ಯುಪಿಐ ವಹಿವಾಟುಗಳ ಮೇಲೆ ಕೇಂದ್ರ ಸರ್ಕಾರ ಹೊಸದಾಗಿ ವಿಧಿಸಿರುವ ಶುಲ್ಕದ ವಿರುದ್ಧ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ಮತ್ತು ಆರ್ಥಿಕ ನೀತಿಗಳನ್ನು ಕಟುವಾಗಿ ಟೀಕಿಸಿರುವ ಗಾಂಧಿ, “ಅಮೆರಿಕದ ಒತ್ತಡಕ್ಕೆ ಮಣಿದು ದೇಶದ ಜನರ ಮೇಲೆ ‘ಯುಪಿಐ ತೆರಿಗೆ’ ಹೇರಲಾಗಿದೆ. ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕು” ಎಂದು ಆಗ್ರಹಿಸಿದ್ದಾರೆ.
2,000 ರೂ.ಗಿಂತ ಹೆಚ್ಚಿನ ವ್ಯಾಪಾರಿ ಯುಪಿಐ ವಹಿವಾಟುಗಳ ಮೇಲೆ 0.4%ರಷ್ಟು ಶುಲ್ಕ ವಿಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ತೆರಿಗೆ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ವಿಡಿಯೋ ಹಂಚಿಕೊಂಡಿರುವ ರಾಹುಲ್ ಗಾಧಿ, “ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡುವುದನ್ನು ಪ್ರಧಾನಿ ಮೋದಿ ನಿಲ್ಲಿಸಬೇಕು. ಸ್ವಲ್ಪ ಬೆನ್ನೆಲುಬು ನೆಟ್ಟಗೆ ಇಟ್ಟುಕೊಂಡು ದೇಶದ ಪರವಾಗಿ ನಿಲ್ಲುವುದನ್ನು ಕಲಿಯಬೇಕು” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
Modi ji, roll back the UPI tax. Now. pic.twitter.com/IIt46zMgCG
— Rahul Gandhi (@RahulGandhi) September 16, 2026
ಇಂದಿರಾ ಗಾಂಧಿಯವರ ದೃಢ ನಿಲುವನ್ನು ನೆನಪಿಸಿಕೊಂಡ ರಾಹುಲ್, “ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಒಮ್ಮೆ ನೀವು ಎಡಪಂಥೀಯರೇ ಅಥವಾ ಬಲಪಂಥೀಯರೇ ಎಂದು ಕೇಳಿದಾಗ, ‘ನಾನು ಎಡಕ್ಕೂ ವಾಲುವುದಿಲ್ಲ, ಬಲಕ್ಕೂ ವಾಲುವುದಿಲ್ಲ, ನೇರವಾಗಿ ನಿಲ್ಲುತ್ತೇನೆ’ ಎಂದಿದ್ದರು. ಆದರೆ, ಮೋದಿ ಅವರದ್ದು ಸಂಪೂರ್ಣ ವಿಭಿನ್ನ ಸಿದ್ಧಾಂತ. ಅವರು ಎಡಕ್ಕೂ ಇಲ್ಲ, ಬಲಕ್ಕೂ ಇಲ್ಲ, ಟ್ರಂಪ್ ಮುಂದೆ ನೇರವಾಗಿ ಮಲಗಿಕೊಳ್ಳಲು (ಸಾಷ್ಟಾಂಗ ನಮಸ್ಕಾರ) ನಿರ್ಧರಿಸಿದ್ದಾರೆ” ಎಂದು ಲೇವಡಿ ಮಾಡಿದ್ದಾರೆ.
ಈ ಲೇಖನ ಓದಿದ್ದೀರಾ?: ಮುಸ್ಲಿಯಾರ್ ಹೇಳಿಕೆ ಎಬ್ಬಿಸಿದ ಪ್ರಶ್ನೆ— ಧಾರ್ಮಿಕ ಮೌಲ್ಯಗಳ ನಡುವೆ ಮಹಿಳೆಯ ಸಾರ್ವಜನಿಕ ಬದುಕಿನ ಸ್ಥಾನವೇನು?
“ಅಮೆರಿಕದ ‘ಶೂನ್ಯ ಎಂಡಿಆರ್’ ರದ್ದತಿ ಬೇಡಿಕೆಗೆ ಮಣಿದಿರುವ ಮೋದಿ ಸರ್ಕಾರ, ಭಾರತೀಯರ ಯುಪಿಐ ವಹಿವಾಟಿನ ಮೇಲೆ ತೆರಿಗೆ ಹಾಕಿ ಆ ಹಣವನ್ನು ಅಮೆರಿಕಕ್ಕೆ ಧಾರೆ ಎರೆಯುತ್ತಿದೆ. ಈ ಜನವಿರೋಧಿ ಮತ್ತು ಟ್ರಂಪ್ ಓಲೈಕೆಯ ನಿರ್ಧಾರವನ್ನು ಸರ್ಕಾರ ತಕ್ಷಣವೇ ಹಿಂಪಡೆಯಬೇಕು” ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.



