರದ ತಂತ್ರವಾಗಿ ಶಿಕ್ಷಣ ಬಳಕೆಯಾಗುತ್ತಿದೆ. ವಿವಾಹಗಳು ಮಾರುಕಟ್ಟೆಯಾಗಿ ಮಾರ್ಪಟ್ಟಿವೆ.

ಎನ್‌ಸಿಆರ್‌ಬಿಯ 2024ರ ದತ್ತಾಂಶದ ಪ್ರಕಾರ, ಭಾರತದಲ್ಲಿ ವಾರ್ಷಿಕವಾಗಿ 5,737 ವರದಕ್ಷಿಣೆ ಸಾವುಗಳು ದಾಖಲಾಗುತ್ತಿವೆ. ಅಂದರೆ ಸರಾಸರಿ ದಿನಕ್ಕೆ 16 ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಇಡೀ ದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಪೈಕಿ ‘ಪತಿ ಅಥವಾ ಆತನ ಸಂಬಂಧಿಕರಿಂದ ಕ್ರೌರ್ಯ’ ಅಪರಾಧಗಳು ಅಗ್ರಸ್ಥಾನದಲ್ಲಿವೆ. ಮೆಟ್ರೋ ನಗರಗಳ ಪೈಕಿ ದೆಹಲಿ 109 ಸಾವುಗಳನ್ನು ಕಂಡಿದ್ದು, ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಮತ್ತೊಂದು ಆಘಾತಕಾರಿ ಅಂಶವೆಂದರೆ, 5ನೇ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ಯ (NFHS-5) ಪ್ರಕಾರ, ಭಾರತದಲ್ಲಿ ವಿವಾಹಿತ ಮಹಿಳೆಯರ ಪೈಕಿ 31.9%ರಷ್ಟು ಮಹಿಳೆಯರು ದೈಹಿಕ, ಲೈಂಗಿಕ ಅಥವಾ ಭಾವನಾತ್ಮಕ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಈ ಪ್ರಮಾಣ 34%ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ 27%ರಷ್ಟಿದೆ. ಈ ಅತ್ಯಲ್ಪ ವ್ಯತ್ಯಾಸವು ನಗರ ಪ್ರದೇಶಗಳಲ್ಲಿಯೂ ಕೌಟುಂಬಿಕ ಶೋಷಣೆಗಳಿಂದ ರಕ್ಷಣೆ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತದೆ. ಶ್ರೀಮಂತ ವರ್ಗದಲ್ಲಿ ವಿವಾಹ ವೆಚ್ಚವು ಅತ್ಯಂತ ಪ್ರತಿಷ್ಠಿತ ಮದುವೆಗಳ ರೂಪದಲ್ಲಿ ರಹಸ್ಯ ಆರ್ಥಿಕತೆಯಾಗಿ ನಡೆಯುತ್ತವೆ. ಈ ದುಬಾರಿಗೆ ಮದುವೆಗಳ ಹೊರೆಯೂ ವಧು ಮತ್ತು ಆಕೆಯ ಕುಟುಂಬದ ಮೇಲೆಯೇ ಬೀಳುತ್ತದೆ.

ಈ ಪ್ರಮಾಣದ ಕ್ರೌರ್ಯ ಸಮಾಜದಲ್ಲಿ ತಾಂಡವವಾಡುತ್ತಿರುವ ಸಮಯದಲ್ಲಿಯೂ, ಸಾಂಸ್ಥಿಕ ಲೋಪವು ಮಹಿಳೆಯರ ಬದುಕನ್ನು ಜರ್ಜರಿತಗೊಳಿಸಿದೆ. NFHS ದತ್ತಾಂಶದ ಪ್ರಕಾರ, ಕೇವಲ 1%ರಷ್ಟು ಸಂತ್ರಸ್ತ ಮಹಿಳೆಯರು ಮಾತ್ರ ಕಾನೂನು ಸಂಸ್ಥೆಗಳ ನೆರವು ಪಡೆಯುತ್ತಿದ್ದಾರೆ. ಉಳಿದೆಲ್ಲ ಸಂತ್ರಸ್ತೆಯರು ಕೌಟುಂಬಿಕ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ, ಹಿಂಸೆಯನ್ನು ಸಹಿಸಿಕೊಂಡೇ ಜೀವನ ದೂಡುತ್ತಿದ್ದಾರೆ. ಎನ್‌ಸಿಆರ್‌ಬಿ ಸಮೀಕ್ಷೆಯಲ್ಲಿ ದಾಖಲಾಗುವ ವಾರ್ಷಿಕ ಸುಮಾರು 1.20 ಲಕ್ಷ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಕೇವಲ ಕಾನೂನು ಪ್ರಕ್ರಿಯೆಯ ಮಿತಿಯನ್ನು ತೋರಿಸುತ್ತವೆಯೇ ಹೊರತು, ಸಮಾಜದಲ್ಲಿನ ನೈಜ ಹಿಂಸಾಚಾರದ ಆಳವನ್ನು ಬಿಂಬಿಸುತ್ತಿಲ್ಲ.

ಮತ್ತೊಂದೆಡೆ, ವರದಕ್ಷಿಣೆ ಹಿಂಸಾಚಾರ ಇಷ್ಟೊಂದು ಭೀಕರ ರೂಪ ಪಡೆಯಲು ಸಮಾಜದಲ್ಲಿನ ‘ನಾರ್ಮಲೈಸೇಶನ್’ (ಸ್ವಾಭಾವಿಕಗೊಳಿಸುವಿಕೆ) ಮುಖ್ಯ ಕಾರಣ. ಮದುವೆಯಾದ ಮೇಲೆ ಹೆಣ್ಣುಮಗಳು ಪತಿಯ ಮನೆಯಲ್ಲಿ ‘ಹೊಂದಾಣಿಕೆ’ ಮಾಡಿಕೊಳ್ಳಬೇಕು, ‘ಸಹನೆ’ಯಿಂದ ಇರಬೇಕು ಎಂಬ ಕಿವಿಮಾತುಗಳು ತವರು ಮನೆಯಿಂದ ಹಿಡಿದು ಧಾರಾವಾಹಿ, ಸಿನೆಮಾಗಳವರೆಗೆ ಸದ್ಗುಣಗಳಂತೆ ಬಿಂಬಿಸಲಾಗುತ್ತಿದೆ. ಈ ಸದ್ಗುಣದ ಮುಖವಾಡದ ಹಿಂದೆ ಹೆಣ್ಣು ಕಿರುಕುಳ ಅನುಭವಿಸುತ್ತಾ, ಉಸಿರುಗಟ್ಟುತ್ತಿದ್ದಾಳೆ. ಆದರೂ, ಅದನ್ನು ಮರೆಮಾಡಲಾಗುತ್ತಿದೆ. ಜೊತೆಗೆ, ಹೆಣ್ಣುಮಕ್ಕಳು ಪತಿಯ ಮನೆಯ ಕ್ರೌರ್ಯವನ್ನು ಸಹಿಸಿಕೊಂಡು ಸಾಯಬೇಕೇ ಹೊರತು, ಗಂಡನಿಂದ ದೂರವಾಗಬಾರದು ಎಂಬ ಸಾಂಪ್ರದಾಯಿಕ ಕಟ್ಟುಪಾಡು ಅವರನ್ನು ಮತ್ತಷ್ಟು ಹಿಂಸಿಸುತ್ತಿದೆ.

ತ್ವಿಶಾ ಶರ್ಮಾ ತನ್ನ ತಾಯಿಗೆ ಕಳುಹಿಸಿದ ವಾಟ್ಸಾಪ್ ಸಂದೇಶದಲ್ಲಿ ‘ನನಗೆ ಇಲ್ಲಿ ತುಂಬಾ ಉಸಿರುಗಟ್ಟುತ್ತಿದೆ, ಅಮ್ಮ’ ಎಂದು ಅಳಲು ತೋಡಿಕೊಂಡಿದ್ದರು. ನಿಕ್ಕಿ ಭಾಟಿ ಪೋಲಿಸ್ ಠಾಣೆಯ ಬದಲು ಸ್ಥಳೀಯ ಪಂಚಾಯಿತಿಯ ಮೊರೆ ಹೋಗಿದ್ದರು. ಆದರೆ, ಆ ಪಂಚಾಯಿತಿ ಆಕೆಯ ಆರ್ಥಿಕ ಸ್ವಾವಲಂಬನೆಯನ್ನು ಹತ್ತಿಕ್ಕಲು ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಕಂಟೆಂಟ್ ಮಾಡುವುದನ್ನು ನಿಲ್ಲಿಸಬೇಕೆಂದು ಆದೇಶಿಸಿತೇ ಹೊರತು, ಆಕೆಯ ಸಮಸ್ಯೆಗೆ ಪರಿಹಾರವಿರಲಿ, ಆಕೆಯನ್ನು ಸಂತೈಸುವ ಗೋಜಿಗೂ ಹೋಗಲಿಲ್ಲ.

ಒಂದು ವೇಳೆ, ಮಹಿಳೆ ಧೈರ್ಯ ಮಾಡಿ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರೂ, ನಮ್ಮ ನ್ಯಾಯ ವ್ಯವಸ್ಥೆಯು ಆಕೆಯನ್ನು ದಣಿಯುವಂತೆ ಮಾಡುತ್ತದೆ. 2022ರ ನ್ಯಾಯಾಲಯ ವಿಲೇವಾರಿ ದತ್ತಾಂಶದ ಪ್ರಕಾರ, ವಿಚಾರಣೆಗೆ ಬಂದ ಒಟ್ಟು ಪ್ರಕರಣಗಳಲ್ಲಿ ಕೇವಲ2.03%ರಷ್ಟು ಮಾತ್ರ ಶಿಕ್ಷೆಯ ಹಂತವನ್ನು ತಲುಪಿವೆ. 2022ರಲ್ಲಿ ಬರೋಬ್ಬರಿ 60,577 ವರದಕ್ಷಿಣೆ ಸಾವುಗಳ ಪ್ರಕರಣಗಳು ಬಾಕಿ ಇದ್ದು, ಹೊಸದಾಗಿ 6,160 ಪ್ರಕರಣಗಳು ಸೇರ್ಪಡೆಯಾಗಿವೆ. ಇವುಗಳಲ್ಲಿ ಕೇವಲ 1,231 ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಉಳಿದವೆಲ್ಲವೂ, ನ್ಯಾಯಾಲಯದ ಮೆಟ್ಟಿನಲ್ಲಿ ನ್ಯಾಯಕ್ಕಾಗಿ ಕಾಯುತ್ತಾ ಸರದಿಯಲ್ಲಿ ನಿಂತಿವೆ.

ಈ ದೀರ್ಘಾವಧಿಯ ನ್ಯಾಯಾಂಗ ವಿಳಂಬವು ಪ್ರಭಾವಿ ಮತ್ತು ಶ್ರೀಮಂತ ಅಪರಾಧಿಗಳಿಗೆ ಮುಂಗಡ ಜಾಮೀನು ಪಡೆಯಲು, ವೈದ್ಯಕೀಯ ವರದಿಗಳನ್ನು ತಿರುಚಲು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸಲು ಪೂರಕ ವಾತಾವರಣವನ್ನು ನಿರ್ಮಿಸಿಕೊಡುತ್ತಿವೆ. ಇನ್ನು ಅನೇಕ ಸಾವುಗಳನ್ನು ಅಪಘಾತ ಅಥವಾ ಆತ್ಮಹತ್ಯೆ ಎಂದು ದಾಖಲಿಸಿ ಪ್ರಕರಣವನ್ನು ಮುಚ್ಚಿಹಾಕಲಾಗುತ್ತದೆ.

ತ್ವಿಶಾ, ಸಿಕ್ಕಿ, ದೀಪಿಕಾರಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದಾಗ, ‘ವರದಕ್ಷಿಣೆ’ ಪಿಡುಗಿನ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತದೆ. ಆದರೆ, ಕೆಲ ಕ್ಷಣದ ಆಕ್ರೋಶವು ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲಾಗದು. ಇದಕ್ಕೆ, ತಳಮಟ್ಟದ ಸಾಂಸ್ಥಿಕ ಮತ್ತು ಸಾಮಾಜಿಕ ಬದಲಾವಣೆಗಳ ಅಗತ್ಯವಿದೆ.

ಈ ಲೇಖನ ಓದಿದ್ದೀರಾ?: ಮೋದಿ ಸರ್ಕಾರದ ಎಡಬಿಡಂಗಿ ನೀತಿಗಳಿಗೆ ದಂಡ ತೆರುತ್ತಿರುವ ಭಾರತೀಯರು

ಬಾಕಿ ಇರುವ ಸಾವಿರಾರು ವರದಕ್ಷಿಣೆ ಮತ್ತು ಗೃಹಹಿಂಸೆ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ತುರ್ತು ಅಗತ್ಯ ಕಾನೂನು ವ್ಯವಸ್ಥೆಗಿದೆ. ಅಂತೆಯೇ, ರಾಷ್ಟ್ರೀಯ ಅಪರಾಧ ತನಿಖಾ ವ್ಯವಸ್ಥೆಯನ್ನು ಮುನ್ಸಿಪಲ್ ಮತ್ತು ಸಾರ್ವಜನಿಕ ಆಸ್ಪತ್ರೆಗಳ ತುರ್ತು ನಿಗಾ ಘಟಕಗಳೊಂದಿಗೆ ಜೋಡಿಸುವುದೂ ಕೂಡ ಮುಖ್ಯವಾಗಿದೆ. ವಿವಾಹಿತ ಮಹಿಳೆಯರಲ್ಲಿ ಪದೇ ಪದೇ ಕಂಡುಬರುವ ನಿಗೂಢ ಗಾಯಗಳು, ಸುಟ್ಟ ಗಾಯಗಳು ಅಥವಾ ಮೂಳೆ ಮುರಿತಗಳ ಬಗ್ಗೆ ಆಸ್ಪತ್ರೆ ದಾಖಲಿಸಿದ ತಕ್ಷಣ ತನಿಖಾ ಸಂಸ್ಥೆಗಳಿಗೆ ಸ್ವಯಂಚಾಲಿತ ಸಂದೇಶ ಹೋಗುವಂತಹ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ದಾರಿಯೂ ನಮ್ಮೆದುರಿಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ; ‘ಸಂಸಾರ ಅಂದಮೇಲೆ ಇದೆಲ್ಲ ಇದ್ದಿದ್ದೇ, ಹೊಂದಿಕೊಂಡು ಹೋಗು’ ಎಂದು ಮಹಿಳೆಯನ್ನು ಸಾವಿನ ದವಡೆಗೆ ತಳ್ಳುವ ಸಮಾಜದ ಮನಸ್ಥಿತಿ ತ್ವರಿತವಾಗಿ ಬದಲಾಗಬೇಕಿದೆ. ಹಿಂಸೆಯ ವಿರುದ್ಧ ಧ್ವನಿ ಎತ್ತುವ ಹೆಣ್ಣಿಗೆ ತವರು ಮನೆ ಮತ್ತು ಸಮಾಜವು ಭದ್ರತೆಯ ಆಸರೆಯಾಗಬೇಕಾದ ಅಗತ್ಯವಿದೆ. ಇಡೀ ಸಮಾಜವನ್ನು ಕ್ಯಾನ್ಸರ್‌ ರೀತಿ ಕಾಡುತ್ತಿರುವ ‘ವರದಕ್ಷಿಣೆ’ಯನ್ನು ಬುಡಸಮೇತ ಕಿತ್ತುಹಾಕಬೇಕಿದೆ. ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುವ ಜೊತೆಗೆ, ಆತ್ಮಗೌರವದಿಂದ ಬದುಕುವ, ಕ್ರೌರ್ಯದ ವಿರುದ್ಧ ತಿರುಗಿಬೀಳುವ ಧೈರ್ಯವನ್ನು ತುಂಬಬೇಕಿದೆ. ಆಗ ಮಾತ್ರವೇ, ನಿಕ್ಕಿ, ತ್ವಿಶಾ, ದೀಪಿಕಾರಂತಹ ಅಮಾಯಕ ಜೀವಗಳನ್ನು ಬಲಿಪೀಠದಿಂದ ರಕ್ಷಿಸಲು ಸಾಧ್ಯವಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಬರ, ಸರ್ವಪಕ್ಷ ನಿಯೋಗ ಮತ್ತು ರಾಜಕಾರಣಿಗಳ ಕಪಟ ನಾಟಕ

ಯಾವ ಪಕ್ಷ ಅಧಿಕಾರದಲ್ಲಿದ್ದರೂ, ಯಾರೇ ಮುಖ್ಯಮಂತ್ರಿಗಳಾಗಿದ್ದರೂ ಪ್ರಕೃತಿ ವಿಕೋಪದಿಂದ ಪಾರಾಗುವುದು ಸಾಧ್ಯವಿಲ್ಲ....

ಈ ದಿನ ಸಂಪಾದಕೀಯ | ಪ್ರಜಾಪ್ರಭುತ್ವದ ಕೊಲೆಗಾರ, ‘ಮೋಶಾ’ ಸೂತ್ರದ ಬೊಂಬೆ ಗ್ಯಾನೇಶ್ ಕುಮಾರ್ ವಜಾಗೊಳ್ಳಬೇಕು!

ಮೋದಿ-ಅಮಿತ್ ಶಾರ 'ಅಧಿಕಾರದಾಹ'ಕ್ಕೆ ಇಡೀ ಚುನಾವಣಾ ಆಯೋಗವನ್ನೇ ಬಲಿಪಶು ಮಾಡಿ, ದೇಶದ...

ಈ ದಿನ ಸಂಪಾದಕೀಯ | ಬಿಜೆಪಿ, ಭಕ್ತರು ಮತ್ತು ಸಾರ್ವಜನಿಕ ಸಭ್ಯತೆ

ದೇಶದ ರಾಜಕೀಯ ಇತಿಹಾಸವನ್ನು ತಿಳಿಯದ, ಮಹನೀಯರ ನಡೆ-ನುಡಿಗಳನ್ನು ಅರಿಯದ; ಅರಿತರೂ ಅಳವಡಿಸಿಕೊಳ್ಳದ...

ಈ ದಿನ ಸಂಪಾದಕೀಯ | ನಕಲಿ ಆಹಾರ ಮತ್ತು ಔಷಧ: ಜನರ ಜೀವದ ಜೊತೆ ಚೆಲ್ಲಾಟ

ಆಹಾರ ಮತ್ತು ಔಷಧಗಳ ಉತ್ಪಾದನೆ, ಸಂಗ್ರಹಣೆ ಹಾಗೂ ವಿತರಣಾ ವ್ಯವಸ್ಥೆಯಲ್ಲಿ ನಡೆಯುವ...