ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕುರಿ ಶೆಡ್‌ಗೆ ಬೆಂಕಿ ತಗುಲಿ ಶೆಡ್ಡಿನಲ್ಲಿದ್ದ ನೂರಕ್ಕೂ ಹೆಚ್ಚು ಕುರಿ-ಕೋಳಿಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಮಂಗಳವಾರ ರಾತ್ರಿ 12 ಗಂಟೆಯ ತಡರಾತ್ರಿ ವೇಳೆ ಈ ಧುರ್ಘಟನೆ ಸಂಭವಿಸಿದ್ದು, ಗ್ರಾಮದ ರಾಮಣ್ಣ ಎನ್ನುವರಿಗೆ ಸೇರಿದ ಶೆಡ್‌ನಲ್ಲಿದ್ದ 150 ಕುರಿಗಳು ಹಾಗೂ 100ಕ್ಕೂ ಹೆಚ್ಚು ಕೋಳಿಗಳು ಸಜೀವ ದಹನಗೊಂಡಿವೆ. ಕುರಿಗಳ ಕಿರುಚಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಅಗ್ನಿಶಾಮಕದಳದವರು ಸ್ಥಳಕ್ಕೆ ಭೇಟಿ ನೀಡುವ ವೇಳೆಗಾಗಲೇ ಇಡೀ ಕುರಿ ಶೆಡ್ ಬೆಂಕಿಗಾಹುತಿಯಾಗಿದ್ದು, ಶೆಡ್‌ನಲ್ಲಿದ್ದ ಎಲ್ಲಾ ಕುರಿಗಳು ಹಾಗೂ ಕೋಳಿಗಳು ಸಜೀವ ದಹನಗೊಂಡಿವೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.





