ಸ್ಥಳೀಯ ಆಡಳಿತವನ್ನು ಅಧಿಕಾರಿಗಳ ಕೈಗೆ ನೀಡಿ, ಆ ಮೂಲಕ ಆಡಳಿತವನ್ನು ಕೇಂದ್ರೀಕೃತಗೊಳಿಸಲು ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ. ಅಧಿಕಾರವು ನಿಜವಾದ ಅರ್ಥದಲ್ಲಿ ಜನರ ಕೈ ಸೇರಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಸಮಯದಲ್ಲಿ ನಡೆಯಬೇಕು ಹಾಗೂ ವ್ಯವಸ್ಥೆಯು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಅಧಿಕಾರವು ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯ ಕೈಯಲ್ಲಿ ಕೇಂದ್ರೀಕೃತವಾಗದೆ, ನೇರವಾಗಿ ಜನರ ಕೈಗೆ ತಲುಪುವ ಪ್ರಕ್ರಿಯೆಯೇ ವಿಕೇಂದ್ರೀಕರಣ. ಸ್ಥಳೀಯ ಆಡಳಿತ ವ್ಯವಸ್ಥೆಯು ಕೇವಲ ರಾತ್ರೋರಾತ್ರಿ ಜಾರಿಗೆ ಬಂದದ್ದಲ್ಲ.
ಇಡೀ ಒಕ್ಕೂಟಕ್ಕೆ ಮಾದರಿಯಾಗುವಂತಹ ವಿಕೇಂದ್ರೀಕರಣ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ರಾಮಕೃಷ್ಣ ಹೆಗಡೆ ಹಾಗೂ ನಜೀರ್ ಸಾಬ್ ಕೊಡುಗೆ ಅಪಾರವಾಗಿದೆ. ತದನಂತರ, ಸಾಕಷ್ಟು ವಿರೋಧಗಳ ನಡುವೆಯೂ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಗೆ ಮೇಲ್ಪಂಕ್ತಿ ಹಾಕಿಕೊಟ್ಟವರು ರಾಜೀವ್ ಗಾಂಧಿಯವರು.
ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನು ಹಣಕಾಸು ದೃಷ್ಟಿಕೋನದಿಂದಲೂ ವಿಶ್ಲೇಷಿಸಬಹುದು. ದೆಹಲಿಯಿಂದ ಬಿಡುಗಡೆಯಾಗುವ ನೂರು ರೂಪಾಯಿ ಅನುದಾನ ಬೆಂಗಳೂರಿಗೆ ಬರುವಷ್ಟರಲ್ಲಿ ಎಂಬತ್ತು ರೂಪಾಯಿಯಾಗುತ್ತದೆ.
ಅಲ್ಲಿಂದ ಮೈಸೂರಿಗೆ ಬರುವಾಗ ಅರವತ್ತು ರೂಪಾಯಿ, ನಂಜನಗೂಡಿಗೆ ತಲುಪುವಾಗ ನಲವತ್ತು ರೂಪಾಯಿ ಹಾಗೂ ಅಂತಿಮವಾಗಿ ಪಂಚಾಯಿತಿಗೆ ತಲುಪುವಾಗ ಕೇವಲ ಇಪ್ಪತ್ತು ರೂಪಾಯಿಯಾಗುತ್ತದೆ.
ಹೀಗೆ ವಿವಿಧ ಹಂತಗಳಲ್ಲಿ ಪೋಲಾಗುವ ಹಣವನ್ನು ತಪ್ಪಿಸಿ, ಆ ನೂರು ರೂಪಾಯಿಯನ್ನು ನೇರವಾಗಿ ಪಂಚಾಯಿತಿಗೆ ಬಿಡುಗಡೆ ಮಾಡುವುದೇ ಸ್ಥಳೀಯ ಸರ್ಕಾರ ವ್ಯವಸ್ಥೆಯ ಆಶಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪಂಚಾಯತ್ ರಾಜ್, ಗ್ರಾಮ ಸ್ವರಾಜ್ಯ ವ್ಯವಸ್ಥೆಯು ತನ್ನ ಮೂಲ ಆಶಯದಿಂದ ದಾರಿ ತಪ್ಪುತ್ತಿದೆ.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಬಗ್ಗೆ ವೇದಿಕೆಗಳ ಮೇಲೆ ದೊಡ್ಡದಾಗಿ ಭಾಷಣ ಮಾಡುವ ನಾಯಕರುಗಳು, ಸರಿಯಾದ ಸಮಯಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕಳೆದ ಆರು-ಏಳು ವರ್ಷಗಳಿಂದ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆದಿಲ್ಲ. ಬದಲಾಗಿ, ಶಾಸಕರು ಮತ್ತು ಸಂಸದರು ತಮ್ಮ ಅಧಿಕಾರವನ್ನು ಕೇಂದ್ರೀಕರಿಸಿಕೊಳ್ಳಲು ‘ಬೂತ್ ಕಮಿಟಿ’ಗಳನ್ನು ರಚಿಸಿಕೊಂಡು, ಆ ಮೂಲಕ ಅಧಿಕಾರ ಚಲಾಯಿಸುತ್ತಿದ್ದಾರೆ.
ಈ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ನಾಯಕರನ್ನು ಕೇವಲ ವ್ಯಾಪಾರದ ಸರಕುಗಳಂತೆ ಬಳಸಿಕೊಳ್ಳಲಾಗುತ್ತಿದೆ. ಸಾಂವಿಧಾನಿಕ ಉಲ್ಲಂಘನೆ ಮತ್ತು ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯ ಸಂವಿಧಾನದ ನಿಯಮಾವಳಿಗಳ ಪ್ರಕಾರ ಯಾವುದೇ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಆರು ತಿಂಗಳಿಗಿಂತ ಹೆಚ್ಚು ಕಾಲ ಮುಂದೂಡುವಂತಿಲ್ಲ. ಆದರೆ, ಈ ನಿಯಮದ ಸ್ಪಷ್ಟ ಉಲ್ಲಂಘನೆ ಆಗುತ್ತಿದ್ದರೂ, ನೆಪಗಳನ್ನು ಹೇಳಿಕೊಂಡು ಚುನಾವಣೆಗಳನ್ನು ಮುಂದೂಡಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಹೈಕೋರ್ಟ್ ಮತ್ತು ರಾಜ್ಯ ಚುನಾವಣಾ ಆಯೋಗವು ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶಿಸಿ, ಚುನಾವಣೆ ನಡೆಸಲು ಸರ್ಕಾರಕ್ಕೆ ಸ್ಪಷ್ಟ ನಿರ್ದೇಶನ ನೀಡಬೇಕಾದ ತುರ್ತು ಅಗತ್ಯವಿದೆ.
ಮೈಸೂರು ಮಹಾರಾಜರ ಆಡಳಿತವು ʼಸ್ಪಂದನಶೀಲ ಆಡಳಿತʼಕ್ಕೆ ಅತ್ಯುತ್ತಮ ಮಾದರಿಯಾಗಿತ್ತು. ಅವರು ಜನರ ತೆರಿಗೆ ಹಣವನ್ನು ಯಾವ ರೀತಿಯ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು ಎಂಬ ಅನಿಸಿಕೆಯನ್ನು ಜನರಿಂದಲೇ ಸಂಗ್ರಹಿಸಿ ಸಮರ್ಪಕವಾಗಿ ಯೋಜನೆಗಳನ್ನು ರೂಪಿಸುತ್ತಿದ್ದರು.
ಇದನ್ನೂ ಓದಿದ್ದೀರಾ? ಅಧಿಕಾರ ವಿಕೇಂದ್ರೀಕರಣದ ಕಗ್ಗೊಲೆ: ಒಕ್ಕೂಟ, ನಾಡ ಆಳಿಕೆಗಳ ಇಬ್ಬಗೆಯ ನೀತಿಗೆ ಹಾದಿ ತಪ್ಪಿದ ಗ್ರಾಮ ಸ್ವರಾಜ್ಯ
ಸಂವಿಧಾನದ 73ನೇ ತಿದ್ದುಪಡಿಯು ಗ್ರಾಮ ಸಭೆಗಳಿಗೆ ಇಂತಹದ್ದೇ ವಿಶೇಷ ಅಧಿಕಾರವನ್ನು ನೀಡಿದೆ. ಆದರೆ ಪ್ರಸ್ತುತ ಶೇ.95ರಷ್ಟು ಗ್ರಾಮ ಸಭೆಗಳು ಕೇವಲ ಅಧಿಕಾರಿಗಳ ಮೂಲಕ ನಡೆಯುತ್ತಿದ್ದು, ಇದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ.
ಸ್ಥಳೀಯ ಆಡಳಿತವನ್ನು ಅಧಿಕಾರಿಗಳ ಕೈಗೆ ನೀಡಿ, ಆ ಮೂಲಕ ಆಡಳಿತವನ್ನು ಕೇಂದ್ರೀಕೃತಗೊಳಿಸಲು ಸರ್ಕಾರಗಳು ಪ್ರೋತ್ಸಾಹ ನೀಡುತ್ತಿರುವುದು ದುರದೃಷ್ಟಕರ. ಅಧಿಕಾರವು ನಿಜವಾದ ಅರ್ಥದಲ್ಲಿ ಜನರ ಕೈ ಸೇರಲು, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಿಗದಿತ ಸಮಯದಲ್ಲಿ ನಡೆಯಬೇಕು ಹಾಗೂ ವ್ಯವಸ್ಥೆಯು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.

ಜಿ ಬಸವರಾಜು
ಸಂಪನ್ಮೂಲ ವ್ಯಕ್ತಿ ANsird ಮೈಸೂರು
(ಅಬ್ದುಲ್ ನಜೀರ್ ಸಾಬ್ ರಾಜ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ)



