ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ ಗಾಯ

Date:

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ ಚಟಾಕಿಯ ಮೋಜಿನ ಮಾತಲ್ಲ. ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಸುವ, ಸಮಾಜದಿಂದ ದೂರ ಉಳಿದು ಐಸೊಲೇಟ್‌ ಆಗಿಬಿಡುವ ಅಪಾಯ ತಂದೊಡ್ಡಿ ಮಾನಸಿಕ ಆರೋಗ್ಯವನ್ನು ಇನ್ನಿಲ್ಲದಂತೆ ಹದಗೆಡಿಸುತ್ತದೆ.

ನೀನು ತುಂಬಾ ಕಪ್ಪಗೆ ಕಾಣುತ್ತಿದ್ದಿ, ಇಷ್ಟು ದಪ್ಪವಾಗಿದ್ದೀಯೇಕೆ?, ಮುಖದಲ್ಲಿ ಯಾಕಿಷ್ಟು ಮೊಡವೆ, ಗುಂಪಿನಲ್ಲಿ ಎಲ್ಲರಿಗಿಂತ ನೀನೆ ಕುಳ್ಳಗಿದ್ದಿ, ಇತ್ತೀಚಿಗೆ ನಿನ್ನ ಕೂದಲು ಬಹಳ ತೆಳ್ಳಗಾಗಿದೆ, ನೀನ್ಯಾಕೆ ಇಷ್ಟು ಸಣ್ಣಗಿದ್ದಿ ಗಾಳಿ ಬಂದರೆ ಹಾರಿ ಹೋಗ್ತೀಯ, ನಿನ್ನ ಹಲ್ಲುಗಳಿಗೆ ಕ್ಲಿಪ್‌ ಹಾಕಿಸಿಕೊ ಚಂದ ಕಾಣಬಹುದು… ಇಂತಹ ಹತ್ತಾರು ಟೀಕೆಗಳನ್ನು ನಿತ್ಯವೂ ನಮ್ಮ ಸುತ್ತಮುತ್ತಲಿನವರ, ಆತ್ಮೀಯರ ಬಾಯಿಂದಲೇ ಕೇಳುತ್ತೇವೆ. ಕೆಲವರು ತಮಾಷೆಯೆಂದು ನಗುತ್ತಲೇ ಹೇಳಿದರೆ, ಇನ್ನೂ ಕೆಲವರು ಕಾಳಜಿ ತುಂಬಿದ ಧ್ವನಿಯಲ್ಲಿ ಹೇಳುತ್ತಾರೆ. ಆದರೆ ಈ ಮಾತುಗಳು ಯಾವ ರೂಪದಲ್ಲಿ, ಧ್ವನಿಯಲ್ಲಿ ಬಂದರೂ ಬಣ್ಣ, ಆಕಾರ, ಗಾತ್ರದ ಸ್ಕೇಲಿನಲ್ಲಿ ಅಳತೆಗೊಳಗಾದ ವ್ಯಕ್ತಿಯ ಮನಸ್ಸಿನೊಳಗೆ ಮಾಗದ ಗಾಯವಾಗಿ ಉಳಿದು ಬಿಡುತ್ತದೆ.

- Advertisement -

ದೇಹದ ಬಣ್ಣ, ರೂಪ, ತೂಕ, ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ ಚಟಾಕಿಯ ಮೋಜಿನ ಮಾತಲ್ಲ. ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗಿಸುವ, ಸಮಾಜದಿಂದ ದೂರ ಉಳಿದು ಐಸೊಲೇಟ್‌ ಆಗಿಬಿಡುವ ಅಪಾಯ ತಂದೊಡ್ಡಿ ಮಾನಸಿಕ ಆರೋಗ್ಯವನ್ನು ಇನ್ನಿಲ್ಲದಂತೆ ಹದಗೆಡಿಸುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ ಪಂಗಡದ ಮೀನುಗಾರ ಸಂಕುಲ, ಕೋಮಾರ ಪಂಥ, ಕೊಂಕಣ ಮರಾಠರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಓಬಿಸಿಗಳ ಬೆಂಬಲ ಕ್ರೋಡೀಕರಿಸುವ ಚಾಕಚಕ್ಯತೆ ಹೊಸ...

ಹಳೇ ಮೈಸೂರು: ಮಹಿಳಾ ರಾಜಕಾರಣಕ್ಕೆ ದಿಕ್ಕು ತೋರಿದ ‘ಗುಂಡ್ಲುಪೇಟೆ...

ಹಳೇ ಮೈಸೂರು ಭಾಗದ ರಾಜಕೀಯ ಇತಿಹಾಸವನ್ನು ಗಮನಿಸಿದಾಗ, ಪುರುಷ ಪ್ರಧಾನ ರಾಜಕಾರಣದ ನಡುವೆ ತನ್ನದೇ ಆದ ಛಾಪು ಮೂಡಿಸಿದ ಮಹಿಳಾ ನಾಯಕಿಯರ ಪೈಕಿ ಕೆ.ಎಸ್. ನಾಗರತ್ನಮ್ಮ ಅವರ ಹೆಸರು ವಿಶಿಷ್ಟವಾಗಿ ಕಾಣಿಸುತ್ತದೆ. ಶಾಸಕಿಯಾಗಿ,...

ಬಡ ಯೆಮನ್ ಇಕ್ಕಳದಲ್ಲಿ ಶ್ರೀಮಂತ ಸೌದಿ: ವಿನಾಕಾರಣ ದಾಳಿ...

ಸುಮ್ಮನೆ ಇರಲಾರದ ಸೌದಿ ಅರೇಬಿಯಾ, ಬಡ ರಾಷ್ಟ್ರಗಳ ಮೇಲೆ ದಬ್ಬಾಳಿಕೆ ಮಾಡಲು ಹೋಗಿ, ಮರ್ಮಕ್ಕೆ ತಾಕುವಂತಹ ಹೊಡೆತ ತಿಂದು ಕೂತಿದೆ. ಈಗ ಸೌದಿ ಅರೇಬಿಯಾದ ನೆರವಿಗೆ ಅಮೆರಿಕಾ, ಇಸ್ರೇಲ್‌, ಪಾಕಿಸ್ತಾನ ಮತ್ತು ಟರ್ಕಿ...

ವಿಶೇಷವಾಗಿ ಯುವಜನರ ಜೀವನದಲ್ಲಿ ದೇಹದ ರೂಪದ ಕುರಿತು ಬರುವ ಟೀಕೆಗಳು ಹೆಚ್ಚು ಪರಿಣಾಮ ಬೀರುತ್ತವೆ. ವ್ಯಕ್ತಿ ತನ್ನ ಗುರುತು, ವ್ಯಕ್ತಿತ್ವ, ಶಿಕ್ಷಣ, ಉದ್ಯೋಗ, ಸ್ನೇಹ ಮತ್ತು ಭವಿಷ್ಯದ ಕುರಿತು ಯೋಚಿಸುವ ವಯಸ್ಸಿನಲ್ಲಿ ತನ್ನ ದೇಹದ ಕುರಿತು ನಿರಂತರ ಟೀಕೆಗಳನ್ನು ಕೇಳುವಾಗ ಸಹಜವಾಗಿಯೇ ಕೀಳರಿಮೆ ಬೆಳೆಸಿಕೊಳ್ಳುತ್ತಾನೆ.

Advertisements

ಇತ್ತೀಚೆಗೆ ನನ್ನ ಗೆಳೆಯನೊಬ್ಬ ತನ್ನ ವೈಯಕ್ತಿಕ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡ “ಶರಣು, ನಾನು ಕಪ್ಪಗಿದ್ದೇನೆ ಮತ್ತು ದಪ್ಪವಾಗಿದ್ದೇನೆ ಎಂಬ ಕಾರಣಕ್ಕೆ ಹಲವರು ನನ್ನನ್ನು ತಮಾಷೆ ಮಾಡುತ್ತಾರೆ. ಕೆಲವರು ಎಲ್ಲರ ಮುಂದೆಯೇ ನನ್ನ ಬಣ್ಣದ ಬಗ್ಗೆ ಮಾತನಾಡುತ್ತಾರೆ. ಇನ್ನೂ ಕೆಲವರು ನನ್ನ ದೇಹದ ತೂಕದ ಕುರಿತು ನಗುತ್ತಾರೆ. ನಾನು ನಗುವಿನಂತೆ ತೋರಿಸಿದರೂ, ಒಳಗೆ ತುಂಬಾ ನೋವಾಗುತ್ತದೆ. ಕೆಲವೊಮ್ಮೆ ನಾನು ಕೂಡ ಇತರರಂತೆ ಕಾಣುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತದೆ,” ಎಂದು ನೊಂದುಕೊಂಡ.

ಈ ಅನುಭವ ಒಬ್ಬ ಗೆಳೆಯನದ್ದಾಗಿರಬಹುದು. ಆದರೆ ಇಂತಹ ನೋವನ್ನು ಅನೇಕ ಯುವಜನರು ತಮ್ಮೊಳಗೆ ಮೌನವಾಗಿ ಹೊತ್ತುಕೊಂಡಿದ್ದಾರೆ. ಕೆಲವರು ಅದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಕೆಲವರು ನಗುವಿನ ಹಿಂದೆ ಮರೆಮಾಡುತ್ತಾರೆ. ಇನ್ನೂ ಕೆಲವರು ತಮ್ಮ ದೇಹವನ್ನೇ ದ್ವೇಷಿಸಲು ಆರಂಭಿಸುತ್ತಾರೆ. ಬಾಡಿ ಶೇಮಿಂಗ್ ಕೇವಲ ಹೊರಗಿನ ನೋಟಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಅದು ಯುವಜನರ ಆತ್ಮಗೌರವ, ದೇಹದ ಕುರಿತು ಇರುವ ಅಭಿಪ್ರಾಯ ಮತ್ತು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

2022ರಲ್ಲಿ Journal of Pediatric Psychologyಯಲ್ಲಿ ಪ್ರಕಟವಾದ Jennifer L. Warnick ಮತ್ತು ಸಹಲೇಖಕರ “Weight Stigma and Mental Health in Youth: A Systematic Review and Meta-Analysis” ಎಂಬ ಸಂಶೋಧನಾ ಅಧ್ಯಯನವು ಮಕ್ಕಳ ಮತ್ತು ಕಿಶೋರರ ಕುರಿತು ನಡೆದ 40 ಸಂಶೋಧನಾ ಲೇಖನಗಳನ್ನು ಪರಿಶೀಲಿಸಿದೆ. ಈ ಅಧ್ಯಯನದಲ್ಲಿ ದೇಹದ ತೂಕದ ಕುರಿತು ಅವಮಾನ ಅನುಭವಿಸುವುದು, ದೇಹದ ಕುರಿತು ಅಸಮಾಧಾನ ಮತ್ತು ಇತರ ಮಾನಸಿಕ ಆರೋಗ್ಯದ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುವುದನ್ನು ಗಮನಿಸಲಾಗಿದೆ. ಆದರೆ ಈ ಸಂಬಂಧವು ಎಲ್ಲರಲ್ಲಿಯೂ ಒಂದೇ ರೀತಿಯ ಪರಿಣಾಮ ಉಂಟಾಗುತ್ತದೆ ಅಥವಾ ಬಾಡಿ ಶೇಮಿಂಗ್ ಒಂದೇ ಕಾರಣದಿಂದ ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ ಎಂಬುದನ್ನು ಸಾಬೀತುಪಡಿಸುವುದಿಲ್ಲ.

ಅದೇ ರೀತಿ, 2022ರಲ್ಲಿ ಸಿನೆಡ್ ಡೇ (Sinead Day) ಮತ್ತು ಸಹಲೇಖಕರು ನಡೆಸಿದ ವ್ಯವಸ್ಥಿತ ಪರಿಶೀಲನಾ ಅಧ್ಯಯನದಲ್ಲಿ (Systematic Review) 79 ಸಂಶೋಧನಾ ಪತ್ರಿಕೆಗಳನ್ನು ಪರಿಶೀಲಿಸಲಾಗಿದೆ. ದೇಹದ ರೂಪದ ಕುರಿತು ಹಾಸ್ಯ ಅಥವಾ ಹಿಂಸಾತ್ಮಕ ಕಿರುಕುಳವನ್ನು ಅನುಭವಿಸುವ ಕಿಶೋರರಲ್ಲಿ ತಮ್ಮ ದೇಹದ ಕುರಿತು ನಕಾರಾತ್ಮಕ ಭಾವನೆಗಳು ಮತ್ತು ಅಸಮರ್ಪಕ ಆಹಾರ ಸೇವನೆಯಂತಹ ಸಮಸ್ಯೆಗಳೊಂದಿಗೆ ಸಂಬಂಧವಿರುವುದನ್ನು ಈ ಅಧ್ಯಯನ ಗುರುತಿಸಿದೆ.

ಈ ಸಂಶೋಧನೆಗಳು ನಮಗೆ ಒಂದು ಪ್ರಮುಖ ಸಂದೇಶ ನೀಡುತ್ತವೆ. “ನಾನು ತಮಾಷೆಗೆ ಹೇಳಿದೆ” ಎಂಬ ಕಾರಣದಿಂದ ಪ್ರತಿಯೊಂದು ಮಾತಿನ ಪರಿಣಾಮವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮಾತನಾಡುವವನಿಗೆ ಅದು ಕೆಲವೇ ಸೆಕೆಂಡುಗಳ ಹಾಸ್ಯವಾಗಿರಬಹುದು. ಆದರೆ ಕೇಳುವವನಿಗೆ ಅದು ಹಲವು ದಿನಗಳು, ತಿಂಗಳುಗಳು ಅಥವಾ ವರ್ಷಗಳವರೆಗೆ ನೆನಪಿನಲ್ಲಿ ಉಳಿಯುವ ಅನುಭವವಾಗಬಹುದು. ಬಾಡಿ ಶೇಮಿಂಗ್ ಭಾರತದಲ್ಲಿಯೂ ಸಾರ್ವಜನಿಕ ಚರ್ಚೆಯ ವಿಷಯವಾಗಿದೆ. ವಿಶೇಷವಾಗಿ ಸಿನೆಮಾ, ದೂರದರ್ಶನ, ಸಾಮಾಜಿಕ ಜಾಲತಾಣಗಳು ಮತ್ತು ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ದೇಹದ ಕುರಿತು ಮಾಡುವ ಕಾಮೆಂಟ್‌ಗಳು ಈ ಸಮಸ್ಯೆಯ ಗಂಭೀರತೆಯನ್ನು ಮನನ ಮಾಡಿಸುತ್ತದೆ.

ಬಾಡಿ ಶೇಮಿಂಗ್ ಕುರಿತು ಭಾರತದಲ್ಲಿ ಚರ್ಚೆ…

ಭಾರತೀಯ ಗಾಯಕಿ ನೇಹಾ ಭಾಸಿನ್ ಅವರು ತಮ್ಮ ದೇಹದ ಕುರಿತು ನಡೆದ ಅವಹೇಳನದ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. 2024ರ ಸಂದರ್ಶನದಲ್ಲಿ ಅವರು ತಮ್ಮ ಯುವಕಾಲದಲ್ಲಿ ಎದುರಿಸಿದ fat-shaming ಮತ್ತು ಅದರ ಮಾನಸಿಕ ಪರಿಣಾಮಗಳ ಕುರಿತು ಮಾತನಾಡಿದರು. ತಮ್ಮ 20ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಅನುಭವವನ್ನೂ ಅವರು ವಿವರಿಸಿದ್ದಾರೆ.

ಈ ಘಟನೆ ದೇಹದ ಕುರಿತು ಮಾಡುವ ಅವಹೇಳನವು ಕೆಲವೊಮ್ಮೆ ವ್ಯಕ್ತಿಯ ಮನಸ್ಸಿನಲ್ಲಿ ಎಷ್ಟು ಆಳವಾದ ನೋವನ್ನು ಉಂಟುಮಾಡಬಹುದು ಎಂಬುದನ್ನು ತೋರಿಸುತ್ತದೆ. ಆದರೆ ಅವರ ವೈಯಕ್ತಿಕ ಅನುಭವವನ್ನು ಎಲ್ಲಾ ಬಾಡಿ ಶೇಮಿಂಗ್ ಪ್ರಕರಣಗಳಿಗೆ ಒಂದೇ ರೀತಿಯ ಪರಿಣಾಮ ಉಂಟಾಗುತ್ತದೆ ಎಂಬ ಸಾಮಾನ್ಯ ನಿಯಮವಾಗಿ ನೋಡಬಾರದು. ಪ್ರತಿಯೊಬ್ಬರ ಮಾನಸಿಕ ಪ್ರತಿಕ್ರಿಯೆ ವಿಭಿನ್ನವಾಗಿರುತ್ತದೆ.

ಆದರೂ ನೇಹಾ ಭಾಸಿನ್ ಅವರ ಅನುಭವವು ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶ ನೀಡುತ್ತದೆ. ಒಬ್ಬ ವ್ಯಕ್ತಿಯ ದೇಹದ ಕುರಿತು ಸಾರ್ವಜನಿಕವಾಗಿ ಮಾತನಾಡುವಾಗ, ಆ ಮಾತು ಅವನ ಅಥವಾ ಅವಳ ಆತ್ಮಗೌರವದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬುದನ್ನು ಯೋಚಿಸಬೇಕು.

ನಟಿ ನೀನಾ ಗುಪ್ತಾ ಅವರೂ ತಮ್ಮ ತೂಕ ಮತ್ತು ದೇಹದ ಕುರಿತು ಬಂದ ಕಾಮೆಂಟ್‌ಗಳ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. 2026ರಲ್ಲಿ ಸೀರೆ ಧರಿಸಿದ ಸಂದರ್ಭದ ನಂತರ ತಮ್ಮ ದೇಹದ ಕುರಿತು ಅನಗತ್ಯ ಟೀಕೆಗಳನ್ನು ಎದುರಿಸಿದ ಅನುಭವವನ್ನು ಅವರು ಹಂಚಿಕೊಂಡರು. ಇಂತಹ ಟೀಕೆಗಳಿಗೆ ಪ್ರತಿಕ್ರಿಯಿಸುವ ಮೂಲಕ ತಮ್ಮ ಆತ್ಮಗೌರವವನ್ನು ಕಾಪಾಡಿಕೊಳ್ಳುವ ಸಂದೇಶವನ್ನು ನೀಡಿದರು.

ನೀನಾ ಗುಪ್ತಾ ಅವರ ಪ್ರತಿಕ್ರಿಯೆಯಲ್ಲಿ ಒಂದು ಮುಖ್ಯ ಅಂಶವಿದೆ. ವ್ಯಕ್ತಿಯ ದೇಹದ ಕುರಿತು ಪ್ರತಿಯೊಬ್ಬರೂ ಅಭಿಪ್ರಾಯ ನೀಡುವ ಹಕ್ಕು ಹೊಂದಿದ್ದಾರೆ ಎಂಬ ಸಾಮಾಜಿಕ ಮನೋಭಾವವನ್ನು ಪ್ರಶ್ನಿಸಬೇಕಾಗಿದೆ. ಒಬ್ಬರ ದೇಹವು ಸಾರ್ವಜನಿಕ ಚರ್ಚೆಯ ವಸ್ತುವಲ್ಲ. ವಯಸ್ಸು, ತೂಕ, ಉಡುಪು ಅಥವಾ ದೈಹಿಕ ರೂಪದ ಕುರಿತು ಪ್ರತಿಯೊಬ್ಬರೂ ಅನಗತ್ಯ ಕಾಮೆಂಟ್ ಮಾಡುವ ಅಗತ್ಯವಿಲ್ಲ.

2026ರ ಮುಂಬೈ ಮ್ಯಾರಥಾನ್ ಸಂದರ್ಭದಲ್ಲಿ ಇರಾ ಖಾನ್ ಅವರು ಭಾಗವಹಿಸಿದ್ದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವರ ರೂಪ ಮತ್ತು ಉಡುಪಿನ ಬಗ್ಗೆ ಟೀಕೆಗಳು ಬಂದವು ಎಂದು ವರದಿಯಾಗಿದೆ. ನಟ ಅಭಿನವ್ ಶುಕ್ಲಾ ಅವರು ಆ ಟೀಕೆಗಳನ್ನು ಖಂಡಿಸಿ ಇರಾ ಖಾನ್ ಅವರನ್ನು ಬೆಂಬಲಿಸಿದರು. ಈ ಘಟನೆ ದೇಹದ ಕುರಿತು ಟೀಕೆಗಳು ಕೇವಲ ಸಾಮಾನ್ಯ ವ್ಯಕ್ತಿಗಳಿಗಷ್ಟೇ ಸೀಮಿತವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಸಾರ್ವಜನಿಕ ಜೀವನದಲ್ಲಿರುವವರಿಗೂ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನುಭವಗಳು ಎದುರಾಗುತ್ತವೆ. ಆದರೆ ಒಬ್ಬ ವ್ಯಕ್ತಿ ಪ್ರಸಿದ್ಧನಾಗಿದ್ದಾನೆ ಎಂಬ ಕಾರಣಕ್ಕೆ ಅವನ ದೇಹದ ಕುರಿತು ಯಾರಿಗಾದರೂ ಅವಮಾನಕಾರಿ ಕಾಮೆಂಟ್ ಮಾಡುವ ಹಕ್ಕು ಇರುವುದಿಲ್ಲ.

ಇನ್ನೊಂದು ಏನೆಂದರೆ, ಇತ್ತೀಚೆಗೆ ನಟಿ ಕತ್ರಿನಾ ಕೈಫ್ ಅವರು ತಾಯ್ತನದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಅವರ ದೇಹದ ರೂಪವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಅವಳು ಆಂಟಿಯಂತೆ ರೂಪಾಂತರಗೊಂಡಿದ್ದಾಳೆ” ಎಂಬ ರೀತಿಯ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಇಂತಹ ಕಾಮೆಂಟ್‌ಗಳು ಕೇವಲ ಹಾಸ್ಯವಲ್ಲ; ಮಹಿಳೆಯರ ದೇಹದ ಸಹಜ ಬದಲಾವಣೆಗಳನ್ನು ಅವಮಾನಿಸುವ ಬಾಡಿ ಶೇಮಿಂಗ್ (Body Shaming)‌ನ ಒಂದು ರೂಪವಾಗಿದೆ.

ತಾಯ್ತನದ ನಂತರ ಮಹಿಳೆಯರ ದೇಹದಲ್ಲಿ ಹಲವು ಸಹಜ ಬದಲಾವಣೆಗಳು ಉಂಟಾಗುತ್ತವೆ. ಆದರೆ ಆ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳುವ ಬದಲು, ಅವರ ಸೌಂದರ್ಯ, ವಯಸ್ಸು ಮತ್ತು ದೇಹದ ಆಕಾರವನ್ನು ಆಧರಿಸಿ ಟೀಕಿಸುವುದು ಸಮಾಜದಲ್ಲಿರುವ ಅಸಹಜ ಸೌಂದರ್ಯ ಮಾನದಂಡಗಳನ್ನು ತೋರಿಸುತ್ತದೆ. ಒಬ್ಬ ಮಹಿಳೆಯ ಮೌಲ್ಯವನ್ನು ಆಕೆಯ ದೇಹದ ರೂಪದಿಂದ ಅಳೆಯಬಾರದು. ತಾಯ್ತನವು ಗೌರವಿಸಬೇಕಾದ ಜೀವನಾನುಭವವಾಗಿದ್ದು, ಅದನ್ನು ದೇಹದ ಟೀಕೆಗಳ ಮೂಲಕ ಅವಮಾನಿಸುವುದು ಮಾನವೀಯತೆಯ ಕೊರತೆಯಾಗಿದೆ.

ಭಾರತೀಯ ಸಮಾಜದಲ್ಲಿ ಮೈಬಣ್ಣದ ಕುರಿತು ಇರುವ ಪೂರ್ವಗ್ರಹಗಳು ಇನ್ನೂ ಸಂಪೂರ್ಣವಾಗಿ ದೂರವಾಗಿಲ್ಲ. ಕಪ್ಪು ಬಣ್ಣವನ್ನು ಕಡಿಮೆ ಸೌಂದರ್ಯಕ್ಕೆ ಸಂಬಂಧಿಸುವುದು, ಬಿಳಿ ಬಣ್ಣವನ್ನು ಹೆಚ್ಚು ಸುಂದರವೆಂದುಕೊಳ್ಳುವುದು ಮತ್ತು ಮದುವೆ, ಉದ್ಯೋಗ, ಸಂಬಂಧ ಅಥವಾ ಸಾಮಾಜಿಕ ಗೌರವದ ವಿಚಾರಗಳಲ್ಲಿ ಮೈಬಣ್ಣಕ್ಕೆ ಅನಗತ್ಯ ಮಹತ್ವ ನೀಡುವುದು ಸಾಮಾಜಿಕವಾಗಿ ಬೆಳೆದ ತಪ್ಪು ಕಲ್ಪನೆಗಳಾಗಿವೆ.

“ಕಪ್ಪಗಿದ್ದೀಯ”, “ಬಿಳಿಯಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು”, “ನಿನ್ನ ಮುಖದ ಬಣ್ಣ ಬದಲಾಗಿದೆ”-ಇಂತಹ ಮಾತುಗಳು ಸಾಮಾನ್ಯವೆನಿಸಬಹುದು. ಆದರೆ ನಿರಂತರವಾಗಿ ಇಂತಹ ಮಾತುಗಳನ್ನು ಕೇಳುವ ಯುವಜನರು ತಮ್ಮ ದೇಹದ ಬಣ್ಣದ ಕುರಿತು ಅಸಮಾಧಾನ ಹೊಂದಬಹುದು.

ನಮ್ಮ ಸಮಾಜದಲ್ಲಿ ಸೌಂದರ್ಯದ ಮಾನದಂಡಗಳನ್ನು ಬದಲಾಯಿಸುವ ಅಗತ್ಯವಿದೆ. ಕಪ್ಪು ಬಣ್ಣದ ವ್ಯಕ್ತಿಯೂ ಸುಂದರನಾಗಿರಬಹುದು. ಬಿಳಿ ಬಣ್ಣದ ವ್ಯಕ್ತಿಯೂ ಸುಂದರನಾಗಿರಬಹುದು. ಆದರೆ ಅದಕ್ಕಿಂತ ಮುಖ್ಯವಾಗಿ, ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬಣ್ಣವನ್ನು ಮೀರಿ ಗೌರವದಿಂದ ಬದುಕುವ ಹಕ್ಕು ಹೊಂದಿದ್ದಾನೆ.

ದಪ್ಪ ದೇಹವನ್ನು ಸೋಮಾರಿತನಕ್ಕೆ, ಅಸಮರ್ಥತೆಗೆ ಅಥವಾ ಆರೋಗ್ಯದ ಕೊರತೆಗೆ ಸಂಬಂಧಿಸುವುದು ಸರಿಯಲ್ಲ. ವ್ಯಕ್ತಿಯ ದೇಹದ ತೂಕವನ್ನು ನೋಡಿದ ತಕ್ಷಣ ಅವನ ಜೀವನಶೈಲಿ, ಆಹಾರ ಪದ್ಧತಿ ಅಥವಾ ಆರೋಗ್ಯದ ಕುರಿತು ತೀರ್ಪು ನೀಡಲು ಸಾಧ್ಯವಿಲ್ಲ. ಪ್ರತಿಯೊಬ್ಬರ ದೇಹವೂ ವಿಭಿನ್ನವಾಗಿರುತ್ತದೆ. ಮೈಬಣ್ಣ, ದೇಹದ ಆಕಾರ, ಎತ್ತರ ಮತ್ತು ತೂಕದ ಹಿಂದೆ ಅನುವಂಶಿಕತೆ, ಆರೋಗ್ಯ, ಜೀವನಶೈಲಿ, ಪರಿಸರ ಮತ್ತು ಹಲವು ಕಾರಣಗಳಿರುತ್ತವೆ. ಆದ್ದರಿಂದ ಒಬ್ಬರ ದೇಹವನ್ನು ಮತ್ತೊಬ್ಬರೊಂದಿಗೆ ಹೋಲಿಸುವುದು ತಪ್ಪು.

“ನೀನು ಏಕೆ ಇಷ್ಟು ದಪ್ಪವಾಗಿದ್ದೀಯ?”, “ಸ್ವಲ್ಪ ಸಣ್ಣಗಾಗು”, “ನಿನ್ನ ದೇಹ ನೋಡಿದರೆ ಆರೋಗ್ಯ ಸರಿಯಿಲ್ಲ ಅನಿಸುತ್ತದೆ” ಇಂತಹ ಮಾತುಗಳನ್ನು ಕಾಳಜಿಯ ಹೆಸರಿನಲ್ಲಿ ಹೇಳುವವರೂ ಇದ್ದಾರೆ. ಆದರೆ ನಿಜವಾದ ಕಾಳಜಿ ಎಂದರೆ ವ್ಯಕ್ತಿಯನ್ನು ಅವಮಾನಿಸುವುದಲ್ಲ, ಸೂಕ್ತ ವೈದ್ಯಕೀಯ ಸಲಹೆ ಪಡೆಯಲು ಪ್ರೋತ್ಸಾಹಿಸುವುದು.

ಆರೋಗ್ಯದ ಕುರಿತು ಮಾತನಾಡುವುದು ಮತ್ತು ದೇಹದ ಕುರಿತು ಅವಮಾನಿಸುವುದು ಎರಡೂ ಒಂದೇ ವಿಷಯವಲ್ಲ. ಆರೋಗ್ಯದ ಬಗ್ಗೆ ಕಾಳಜಿ ಇರಬಹುದು. ಆದರೆ ಕಾಳಜಿಯ ಹೆಸರಿನಲ್ಲಿ ವ್ಯಕ್ತಿಯ ಆತ್ಮಗೌರವಕ್ಕೆ ಧಕ್ಕೆ ತರುವ ಮಾತುಗಳನ್ನು ಬಳಸಬಾರದು. ಇಂದಿನ ಡಿಜಿಟಲ್ ಯುಗದಲ್ಲಿ ಬಾಡಿ ಶೇಮಿಂಗ್ ಮತ್ತಷ್ಟು ವೇಗವಾಗಿ ಹರಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಚಿತ್ರಗಳು, ವಿಡಿಯೊಗಳು ಮತ್ತು ಸೌಂದರ್ಯದ ಮಾನದಂಡಗಳು ಯುವಜನರ ಮೇಲೆ ದೊಡ್ಡ ಪರಿಣಾಮ ಬೀರುತ್ತವೆ. ಫಿಲ್ಟರ್‌ಗಳು, ಎಡಿಟಿಂಗ್, ಕೃತಕ ಬೆಳಕು ಮತ್ತು ಆಯ್ದ ಚಿತ್ರಗಳ ಮೂಲಕ ಜನರು ತಮ್ಮನ್ನು ತಾವು ಪ್ರದರ್ಶಿಸುತ್ತಾರೆ. ಆದರೆ ಅವುಗಳನ್ನು ನಿಜ ಜೀವನದ ರೂಪವೆಂದುಕೊಳ್ಳುವವರು ತಮ್ಮ ದೇಹದ ಕುರಿತು ಅಸಮಾಧಾನಗೊಳ್ಳಬಹುದು.

2023ರಲ್ಲಿ ಪ್ರಕಟವಾದ ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ದೇಹದ ಕುರಿತ ಸ್ವಪ್ರತಿಮೆಯ (Body Image) ಕುರಿತು ನಡೆದ ವ್ಯವಸ್ಥಿತ ಪರಿಶೀಲನಾ ಅಧ್ಯಯನದಲ್ಲಿ (Systematic Review) 21 ಸಂಶೋಧನಾ ಅಧ್ಯಯನಗಳನ್ನು ಪರಿಶೀಲಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಬಳಕೆ ಮತ್ತು ದೇಹದ ಕುರಿತು ಅಸಮಾಧಾನ, ಕಡಿಮೆ ಆತ್ಮಗೌರವದಂತಹ ಮಾನಸಿಕ ಅಂಶಗಳ ನಡುವೆ ಸಂಬಂಧವಿರುವುದನ್ನು ಈ ಅಧ್ಯಯನ ಗುರುತಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಕಾಮೆಂಟ್‌ಗಳು ಕೆಲವೊಮ್ಮೆ ಇನ್ನಷ್ಟು ನೋವು ಉಂಟುಮಾಡುತ್ತವೆ. ಒಬ್ಬರ ಫೋಟೋಗೆ ಅವರ ಬಣ್ಣ, ದೇಹ ಅಥವಾ ಮುಖದ ಕುರಿತು ಅವಹೇಳನಕಾರಿ ಕಾಮೆಂಟ್ ಮಾಡುವುದು ಕೇವಲ ಆನ್‌ಲೈನ್ ತಮಾಷೆಯಲ್ಲ. ಅದರ ಹಿಂದೆ ಒಬ್ಬ ವ್ಯಕ್ತಿಯ ನಿಜವಾದ ಭಾವನೆಗಳಿರುತ್ತವೆ. ಒಬ್ಬ ಯುವತಿ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಾಗ, ಅವಳ ದೇಹದ ತೂಕದ ಕುರಿತು ಹಾಸ್ಯ ಮಾಡುವುದು, ಒಬ್ಬ ಯುವಕ ತನ್ನ ಹೊಸ ಚಿತ್ರವನ್ನು ಹಂಚಿಕೊಂಡಾಗ ಅವನ ಕೂದಲು ಅಥವಾ ಎತ್ತರದ ಕುರಿತು ಕಾಮೆಂಟ್ ಮಾಡುವುದು-ಇವೆಲ್ಲವೂ ಬಾಡಿ ಶೇಮಿಂಗ್‌ನ ರೂಪಗಳಾಗಬಹುದು.

ಆದರೆ ಸಾಮಾಜಿಕ ಜಾಲತಾಣಗಳು ಸಮಸ್ಯೆಯ ಭಾಗವಾಗಿರುವಂತೆಯೇ ಪರಿಹಾರದ ಭಾಗವೂ ಆಗಬಹುದು. ದೇಹದ ವೈವಿಧ್ಯತೆಯನ್ನು ಗೌರವಿಸುವ ಸಂದೇಶಗಳು, ಆತ್ಮಗೌರವದ ಕುರಿತು ಜಾಗೃತಿ ಮತ್ತು ಮಾನಸಿಕ ಆರೋಗ್ಯದ ಕುರಿತು ಮುಕ್ತ ಚರ್ಚೆಗಳು ಯುವಜನರಿಗೆ ಬೆಂಬಲ ನೀಡಬಹುದು.

ಸದೃಢ ಮಾನಸಿಕತೆ ಎಂದರೇನು?

ಸದೃಢ ಮಾನಸಿಕತೆ ಎಂದರೆ ಸಮಸ್ಯೆಗಳೇ ಬಾರದ ಸ್ಥಿತಿ ಅಲ್ಲ. ಸಮಸ್ಯೆಗಳು ಬಂದಾಗಲೂ ತನ್ನನ್ನು ತಾನು ಅರ್ಥಮಾಡಿಕೊಳ್ಳುವುದು, ಭಾವನೆಗಳನ್ನು ಒಪ್ಪಿಕೊಳ್ಳುವುದು, ಅಗತ್ಯವಿದ್ದಾಗ ಸಹಾಯ ಕೇಳುವುದು ಮತ್ತು ತನ್ನ ಮೌಲ್ಯವನ್ನು ಹೊರಗಿನ ಟೀಕೆಗಳಿಂದ ನಿರ್ಧರಿಸದಿರುವ ಸಾಮರ್ಥ್ಯ. ಬಾಡಿ ಶೇಮಿಂಗ್ ಎದುರಿಸುವ ಯುವಜನರಿಗೆ ಸದೃಢ ಮಾನಸಿಕತೆ ಅತ್ಯಂತ ಮುಖ್ಯ. ಸದೃಢ ಮನಸ್ಸು ಎಂದರೆ ಯಾರಾದರೂ ಟೀಕೆ ಮಾಡಿದಾಗ ನೋವಾಗಬಾರದು ಎಂಬುದಲ್ಲ. ನೋವಾದರೂ ಆ ಮಾತುಗಳನ್ನು ತನ್ನ ಸಂಪೂರ್ಣ ವ್ಯಕ್ತಿತ್ವದ ಸತ್ಯವೆಂದು ಒಪ್ಪಿಕೊಳ್ಳಬಾರದು ಎಂಬುದು.

ಯಾರಾದರೂ “ನೀನು ಕಪ್ಪಗಿದ್ದೀಯ” ಎಂದರೆ, ಅದರಿಂದ ಆ ವ್ಯಕ್ತಿಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ. ಯಾರಾದರೂ “ನೀನು ದಪ್ಪವಾಗಿದ್ದೀಯ” ಎಂದರೆ, ಅದರಿಂದ ಅವರ ವ್ಯಕ್ತಿತ್ವದ ಮೌಲ್ಯ ಕುಗ್ಗುವುದಿಲ್ಲ. ದೇಹದ ಬಣ್ಣ ಅಥವಾ ತೂಕವು ವ್ಯಕ್ತಿಯ ಜ್ಞಾನ, ಪ್ರತಿಭೆ, ಮಾನವೀಯತೆ ಮತ್ತು ಕನಸುಗಳ ಅಳತೆಯಲ್ಲ. ನಮ್ಮ ದೇಹವು ಕೇವಲ ಇತರರು ನೋಡುವ ವಸ್ತುವಲ್ಲ. ಅದು ನಮ್ಮ ಜೀವನವನ್ನು ಸಾಗಿಸುವ ಸಾಧನ. ಓದಲು, ಕೆಲಸ ಮಾಡಲು, ನಡೆಯಲು, ಮಾತನಾಡಲು, ಪ್ರೀತಿಸಲು, ಕನಸು ಕಾಣಲು ಮತ್ತು ಸಮಾಜದಲ್ಲಿ ಬದುಕಲು ದೇಹ ನಮಗೆ ನೆರವಾಗುತ್ತದೆ.

ದೇಹವನ್ನು ಕೇವಲ ಸೌಂದರ್ಯದ ಮಾನದಂಡಗಳಿಂದ ಅಳೆಯುವುದು ಸರಿಯಲ್ಲ. ಆರೋಗ್ಯ, ಚೈತನ್ಯ, ಸಾಮರ್ಥ್ಯ, ಚಲನೆ ಮತ್ತು ಆರೈಕೆ ಕೂಡ ದೇಹದ ಮಹತ್ವದ ಭಾಗಗಳಾಗಿವೆ.

ಬಾಡಿ ಶೇಮಿಂಗ್ ಎದುರಿಸುವಾಗ ಯುವಜನರು ಏನು ಮಾಡಬೇಕು?

ಬಾಡಿ ಶೇಮಿಂಗ್ ಎದುರಿಸುವಾಗ ಮೊದಲನೆಯದಾಗಿ, ಆ ಮಾತು ನಿಮ್ಮ ನಿಜವಾದ ಮೌಲ್ಯವನ್ನು ನಿರ್ಧರಿಸುವುದಿಲ್ಲ ಎಂಬುದನ್ನು ನೆನಪಿಸಿಕೊಳ್ಳಬೇಕು. ಯಾರಾದರೂ ಮಾಡಿದ ಟೀಕೆ ಅವರ ಮನಸ್ಥಿತಿಯನ್ನು ತೋರಿಸಬಹುದು; ಅದು ನಿಮ್ಮ ಸಾಮರ್ಥ್ಯದ ಅಳತೆಯಲ್ಲ. ಅಗತ್ಯವಿದ್ದರೆ ಸ್ಪಷ್ಟವಾಗಿ ಪ್ರತಿಕ್ರಿಯಿಸಬಹುದು. “ನನ್ನ ದೇಹದ ಕುರಿತು ಇಂತಹ ಕಾಮೆಂಟ್ ಮಾಡಬೇಡಿ.” “ನನ್ನ ಬಣ್ಣ ಅಥವಾ ತೂಕದ ಕುರಿತು ಮಾತನಾಡುವುದು ನನಗೆ ನೋವು ಉಂಟುಮಾಡುತ್ತದೆ.” “ನನ್ನ ರೂಪಕ್ಕಿಂತ ನನ್ನ ಕೆಲಸ ಮತ್ತು ವ್ಯಕ್ತಿತ್ವವನ್ನು ಗಮನಿಸಿ.” ಇಂತಹ ಮಾತುಗಳ ಮೂಲಕ ಗಡಿ ನಿಗದಿಪಡಿಸುವುದು ಅಹಂಕಾರವಲ್ಲ. ಅದು ಆತ್ಮಗೌರವದ ಭಾಗ.

ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅವಮಾನಿಸುವ ಖಾತೆಗಳನ್ನು ಬ್ಲಾಕ್ ಮಾಡಬಹುದು. ಹಾನಿಕರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸದೆ ದೂರವಿರಬಹುದು. ವಿಶ್ವಾಸಾರ್ಹ ಸ್ನೇಹಿತರು, ಕುಟುಂಬದವರು, ಶಿಕ್ಷಕರು ಅಥವಾ ಕೌನ್ಸೆಲರ್‌ಗಳೊಂದಿಗೆ ಮಾತನಾಡಬಹುದು. ದೇಹದ ಕುರಿತು ಇರುವ ಆತಂಕ ದಿನನಿತ್ಯದ ಜೀವನಕ್ಕೆ ತೊಂದರೆ ನೀಡುತ್ತಿದ್ದರೆ, ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯುವುದು ಸೂಕ್ತ. ಸಹಾಯ ಕೇಳುವುದು ದುರ್ಬಲತೆಯಲ್ಲ. ಅದು ತನ್ನನ್ನು ತಾನು ರಕ್ಷಿಸಿಕೊಳ್ಳುವ ಜವಾಬ್ದಾರಿ.

ಯುವಜನರು ತಮ್ಮ ದೇಹದೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು. ಪ್ರತಿದಿನ ಕನ್ನಡಿಯಲ್ಲಿ ನಿಂತು ದೇಹದ ದೋಷಗಳನ್ನು ಹುಡುಕುವ ಬದಲು, ದೇಹ ನಮಗಾಗಿ ಮಾಡುತ್ತಿರುವ ಕೆಲಸಗಳನ್ನು ಗುರುತಿಸಬೇಕು. ಆರೋಗ್ಯಕರ ಆಹಾರ, ಸಮರ್ಪಕ ನಿದ್ರೆ, ನಿಯಮಿತ ಚಟುವಟಿಕೆ ಮತ್ತು ಅಗತ್ಯವಾದ ವೈದ್ಯಕೀಯ ಆರೈಕೆಗೆ ಗಮನ ಕೊಡಬೇಕು. ತಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ಕಡಿಮೆ ಮಾಡಬೇಕು. ಪ್ರತಿಯೊಬ್ಬರ ದೇಹದ ಬೆಳವಣಿಗೆ, ಜೀವನಶೈಲಿ ಮತ್ತು ಪರಿಸ್ಥಿತಿ ವಿಭಿನ್ನವಾಗಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸುವ ಚಿತ್ರಗಳು ಸಂಪೂರ್ಣ ಸತ್ಯವಲ್ಲ ಎಂಬ ಅರಿವು ಇರಬೇಕು.

ತಮ್ಮ ಪ್ರತಿಭೆ, ಓದು, ಕೌಶಲ್ಯ, ಚಿಂತನೆ, ಸೃಜನಶೀಲತೆ ಮತ್ತು ಮಾನವೀಯ ಗುಣಗಳಿಗೆ ಮಹತ್ವ ನೀಡಬೇಕು. ಒಬ್ಬ ವ್ಯಕ್ತಿಯ ಸೌಂದರ್ಯವು ಮುಖದಲ್ಲಿ ಮಾತ್ರ ಇರುವುದಿಲ್ಲ. ಅವನ ಮಾತಿನಲ್ಲಿ, ವರ್ತನೆಯಲ್ಲಿ, ಜವಾಬ್ದಾರಿಯಲ್ಲಿ, ಸಹಾನುಭೂತಿಯಲ್ಲಿ ಮತ್ತು ಸಮಾಜದೊಂದಿಗೆ ಹೊಂದಿರುವ ಸಂಬಂಧದಲ್ಲಿಯೂ ಇರುತ್ತದೆ.

ಶಿಕ್ಷಕರು, ಸ್ನೇಹಿತರು ಮತ್ತು ಕುಟುಂಬದ ಜವಾಬ್ದಾರಿ

ಬಾಡಿ ಶೇಮಿಂಗ್ ಅನ್ನು ತಡೆಯುವ ಜವಾಬ್ದಾರಿ ಕೇವಲ ಯುವಜನರದ್ದಲ್ಲ. ಶಿಕ್ಷಕರು, ಸ್ನೇಹಿತರು, ಕುಟುಂಬದವರು ಮತ್ತು ಸಮಾಜದ ಪ್ರತಿಯೊಬ್ಬರಿಗೂ ಇದರಲ್ಲಿ ಪಾತ್ರವಿದೆ. ಶಿಕ್ಷಕರಾಗಿ ವಿದ್ಯಾರ್ಥಿಗಳ ಮಾತುಗಳನ್ನು ಕೇಳುವುದು ಕೇವಲ ಪಾಠ ಬೋಧನೆಯ ಭಾಗವಲ್ಲ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದೂ ಶಿಕ್ಷಣದ ಒಂದು ಮುಖ್ಯ ಜವಾಬ್ದಾರಿ.

ಸ್ನೇಹಿತರು ಒಬ್ಬರ ದೇಹದ ಕುರಿತು ಹಾಸ್ಯ ಮಾಡುವ ಬದಲು ಅವರ ಪ್ರತಿಭೆ, ಪರಿಶ್ರಮ ಮತ್ತು ವ್ಯಕ್ತಿತ್ವವನ್ನು ಗುರುತಿಸಬೇಕು. ಕುಟುಂಬದವರು ಮಕ್ಕಳನ್ನು ಇತರರೊಂದಿಗೆ ಹೋಲಿಸಬಾರದು. “ಅವನು ಎಷ್ಟು ಸುಂದರವಾಗಿದ್ದಾನೆ”, “ಅವಳು ಎಷ್ಟು ಸಣ್ಣಗಿದ್ದಾಳೆ”, “ನೀನು ಏಕೆ ಹೀಗಿದ್ದೀಯ?” ಎಂಬ ಹೋಲಿಕೆಗಳು ಮಕ್ಕಳ ಆತ್ಮವಿಶ್ವಾಸವನ್ನು ಕುಗ್ಗಿಸಬಹುದು.

ಶಾಲೆ, ಕಾಲೇಜು ಮತ್ತು ಕೆಲಸದ ಸ್ಥಳಗಳಲ್ಲಿ ಬಾಡಿ ಶೇಮಿಂಗ್ ವಿರುದ್ಧ ಜಾಗೃತಿ ಮೂಡಿಸಬೇಕು. ದೈಹಿಕ ರೂಪದ ಆಧಾರದ ಮೇಲೆ ಯಾರನ್ನೂ ಅವಮಾನಿಸದ ವಾತಾವರಣ ನಿರ್ಮಿಸಬೇಕು. ಪ್ರತಿಯೊಬ್ಬರಿಗೂ ಗೌರವದಿಂದ ಬದುಕುವ ಹಕ್ಕಿದೆ.

ದೇಹದ ವೈವಿಧ್ಯತೆಯನ್ನು ಗೌರವಿಸುವ ಸಮಾಜ ಬೇಕು

ನಮ್ಮ ಸಮಾಜದಲ್ಲಿ ಪ್ರತಿಯೊಬ್ಬರ ದೇಹವೂ ಒಂದೇ ರೀತಿಯಾಗಿರಬೇಕು ಎಂಬ ತಪ್ಪು ಕಲ್ಪನೆ ಇದೆ. ಎಲ್ಲರೂ ಒಂದೇ ಬಣ್ಣ ಹೊಂದಿರಬೇಕು, ಒಂದೇ ತೂಕ ಹೊಂದಿರಬೇಕು, ಒಂದೇ ಎತ್ತರ ಹೊಂದಿರಬೇಕು, ಒಂದೇ ರೀತಿಯ ಮುಖ ಹೊಂದಿರಬೇಕು ಎಂಬ ನಿರೀಕ್ಷೆ ಮಾನವ ವೈವಿಧ್ಯತೆಯನ್ನು ನಿರಾಕರಿಸುತ್ತದೆ.

ಬಾಹ್ಯ ಸೌಂದರ್ಯವನ್ನು ಆಧರಿಸಿ ಒಬ್ಬರ ಜೀವನದ ಮೌಲ್ಯವನ್ನು ನಿರ್ಧರಿಸಲು ಸಾಧ್ಯವಿಲ್ಲ. ವ್ಯಕ್ತಿಯ ದೇಹದ ರೂಪ ಬದಲಾಗಬಹುದು. ಆದರೆ ಅವನ ಜ್ಞಾನ, ಮಾನವೀಯತೆ, ಪ್ರತಿಭೆ ಮತ್ತು ಸಮಾಜದೊಂದಿಗೆ ಹೊಂದಿರುವ ಸಂಬಂಧಗಳು ಅವನ ಬದುಕಿನ ಮುಖ್ಯ ಭಾಗಗಳಾಗಿವೆ. ಯುವಜನರು ತಮ್ಮ ದೇಹವನ್ನು ಪ್ರೀತಿಸಲು ಕಲಿಯಬೇಕು. ದೇಹದಲ್ಲಿ ಬದಲಾವಣೆಗಳಿದ್ದರೂ, ಅದು ಅವರ ಮೌಲ್ಯವನ್ನು ಕಡಿಮೆ ಮಾಡುವುದಿಲ್ಲ.

ನನ್ನ ಗೆಳೆಯ ಹಂಚಿಕೊಂಡ ಅನುಭವವು ಒಂದು ಮುಖ್ಯವಾದ ಪ್ರಶ್ನೆಯನ್ನು ನಮ್ಮ ಮುಂದೆ ಇಡುತ್ತದೆ. ಒಬ್ಬ ವ್ಯಕ್ತಿಯ ಬಣ್ಣ ಅಥವಾ ದೇಹದ ತೂಕವನ್ನು ಆಧರಿಸಿ ನಾವು ಅವನನ್ನು ಏಕೆ ಅಳೆಯಬೇಕು? ಅವನು ಕಪ್ಪಗಿದ್ದಾನೆ ಎಂಬ ಕಾರಣಕ್ಕೆ ಅವನ ಕನಸುಗಳ ಬಣ್ಣ ಮಾಸದು. ಅವನ ದೇಹದ ರೂಪವು ಅವನ ಜೀವನದ ಸಂಪೂರ್ಣ ಕಥೆಯಲ್ಲ.

ಬಾಡಿ ಶೇಮಿಂಗ್ ತಮಾಷೆಯಲ್ಲ. ಅದು ವ್ಯಕ್ತಿಯ ಆತ್ಮಗೌರವವನ್ನು ಗಾಯಗೊಳಿಸಬಹುದಾದ ಸಾಮಾಜಿಕ ಸಮಸ್ಯೆ. ದೇಹದ ರೂಪದ ಕುರಿತು ಮಾಡುವ ಒಂದು ವ್ಯಂಗ್ಯ ಮತ್ತೊಬ್ಬರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯಬಹುದು. ಆದ್ದರಿಂದ ಮಾತನಾಡುವ ಮೊದಲು ಯೋಚಿಸುವುದು, ಹಾಸ್ಯದ ಹೆಸರಲ್ಲಿ ಮನ ನೋಯಿಸದಂತೆ ಸೂಕ್ಷ್ಮತೆ, ಸಹಾನುಭೂತಿ ಬೆಳೆಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ಯುವಜನರು ತಮ್ಮ ದೇಹದೊಂದಿಗೆ ಸ್ನೇಹ ಬೆಳೆಸಿಕೊಳ್ಳಬೇಕು.

ಇತರರೊಂದಿಗೆ ಹೋಲಿಸಿಕೊಳ್ಳುವುದನ್ನು ಬಿಟ್ಟು ತಮ್ಮನ್ನು ತಾವು ಪ್ರೀತಿಸಿಕೊಳ್ಳುವುದನ್ನು ಕಲಿತರೆ, ತಮ್ಮ ಪ್ರತಿಭೆ, ಓದು, ಕೌಶಲ್ಯ, ಚಿಂತನೆ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಮಹತ್ವ ನೀಡಿದರೆ ಕೀಳರಿಮೆ ಕಳೆದು ನೆಮ್ಮದಿಯಿಂದ ಜೀವಿಸಬಹುದು.

ಶರಣು
ಜಿ. ಎಸ್. ಶರಣು
+ posts

ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ, ಕಲಾ ಕಾಲೇಜು ತುಮಕೂರು ವಿವಿ.

ಪೋಸ್ಟ್ ಹಂಚಿಕೊಳ್ಳಿ:

ಜಿ. ಎಸ್. ಶರಣು
ಜಿ. ಎಸ್. ಶರಣು
ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ, ಕಲಾ ಕಾಲೇಜು ತುಮಕೂರು ವಿವಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಎನ್‌ಡಿಎ ರಾಜ್ಯಗಳಲ್ಲಿ ಯುಸಿಸಿ ಜಾರಿಗೆ ಯತ್ನಕ್ಕೆ ಮೈತ್ರಿ ಪಕ್ಷಗಳಲ್ಲಿ ತೀವ್ರ ವಿರೋಧ

​ಮುಂಬರುವ 2029ರ ಲೋಕಸಭಾ ಚುನಾವಣೆಯೊಳಗೆ ದೇಶದ 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ...

ನಡು ಮುರಿದ ಕಾಂಗ್ರೆಸ್ಸನ್ನು ಮತ್ತೆ ಕಟ್ಟಬಲ್ಲರೇ ಹೊಸ ಅಧ್ಯಕ್ಷರು?

ಉತ್ತರ ಕನ್ನಡ ಅಹಿಂದ ಜಿಲ್ಲೆ. ಬುಡಕಟ್ಟು ಹಾಲಕ್ಕಿ ಒಕ್ಕಲಿಗರು, ದೀವರು, ವಿವಿಧ...

ಬಾಗಲಕೋಟೆ | ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿದರ ಸಾಲಕ್ಕೆ ಆಗ್ರಹ

ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಸೇರಿದಂತೆ...

ಜಾಗತಿಕ ತೈಲ ಸಂಕಟ: ಪಾಕ್‌ನಲ್ಲಿ ಇಂಧನ ಅಭಾವ; ಭಾರತಕ್ಕೂ ಎಚ್ಚರಿಕೆ ಗಂಟೆ

ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ವಾತಾವರಣ ಮತ್ತು ಜಾಗತಿಕ ಇಂಧನ ಪೂರೈಕೆಯಲ್ಲಿ...