ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ವಿಚಾರಣೆಗೆ ಹಾಜರಾಗಲು ಸೂಚನೆ ಪಡೆದಿರುವ ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರು, ಅಂಗವಿಕಲರು ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತದಾರರು ಇನ್ನು ಮುಂದೆ ಮನೆ ಬಾಗಿಲಲ್ಲೇ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬಹುದಾಗಿದೆ. ಈ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಈ ಸೌಲಭ್ಯ ಪಡೆಯಲು ಮತದಾರರು ತಮ್ಮ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿ (BLO) ಅವರನ್ನು ಸಂಪರ್ಕಿಸಬೇಕು. ಬಳಿಕ ಸಹಾಯಕ ಚುನಾವಣಾ ನೋಂದಣಾಧಿಕಾರಿ (AERO) ಅಥವಾ ಚುನಾವಣಾ ನೋಂದಣಾಧಿಕಾರಿ (ERO) ಮತದಾರರ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಅವುಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಿದ್ದಾರೆ.
SIR ಅಡಿಯಲ್ಲಿ ‘ಮ್ಯಾಪಿಂಗ್ ಆಗದ ಪ್ರಕರಣಗಳು’ ಮತ್ತು ವ್ಯತ್ಯಾಸಗಳಿಗೆ ಸಂಬಂಧಿಸಿದಂತೆ ಒಟ್ಟು 43.81 ಲಕ್ಷ ನೋಟಿಸ್‌ಗಳನ್ನು ನೀಡಲಾಗಿದೆ. ಈ ಪೈಕಿ ಸೆ.15ರವರೆಗೆ 12.56 ಲಕ್ಷ ವಿಚಾರಣೆಗಳು ಪೂರ್ಣಗೊಂಡಿವೆ. ಅಂತಿಮ ವಿಚಾರಣೆ ಅ.12ರಂದು ನಡೆಯಲಿದೆ. ಚುನಾವಣಾ ಆಯೋಗವು ಹಿರಿಯ ನಾಗರಿಕರು, ಅಂಗವಿಕಲರು, ಅನಾರೋಗ್ಯ ಪೀಡಿತರು, ಆಸ್ಪತ್ರೆಯಲ್ಲಿರುವವರು ಹಾಗೂ ವಿದೇಶದಲ್ಲಿರುವ ಮತದಾರರಿಗೆ ವಿಚಾರಣೆಗೆ ಖುದ್ದಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿದೆ. ಈ ಸೌಲಭ್ಯವನ್ನು ಹಲವರು ಈಗಾಗಲೇ ಬಳಸಿಕೊಂಡಿದ್ದಾರೆ.
ಆದರೆ, ದಿನಕ್ಕೆ ಸುಮಾರು 150 ನೋಟಿಸ್‌ಗಳ ವಿಚಾರಣೆ ನಡೆಸಬೇಕಿರುವುದರಿಂದ ಕೆಲವು AEROಗಳು ಮತ್ತು EROಗಳಿಗೆ ತಕ್ಷಣವೇ ಮನೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಪ್ರಕಾರ, ಮನೆ ಭೇಟಿ ನೀಡುವ ಮನವಿಯನ್ನು ಪ್ರಕರಣದ ಅರ್ಹತೆ ಆಧರಿಸಿ ನಿರ್ಧರಿಸುವ ಅಧಿಕಾರ AEROಗಳಿಗೆ ಇದೆ. ಕಳೆದ ಕೆಲವು ದಿನಗಳಿಂದ ಮನೆ ಭೇಟಿಗಳ ಸಂಖ್ಯೆ ಹೆಚ್ಚಾಗಿದೆ.
ಮತದಾರರು ತಮ್ಮ ಕುಟುಂಬದ ಸದಸ್ಯರೊಬ್ಬರನ್ನು ಸಹ ವಿಚಾರಣೆಗೆ ನಿಯೋಜಿಸಬಹುದು. ನಿಯೋಜಿತ ವ್ಯಕ್ತಿಯು ನೋಟಿಸ್ ಪ್ರತಿ, ಸ್ವಯಂ ದೃಢೀಕರಿಸಿದ ಆಧಾರ್ ಪ್ರತಿ ಹಾಗೂ ಚುನಾವಣಾ ಆಯೋಗ ಅನುಮೋದಿಸಿರುವ ಇತರ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬಹುದು.
ಇದೇ ವೇಳೆ, ಸಿನಿಮಾ, ಕಲೆ, ಕ್ರೀಡೆ, ಮಾಧ್ಯಮ, ನ್ಯಾಯಾಂಗ ಕ್ಷೇತ್ರಗಳ ಗಣ್ಯರು, ಚುನಾಯಿತ ಪ್ರತಿನಿಧಿಗಳು, ಪ್ರಮುಖ ನಾಗರಿಕರು ಹಾಗೂ ಸಾರ್ವಜನಿಕ ಹುದ್ದೆ ಹೊಂದಿರುವವರ ಹೆಸರುಗಳನ್ನು ದಾಖಲೆಗಳ ಪರಿಶೀಲನೆಯ ಬಳಿಕ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಆಯೋಗ ತಿಳಿಸಿದೆ. ಇವರಿಗೆ ಪ್ರತ್ಯೇಕ ವಿಚಾರಣಾ ನೋಟಿಸ್ ನೀಡುವ ಬದಲು AEROಗಳು ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.
ಗಣ್ಯರಿಗೆ ನೀಡಿರುವ ಈ ‘ಆದ್ಯತೆಯ’ ಸೌಲಭ್ಯವನ್ನು ಆಕ್ಷೇಪಿಸಿರುವ ಆ್ಯಂಟಿ-SIR ವೇದಿಕೆ, ವ್ಯತ್ಯಾಸ ಕಂಡುಬಂದಿರುವ ಸಾಮಾನ್ಯ ಮತದಾರರಿಗೆ ವಿಚಾರಣೆಗೆ ಹಾಜರಾಗಲು ಕಡಿಮೆ ಸಮಯ ನೀಡಲಾಗುತ್ತಿದೆ ಎಂದು ಆರೋಪಿಸಿದೆ. ದಾಖಲೆಗಳ ಬೇಡಿಕೆ ಬಡವರು ಮತ್ತು ಅಂಚಿನಲ್ಲಿರುವ ಜನರ ಮೇಲೆ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ ಎಂದೂ ವೇದಿಕೆ ಹೇಳಿದೆ. ನೋಟಿಸ್ ವಿತರಣೆ ವಿಳಂಬವಾಗುತ್ತಿರುವುದನ್ನೂ ಅದು ಪ್ರಶ್ನಿಸಿದೆ.
ಇದನ್ನೂ ಓದಿ: ಸೇವಾ ಅವಧಿಯಲ್ಲಾದ ದೈಹಿಕ ಸಮಸ್ಯೆಯು ‘ಸೇವಾ ಸಂಬಂಧಿ’ ಎಂದೇ ಪರಿಗಣಿತ: ಸುಪ್ರೀಂ ಕೋರ್ಟ್
ಗ್ರಾಮೀಣ ಪ್ರದೇಶಗಳಲ್ಲಿ BLOಗಳು ಮತದಾರರನ್ನು ವೈಯಕ್ತಿಕವಾಗಿ ಪರಿಚಯ ಹೊಂದಿರುವುದರಿಂದ ಪ್ರಕ್ರಿಯೆ ಸುಗಮವಾಗಿದೆ. ನಗರ ಪ್ರದೇಶಗಳಲ್ಲಿ BLOಗಳಿಗೆ ಎಲ್ಲ ಮತದಾರರ ಪರಿಚಯವಿಲ್ಲದ ಕಾರಣ ದಾಖಲೆಗಳನ್ನು ಕೇಳಲಾಗುತ್ತಿದೆ. BLOಗಳ ಪ್ರತಿಕ್ರಿಯೆ ಆಧರಿಸಿ EROಗಳು ಅನುಮೋದನೆ ನೀಡುತ್ತಿದ್ದಾರೆ ಎಂದು ಜಾಗೃತ ಕರ್ನಾಟಕದ ಮುತ್ತುರಾಜ್ ಮಾಹಿತಿ ನೀಡಿದ್ದಾರೆ.
ಜನನ ಪ್ರಮಾಣಪತ್ರ ಅಥವಾ ಎಸ್‌ಎಸ್‌ಎಲ್‌ಸಿ ಪ್ರಮಾಣಪತ್ರ ಇಲ್ಲದಿದ್ದರೆ, 7ನೇ ತರಗತಿಯ ವರ್ಗಾವಣೆ ಪ್ರಮಾಣಪತ್ರ, ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನೂ ಕೆಲವು ಕಡೆಗಳಲ್ಲಿ ಸ್ವೀಕರಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ವಿಚಾರಣೆಗಳು ಪೂರ್ಣಗೊಂಡ ಬಳಿಕ ಹೊಸದಾಗಿ ಹೆಸರು ಸೇರ್ಪಡೆ, ತಿದ್ದುಪಡಿ ಅರ್ಜಿಗಳ ಪರಿಶೀಲನೆ, ಬಾಕಿ ವಿಚಾರಣೆಗಳು ಹಾಗೂ ಮನೆ ಭೇಟಿಗಳನ್ನು ಪೂರ್ಣಗೊಳಿಸುವ ಕಾರ್ಯ ನಡೆಯಲಿದೆ. ನಂತರ ಅ.27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಆಯೋಗ ಸಿದ್ಧತೆ ನಡೆಸಲಿದೆ.




