ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಏಪ್ರಿಲ್ 10ರಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು (ಗುರುವಾರ) ಅವರು ನವದೆಹಲಿಗೆ ತೆರಳಿದ್ದಾರೆ. ಆದಾಗ್ಯೂ, ಇನ್ನೂ 6 ತಿಂಗಳು ಅವರೇ ಬಿಹಾರ ಮುಖ್ಯಮಂತ್ರಿಯಾಗಿ ಮುಂದುವರೆಯಲು ಅವಕಾಶವಿದೆ ಎಂದು ಅವರ ಪಕ್ಷ ಜೆಡಿಯು ಹೇಳಿಕೊಂಡಿದೆ.
ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ನಿತೀಶ್ ಕುಮಾರ್ ಅವರು ದೆಹಲಿಯಲ್ಲಿ ಜೆಡಿಯು ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಬಿಹಾರದಲ್ಲಿ ಹೊಸ ಸರ್ಕಾರ ರಚನೆ ಮತ್ತು ಪಕ್ಷದ ಮುಂದಿನ ಕಾರ್ಯತಂತ್ರದ ಬಗ್ಗೆ ಸಭೆಯಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮತ್ತೊಂದೆಡೆ, ಬಿಹಾರದ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ಬಗ್ಗೆ ಚರ್ಚಿಸಲು ಬಿಜೆಪಿ ಕೂಡ ಶುಕ್ರವಾರ ದೆಹಲಿಯಲ್ಲಿ ತಮ್ಮ ಪಕ್ಷದ ನಾಯಕರೊಂದಿಗೆ ಸಭೆ ಕರೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ನಡೆಯಲಿದೆ.
ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಬಿಜೆಪಿಗೆ ಸವಾಲಿನ ಕೆಲಸವಾಗಿದೆ. ನಿತೀಶ್ ಕುಮಾರ್ ಅವರ ರಾಜಕೀಯ ವರ್ಚಸ್ಸು ಮತ್ತು ಕ್ಲೀನ್ ಇಮೇಜ್‌ಗೆ ಸರಿಸಾಟಿಯಾಗುವ ನಾಯಕನನ್ನು ಆಯ್ಕೆ ಮಾಡುವುದು ಕಠಿಣ ಕೆಲಸವಾಗಿದೆ ಎಂದು ಬಿಜೆಪಿಯ ಹಿರಿಯರೊಬ್ಬರು ಹೇಳಿಕೊಂಡಿರುವುದಾಗಿ ವರದಿಯಾಗಿದೆ.
ಈ ಲೇಖನ ಓದಿದ್ದೀರಾ?: ಕದನ ವಿರಾಮ ಘೋಷಿಸಿದ್ದರೂ, ಹಾರ್ಮುಜ್ ‘ಸುಂಕ’ ಮುಂದುವರಿಯಲಿವೆ!
ಇದೇ ವೇಳೆ, ಜೆಡಿಯು ನಾಯಕ ನೀರಜ್ ಕುಮಾರ್ ಅವರು ಪಾಟ್ನಾದ ತಮ್ಮ ನಿವಾಸದಲ್ಲಿ ನಿತೀಶ್ ಕುಮಾರ್ ಮತ್ತು ಅವರ ಪುತ್ರ ನಿಶಾಂತ್ ಕುಮಾರ್ ಅವರ ಫೋಟೋ ಇರುವ ಪೋಸ್ಟರ್ ಒಂದನ್ನು ಅಳವಡಿಸಿದ್ದಾರೆ. ಅದರಲ್ಲಿ; ‘ಬಲಿಷ್ಠ ಪರಂಪರೆ, ಶಕ್ತಿಶಾಲಿ ಭವಿಷ್ಯವಾಗಿ ನಿಶಾಂತ್ ಕುಮಾರ್ ಸಿದ್ಧರಾಗಿದ್ದಾರೆ’ ಎಂಬ ಬರಹವಿದೆ. ನಿತೀಶ್ ಕುಮಾರ್ ಅವರು ಕೇಂದ್ರ ರಾಜಕಾರಣಕ್ಕೆ ತೆರಳುತ್ತಿರುವ ಬೆನ್ನಲ್ಲೇ, ಅವರ ಪುತ್ರನನ್ನು ರಾಜ್ಯ ರಾಜಕಾರಣದಲ್ಲಿ ಸಕ್ರಿಯಗೊಳಿಸುವ ಪ್ರಯತ್ನಗಳು ಹೆಚ್ಚಾಗಿ ನಡೆಯುತ್ತಿವೆ.
ಈ ಕುರಿತು ಮಾಹಿತಿ ನೀಡಿದ ಜೆಡಿಯು ಹಿರಿಯ ನಾಯಕ, ಬಿಹಾರ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ, “ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ತಕ್ಷಣ ಬಿಹಾರದಲ್ಲಿ ಹೊಸ ಎನ್‌ಡಿಎ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗಲಿದೆ” ಎಂದಿದ್ದಾರೆ.
ಆದಾಗ್ಯೂ, ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ಆಯ್ಕೆಯಾದ ನಂತರವೂ ಮುಂದಿನ ಆರು ತಿಂಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.



