ಸರ್ಕಾರಿ ಶಾಲಾ ಆವರಣದಲ್ಲಿರುವ ಬಾಲಕಿಯರ ಹಾಸ್ಟೆಲ್‌ನಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಂಡು ಹೊರಗೆ ಹೋಗಲು ಯತ್ನಿಸುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ 11 ವರ್ಷದ ಅಂದರೆ 4ನೇ ತರಗತಿಯ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಹೈದರಾಬಾದ್‌ನ ಮುಷೀರಾಬಾದ್‌ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಮತ್ತೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮೃತ ಬಾಲಕಿಯನ್ನು ಮಾರೇಡ್‌ಪಲ್ಲಿಯ ಅಂಬೇಡ್ಕರ್ ನಗರದ ನಿವಾಸಿ ಜಂಪಯ್ಯ ಎಂಬುವವರ ಪುತ್ರಿ ರೆಬಿಕಾ (11) ಎಂದು ಗುರುತಿಸಲಾಗಿದೆ. ಈಕೆ ಹಾಸ್ಟೆಲ್‌ನಲ್ಲಿ ಉಳಿದುಕೊಂಡು 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗಾಯಗೊಂಡ ಬಾಲಕಿಯನ್ನು 14 ವರ್ಷದ ನಂದಿನಿ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇದನ್ನೂ ಓದಿ: ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿಯ ವಿರೂಪಗೊಂಡ ಮೃತದೇಹ ಪತ್ತೆ
ಸೋಮವಾರ ಸಂಜೆ ಸುಮಾರು 4:30ರ ವೇಳೆಗೆ ರೆಬಿಕಾ, ನಂದಿನಿ (14) ಹಾಗೂ ಜಯಶ್ರೀ (9) ಎಂಬ ಮೂವರು ವಿದ್ಯಾರ್ಥಿನಿಯರು ಹಾಸ್ಟೆಲ್ ಕಟ್ಟಡದ ಟೆರೇಸ್ (ಮೇಲ್ಛಾವಣಿ) ಮೇಲೆ ಹೋಗಿದ್ದರು. ಈ ವೇಳೆ ರೆಬಿಕಾ ಅಲ್ಲಿದ್ದ ಕಬ್ಬಿಣದ ಹಿಡಿಕೆ ಇರುವ ನೆಲ ಒರೆಸುವ ಕೋಲು ಹಿಡಿದು ಆಟವಾಡುತ್ತಿದ್ದಳು. ಆಕಸ್ಮಿಕವಾಗಿ ಆ ಲೋಹದ ರಾಡ್ ಕಟ್ಟಡದ ಮೇಲೆಯೇ ಹಾದುಹೋಗಿದ್ದ 11 ಕೆವಿ (11 kV) ಹೈ-ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ ಎಂದೂ ಹೇಳಲಾಗುತ್ತಿದೆ.
ಆದರೆ ಕೆಲವು ಮಾಧ್ಯಮಗಳು ಪೊಲೀಸರ ಹೇಳಿಕೆ ಉಲ್ಲೇಖಿಸಿ ವಿದ್ಯಾರ್ಥಿನಿಯರು ಹಾಸ್ಟೆಲ್‌ನಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ವರದಿ ಮಾಡಿವೆ. ಒಟ್ಟಾರೆಯಾಗಿ ಈ ಘಟನೆಯೇ ಅನುಮಾನಾಸ್ಪದವಾಗಿದೆ.
ತೀವ್ರ ವಿದ್ಯುತ್ ಪ್ರವಾಹದಿಂದಾಗಿ ರೆಬಿಕಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ರಕ್ಷಿಸಲು ಮುಂದಾದ ನಂದಿನಿಗೂ ವಿದ್ಯುತ್ ಶಾಕ್ ತಗುಲಿದ್ದು, ಆಕೆಯ ಕೈಗಳಿಗೆ ಸುಟ್ಟ ಗಾಯಗಳಾಗಿವೆ. ಕಣ್ಣಮುಂದೆಯೇ ನಡೆದ ಈ ಭೀಕರ ಘಟನೆಯನ್ನು ಕಂಡು ಗಾಬರಿಗೊಂಡ 9 ವರ್ಷದ ಜಯಶ್ರೀ ತಕ್ಷಣವೇ ಕೆಳಗೆ ಓಡಿ ಬಂದು ಹಾಸ್ಟೆಲ್ ಸಿಬ್ಬಂದಿಗೆ ವಿಷಯ ತಿಳಿಸಿದ್ದಾಳೆ.
ಹಾಸ್ಟೆಲ್ ಸಿಬ್ಬಂದಿ ಇಬ್ಬರೂ ಬಾಲಕಿಯರನ್ನು ಹತ್ತಿರದ ಗಾಂಧಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ರೆಬಿಕಾ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ನಂದಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಆಸ್ಪತ್ರೆ ಮತ್ತು ಹಾಸ್ಟೆಲ್ ಎದುರು ಜಮಾಯಿಸಿದ ರೆಬಿಕಾ ಪೋಷಕರು ಹಾಗೂ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್ ಕಟ್ಟಡದ ತೀರಾ ಹತ್ತಿರದಲ್ಲಿ ಹೈ-ಟೆನ್ಷನ್ ತಂತಿಗಳು ಹಾದುಹೋಗಿದ್ದರೂ ಮಕ್ಕಳ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದ ಹಾಸ್ಟೆಲ್ ಆಡಳಿತ ಮಂಡಳಿ ಮತ್ತು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಈ ಹಾಸ್ಟೆಲ್‌ನಲ್ಲಿ ಸುರಕ್ಷತಾ ಲೋಪಗಳ ಕುರಿತು ತನಿಖೆ ಮುಂದುವರಿದಿದೆ.



