ಬೀದರ ಜಿಲ್ಲೆಯಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವು ಅತ್ಯಂತ ಚುರುಕಿನಿಂದ ಸಾಗುತ್ತಿದ್ದು, ಜಿಲ್ಲಾಧಿಕಾರಿಗಳು ಆದ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶರ್ಮಾ ಶುಕ್ರವಾರ ಬೀದರ ತಾಲೂಕಿನ ಹಮೀಲಾಪೂರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಮನೆ-ಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರಿಗೆ ಎನುಮರೇಷನ್ ಅರ್ಜಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯನ್ನು ವೀಕ್ಷಿಸಿದರು.
“ಅರ್ಹ ನಾಗರಿಕರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂಬ ನಿಟ್ಟಿನಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಸಲಾಗುತ್ತಿದ್ದು, ಪ್ರತಿಯೊಬ್ಬ ಅರ್ಹ ವ್ಯಕ್ತಿಯೂ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
”ಮತದಾರರ ಪಟ್ಟಿಯ ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ಯಾವುದೇ ಲೋಪದೋಷಗಳಿಲ್ಲದೆ ನಿಖರವಾದ ಪಟ್ಟಿಯನ್ನು ಸಿದ್ಧಪಡಿಸುವುದು ಈ ವಿಶೇಷ ಸಮಗ್ರ ಪರಿಷ್ಕರಣೆಯ ಪ್ರಮುಖ ಉದ್ದೇಶವಾಗಿದೆ. ಪ್ರಕ್ರಿಯೆಯನ್ನು ನಿಖರವಾಗಿ ಮತ್ತು ಜವಾಬ್ದಾರಿಯುತವಾಗಿ ಪೂರ್ಣಗೊಳಿಸಬೇಕು” ಎಂದು ಕಾರ್ಯನಿರತ ಅಧಿಕಾರಿಗಳು, ಬಿಎಲ್‌ಒಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವನಾಂದ ಕರಾಳೆ, ಸಹಾಯಕ ಆಯುಕ್ತ ಮಹಮ್ಮದ್ ಶಕೀಲ್ ಸೇರಿದಂತೆ ಚುನಾವಣಾ ಶಾಖೆಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ 3.32 ಲಕ್ಷ ಅರ್ಜಿ ವಿತರಣೆ, 19,367 ಸ್ವೀಕೃತ
ಜಿಲ್ಲೆಯಲ್ಲಿ ಮತದಾರರ ಗಣತಿ ನಮೂನೆ ಅರ್ಜಿ ನೀಡಿ ಮನೆ-ಮನೆಗೆ ಭೇಟಿ ಕರ್ನಾಟಕದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಬೀದರ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಪ್ರಗತಿ ದತ್ತಾಂಶ ಮಾಹಿತಿಯನ್ನು ಬೀದರ ಚುನಾವಣೆ ತಹಸೀಲ್ದಾರ್ ಅವರು ನೀಡಿದ್ದಾರೆ.

ಬಸವಕಲ್ಯಾಣ ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 52,344 ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಿಸಲಾಗಿದ್ದು, ಒಟ್ಟು 3,427 ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ಸ್ವೀಕತಗೊಂಡಿದೆ. ಹುಮನಾಬಾದ ಕ್ಷೇತ್ರದಲ್ಲಿ ಒಟ್ಟು 69272 ಅರ್ಜಿ ವಿತರಣೆ, 2,565 ಸ್ವೀಕೃತ. ಬೀದರ ದಕ್ಷಿಣದಲ್ಲಿ 41,142 ಅರ್ಜಿ ವಿತರಣೆ, 2,071 ಸ್ವೀಕತಗೊಂಡಿದೆ.
ಬೀದರ ವಿಧಾನಸಭಾಕ್ಷೇತ್ರದಲ್ಲಿ 63,040 ಅರ್ಜಿ ವಿತರಣೆ, 1,904 ಅರ್ಜಿ ಸ್ವೀಕೃತ. ಭಾಲ್ಕಿ ಕ್ಷೇತ್ರದಲ್ಲಿ 38,259 ಗಣತಿ ನಮೂನೆ ಅರ್ಜಿ ವಿತರಣೆ, 8,207 ಸ್ವೀಕೃತ. ಔರಾದ (ಬಿ) 68,817 ಅರ್ಜಿ ನಮೂನೆ ವಿತರಣೆಯಾಗಿದ್ದು, ಈ ಪೈಕಿ 493 ಮಾತ್ರ ಸ್ವೀಕೃತಗೊಂಡಿದೆ. ಜಿಲ್ಲೆಯಲ್ಲಿ 6 ವಿಧಾನಸಭಾಕ್ಷೇತ್ರದಲ್ಲಿ ಒಟ್ಟು 3,32,874 ಮತದಾರರ ಗಣತಿ ನಮೂನೆಗಳನ್ನು ಅರ್ಜಿಗಳನ್ನು ವಿತರಣೆಯಾಗಿದ್ದು, 19,367 ಅರ್ಜಿಗಳನ್ನು ಸ್ವೀಕೃತಗೊಂಡಿವೆ ಎಂದು ಜಿಲ್ಲಾಡಳಿತ ದತ್ತಾಂಶ ಮಾಹಿತಿ ಪ್ರಕಟಿಸಿದೆ.
ಮತಗಟ್ಟೆ ಅಧಿಕಾರಿಗಳಿಗೆ ಸಹಕರಿಸಿ
ಭಾರತ ಚುನಾವಣಾ ಆಯೋಗ ಮತ್ತು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision) ಅಂಗವಾಗಿ ಜಿಲ್ಲಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೀದರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿಲ್ಪಾ ಶಿರ್ಮಾ ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವೇಳಾಪಟ್ಟಿಯಂತೆ ಜೂನ್ 30 ರಿಂದ ಜುಲೈ 29ರವರೆಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಅವರು ಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿಕೊಂಡಿರುವ ಮತದಾರರಿಗೆ ಎನುಮರೇಷನ್ ನಮೂನೆಯನ್ನು ನೀಡಲಾಗುವುದು. ಈ ನಮೂನೆಯಲ್ಲಿ ಮತದಾರರು ಮಾಹಿತಿಯನ್ನು ಭರ್ತಿಮಾಡಿ ಹಾಗೂ ಬಿಎಲ್ಓ ಅವರು ಮನೆಗೆ ಭೇಟಿ ನೀಡಿರುವಾಗ ಮತದಾರರು ಮನೆಯಲ್ಲಿ ಇಲ್ಲದ ಪಕ್ಷದಲ್ಲಿ ಬಿಎಲ್ಓ ಅವರು 3 ಬಾರಿ ಮತದಾರರ ಮನೆಗೆ ಭೇಟಿ ನೀಡುವರು ಅಂತಹ ಪಕ್ಷದಲ್ಲಿಯೂ ಮತದಾರರು ಇಲ್ಲದಿರುವಾಗ ಮಹಜರ ಮಾಡಿಕೊಳ್ಳುವರು ಎಂದಿದ್ದಾರೆ.

ಜಿಲ್ಲೆಯ ಎಲ್ಲಾ ಮತದಾರರಿಗೆ ಗಮನಕ್ಕೆ ಬಿಎಲ್ಓ ಅವರು ತಮ್ಮ ಮನೆಗೆ ಭೇಟಿ ನೀಡಿರುವ ಸಮಯದಲ್ಲಿ ತಾವುಗಳು ಸಹಕರಿಸಿ ವಿತರಿಸಲಾಗುವ Enumeration form ನಲ್ಲಿ ತಮ್ಮ ಮಾಹಿತಿಯನ್ನು ಭರ್ತಿಮಾಡಿ ನಿಗದಿತ ಸ್ಥಳದಲ್ಲಿ ಸಹಿ ಮಾಡಿ, ಪುನಃ ಸಂಬಂಧಪಟ್ಟ ಬಿಎಲ್ಓ ಅವರಿಗೆ ಹಿಂದಿರುಗಿಸುವುದು ಹಾಗೂ ಬೇರೆ ಕಡೆಯಿಂದ ವಲಸೆ ಬಂದಿರುವ ಮತದಾರರು ಅಥವಾ ಮದುವೆ ಮಾಡಿಕೊಂಡು ಬಂದಿರುವ ಮತದಾರರು ತಮ್ಮ ತಂದೆ ಅಥವಾ ತಾಯಿಯ 2002ರ ಮತದಾರರ ಪಟ್ಟಿಯಲ್ಲಿ ನೊಂದಾಯಿಸಿರುವ ಮಾಹಿತಿಯನ್ನು ಬಿಎಲ್ಓ ಅವರಿಗೆ ಒದಗಿಸುವುದು ಮತ್ತು ಸ್ವೀಕೃತಿಯನ್ನು ಪಡೆಯಬೇಕು ಎಂದು ಡಿಸಿ ಶಿಲ್ಪಾ ಶರ್ಮಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಈ ದಿನ ಸಂಪಾದಕೀಯ | ಅಪ್ಪ- ಮಕ್ಕಳು ಹೀಗೆ ಕೋಮುವಾದಿಗಳಾಗಬೇಕಿತ್ತೇ? ದಳವನ್ನು ಬಿಜೆಪಿಯ ಪದತಲಕ್ಕೆ ಇಡಬೇಕಿತ್ತೇ?




