ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹5,500 ಲಾಭದಾಯಕ ಬೆಲೆ ನೀಡಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಗದ್ದನಕೇರಿ ಕ್ರಾಸ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ –ವಿಜಯಪುರ ರಾಷ್ಟ್ರೀಯ ಹೆದ್ದಾರಿ-52 ಹಾಗೂ ರಾಯಚೂರು–ಬೆಳಗಾವಿ ರಾಜ್ಯ ಹೆದ್ದಾರಿಯನ್ನು ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, “ಕೇಂದ್ರ ಸರ್ಕಾರ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗೆ ಸಂಬಂಧಿಸಿದ ಎಫ್‌ಆರ್‌ಪಿ (FRP) ದರವನ್ನು ಕೂಡಲೇ ಪರಿಷ್ಕರಿಸಬೇಕು. ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹1,000 ರಾಜ್ಯ ಸಲಹಾ ಬೆಲೆ (SAP) ಘೋಷಿಸಿ ತಕ್ಷಣ ಜಾರಿಗೊಳಿಸಬೇಕು. ಈ ಮೂಲಕ ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ಒಟ್ಟು ₹5,500 ಬೆಲೆ ದೊರೆಯುವಂತೆ ಮಾಡಬೇಕು” ಎಂದು ಆಗ್ರಹಿಸಿದರು.
ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಸಕ್ಕರೆ, ಎಥನಾಲ್, ಮೊಲಾಸಿಸ್, ಬಗಾಸ್, ಪ್ರೆಸ್‌ಮಡ್ ಹಾಗೂ ವಿದ್ಯುತ್ ಸೇರಿದಂತೆ ಎಲ್ಲ ಉಪ ಉತ್ಪನ್ನಗಳ ಆದಾಯದಲ್ಲಿ ಶೇ.70ರಷ್ಟು ಪಾಲನ್ನು ಕಬ್ಬು ಬೆಳೆಗಾರರಿಗೆ ನೀಡಬೇಕು. ರೈತರು ಕಬ್ಬು ಪೂರೈಸಿದ 15 ದಿನಗಳೊಳಗೆ ಬಿಲ್ ಹಣವನ್ನು ಅವರ ಖಾತೆಗೆ ಜಮಾ ಮಾಡುವುದು ಕಡ್ಡಾಯವಾಗಬೇಕು. ಹಣ ಪಾವತಿಯಲ್ಲಿ ವಿಳಂಬ ಮಾಡುವ ಕಾರ್ಖಾನೆಗಳಿಗೆ ಬಡ್ಡಿ ಹಾಗೂ ದಂಡ ವಿಧಿಸಬೇಕು ಎಂದು ಒತ್ತಾಯಿಸಿದರು.
ತೂಕದ ಮೋಸಕ್ಕೆ ಕಡಿವಾಣ ಹಾಕಿ, ಬೆಂಕಿಯಿಂದ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಿ
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಲಕ್ಷ್ಮಣ್ಣ ಶಿರಬೂರ ಮಾತನಾಡಿ, ಸಕ್ಕರೆ ಕಾರ್ಖಾನೆಗಳಲ್ಲಿ ಡಿಜಿಟಲ್ ತೂಕದ ಯಂತ್ರಗಳನ್ನು ಅಳವಡಿಸುವ ಮೂಲಕ ಕಬ್ಬಿನ ತೂಕದಲ್ಲಿ ನಡೆಯುವ ಮೋಸವನ್ನು ತಡೆಗಟ್ಟಬೇಕು. ಲಗಾಣಿ ಹಾಗೂ ಇತರೆ ಅನಗತ್ಯ ಕಡಿತಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಕಬ್ಬಿನ ಹೊಲಗಳಿಗೆ ಬೆಂಕಿ ತಗುಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಬೆಳೆ ಕಳೆದುಕೊಂಡ ಸಂತ್ರಸ್ತ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಬಾಗಲಕೋಟೆ ತಾಲೂಕು ಅಧ್ಯಕ್ಷ ಚಂದ್ರಶೇಖರ ಹಡಪದ ಮಾತನಾಡಿ, “ಬರಗಾಲ, ಅಂತರ್ಜಲ ಕುಸಿತ, ಹೆಚ್ಚುತ್ತಿರುವ ಬಿಸಿಲು ಹಾಗೂ ಕೃಷಿ ಉತ್ಪಾದನಾ ವೆಚ್ಚದ ಏರಿಕೆಯಿಂದ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಶ್ರಮಕ್ಕೆ ತಕ್ಕ ಬೆಲೆ ದೊರೆಯದಿದ್ದರೆ ಕಬ್ಬು ಕೃಷಿಯೇ ನಾಶವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ” ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿವಿಧ ಸಂಘಟನೆಗಳ ಬೆಂಬಲ
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಸುಬ್ಬರಾಯಗೌಡ ಪಾಟೀಲ, ಡೋಂಗ್ರಿ ನದಾಪ, ಗಂಗಪ್ಪ ಮಾದರ, ನವೀನ ಕಪಾಲಿ, ಮಲ್ಲಪ್ಪ ಗಾಣಿಗೇರ, ಅಜೀತ ನಾಯ್ಕ, ಅಶೋಕ ಮಂತ್ರಿ, ಬಸಯ್ಯ ಮೂತಿಮಠ, ಶ್ರೀಶೈಲ ಹಿರೇಮಠ, ಮಲ್ಲಪ್ಪ ಬಾವಿ, ಆನಂದ ಶೆಟ್ಟೆಪ್ಪನವರ, ಬಸವಂತಪ್ಪ ಸಂಕಾನಟ್ಟಿ, ಜಂಗಪ್ಪ ಕಲ್ಲಾರಿ, ರಮೇಶ ಸಾರವಾಡ ಹಾಗೂ ಶಾಂತಯ್ಯ ಪಂಚಗಟ್ಟಿಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




