ಕಳೆದ ವರ್ಷ ನಡೆದಿದ್ದ ದಲಿತ ಯುವಕ ದರ್ಶನ್ (24) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ವಿವೇಕ್ ನಗರದ ನಿವಾಸಿಯಾಗಿದ್ದ ದರ್ಶನ್ ಅವರನ್ನು ಝೊಮ್ಯಾಟೋ ವಿತರಣಾ ಏಜೆಂಟ್‌ಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದರು. 2025ರ ನವೆಂಬರ್‌ನಲ್ಲಿ ಅವರು ಪುನರ್ವಸತಿ ಕೇಂದ್ರದಲ್ಲಿ ಸಾವನ್ನಪ್ಪಿದ್ದರು. ಇದು ಪೊಲೀಸ್ ಕಸ್ಟಡಿಯಲ್ಲಿ ನಡೆದ ದೌರ್ಜನ್ಯದಿಂದ ಸಂಭವಿಸಿದ ಸಾವು ಎಂದು ಆರೋಪಿಸಿ ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ (PUCL) ಕರ್ನಾಟಕ ಘಟಕವು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿತ್ತು.
ಅರ್ಜಿಯಲ್ಲಿ; ಪ್ರಸ್ತುತ ಸಿಐಡಿ ನಡೆಸುತ್ತಿರುವ ತನಿಖೆಯಲ್ಲಿ ಯಾವುದೇ ಪೊಲೀಸ್ ಸಿಬ್ಬಂದಿಯನ್ನು ಬಂಧಿಸದ ಕಾರಣ, ನ್ಯಾಯ ಸಿಗುವ ಸಾಧ್ಯತೆ ಕಡಿಮೆ ಎಂದು ಪಿಯುಸಿಎಲ್ ವಾದಿಸಿದೆ. ಆದ್ದರಿಂದ, ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿದೆ.
“ಮೃತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಸಾಕ್ಷಿಗಳಿಗೆ ಪೊಲೀಸ್ ಅಧಿಕಾರಿಗಳಿಂದ ಬರುತ್ತಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ ಅವರಿಗೆ ಸೂಕ್ತ ರಕ್ಷಣೆ ನೀಡಬೇಕು” ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
“ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತನ ದೇಹದ ಮೇಲೆ ಭೀಕರ ಗಾಯಗಳ ಗುರುತುಗಳಿರುವುದು ಪತ್ತೆಯಾಗಿದ್ದು, ಇದು ಕಸ್ಟಡಿ ಚಿತ್ರಹಿಂಸೆಗೆ ಸಾಕ್ಷಿಯಾಗಿದೆ” ಎಂದು ಸಂಸ್ಥೆಯು ವಾದಿಸಿದೆ.
ಈ ಲೇಖನ ಓದಿದ್ದೀರಾ?: ಕದನ ವಿರಾಮ ಘೋಷಿಸಿದ್ದರೂ, ಹಾರ್ಮುಜ್ ‘ಸುಂಕ’ ಮುಂದುವರಿಯಲಿವೆ!
ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭೂ ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ಪೀಠವು, “ಸದ್ಯಕ್ಕೆ ಯುವಕನ ಸಾವಿನ ತನಿಖೆಗೆ ಸಂಬಂಧಿಸಿದಂತೆ ಮಾತ್ರ ನೋಟಿಸ್ ನೀಡಲಾಗುತ್ತಿದೆ. ಅರ್ಜಿಯಲ್ಲಿನ ಇತರ ಸಾಮಾನ್ಯ ಬೇಡಿಕೆಗಳ ಬಗ್ಗೆ ಸದ್ಯಕ್ಕೆ ನಿರ್ಧಾರ ಕೈಗೊಳ್ಳುತ್ತಿಲ್ಲ” ಎಂದು ಸ್ಪಷ್ಟಪಡಿಸಿದೆ.
ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಿದೆ.
ಅರ್ಜಿದಾರರ ಪ್ರಮುಖ ಬೇಡಿಕೆಗಳು;
- ರಾಜ್ಯದಾದ್ಯಂತ ಕಳೆದ 5 ವರ್ಷಗಳಲ್ಲಿ ನಡೆದ ಕಸ್ಟಡಿ ಸಾವುಗಳ ಬಗ್ಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕು.
- ಕಸ್ಟಡಿ ಚಿತ್ರಹಿಂಸೆ ತಡೆಗಟ್ಟಲು ಸಮಗ್ರ ಮಾರ್ಗಸೂಚಿ ರೂಪಿಸಬೇಕು.
- ಎಲ್ಲ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಬೇಕು.



