ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ್ ಅವರನ್ನು ಅಮಾನತುಗೊಳಿಸಿ ರಾಜ್ಯಪಾಲರು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ಜತೆಗೆ, ಅವರನ್ನು ಏಳು ದಿನಗಳ ಒಳಗಾಗಿ ಮರುನೇಮಕ (ಹುದ್ದೆಯಲ್ಲಿ ಮುಂದುವರಿಸಲು) ಮಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸಾಹುಕಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಮಹತ್ವದ ತೀರ್ಪು ಪ್ರಕಟಿಸಿದೆ. ಲೋಕಸೇವಾ ಆಯೋಗದ ಅಧ್ಯಕ್ಷರನ್ನು ಹುದ್ದೆಯಿಂದ ತೆಗೆದುಹಾಕಲು ಸಂವಿಧಾನದ 317ನೇ ವಿಧಿಯಡಿ ನಿಗದಿಪಡಿಸಲಾದ ಸಾಂವಿಧಾನಿಕ ಪ್ರಕ್ರಿಯೆಯನ್ನು ಪಾಲಿಸದೆ ರಾಜ್ಯಪಾಲರು ಜುಲೈ 10ರಂದು ಅಮಾನತು ಆದೇಶ ಹೊರಡಿಸಿದ್ದರು. ಹೀಗಾಗಿ ಆ ಆದೇಶ ಕಾನೂನುಬದ್ಧವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಮರುನೇಮಕದ ಬಳಿಕ ಸಾಹುಕಾರ್ ಅವರು ಎಲ್ಲಾ ಸೇವಾ ಹಿಂಬಾಕಿ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುತ್ತಾರೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆದಾಗ್ಯೂ, ತಮ್ಮ ಪುತ್ರಿಯರಿಗೆ ಸಂಬಂಧಿಸಿದಂತೆ ಆಯೋಗ ಕೈಗೊಳ್ಳುವ ಯಾವುದೇ ನಿರ್ಧಾರ ಅಥವಾ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರದಂತೆ ಸಾಹುಕಾರ್ ಅವರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. “ಈ ತೀರ್ಪು ಕೇವಲ ಅಮಾನತು ಆದೇಶದ ಸಾಂವಿಧಾನಿಕ ಸಿಂಧುತ್ವಕ್ಕೆ ಸೀಮಿತವಾಗಿದ್ದು, ಅರ್ಜಿದಾರರು ಅಥವಾ ಅವರ ಪುತ್ರಿಯರ ಮೇಲಿನ ಆರೋಪಗಳ ಸತ್ಯಾಸತ್ಯತೆಯನ್ನು ನಿರ್ಧರಿಸುವುದಿಲ್ಲ. ಸಚಿವ ಸಂಪುಟದ ಪೂರ್ವ ನೆರವು ಮತ್ತು ಸಲಹೆಯನ್ನು (Aid and advice) ಪಡೆದು ಸಂವಿಧಾನಬದ್ಧವಾಗಿ ಹೊಸದಾಗಿ ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರಕ್ಕೆ ಅವಕಾಶ ಮುಕ್ತವಾಗಿದೆ” ಎಂದು ಪೀಠ ಹೇಳಿದೆ.
ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಲ್ಲಿದ್ದುಕೊಂಡು ತಮ್ಮಿಬ್ಬರು ಪುತ್ರಿಯರಿಗೆ ಸರ್ಕಾರಿ ಉದ್ಯೋಗ ಕೊಡಿಸಲು ನಿಯಮಬಾಹಿರವಾಗಿ ನೆರವಾಗಿದ್ದಾರೆ ಎಂಬ ಗಂಭೀರ ಆರೋಪ ಸಾಹುಕಾರ್ ಮೇಲಿತ್ತು. ಸಾಹುಕಾರ್ ಅವರು ತಿಂಗಳಿಗೆ ಸುಮಾರು ₹2.71 ಲಕ್ಷ ವೇತನ ಪಡೆಯುತ್ತಿದ್ದರೂ, ಅವರ ಪುತ್ರಿಯರು ಪ್ರವರ್ಗ 3ಬಿ (ಒಬಿಸಿ ನಾನ್-ಕ್ರೀಮಿ ಲೇಯರ್) ಮೀಸಲಾತಿ ಸೌಲಭ್ಯ ಪಡೆಯಲು ತಂದೆಯ ವಾರ್ಷಿಕ ಆದಾಯ ಕೇವಲ ₹40,000 ಎಂದು ಆದಾಯ ಪ್ರಮಾಣಪತ್ರ ಸಲ್ಲಿಸಿದ್ದರು ಎನ್ನಲಾದ ವಿಚಾರ ವಿವಾದಕ್ಕೆ ಗ್ರಾಸವಾಗಿತ್ತು.
ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್, “ಸಂವಿಧಾನದ 317(1)ನೇ ವಿಧಿಯಡಿ ರಾಷ್ಟ್ರಪತಿಗಳು ಸುಪ್ರೀಂ ಕೋರ್ಟ್‌ಗೆ ಶಿಫಾರಸು ಮಾಡಿ ತನಿಖೆ ನಡೆಸದೆ, ರಾಜ್ಯಪಾಲರು ನೇರವಾಗಿ 317(2)ನೇ ವಿಧಿಯನ್ವಯ ಅಮಾನತುಗೊಳಿಸಲು ಅಧಿಕಾರವಿಲ್ಲ” ಎಂದು ವಾದಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಗೂ ರಾಜ್ಯಪಾಲರ ಸಚಿವಾಲಯದ ಪರವಾಗಿ ಹಿರಿಯ ವಕೀಲ ಉದಯ ಹೊಳ್ಳ ವಾದ ಮಂಡಿಸಿದ್ದರು.




