ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯ ಲೈಲಾನ್ ವೈಫೇಯ್ ಗ್ರಾಮದಿಂದ ಕಳೆದ ಮೇ 13 ರಂದು ಅಪಹರಣಕ್ಕೊಳಗಾಗಿದ್ದ ಆರು ನಾಗಾ ಸಮುದಾಯಕ್ಕೆ ಸೇರಿದ ವ್ಯಕ್ತಿಗಳ ಮೃತದೇಹಗಳನ್ನು ಘಟನೆ ನಡೆದು ಸುಮಾರು ಆರು ತಿಂಗಳ (187 ದಿನಗಳ) ಬಳಿಕ, ನವೆಂಬರ್ 16ರಂದು ಅವರ ಸ್ವಗ್ರಾಮವಾದ ಕಾಂಗ್‌ಪೋಕ್ಪಿ ಜಿಲ್ಲೆಯ ಕೊನ್ಸಾಖುಲ್ ಗ್ರಾಮದ ‘ನಾಗಾ ಮಾರ್ಟರ್ಸ್ ಪಾರ್ಕ್’ನಲ್ಲಿ ಅಂತಿಮ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು.
ಕಳೆದ ಮೇ 13ರಂದು ಮಣಿಪುರದಲ್ಲಿ ಸಂಭವಿಸಿದ ಹಿಂಸಾಚಾರ ಹಾಗೂ ಅಪಹರಣದ ವೇಳೆ ಈ ಆರು ಮಂದಿಯನ್ನು ಅಪಹರಿಸಲಾಗಿತ್ತು. ತೀವ್ರ ಶೋಧನೆಯ ಬಳಿಕ ಜೂನ್ 10 ರಂದು ಇವರ ವಿಕೃತಗೊಂಡ ಮೃತದೇಹಗಳು ಪತ್ತೆಯಾಗಿದ್ದವು.
ಇದನ್ನೂ ಓದಿ: ಮಣಿಪುರ | ಗುಂಪುಗಳ ನಡುವೆ ಭಾರಿ ಗುಂಡಿನ ಚಕಮಕಿ: ಮೂವರು ಸಾವು
ಅಂದಿನಿಂದ ಈ ಮೃತದೇಹಗಳನ್ನು ಇಂಫಾಲದ ಜವಾಹರಲಾಲ್ ನೆಹರೂ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (JNIMS) ಶವಾಗಾರದಲ್ಲಿ ಇರಿಸಲಾಗಿತ್ತು. ಹತ್ಯೆಗೈದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿ ಮೃತರ ಕುಟುಂಬಸ್ಥರು ಹಾಗೂ ನಾಗಾ ನಾಗರಿಕ ಸಮಾಜದ ಸಂಘಟನೆಗಳು ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದವು.
ಸೆಪ್ಟೆಂಬರ್ 26ರಂದು ಗುವಾಹಟಿಯಲ್ಲಿ ಯುನೈಟೆಡ್ ನಾಗಾ ಕೌನ್ಸಿಲ್ (ಯುಎನ್‌ಸಿ), ಜಾಯಿಂಟ್ ಟ್ರೈಬ್ ಕೌನ್ಸಿಲ್ (ಜೆಟಿಸಿ), ಮಣಿಪುರ ಸರ್ಕಾರ ಹಾಗೂ ಕೇಂದ್ರ ಗೃಹ ಸಚಿವಾಲಯದ ನಡುವೆ ನಡೆದ ತ್ರಿಪಕ್ಷೀಯ ಮಾತುಕತೆಯ ಬಳಿಕ ಈ ಒಮ್ಮತ ಮೂಡಿತು. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಈ ಪ್ರಕರಣದ ತನಿಖೆ ಹಾಗೂ ಕಾನೂನು ಕ್ರಮ ಮುಂದುವರೆಸುವ ಭರವಸೆಯೊಂದಿಗೆ, ಕುಟುಂಬಸ್ಥರು ಅಂತಿಮ ವಿಧಿಗಳನ್ನು ನೆರವೇರಿಸಲು ಒಪ್ಪಿಗೆ ಸೂಚಿಸಿದರು.
ಸೋಮವಾರ ನಡೆದ ಅಂತಿಮ ಸಂಸ್ಕಾರದಲ್ಲಿ ನಾಗಾಪಂಥೀಯರು, ಮೈತೇಯಿ ಮತ್ತು ಇತರೆ ಸಮುದಾಯಗಳ ಸಾವಿರಾರು ಜನರು ಪಾಲ್ಗೊಂಡು ಮೃತರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.



