ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಜೀವನದಲ್ಲಿ ಕೇವಲ ತಾತ್ಕಾಲಿಕ ಆರ್ಥಿಕ ನೆರವಿಗೆ ಮಾತ್ರವೇ ಸೀಮಿತವಾಗಿಲ್ಲ. ರಾಜ್ಯದ ಗ್ರಾಮೀಣ ಭಾಗದ ಲಕ್ಷಾಂತರ ಮಹಿಳೆಯರನ್ನು ಸ್ವಾವಲಂಬಿ ಉದ್ಯಮಿಗಳನ್ನಾಗಿ ರೂಪಿಸುತ್ತಿವೆ. ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಜಮೆಯಾಗುತ್ತಿರುವ ‘ಗೃಹಲಕ್ಷ್ಮಿ’ ಯೋಜನೆಯ 2,000 ರೂ. ಹಣವನ್ನು ಮಹಿಳೆಯರು ತಮ್ಮ ದೈನಂದಿನ ಖರ್ಚಿಗೆ ಬಳಸದೆ, ಅದನ್ನೇ ಬಂಡವಾಳವಾಗಿಸಿಕೊಂಡು ಸಣ್ಣಪುಟ್ಟ ವ್ಯಾಪಾರ ಮತ್ತು ಸ್ವ-ಉದ್ಯೋಗಗಳನ್ನು ಆರಂಭಿಸಿದ್ದಾರೆ.
ಬ್ಯಾಂಕ್ ಸಾಲ ಅಥವಾ ಖಾಸಗಿ ಫೈನಾನ್ಸ್‌ಗಳ ಬಡ್ಡಿ ಸುಳಿಗೆ ಸಿಲುಕಲು ಭಯಪಡುತ್ತಿದ್ದ ಹಳ್ಳಿಯ ಸಾಮಾನ್ಯ ಮಹಿಳೆಯರಿಗೆ, ಸರ್ಕಾರದಿಂದ ನೇರವಾಗಿ ಬರುತ್ತಿರುವ ಈ ಹಣವು ಹೊಸ ಧೈರ್ಯ ತುಂಬಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಕಲಬುರಗಿ ಸೇರಿದಂತೆ ಮೈಸೂರು ಮತ್ತು ಮಂಡ್ಯ ಭಾಗದ ಅನೇಕ ಮಹಿಳೆಯರು ಕಳೆದ ಕೆಲವು ತಿಂಗಳುಗಳ ಹಣವನ್ನು ಉಳಿತಾಯ ಮಾಡಿದ್ದಾರೆ. ಆ ಹಣದಿಂದ ಹೊಲಿಗೆ ಯಂತ್ರ ಖರೀದಿಸುವುದು, ಹೈನುಗಾರಿಕೆಗೆ ಹಸು-ಕುರಿ ಸಾಕಾಣಿಕೆ ಆರಂಭಿಸುವುದು ಹಾಗೂ ಮನೆಯಲ್ಲಿಯೇ ಹಪ್ಪಳ, ಸಂಡಿಗೆ, ಮಸಾಲೆ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವ ಸಣ್ಣ ಉದ್ಯಮಗಳಿಗೆ ಕೈಹಾಕಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಪುಟ್ಟ ಹಳ್ಳಿಯ ಗೃಹಿಣಿ ರಾಧಮ್ಮ ಅವರು ಗೃಹಲಕ್ಷ್ಮಿ ಹಣದಿಂದ ಸ್ವ-ಉದ್ಯೋಗ ಆರಂಭಿಸಿದ್ದಾರೆ. ರಾಧಮ್ಮ ಅವರ ಪತಿ ಕೂಲಿ ಕಾರ್ಮಿಕರಾಗಿದ್ದು, ಮನೆಯ ಆರ್ಥಿಕ ಪರಿಸ್ಥಿತಿ ತೀರಾ ಸಂಕಷ್ಟದಲ್ಲಿತ್ತು. ಸಣ್ಣಪುಟ್ಟ ಹೆಚ್ಚುವರಿ ಖರ್ಚಿಗೂ ಬೇರೆಯವರ ಬಳಿ ಸಾಲದ ಮೊರೆಹೋಗಬೇಕಿದ್ದ ರಾಧಮ್ಮ ‘ಗೃಹಲಕ್ಷ್ಮಿ’ಯ 2,000 ರೂಪಾಯಿ ಹಣವೇ ದೊಡ್ಡ ಆಸರೆಯಾಗಿದೆ. ಮೊದಲ ಕೆಲವು ತಿಂಗಳು ಈ ಹಣವನ್ನು ಉಳಿತಾಯ ಮಾಡಿದ ರಾಧಮ್ಮ, ಒಟ್ಟು 10,000 ರೂಪಾಯಿಗಳನ್ನು ಸೇರಿಸಿ, ಹೊಲಿಗೆ ಮತ್ತು ಎಂಬ್ರಾಯಡ್ರಿ ಯಂತ್ರ ಖರಿಸಿದ್ದಾರೆ.
ಇಂದು ಅವರು ತಮ್ಮ ಊರಿನ ಮತ್ತು ಸುತ್ತಮುತ್ತಲಿನ ಕಾಲೇಜು ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಟೈಲರಿಂಗ್ ಕೆಲಸ ಮಾಡಿಕೊಡುತ್ತಾ, ತಿಂಗಳಿಗೆ 8,000 ರೂ.ಗಳಿಂದ 10,000 ರೂ.ವರೆಗೆ ಸಂಪಾದನೆ ಮಾಡುತ್ತಿದ್ದಾರೆ.
ರಾಧಮ್ಮ ಅವರಂತೆ ರಾಜ್ಯದ ಅನೇಕ ಗ್ರಾಮಗಳಲ್ಲಿ 10ರಿಂದ 15 ಮಹಿಳೆಯರು ಒಟ್ಟಾಗಿ ಸೇರಿ ತಮ್ಮ ಗೃಹಲಕ್ಷ್ಮಿ ಹಣವನ್ನು ಒಟ್ಟುಗೂಡಿಸಿ ‘ಮೈಕ್ರೋ-ಫೈನಾನ್ಸ್’ ಮಾದರಿಯಲ್ಲಿ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಕಡಿಮೆ ಬಡ್ಡಿದರದಲ್ಲಿ ಅಗತ್ಯವಿರುವವರಿಗೆ ಸಾಲ ನೀಡುತ್ತಾ, ದುಡಿಮೆಯ ಮಾರ್ಗ ಕಂಡುಕೊಂಡಿದ್ದಾರೆ. ಜೊತೆಗೆ, ಸಣ್ಣ ಅಂಗಡಿಗಳನ್ನು ತೆರೆದು, ದೀರ್ಘ ಬದುಕಿಗೆ ಆಸರೆ ಮಾಡಿಕೊಂಡಿದ್ದಾರೆ.
ಈ ಆರ್ಥಿಕ ಸಬಲೀಕರಣವು ಮಹಿಳೆಯರ ಸಾಮಾಜಿಕ ಸ್ಥಾನಮಾನವನ್ನೂ ಬದಲಿಸುತ್ತಿದೆ. ಜೊತೆಗೆ, ಮಕ್ಕಳ ಉನ್ನತ ಶಿಕ್ಷಣ, ಆರೋಗ್ಯ ಮತ್ತು ಮನೆಯ ಪ್ರಮುಖ ಆರ್ಥಿಕ ನಿರ್ಧಾರಗಳಲ್ಲಿ ಮಹಿಳೆಯರ ಮಾತಿಗೆ ಮನ್ನಣೆ ಸಿಗುತ್ತಿದೆ.


