ಹಲವು ಅತ್ಯಾಚಾರ, ಕೊಲೆ ಪ್ರಕರಣಗಳ ತನಿಖೆ ನಡೆಯುತ್ತಿರುವ ಮತ್ತು ಕೋರ್ಟ್‌ನಲ್ಲಿ ಪ್ರಕರಣ ಎದುರಿಸುತ್ತಿರುವ ವ್ಯಕ್ತಿಗಳು ಆಯೋಜಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ಧರ್ಮಸ್ಥಳಕ್ಕೆ ಭೇಟಿ ನೀಡುವುದು ಸರಿಯಲ್ಲ. ಈ ಪ್ರವಾಸದ ಬಗ್ಗೆ ಮರುಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿ ‘ಕೊಂದವರು ಯಾರು’ ಅಭಿಯಾನದ ಸದಸ್ಯರು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯದ ಧರ್ಮಸ್ಥಳ ಪ್ರದೇಶದಲ್ಲಿ ಕಳೆದ ನಾಲ್ಕೈದು ದಶಕಗಳಿಂದ ನಡೆದ ವ್ಯವಸ್ಥಿತ ಹಿಂಸಾಚಾರ, ಲಿಂಗ ಆಧಾರಿತ ದೌರ್ಜನ್ಯಗಳು ಮತ್ತು ಅಕ್ರಮಗಳಲ್ಲಿ ಸಂತ್ರಸ್ತರಾದವರಿಗೆ ನ್ಯಾಯವನ್ನು ಪಡೆಯುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಮತ್ತು ಜನಪರ ಸಂಘಟನೆಗಳು ಕೊಂದವರು ಯಾರು? (‘Kondavaru Yaru – Who Killed Women in Dharmasthala?’) ಎಂಬ ಅಭಿಯಾನ ನಡೆಸುತ್ತಿದ್ದು, ಇದರ ಭಾಗವಾಗಿ ಪತ್ರ ಬರೆಯುತ್ತಿರುವುದಾಗಿ ತಂಡ ತಿಳಿಸಿದೆ.
ಇದನ್ನು ಓದಿದ್ದೀರಾ? ಹೋರಾಟಕ್ಕೆ ಗೌರವ, ಬೆಂಬಲ: ಸೌಜನ್ಯ ತಾಯಿ ಕುಸುಮಾವತಿಗೆ ಪತ್ರ ಬರೆದ ‘ಕೊಂದವರು ಯಾರು’ ತಂಡ
ಅಭಿಯಾನದ ಪರವಾಗಿ ಮಲ್ಲಿಗೆ, ಜ್ಯೋತಿ ಎ., ದು.ಸರಸ್ವತಿ, ಸಬಿತಾ ಬನ್ನಾಡಿ, ಆಶಾ ರಮೇಶ್, ಗುಲಾಬಿ ಬಿಳಿಮಲೆ, ರೂಪ ಹಾಸನ, ಆರ್. ಸುನಂದಮ್ಮ, ಕೆ.ಎಸ್. ವಿಮಲಾ, ಚಂಪಾವತಿ, ಪದ್ಮರೇಖಾ ಎಸ್., ಆರ್. ಪೂರ್ಣಿಮಾ, ಜೆ. ಚಂದ್ರಕುಮಾರ್, ಎನ್. ಗಾಯತ್ರಿ, ನೇಮಿಚಂದ್ರ, ಕಲ್ಪನಾ ಚಕ್ರವರ್ತಿ, ಸಿ.ಜಿ. ಮಂಜುಳಾ, ಇ. ರತಿ ರಾವ್, ಜಯಲಕ್ಷ್ಮೀ ಪಾಟೀಲ್, ಇಂದಿರಾ ವಿ., ಪ್ರತಿಭಾ ಆರ್., ಗೀತಾ ಮೆನನ್, ಸ್ವರ್ಣಾ ಭಟ್, ನಾ. ದಿವಾಕರ್ ಪತ್ರ ಬರೆದಿದ್ದಾರೆ.
ಕೊಂದವರು ಯಾರು ತಂಡದ ಪತ್ರದಲ್ಲಿ ಏನಿದೆ?
ಧರ್ಮಸ್ಥಳದಲ್ಲಿ ಹಲವು ದಶಕಗಳಿಂದ ತನಿಖೆಯಾಗದ ತೀವ್ರ ಕ್ರೌರ್ಯದ ಪ್ರಕರಣಗಳು, ವೇದವಲ್ಲಿ (1978) ಅವರ ಅತ್ಯಾಚಾರ ಮತ್ತು ಕೊಲೆ, ಶಾಲಾ ವಿದ್ಯಾರ್ಥಿನಿ ಕುಮಾರಿ ಪದ್ಮಲತಾ ಅವರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (1987), ನಾರಾಯಣ ಮತ್ತು ಯಮುನಾ ಅವರ ಕೊಲೆ (2012) ಸೇರಿದಂತೆ ಹಲವು ಪ್ರಕರಣಗಳಲ್ಲಿ ಈವರೆಗೆ ಯಾವುದೇ ಆರೋಪಿಗಳ ಪತ್ತೆಯಾಗಿಲ್ಲ.
17 ವರ್ಷದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯಳನ್ನು 2012ರಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಸದ್ಯ ಸೌಜನ್ಯಳ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿರುವ ಮರುತನಿಖಾ ಅರ್ಜಿಯು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ.
ಅಕ್ರಮವಾಗಿ ನೂರಾರು ಶವಗಳನ್ನು ಹೂತ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಈ ಸಂಬಂಧ ಸ್ವತಂತ್ರ ತನಿಖೆಗಳನ್ನು ಕೋರಿ ಕರ್ನಾಟಕದ ಹೈಕೋರ್ಟ್‌ನಲ್ಲಿ ಪಿಐಎಲ್ ವಿಚಾರಣೆ ಹಂತದಲ್ಲಿದೆ.
ಈ ಪತ್ರವು ಯಾವುದೇ ವ್ಯಕ್ತಿಯನ್ನು ಗುರಿಯಾಗಿಸುವ ಅಥವಾ ಯಾವುದೇ ಸಂಸ್ಥೆಯ ಮೇಲೆ ಪೂರ್ವಾಗ್ರಹ ಪೀಡಿತರಾಗುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ ನ್ಯಾಯ ಮತ್ತು ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಹಾಗೆಯೇ ಉಳಿಸಿಕೊಳ್ಳುವ ಉದ್ದೇಶ ಹೊಂದಿದೆ.
ಈ ಪ್ರದೇಶದಲ್ಲಿ ಮಹಿಳೆಯರು ಮತ್ತು ಮುಗ್ಧ ಯಾತ್ರಿಕರ ಮೇಲಿನ ಅಪರಾಧಗಳು, ಸಕ್ರಿಯ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೊಕದ್ದಮೆಗಳು, ಎಸ್‌ಐಟಿ ತನಿಖೆ ನಡೆಯುತ್ತಿರುವಾಗ ಧರ್ಮಸ್ಥಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೀವು ಭಾಗವಹಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೊಂದವರು ಯಾರು ತಂಡ ವಿನಂತಿಸಿದೆ.




