ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಶೀಲನೆ (SIR) ಹಾಗೂ ಗಣತಿ (Enumeration) ಪ್ರಕ್ರಿಯೆಯು ಸಾರ್ವಜನಿಕರಲ್ಲಿ ತೀವ್ರ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ, ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವುದನ್ನು ತಪ್ಪಿಸಲು ಚುನಾವಣಾ ಆಯೋಗವು ತಕ್ಷಣವೇ ಲಿಖಿತ ಸ್ಪಷ್ಟೀಕರಣಗಳನ್ನು ನೀಡಬೇಕು ಎಂದು ಒತ್ತಾಯಿಸಿ ‘ನನ್ನ ಮತ ನನ್ನ ಹಕ್ಕು’ ನಾಗರಿಕ ವೇದಿಕೆಯು ರಾಜ್ಯದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದೆ.
ಮಾಧ್ಯಮಗಳ ಮೂಲಕ ಪ್ರಕ್ರಿಯೆಯನ್ನು ವಿವರಿಸುವ ಆಯೋಗದ ಶ್ರಮವನ್ನು ಶ್ಲಾಘಿಸಿರುವ ಸಂಘಟನೆಯು, ಯಾವುದೇ ಅಧಿಕೃತ ಸುತ್ತೋಲೆ ಅಥವಾ ಪತ್ರಿಕಾ ಪ್ರಕಟಣೆ ಹೊರಬೀಳದ ಕಾರಣ ಹಲವು ಮತದಾರರು ಎದುರಿಸುತ್ತಿರುವ ಹತ್ತಾರು ಗಂಭೀರ ಪ್ರಶ್ನೆಗಳನ್ನು ಆಯೋಗದ ಮುಂದಿಟ್ಟಿದೆ.
ಇದನ್ನೂ ಓದಿ: ಎಸ್‌ಐಆರ್ ಪ್ರಕ್ರಿಯೆಯೆಂದು ಕರೆಸಿಕೊಂಡು ಪ್ರೇಯಸಿಯ ಗಂಡನನ್ನು ಕೊಂದ ಬಿಎಲ್‌ಒ
“ಆಯೋಗದ ನಿಯಮಾವಳಿಗಳ ಪ್ರಕಾರ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆಗಳಿಗೆ ತೆರಳಿ ಗಣತಿ ನಮೂನೆಗಳನ್ನು (Enumeration Forms) ನೀಡಿ, ನಂತರ ಭರ್ತಿ ಮಾಡಿದ ಫಾರ್ಮ್‌ಗಳನ್ನು ಸಂಗ್ರಹಿಸಬೇಕು. ಆದರೆ, ಹಲವೆಡೆ ತಕ್ಷಣವೇ ಸ್ಥಳದಲ್ಲೇ ಫಾರ್ಮ್ ಭರ್ತಿ ಮಾಡಿಕೊಡುವಂತೆ ಬಿಎಲ್‌ಒಗಳು ಒತ್ತಾಯಿಸುತ್ತಿದ್ದಾರೆ. ಮತದಾರರಿಗೆ ನಮೂನೆ ಭರ್ತಿ ಮಾಡಲು ಅಧಿಕೃತವಾಗಿ ಎಷ್ಟು ದಿನಗಳ ಕಾಲಾವಕಾಶ ನೀಡಲಾಗಿದೆ ಎಂಬುದನ್ನು ಆಯೋಗ ಸ್ಪಷ್ಟಪಡಿಸಬೇಕು” ಎಂದು ಸಂಘಟನೆ ತಿಳಿಸಿದೆ.
ಹಾಗೆಯೇ, “ಕಳೆದ 2025ರ ನವೆಂಬರ್‌ನಿಂದ ಜೂನ್ 20ರವರೆಗೆ ರಾಜ್ಯದ ಶೇ. 91.3ರಷ್ಟು ಮತದಾರರ ‘ಪೂರ್ವ SIR ಮ್ಯಾಪಿಂಗ್’ ಪೂರ್ಣಗೊಂಡಿದೆ. ಈ ಮ್ಯಾಪಿಂಗ್ ಮಾಹಿತಿಯನ್ನು ಈಗಿನ ಗಣತಿ ಪ್ರಕ್ರಿಯೆಗೆ ಏಕೆ ಬಳಸುತ್ತಿಲ್ಲ? ಮತದಾರರು ಮತ್ತೆ 2002ರ ಹಳೆಯ ಮತದಾರರ ಪಟ್ಟಿಯಿಂದ ತಮ್ಮ ವಿವರಗಳನ್ನು ಹುಡುಕುವಂತೆ ಮಾಡುವ ಬದಲು, ಮ್ಯಾಪಿಂಗ್ ದತ್ತಾಂಶವನ್ನೇ ಬಳಸಿ ಬಿಎಲ್‌ಒಗಳು ಮತದಾರರಿಗೆ ನೆರವಾಗಬೇಕು” ಎಂದು ಸಂಘಟನೆ ಆಗ್ರಹಿಸಿದೆ.
“ಇತ್ತೀಚಿನ ಜಂಟಿ ಮುಖ್ಯ ಚುನಾವಣಾಧಿಕಾರಿಗಳ ಹೇಳಿಕೆ ಪ್ರಕಾರ, ತಂದೆ-ತಾಯಿಯ ವಂಶದ ಇತರ ಸಂಬಂಧಿಕರೊಂದಿಗೂ ಮ್ಯಾಪಿಂಗ್ ಮಾಡಬಹುದೇ ಎಂಬ ಗೊಂದಲಕ್ಕೆ ಅಧಿಕೃತ ಮುದ್ರೆ ಬೇಕಾಗಿದೆ. ಬಿಎಲ್‌ಒ ಆ್ಯಪ್‌ನಲ್ಲಿ 40 ವರ್ಷ ಮೇಲ್ಪಟ್ಟವರಿಗೆ ಸಂತತಿ ಆಧಾರಿತ ಮ್ಯಾಪಿಂಗ್‌ಗೆ (Progeny Mapping) ನಿರ್ಬಂಧ ಹೇರಲಾಗಿದ್ದು, ಅವರು ಕಡ್ಡಾಯವಾಗಿ 2002ರ ಪಟ್ಟಿಯ ವಿವರ ನೀಡಬೇಕೆನ್ನಲಾಗುತ್ತಿದೆ. ಸ್ವಯಂ ಅಥವಾ ಸಂತತಿ ಮ್ಯಾಪಿಂಗ್‌ಗೆ ವಯೋಮಿತಿ ಇದೆಯೇ” ಎಂದು ಸಂಘಟನೆ ಪ್ರಶ್ನಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ʼಎಸ್‌ಐಆರ್ʼ ಪ್ರಕ್ರಿಯೆಯನ್ನು ತರಾತುರಿಯಲ್ಲಿ ನಡೆಸಬೇಡಿ- ಪ್ರಗತಿಪರ ಸಂಘಟನೆ, ಜಾತ್ಯತೀತ ಪಕ್ಷಗಳ ಆಗ್ರಹ
ಇನ್ನು, ಆನ್‌ಲೈನ್‌ನಲ್ಲಿ ಫಾರ್ಮ್ ಭರ್ತಿ ಮಾಡಲು ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ವಿವರಗಳು ಅಕ್ಷರಶಃ ಹೊಂದಾಣಿಕೆಯಾಗಬೇಕು ಹಾಗೂ ಮೊಬೈಲ್ ಲಿಂಕ್ ಕಡ್ಡಾಯಗೊಳಿಸಲಾಗಿದೆ. ಆದರೆ ಹಳೆಯ ಐಡಿ ಹೊಂದಿರುವವರಿಗೆ ಇದು ತೀವ್ರ ಕಷ್ಟಕರವಾಗಿದ್ದು, ಈ ನಿಯಮ ಸಡಿಲಿಸಲು ಸಂಘಟನೆ ಕೋರಿದೆ.
ಹಾಗೆಯೇ 2002ರ ಪಟ್ಟಿಯಲ್ಲಿರುವ ಹೆಸರು ಅಥವಾ ಸಂಬಂಧಿಕರ ಹೆಸರಿನ ಕಾಗುಣಿತ (Spelling) ವ್ಯತ್ಯಾಸವಿದ್ದರೆ, ಹಳೆಯದನ್ನೇ ಬರೆಯಬೇಕೇ ಅಥವಾ ಸರಿಪಡಿಸಬೇಕೇ ಎಂಬ ಗೊಂದಲವಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಸಂಘಟನೆ ಮುಖ್ಯ ಚುನಾವಣಾಧಿಕಾರಿ ಅವರನ್ನು ಒತ್ತಾಯಿಸಿದೆ.
ಹಗಲು ವೇಳೆ ಜನ ಉದ್ಯೋಗಕ್ಕಾಗಿ ಹೊರಹೋಗುವುದರಿಂದ ಅವರನ್ನು ‘ಗೈರು (Absent)’ ಎಂದು ಗುರುತಿಸುವ ಅಪಾಯವಿದೆ. ಇದಕ್ಕಾಗಿ ಪ್ರತಿ ಮತಗಟ್ಟೆಯಲ್ಲಿ ಪ್ರತಿದಿನ ಸಂಜೆ 6.00 ರಿಂದ ರಾತ್ರಿ 9.30 ರವರೆಗೆ ‘ಗಣತಿ ಶಿಬಿರ’ ನಡೆಸುವಂತೆ ಸಂಘಟನೆ ಸಲಹೆ ನೀಡಲಾಗಿದೆ.
‘ಈಗಾಗಲೇ 12.7 ಲಕ್ಷ ಮತದಾರರನ್ನು ‘ಇತರೆ’ ಎಂದು ವರ್ಗೀಕರಿಸಿ, ‘ಅನುಮಾನಾಸ್ಪದ ಅಕ್ರಮ ವಲಸಿಗರು’ ಎಂದು ಪರಿಗಣಿಸಲಾಗುತ್ತಿದೆ ಎಂಬ ವರದಿಗಳಿದ್ದು, ಒಬ್ಬ ಮತದಾರನನ್ನು ‘ಇತರೆ’, ‘ಮೃತ’, ‘ಸ್ಥಳಾಂತರ’ ಅಥವಾ ‘ನಕಲು’ ಎಂದು ಗುರುತಿಸಲು ಇರುವ ನಿಖರ ಮಾನದಂಡಗಳನ್ನು ಬಹಿರಂಗಪಡಿಸುವಂತೆ ಮನವಿಯಲ್ಲಿ ಕೋರಲಾಗಿದೆ.
“ಕೈಬರಹದ ನಮೂನೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡುವಾಗ ಬಳಸಲಾಗುವ AI ಅಥವಾ ಡಿಜಿಟಲ್ ತಂತ್ರಾಂಶವು ಕನ್ನಡ ಲಿಪಿಯನ್ನು ಸರಿಯಾಗಿ ಗುರುತಿಸುತ್ತದೆಯೇ? ಹಾಗೂ ಗಣತಿ ನಮೂನೆಗಳನ್ನು ಕೇವಲ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಭರ್ತಿ ಮಾಡಬೇಕೇ” ಎಂಬ ಪ್ರಶ್ನೆಗಳನ್ನು ಸಂಘಟನೆ ಎತ್ತಿದೆ.
“2026ರ ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾದಾಗ, ಅದರಿಂದ ಹೊರಗುಳಿದ ಅಥವಾ ‘ತಾರ್ಕಿಕ ವ್ಯತ್ಯಾಸಗಳು (Logical Discrepancies)’ ಎಂದು ಗುರುತಿಸಲ್ಪಟ್ಟ ಮತದಾರರಿಗೆ ಹೆಚ್ಚುವರಿ ದಾಖಲೆ ಸಲ್ಲಿಸಲು ನೋಟಿಸ್ ನೀಡಲಾಗುತ್ತದೆಯೇ? ರಾಜ್ಯದ ಲಕ್ಷಾಂತರ ಬಡ ಮತದಾರರ ಬಳಿ SIR ಅಡಿಯಲ್ಲಿ ಸೂಚಿಸಲಾದ 11 ದಾಖಲೆಗಳಿಲ್ಲದ ಕಾರಣ, ಅವರು ಮತದಾನದ ಹಕ್ಕಿನಿಂದ ವಂಚಿತರಾಗುವ ಭೀತಿ ಎದುರಾಗಿದೆ” ಎಂದು ಸಂಘಟನೆ ತಿಳಿಸಿದೆ.
ರಾಜ್ಯದಲ್ಲಿ ಯಾವುದೇ ಅರ್ಹ ನಾಗರಿಕನ ಮತದಾನದ ಹಕ್ಕಿಗೆ ಧಕ್ಕೆಯಾಗದಂತೆ ತಡೆಯಲು, ಚುನಾವಣಾ ಆಯೋಗವು ಈ ಎಲ್ಲಾ 13 ಪ್ರಮುಖ ಅಂಶಗಳಿಗೆ ತಕ್ಷಣವೇ ಅಧಿಕೃತ ಲಿಖಿತ ಸ್ಪಷ್ಟೀಕರಣ ನೀಡುವ ಮೂಲಕ ಸಾರ್ವಜನಿಕರ ಆತಂಕ ನಿವಾರಿಸಬೇಕೆಂದು ‘ನನ್ನ ಮತ ನನ್ನ ಹಕ್ಕು’ ವೇದಿಕೆ ಮುಖ್ಯ ಚುನಾವಣಾಧಿಕಾರಿಗಳಿಗೆ ತುರ್ತು ಮನವಿ ಮಾಡಿದೆ.




