ಕರಾವಳಿ ಜನರ ಬಹುಕಾಲದ ಕನಸು ಮತ್ತು ಬೇಡಿಕೆಯಾದ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಕುರಿತು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ, ತುಳು ಭಾಷೆಗೆ ಸಂವಿಧಾನಾತ್ಮಕ ಸ್ಥಾನಮಾನ ಕಲ್ಪಿಸುವ ಕುರಿತು ಸರ್ಕಾರ ಘೋಷಿಸುವ ಸಾಧ್ಯತೆ ಇದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ತುಳು ಭಾಷೆಗೆ ರಾಜ್ಯದ ಎರಡನೇ ಭಾಷೆಯ ಸ್ಥಾನಮಾನ ನೀಡಲು ಕಾನೂನಾತ್ಮಕ ಚೌಕಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತುಳು ಕೇವಲ ಕರಾವಳಿಯ ಭಾಷೆಯಷ್ಟೇ ಅಲ್ಲ, ಅದು ಕರ್ನಾಟಕದ ಸಮೃದ್ಧ ಭಾಷಾ ಮತ್ತು ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗ. ‘ಯಾನ್ ಏಪಲಾ ಜನಕ್ಲೆನ ಭಾವನೆಲೆನ ಒಟ್ಟುಗು ಇಪ್ಪುನಿ’ (ನಾನು ಎಂದಿಗೂ ಜನರ ಭಾವನೆಗಳೊಂದಿಗೆ ಇರುತ್ತೇನೆ)” ಎಂದು ತುಳುವಿನಲ್ಲೇ ಆಶ್ವಾಸನೆ ನೀಡಿದ್ದಾರೆ.
ತುಳು ಭಾಷೆಯ ಇತಿಹಾಸ, ಲಿಪಿ, ಸಾಹಿತ್ಯ ಹಾಗೂ ಶಾಸನಗಳ ಕುರಿತು ಡಾ. ಮೋಹನ್ ಆಳ್ವ ನೇತೃತ್ವದ ತಜ್ಞರ ಸಮಿತಿಯು ಸಲ್ಲಿಸಿದ್ದ ವರದಿಯನ್ನು ಸರ್ಕಾರ ಪರಿಶೀಲಿಸಿದೆ. ಇದರ ಜೊತೆಗೆ, ಇತರ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಗಳಿಗೆ ನೀಡಲಾಗಿರುವ ಅಧಿಕೃತ ಸ್ಥಾನಮಾನದ ಮಾದರಿಯನ್ನು ಅಧ್ಯಯನ ಮಾಡಲು ನೇಮಿಸಲಾಗಿದ್ದ ತಂಡವು ಆಂಧ್ರಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಕಾನೂನು ಚೌಕಟ್ಟನ್ನು ಪರಿಶೀಲಿಸಿ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಈ ಎಲ್ಲ ವರದಿಗಳನ್ನು ಆಧರಿಸಿದೆ ತುಳು ಭಾಷೆಗೆ 2ನೇ ಭಾಷಾ ಸ್ಥಾನಮಾನ ನೀಡಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ” ಎಂದು ಅವರು ವಿವರಿಸಿದ್ದಾರೆ.
ಶುಕ್ರವಾರ, ಮಂಗಳೂರಿನಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ತುಳು ಭಾಷೆ ಕುರಿತ ಸರ್ಕಾರ ನಿರ್ಧಾರವನ್ನು ಘೋಷಿಸುವ ನಿರೀಕ್ಷೆ ಇದೆ. ಸರ್ಕಾರದ ಇಚ್ಛಾಶಕ್ತಿ ಮತ್ತು ನಿರ್ಧಾರವನ್ನು ತುಳು ಪರ ಸಂಘಟನೆಗಳು ಮತ್ತು ಜನಪ್ರತಿನಿಧಿಗಳು ಸ್ವಾಗತಿಸಿದ್ದಾರೆ. ದಶಕಗಳ ನಿರಂತರ ಹೋರಾಟಕ್ಕೆ ಕೊನೆಗೂ ತರ್ಕಬದ್ಧ ಫಲ ಸಿಗುವ ಭರವಸೆ ಮೂಡಿದೆ ಎಂದು ಸಂಘಟನೆಗಳು ಹೇಳಿವೆ.



