ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಉತ್ತರಾಖಂಡದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮುಖ್ಯ ಅಪರಾಧಿ ಪುಲ್ಕಿತ್ ಆರ್ಯನ ತಂದೆ, ಬಿಜೆಪಿಯ ಮಾಜಿ ಮುಖಂಡ ವಿನೋದ್ ಆರ್ಯ ವಿರುದ್ಧ ಸೋಮವಾರ ಪೊಲೀಸ್ ದೂರು ದಾಖಲಾಗಿದೆ. ಮೃತ ಯುವತಿ ಅಂಕಿತಾ ಭಂಡಾರಿಯ ಖಾಸಗಿ ವಾಟ್ಸಾಪ್ ಚಾಟ್‌ಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿದ ಮತ್ತು ನಡೆಯುತ್ತಿರುವ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ ಆರೋಪದ ಮೇಲೆ ಈ ದೂರು ನೀಡಲಾಗಿದೆ.
ಉತ್ತರಾಖಂಡದ ‘ಪಹಾಡಿ ಮಹಾಸಭಾ’ ಸಂಘಟನೆಯು ಹರಿದ್ವಾರ ಪೊಲೀಸರಿಗೆ ವಿನೋದ್ ಆರ್ಯ ವಿರುದ್ಧ ಲಿಖಿತ ದೂರು ಸಲ್ಲಿಸಿದೆ. ಭಾನುವಾರ (ನವೆಂಬರ್ 15) ವಿನೋದ್ ಆರ್ಯ ತಮ್ಮ ವಕೀಲರೊಂದಿಗೆ ಸುದ್ದಿಗೋಷ್ಠಿ ನಡೆಸಿ, ಅಂಕಿತಾ ಭಂಡಾರಿ ಹಾಗೂ ಆಕೆಯ ಸ್ನೇಹಿತನ ನಡುವಿನ ಸುಮಾರು 4,000ಕ್ಕೂ ಅಧಿಕ ಪುಟಗಳ ಖಾಸಗಿ ವಾಟ್ಸಾಪ್ ಸಂಭಾಷಣೆಯ ಆಯ್ದ ಭಾಗಗಳನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದರು.
ಇದನ್ನೂ ಓದಿ: ಅಂಕಿತಾ ಭಂಡಾರಿ ಹತ್ಯೆ ಪ್ರಕರಣ: ಹಾದಿ ತಪ್ಪಿದ ತನಿಖೆ, ಸರ್ಕಾರದ ವಿರುದ್ಧ ಜನಾಕ್ರೋಶ
ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಹಾಡಿ ಮಹಾಸಭಾದ ಅಧ್ಯಕ್ಷ ತರುಣ್ ವ್ಯಾಸ್, “ಅಂಕಿತಾ ಭಂಡಾರಿ ಕೇವಲ ಒಂದು ಕುಟುಂಬದ ಮಗಳಲ್ಲ, ಆಕೆ ಇಡೀ ಉತ್ತರಾಖಂಡದ ಮಗಳು. ಮೃತ ಯುವತಿಯ ಖಾಸಗಿ ಸಂದೇಶಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವ ಮೂಲಕ ಆಕೆಯ ಗೌಪ್ಯತೆಗೆ ಧಕ್ಕೆ ತರಲಾಗಿದೆ ಮತ್ತು ಪ್ರಕರಣದ ತನಿಖೆಯ ಮೇಲೆ ಪ್ರಭಾವ ಬೀರಲು ಯತ್ನಿಸಲಾಗುತ್ತಿದೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಒಂದು ವೇಳೆ ವಿನೋದ್ ಆರ್ಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಎಚ್ಚರಿಕೆ ನೀಡಿದೆ.
ಭಾನುವಾರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ವಿನೋದ್ ಆರ್ಯ, ಸಾರ್ವಜನಿಕ ಒತ್ತಡಕ್ಕೆ ಮಣಿದು ತಮ್ಮ ಪುತ್ರ ಪುಲ್ಕಿತ್ ಆರ್ಯ ಮತ್ತು ಆತನ ಸಹಚರರನ್ನು ಈ ಪ್ರಕರಣದಲ್ಲಿ ಸುಳ್ಳು ಆರೋಪದಡಿ ಸಿಲುಕಿಸಲಾಗಿದೆ ಎಂದು ವಾದಿಸಿದ್ದರು. ಬಹಿರಂಗಪಡಿಸಲಾದ ಚಾಟ್‌ಗಳಲ್ಲಿ ಎಲ್ಲಿಯೂ ಪುಲ್ಕಿತ್ ಹೆಸರು ಅಥವಾ ಯಾವುದೇ ‘ವಿಐಪಿ’ ವ್ಯಕ್ತಿಯ ಉಲ್ಲೇಖವಿಲ್ಲ; ಬದಲಾಗಿ ಅಂಕಿತಾ ತನ್ನ ಪೋಷಕರು ಮತ್ತು ಸ್ನೇಹಿತನಿಂದಲೇ ಕಿರುಕುಳ ಅನುಭವಿಸುತ್ತಿದ್ದರು ಎಂದು ಅವರು ಆರೋಪಿಸಿದ್ದರು. ಅಲ್ಲದೆ, ಈ ಚಾಟ್‌ಗಳನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ನೆರಳು: ದುಷ್ಯಂತ್ ಗೌತಮ್ ವಿರುದ್ಧ ಸಿಕ್ಕಿಂನಲ್ಲಿ ಪ್ರತಿಭಟನೆಗಳ ಕಿಚ್ಚು!
ಏನಿದು ಅಂಕಿತಾ ಭಂಡಾರಿ ಪ್ರಕರಣ?
ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯ 19 ವರ್ಷದ ಯುವತಿ ಅಂಕಿತಾ ಭಂಡಾರಿ, 2022ರ ಆಗಸ್ಟ್‌ನಲ್ಲಿ ರಿಷಿಕೇಶದ ಬಳಿಯ ‘ವನಂತರ ರೆಸಾರ್ಟ್’ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು. ಈ ರೆಸಾರ್ಟ್ ಬಿಜೆಪಿ ಮುಖಂಡ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯನ ಮಾಲೀಕತ್ವದಲ್ಲಿತ್ತು.
2022ರ ಸೆಪ್ಟೆಂಬರ್ 18ರಂದು ಅಂಕಿತಾ ನಿಗೂಢವಾಗಿ ನಾಪತ್ತೆಯಾಗಿದ್ದರು. ತನಿಖೆಯ ವೇಳೆ, ರೆಸಾರ್ಟ್‌ಗೆ ಬರುವ ‘ವಿಐಪಿ’ ಅತಿಥಿಗಳಿಗೆ ವಿಶೇಷ ಸೇವೆ (ಲೈಂಗಿಕ ಸೇವೆ) ನೀಡುವಂತೆ ಮಾಲೀಕ ಪುಲ್ಕಿತ್ ಆರ್ಯ ಮತ್ತು ವ್ಯವಸ್ಥಾಪಕರು ಅಂಕಿತಾ ಮೇಲೆ ಒತ್ತಡ ಹೇರಿದ್ದರು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.
ಇದಕ್ಕೆ ಅಂಕಿತಾ ನಿರಾಕರಿಸಿದ್ದರಿಂದ, ಸೆಪ್ಟೆಂಬರ್ 18ರ ರಾತ್ರಿ ಪುಲ್ಕಿತ್ ಆರ್ಯ ಮತ್ತು ಆತನ ಇಬ್ಬರು ಸಹಚರರಾದ ಸೌರಭ್ ಭಾಸ್ಕರ್ ಹಾಗೂ ಅಂಕಿತ್ ಗುಪ್ತಾ ಸೇರಿಕೊಂಡು ಅಂಕಿತಾಳನ್ನು ಚಿಲ್ಲಾ ಕಾಲುವೆಗೆ ತಳ್ಳಿ ಹತ್ಯೆ ಮಾಡಿದ್ದರು. ಆರು ದಿನಗಳ ಬಳಿಕ (ಸೆಪ್ಟೆಂಬರ್ 24) ಆಕೆಯ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣವು ಉತ್ತರಾಖಂಡದಲ್ಲಿ ಭಾರಿ ಜನಾಕ್ರೋಶ ಮತ್ತು ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ಸುದೀರ್ಘ ವಿಚಾರಣೆ ನಡೆಸಿದ ಕೋಟ್‌ದ್ವಾರದ ಜಿಲ್ಲಾ ನ್ಯಾಯಾಲಯವು 2025ರ ಮೇ 30ರಂದು ಪುಲ್ಕಿತ್ ಆರ್ಯ ಸೇರಿದಂತೆ ಮೂವರು ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದಾಗ್ಯೂ, ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಪ್ರಭಾವಿ ‘ವಿಐಪಿ’ ವ್ಯಕ್ತಿಯನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಅಂಕಿತಾ ಪೋಷಕರು ಹಾಗೂ ವಿವಿಧ ಸಂಘಟನೆಗಳು ನಿರಂತರವಾಗಿ ಸಿಬಿಐ ತನಿಖೆಗಾಗಿ ಹೋರಾಟ ನಡೆಸುತ್ತಲೇ ಬಂದಿವೆ.



