ಬೀದರ್ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಬೀದರ್ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡಬೇಕೆಂದು ಆಶ್ರಯ ದೀಪ ಚಾರಿಟೇಬಲ್ ಟ್ರಸ್ಟ್ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ರಸ್ಟ್ ನ ಪದಾಧಿಕಾರಿಗಳು ಶುಕ್ರವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಹೆಸರಿಗೆ ಬರೆದ ಮನವಿಯನ್ನು ಹುಮನಾಬಾದ್ ತಹಸೀಲ್ದಾರ್ ಅವರಿಗೆ ಸಲ್ಲಿಸಿದರು.
ಪ್ರಮುಖರು ಮಾತನಾಡಿ, “ರಾಜ್ಯದ ಹಲವೆಡೆ ಸಮರ್ಪಕ ಮಳೆಯಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ಬೀದರ್ ಜಿಲ್ಲಾದ್ಯಂತ ಜೂನ್ ತಿಂಗಳು ಕಳೆದರೂ ಮಳೆಯ ಆಗಮನ ಆಗದೆ ಮುಂಗಾರು ಬಿತ್ತನೆ ಕಾರ್ಯ ನಡೆದಿಲ್ಲ. ಇದೀಗ ಕೆಲವೆಡೆ ಸಾಧಾರಣ ಮಳೆಯಾದರೂ ಬಿತ್ತನೆ ಕಾರ್ಯ ತಕ್ಕಮಟ್ಟಿಗೆ ನಡೆಯುತ್ತಿಲ್ಲ. ಬಿತ್ತನೆ ನಡೆಸಿದ ರೈತರೂ ಮಳೆಯಿಲ್ಲದಕ್ಕೆ ಬೆಳೆ ಬೆಳೆಯುವ ಭರವಸೆ ಕಳೆದುಕೊಂಡಿದ್ದಾರೆ. ಇದು ರೈತರಲ್ಲಿ ಆತಂಕ ಮೂಡಿಸಿದ್ದು, ಭವಿಷ್ಯ ಜೀವನ ಹೇಗೆ ಎಂದು ಚಿಂತಾಕ್ರಾಂತಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಭೂಮಿ ಹದ, ಬಿತ್ತನೆಗೆ ಬೀಜ, ಗೊಬ್ಬರ ಖರೀದಿಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿದ ರೈತರು ಆಗಸದತ್ತ ಮುಖ ಮಾಡುವ ಪರಿಸ್ಥಿತಿ ಬಂದೊದಗಿದೆ. ರೈತರ ಆರ್ಥಿಕ ಪರಿಸ್ಥಿತಿಯನ್ನು ಪರಿಶೀಲಿಸಿ, ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ, ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸಬೇಕು. ಬೆಳೆ ನಷ್ಟ ಪರಿಹಾರ, ಸಾಲ ಮರುಪಾವತಿಗೆ ವಿನಾಯಿತಿ ನೀಡಿ, ಅಗತ್ಯ ಕೃಷಿ ನೆರವು ಒದಗಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಬೀದರ್ | ಎಸ್‌ಐಆರ್ ಪ್ರಕ್ರಿಯೆ ಪರಿಶೀಲಿಸಿದ ಡಿಸಿ : ಜಿಲ್ಲಾದ್ಯಂತ 3.32 ಲಕ್ಷ ಅರ್ಜಿ ವಿತರಣೆ, 19,367 ಸ್ವೀಕೃತ
ಈ ಸಂದರ್ಭದಲ್ಲಿ ಆಶ್ರಯ ದೀಪ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಭೀಮರೆಡ್ಡಿ ಸಿಂಧನಕೇರಾ, ಅಧ್ಯಕ್ಷ ಅರವಿಂದ ಜೋಗಿರೆ, ಡಿವೈಎಫ್‌ಐ ಜಿಲ್ಲಾ ಸಂಚಾಲಕ ಶಶಿಕಾಂತ ಡಾಂಗೆ, ಸಾಮಾಜಿಕ ಕಾರ್ಯಕರ್ತ ಯುವರಾಜ್ ಎಸ್. ಐಹೋಳ್ಳಿ ಮತ್ತಿತರರಿದ್ದರು.




