“ಯುಎಪಿಎ ಆರೋಪಿಗಳಿಗೆ ಜಾಮೀನು ನೀಡುವ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಸಮಾನ ಪೀಠಗಳು ನೀಡಿರುವ ತೀರ್ಪುಗಳಲ್ಲಿ ಪರಸ್ಪರ ವಿರೋಧಾಭಾಸಗಳಿವೆ” ಎಂದು ದೆಹಲಿ ಪೊಲೀಸರು ತಕರಾರು ತೆಗೆದಿದ್ದಾರೆ. ಉಮರ್, ಶಾರ್ಜಿಲ್ ಜಾಮೀನು ವಿಚಾರ ವಿಸ್ತೃತ ಪೀಠಕ್ಕೆ ಹೋಗುವುದೇ?
‘ದೆಹಲಿ ಗಲಭೆ ಕೇಸ್: ಉಮರ್ ಖಾಲಿದ್ ಜಾಮೀನು ಅರ್ಜಿ ಮುಂದೂಡಿಕೆ…’, ‘ಉಮರ್ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆ…’- ಹೀಗೆ ಎಷ್ಟು ಬಾರಿ ಸುದ್ದಿಗಳನ್ನು ಕೇಳಿಲ್ಲ! ಬಹುಶಃ ಅತಿಹೆಚ್ಚು ಸಲ ಜಾಮೀನು ಅರ್ಜಿ ನಿರಾಕರಣೆಗೊಂಡ ಪ್ರಕರಣಗಳನ್ನು ಪಟ್ಟಿ ಮಾಡಿದರೆ ಉಮರ್ ಪ್ರಕರಣ ಮುಂಚೂಣಿಯಲ್ಲಿ ಇರುತ್ತದೆ!
ಆರು ವರ್ಷಗಳಿಂದ ಪ್ರಕರಣದ ಅಸಲಿ ವಿಚಾರಣೆಯೇ ಆರಂಭವಾಗದೆ ಜೈಲಿನಲ್ಲಿರುವ ಉಮರ್ ಖಾಲಿದ್ ಮತ್ತು ಇತರ ಹೋರಾಟಗಾರರಿಗೆ ಬಿಡುಗಡೆ ದೊರಕೀತೆ? ಬಹುಶಃ ಉಮರ್ ಅವರಿಗೂ ಈ ಬಗ್ಗೆ ನಂಬಿಕೆ ಇಲ್ಲ. ಈ ಸುದೀರ್ಘ ಕಾನೂನು ಹೋರಾಟದಲ್ಲಿ ಜೈಲಿನಿಂದ ಹೊರಬರುವುದೇ ದುಸ್ತರವಾದೀತು ಎಂಬುದು ಅವರಿಗೆ ಅರ್ಥವಾಗಿತ್ತು. 2022ನೇ ಇಸವಿಯ ಆಗಸ್ಟ್‌ನಲ್ಲಿ ರೋಹಿತ್ ಎಂಬವರಿಗೆ ಜೈಲಿನಿಂದಲೇ ಬರೆದ ಪತ್ರದಲ್ಲಿ ಉಮರ್ ಅವರು ದಾಖಲಿಸಿದ ಸಾಲುಗಳು ಹೀಗಿದ್ದವು:
“…ನಿಮಗೆ ಪತ್ರ ಬರೆಯುತ್ತಿರುವ ಹೊತ್ತಿನಲ್ಲಿ ಜೈಲಿನ ಮೈಕಿನಲ್ಲಿ ಈ ರಾತ್ರಿ ಜೈಲಿನಿಂದ ಬಿಡುಗಡೆಯಾಗುತ್ತಿರುವವರ ಹೆಸರುಗಳನ್ನು ಘೋಷಿಸುತ್ತಿರುವುದು ಕೇಳಿಸುತ್ತಿದೆ. ಪ್ರತಿದಿನ ಸೂರ್ಯ ಮುಳುಗಿದ ನಂತರ ಈ ಹೊತ್ತಿನಲ್ಲಿ ಜೈಲಿನ ಅಧಿಕಾರಿಗಳಿಗೆ ಬಿಡುಗಡೆಯ ಆದೇಶಗಳು ತಲುಪುತ್ತವೆ. ಕತ್ತಲು ಕವಿಯುತ್ತಾ ರಾತ್ರಿಯು ನಿಧಾನವಾಗಿ ಜೈಲನ್ನು ಆವರಿಸಿಕೊಳ್ಳುವಾಗಲೇ ಇನ್ನು ಕೆಲವಾದರೂ ಕೈದಿಗಳಿಗೆ ಇನ್ನು ಸ್ವಲ್ಪ ಹೊತ್ತಿನಲ್ಲೇ ಸ್ವಾತಂತ್ರದ ಬೆಳಕು ಸಿಗುತ್ತದೆ. ಅವರ ಮುಖಗಳು ಆನಂದದ ಬೆಳಕಿನಿಂದ ಹೊಳೆಯುವುದು ದೂರದಿಂದಲೇ ಕಾಣುತ್ತದೆ. ಕಳೆದ ಎರಡು ವರ್ಷಗಳಿಂದ ಜೈಲಿನ ಮೈಕುಗಳಿಂದ ಈ ಬಿಡುಗಡೆಯ ಪ್ರಕಟಣೆಗಳನ್ನು ಕೇಳುತ್ತಲೇ ಇದ್ದೇನೆ. ‘ಹೆಸರುಗಳನ್ನು ಬರೆದುಕೊಳ್ಳಿ. ಈ ಬಂಧಿಗಳು ಬಿಡುಗಡೆಯಾಗಲಿದ್ದಾರೆ’. ನಾನು ನನ್ನ ಹೆಸರು ಆ ಪಟ್ಟಿಯಲ್ಲಿ ಬರುವುದನ್ನೇ ಭರವಸೆಯಿಂದ ಕಾಯುತ್ತಾ ಇದ್ದೇನೆ. ಹಲವು ಭಾರೀ ಈ ಕಗ್ಗತ್ತಲ ಸುರಂಗ ಇನ್ನೆಷ್ಟು ದೀರ್ಘವಿರಬಹುದೆಂದು ಯೋಚಿಸುತ್ತೇನೆ. ಎಂದಾದರೂ ಈ ಸುರಂಗದ ಕೊನೆಯಲ್ಲಿ ಬೆಳಕು ಕಾಣಸಿಗಬಹುದೇ? ನಾನು ಸುರಂಗದ ಕೊನೆಯಲ್ಲಿದ್ದೇನೋ, ನಟ್ಟನಡುವೆ ಸಿಲುಕಿಕೊಂಡಿದ್ದೇನೋ ಅಥವಾ ನನ್ನ ಸುದೀರ್ಘ ಪ್ರಯಾಣವೇ ಇದೀಗ ಆರಂಭವಾಗಿದೆಯೋ?..”

“…ನಾವು ಆಝಾದಿಯ ಅಮೃತ ಮಹೋತ್ಸವವನ್ನು ಇದೀಗ ಪ್ರವೇಶಿಸಿದ್ದೇವೆ ಎಂದು ಅವರು ಹೇಳುತ್ತಾರೆ. ಆದರೆ ಸ್ವಾತಂತ್ರ್ಯವನ್ನು ರಕ್ಷಿಸಲು ಹೋರಾಡುತ್ತಿರುವವರ ಬದುಕುಗಳನ್ನು ನೋಡಿದರೆ ವಾಪಸ್ ಬ್ರಿಟಿಷರ ಕಾಲಕ್ಕೆ ಮರಳುತ್ತಿರುವಂತೆ ಕಾಣುತ್ತದೆ. ಇತ್ತೀಚಿನ ದಿನಗಳಲ್ಲಿ ವಸಾಹತುಶಾಹಿಯ ಎಲ್ಲ ಸಂಕೇತಗಳನ್ನು ನಿರ್ಮೂಲನೆ ಮಾಡುವ ಮಾತುಗಳು ಕೇಳಿಬರುತ್ತವೆ. ಆದರೆ ಅದೇ ಸಮಯದಲ್ಲಿ ಹೋರಾಟಗಾರರನ್ನು, ವಿದ್ಯಾರ್ಥಿಗಳನ್ನು, ಭಿನ್ನಮತಿಯರನ್ನು, ರಾಜಕೀಯ ವಿರೋಧಿಗಳನ್ನು ಬಗ್ಗುಬಡಿಯಲೆಂದೇ ವಸಾಹತುಶಾಹಿಯನ್ನು ನೆನಪಿಸುವ ಹಲವು ಕಾನೂನುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ದಮನ ಮಾಡಲು ವಸಾಹತುಶಾಹಿ ಬ್ರಿಟಿಷರು ಬಳಸಿದ ರೌಲಟ್ ಕಾಯ್ದೆಗೂ ನಮ್ಮಂಥವರನ್ನು ಬಂಧಿಸಲಾಗಿರುವ ಯುಎಪಿಎ ಕಾಯ್ದೆಗೂ ಇರುವ ಸಾಮ್ಯತೆಯನ್ನು ಜನರು ಗುರುತಿಸಲಾಗುತ್ತಿಲ್ಲವೇ? ವಸಾಹತುಶಾಹಿ ಕಾಯ್ದೆಗಳ ಮುಂದುವರಿಕೆಯಂತಿರುವ ಮತ್ತು ಜನರ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಬಳಿಸುವಂತಹ ಈ ಕಾಯ್ದೆಗಳು ಸ್ವಾತಂತ್ರ್ಯ ಭಾರತದಲ್ಲಿ ತೊಲಗಬೇಕಲ್ಲವೇ? ನಮ್ಮಂಥವರನ್ನು, ನಮ್ಮಂಥ ಹಲವರನ್ನು ವಿಚಾರಣೆಯೇ ಇಲ್ಲದೆ ಮತ್ತು ವಿಚಾರಣೆ ಯಾವಾಗ ಶುರುವಾಗಬಹುದೆಂಬ ಸೂಚನೆಯೂ ಇಲ್ಲದೆ ಸುದೀರ್ಘ ಕಾಲ ಬಂಧನದಲ್ಲಿ ಹಾಕಿರುವುದು ನನ್ನನ್ನು ದಿಗ್ಭ್ರಾಂತನನ್ನಾಗಿಸುತ್ತದೆ…”
-ಹೀಗೆ ಮನಮಿಡಿಯುವಂತೆ ಉಮರ್ ಬರೆದು ನಾಲ್ಕು ವರ್ಷ ತುಂಬುತ್ತಿದೆ. ಇದು ರೋಹಿತ್ ಎಂಬ ವ್ಯಕ್ತಿಗೆ ಬರೆದ ಪತ್ರ ಮಾತ್ರವಲ್ಲ. ಮುಸ್ಲಿಂ ಆದ ಕಾರಣಕ್ಕೆ ಉಮರ್ ಅಂಥವರನ್ನು ವ್ಯವಸ್ಥೆ ನಡೆಸಿಕೊಳ್ಳುತ್ತಿರುವ ರೀತಿಯನ್ನು ಉದ್ದೇಶಿಸಿ ಇಡೀ ದೇಶಕ್ಕೆ ಬರೆದ ಪತ್ರದಂತೆ ಕಾಣುತ್ತಿದೆ. ಅವರು ಎದುರಿಸುತ್ತಿರುವ ಒಂಟಿತನ, ಹತಾಷೆ, ಅವಮಾನಗಳನ್ನು ನ್ಯಾಯಾಂಗ ಕಣ್ಣು ತೆರೆದು ನೋಡಲು ಇನ್ನೆಷ್ಟು ದಿನ ಬೇಕೋ? ಇಂತಿರುವಾಗ ಸೋಮವಾರ (ಮೇ 18) ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳ ಪೀಠ, ಭರವಸೆಯ ಕಿಂಡಿ ಬೆಳಕನ್ನು ಉಮರ್ ಅವರಿಗೆ ತೋರಿದಂತೆ ಕಾಣುತ್ತಿದೆ. ಆದರೆ ಆ ಕಿಂಡಿಬೆಳಕು ಕೇವಲ ಮರೀಚಿಕೆಯಾಗಿಯೇ ಉಳಿಯುತ್ತದೆಯೋ ಗೊತ್ತಿಲ್ಲ!
“UAPA ಕಾಯ್ದೆಯಡಿಯೂ ಜಾಮೀನು ನೀಡುವುದು ನಿಯಮ, ಜೈಲಿಗೆ ಕಳುಹಿಸುವುದು ಅಪವಾದ” (Bail is the rule, jail is an exception) ಎಂಬ ಮಾತನ್ನು ಸುಪ್ರೀಂ ಕೋರ್ಟ್ ಉಚ್ಚರಿಸಿದೆ. ವಿಚಾರಣೆಯು ಸುದೀರ್ಘ ಕಾಲ ಎಳೆಯುವ ಸನ್ನಿವೇಶಗಳಲ್ಲಿ UAPA ಪ್ರಕರಣಗಳಲ್ಲೂ ಆರೋಪಿಗಳು ಜಾಮೀನಿಗೆ ಸಹಜ ಹಕ್ಕುದಾರರಾಗುತ್ತಾರೆ. ವಿಚಾರಣೆ ವಿಳಂಬವಾದರೂ ವಿಶೇಷ ಪ್ರಕರಣಗಳೆಂಬ ಮಾನದಂಡಗಳನ್ನು ಹಾಕಿ ಜಾಮೀನು ನಿರಾಕರಿಸುವುದು ತಪ್ಪು ಎಂದಿದೆ ಸರ್ವೋಚ್ಚ ನ್ಯಾಯಾಲಯ.
“2021 ರಲ್ಲಿ ಭಾರತ ಸರ್ಕಾರ ವರ್ಸಸ್ ನಜೀಬ್ ಪ್ರಕರಣದಲ್ಲಿ ವಿಚಾರಣೆಯ ಸುದೀರ್ಘ ವಿಳಂಬವೂ UAPA ಪ್ರಕರಣದಲ್ಲೂ ಆರೋಪಿಗಳಿಗೆ ಜಾಮೀನಿನ ಹಕ್ಕನ್ನು ನೀಡುತ್ತದೆ ಎಂದು ಮೂರು ನ್ಯಾಯಾಧೀಶರ ಪೀಠವು ಸ್ಪಷ್ಟವಾಗಿ ಹೇಳಿದೆ. ಆದರೆ ಉಮರ್ ಮತ್ತು ಗುಲ್ಫಿಶಾ ಫಾತಿಮಾ ಹಾಗೂ ಗುರವಿಂದರ್ ಸಿಂಗ್ ಪ್ರಕರಣದಲ್ಲಿ ಇಬ್ಬರು ನ್ಯಾಯಾಧೀಶರ ಪೀಠವು ಅದನ್ನು ಗಣನೆಗೆ ತೆಗೆದುಕೊಳ್ಳದಿರುವುದು ತಪ್ಪು. ಮೂವರು ನ್ಯಾಯಾಧೀಶರ ಪೀಠವು ಕೊಟ್ಟ ತೀರ್ಮಾನವನ್ನು ಇಬ್ಬರು ನ್ಯಾಯಾಧೀಶರ ಪೀಠವು ಉಲ್ಲಂಘಿಸುವಂತಿಲ್ಲ” ಎಂದು ಜಸ್ಟಿಸ್ ನಾಗರತ್ನ ಮತ್ತು ಜಸ್ಟಿಸ್ ಭುಯ್ಯಾ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಚಿಂತಕ ಶಿವಸುಂದರ್, “ಒಟ್ಟಿನಲ್ಲಿ ಭಾರತದಲ್ಲಿ ನ್ಯಾಯವೆಂಬುದು ಅದೃಷ್ಟದ ಆಟವಾಗಿ ಹೋಯಿತು. ಹಾಗಿದ್ದಲ್ಲಿ ಐದಾರು ವರ್ಷಗಳಿಂದ ವಿಚಾರಣೆಯಿಲ್ಲದೆ ಕೊಳೆಯುತ್ತಿರುವ ಉಮರ್, ಇಮಾಮ್, ಭೀಮ ಕೋರೆಗಾಂವ್, ದೆಹಲಿ ದಂಗೆ ಪ್ರಕರಣಗಳ ವಿಚಾರಣಾಧೀನ ಕೈದಿಗಳಿಗೆ ಈಗಲಾದರೂ ಜಾಮೀನು ಸಿಗುವುದೇ? ಬೇಕಿದ್ದಕ್ಕೆ, ಬೇಡದಿದ್ದಕ್ಕೆಲ್ಲ ಸಂಪೂರ್ಣ ನ್ಯಾಯ ಒದಗಿಸುವ ಸಂವಿಧಾನದ ಆರ್ಟಿಕಲ್ 142 ಬಳಸುವ ಸುಪ್ರೀಂನ ಮುಖ್ಯ ನ್ಯಾಯಾಧೀಶರು ತಮ್ಮ ಅಧಿಕಾರವನ್ನು ಬಳಸಿ ಜಾಮೀನು ಕೊಡಬಹುದಲ್ಲವೇ? ಕೊಡಬಹುದು. ಆದರೆ ಆರೋಪಿಗಳ ಹೆಸರು ಉಮರ್, ಇಮಾಮ್ ಅಲ್ಲವೇ?” ಎಂದು ವಿಷಾದದಿಂದ ಬರೆಯುತ್ತಾರೆ.
ಪಿತೂರಿ ಸಿದ್ಧಾಂತದ ಬಲಿಪಶುಗಳು
ಮೋದಿ ಸರ್ಕಾರ ಅಲ್ಪಸಂಖ್ಯಾತರ ನಾಗರಿಕತ್ವವನ್ನು ಬುಡಮೇಲು ಮಾಡುವುದಕ್ಕಾಗಿ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (NRC) ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದವು. ದೆಹಲಿಯ ಶಾಹೀನ್ ಬಾಗ್ ಸೇರಿದಂತೆ ಹಲವು ಕಡೆಗಳಲ್ಲಿ ಧರಣಿಗಳು ಶುರುವಾದವು. ಮುಸ್ಲಿಂ ಸಮುದಾಯ ಪ್ರಜಾತಾಂತ್ರಿಕವಾಗಿ ನಡೆಸುತ್ತಿದ್ದ ಚಳವಳಿಯನ್ನು ದಿಕ್ಕುತಪ್ಪಿಸುವ ಅಜೆಂಡಾವನ್ನು ಇಟ್ಟುಕೊಂಡವರು ಮುಸ್ಲಿಮರ ವಿರುದ್ಧ ದ್ವೇಷ ಭಾಷಣವನ್ನು ಎಗ್ಗಿಲ್ಲದೆ ಮುಂದುವರಿಸಿದರು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ (ಫೆಬ್ರವರಿ 2020), ಈಶಾನ್ಯ ದೆಹಲಿಯಲ್ಲಿ ಸಿಎಎ ಪರ ಮತ್ತು ವಿರೋಧ ಗುಂಪುಗಳ ನಡುವೆ ಭೀಕರ ಕೋಮು ಗಲಭೆ ಸಂಭವಿಸಿತು. ಇದರಲ್ಲಿ 53 ಜನ ಮೃತಪಟ್ಟರು ಮತ್ತು ನೂರಾರು ಜನರು ಗಾಯಗೊಂಡರು. ಆದರೆ ‘ಇಂತಹದ್ದೊಂದು ಗಲಭೆಗೆ ವಾಸ್ತವದಲ್ಲಿ ಪ್ರಚೋದನೆ ನೀಡಿದವರು ಬಚಾವಾದರೆ? ಗಲಭೆಯ ಆರೋಪ ಹೊರಿಸಿ ಹೋರಾಟಗಾರರನ್ನು ಜೈಲಿಗೆ ದೂಡಲಾಯಿತೆ?’ ಎಂದು ಕೇಳಿಕೊಳ್ಳಬೇಕಿದೆ.
2020ರ ಫೆಬ್ರವರಿ 23ರ ಮಧ್ಯಾಹ್ನ, ಅಂದರೆ ಹಿಂಸಾಚಾರ ಭುಗಿಲೆದ್ದ ಒಂದು ದಿನ ಮೊದಲು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಗಲಭೆಯ ಮುನ್ಸೂಚನೆ ನೀಡಿದ್ದರು. ಕಪಿಲ್ ಮಿಶ್ರಾ ಸುಮಾರು 50 ರಿಂದ 60 ಜನರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದದ್ದು ವೈರಲ್ ವಿಡಿಯೋದಲ್ಲಿ ಸ್ಪಷ್ಟವಾಗಿತ್ತು. ಆಗಿನ ಪೊಲೀಸ್ ಆಯುಕ್ತ (ಡಿಸಿಪಿ) ವೇದ್ ಪ್ರಕಾಶ್ ಸೂರ್ಯ ಮತ್ತು ತಮ್ಮ ಬೆಂಬಲಿಗರ ಪಕ್ಕದಲ್ಲಿ ನಿಂತ ಮಿಶ್ರಾ, ಪೊಲೀಸರಿಗೆ ಅಂತಿಮ ಎಚ್ಚರಿಕೆಯನ್ನು ನೀಡಿದ್ದರು. “ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಬೀದಿಗಳಿಂದ ಎತ್ತಂಗಡಿ ಮಾಡಬೇಕು, ಇಲ್ಲದಿದ್ದರೆ ಈ ವಿಷಯವನ್ನು ನಾವು ಕೈಗೆತ್ತಿಕೊಳ್ಳಬೇಕಾಗುತ್ತದೆ” ಎನ್ನುತ್ತಾರೆ ಮಿಶ್ರಾ. ಈ ಹೇಳಿಕೆಯೇ ಗಲಭೆಗೆ ಮೂಲಕಾರಣವಾಗಿತ್ತು ಎಂದು ಮಾನವ ಹಕ್ಕುಗಳ ಹೋರಾಟಗಾರರು ಗುರುತಿಸುತ್ತಾರೆ.

ಜನವರಿ 2020ರಲ್ಲಿ ದೆಹಲಿಯ ರಿಟಾಲಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಬಿಜೆಪಿ ನಾಯಕ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಸಿಎಎ ಹೋರಾಟಗಾರರನ್ನು ದೇಶದ್ರೋಹಿಗಳು ಎಂಬಂತೆ ಬಿಂಬಿಸಿದ್ದ ಠಾಕೂರ್, “ದೇಶ್ ಕೇ ಗದ್ದಾರೋ ಕೊ.. ಗೋಲಿ ಮಾರೋ ಸಾಲೋಂಕೊ” (ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ) ಎಂದು ಪ್ರಚೋದಿಸಿದ್ದರು. ಪಶ್ಚಿಮ ದೆಹಲಿಯ ಸಂಸದರಾಗಿದ್ದ ಪರ್ವೇಶ್ ವರ್ಮಾ ಅವರು ಜನವರಿ 2020ರ ಚುನಾವಣಾ ರ್ಯಾಲಿಗಳಲ್ಲಿ ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಗುರಿಯಾಗಿಸಿಕೊಂಡು ಅತ್ಯಂತ ಆತಂಕಕಾರಿ ಮತ್ತು ಕೋಮು ಧ್ರುವೀಕರಣದ ಮಾತುಗಳನ್ನಾಡಿದ್ದರು. “ಅಲ್ಲಿ (ಶಾಹೀನ್ ಬಾಗ್ನಲ್ಲಿ) ಲಕ್ಷಾಂತರ ಜನರು ಜಮಾಯಿಸುತ್ತಿದ್ದಾರೆ. ದೆಹಲಿಯ ಜನರೇ, ಯೋಚನೆ ಮಾಡಿ ನಿರ್ಧಾರ ತೆಗೆದುಕೊಳ್ಳಿ. ಅವರು ನಿಮ್ಮ ಮನೆಗಳಿಗೆ ನುಗ್ಗುತ್ತಾರೆ, ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡುತ್ತಾರೆ ಮತ್ತು ಅವರನ್ನು ಕೊಲ್ಲುತ್ತಾರೆ. ಇಂದು ಸಮಯವಿದೆ, ನಾಳೆ ನಿಮ್ಮನ್ನು ರಕ್ಷಿಸಲು ಮೋದಿ ಜೀ ಅಥವಾ ಅಮಿತ್ ಶಾ ಅವರು ಬರುವುದಿಲ್ಲ” ಎಂದು ಪ್ರಚೋದಿಸಿದ್ದರು. ಮತ್ತೊಂದು ಹೇಳಿಕೆಯಲ್ಲಿ ಪರ್ವೇಶ್, “ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಸರ್ಕಾರಿ ಜಾಗದಲ್ಲಿರುವ ಎಲ್ಲ ಮಸೀದಿಗಳನ್ನು ಒಂದೇ ಗಂಟೆಯಲ್ಲಿ ತೆರವುಗೊಳಿಸುತ್ತೇವೆ” ಎಂದಿದ್ದರು.
ದೆಹಲಿ ಅಲ್ಪಸಂಖ್ಯಾತ ಆಯೋಗದ ಸತ್ಯಶೋಧನಾ ಸಮಿತಿಯು, “ಮಿಶ್ರಾ, ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಸೇರಿದಂತೆ ಬಿಜೆಪಿ ನಾಯಕರ ಪ್ರಚೋದನಕಾರಿ ಭಾಷಣಗಳು ಗಲಭೆಗೆ ಕಾರಣವಾಯಿತು” ಎನ್ನುತ್ತದೆ. ಈ ನಾಯಕರ ಹೇಳಿಕೆಗಳು ‘ದ್ವೇಷ ಭಾಷಣ’ಗಳಾಗಿವೆ ಎಂದು ದೆಹಲಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠವು ಒಪ್ಪಿಕೊಂಡಿತ್ತು. ಮುಖ್ಯವಾಗಿ ಮಿಶ್ರಾ ವಿರುದ್ಧ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯ ಸೂಚನೆ ನೀಡಲು ಘಟನೆ ನಡೆದು ಐದು ವರ್ಷಗಳು ಬೇಕಾಯಿತು.
ಈ ಪಿತೂರಿಯಲ್ಲಿ ಮುಖ್ಯಪಾತ್ರ ವಹಿಸಿರುವ ಮಿಶ್ರಾ ಅವರನ್ನು ಪೊಲೀಸರೇ ನಿಂತು ರಕ್ಷಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ದೆಹಲಿ ಪೊಲೀಸರ ಬಳಿ ಅವರದ್ದೇ ಆದ ನರೇಟಿವ್ ಇತ್ತು. ಪೊಲೀಸರು ಹೇಳುವ ಬಹುದೊಡ್ಡ ಪಿತೂರಿ ಸಿದ್ಧಾಂತದ ಪ್ರಕಾರ, “20 ವಿದ್ಯಾರ್ಥಿಗಳ ಗುಂಪು, ಸಾಮಾಜಿಕ ಕಾರ್ಯಕರ್ತರು ಮತ್ತು ಸ್ಥಳೀಯ ಪೊಲೀಸರೇ ಈ ಗಲಭೆಗೆ ಕಾರಣ. ಆರೋಪಿಗಳಲ್ಲಿ ಮಾಜಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಮತ್ತು ಕಾರ್ಯಕರ್ತೆ ಗುಲ್ಫಿಶಾ ಫಾತಿಮಾ ಸೇರಿದಂತೆ 12 ಮುಸ್ಲಿಮರು ಸೇರಿದ್ದರು.”
ಈಶಾನ್ಯ ದೆಹಲಿಯ ನಿವಾಸಿ ಮೊಹಮ್ಮದ್ ಇಲ್ಯಾಸ್ ಎಂಬವರು ಗಲಭೆಯ ನಿಜ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರ ಮುಂದೆ ಸತತ ಪ್ರಯತ್ನ ನಡೆಸುತ್ತಲೇ ಇದ್ದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ, ಈಗ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ) ಸೆಕ್ಷನ್ 156(3) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ಅವರನ್ನು ಸಂಪರ್ಕಿಸಿದರು (ಕೊಲೆ, ಬೆಂಕಿ ಹಚ್ಚುವಿಕೆ ಅಥವಾ ಗಲಭೆಯಂತಹ ಗಂಭೀರ ಅಪರಾಧಗಳ ಬಗ್ಗೆ ಪೊಲೀಸ್ ತನಿಖೆಯನ್ನು ನಿರ್ದೇಶಿಸಲು ಈ ನಿಬಂಧನೆಯು ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡುತ್ತದೆ ಎಂಬುದು ಗಮನಾರ್ಹ.) ಗಲಭೆಯಲ್ಲಿ ಪೊಲೀಸರ ಪಾತ್ರ ಇರುವುದನ್ನು ಅವರ ದೂರು ಸ್ಪಷ್ಟವಾಗಿ ಉಲ್ಲೇಖಿಸಿತ್ತು. “ಮಿಶ್ರಾ ಮತ್ತು ಅವರ ಸಹಚರರು ಕರ್ದಂಪುರಿಯಲ್ಲಿ ರಸ್ತೆಗಳನ್ನು ತಡೆದು ಮುಸ್ಲಿಂ ಮತ್ತು ದಲಿತ ಮಾರಾಟಗಾರರ ಬಂಡಿಗಳನ್ನು ನಾಶಪಡಿಸಿದ್ದಾರೆ, ಡಿಸಿಪಿ ಸೂರ್ಯ ಸೇರಿದಂತೆ ಪೊಲೀಸರು ಮಿಶ್ರಾ ಅವರೊಂದಿಗೆ ಶಾಮೀಲಾಗಿದ್ದಾರೆ, ಸಿಎಎ ವಿರೋಧಿ ಪ್ರತಿಭಟನಾಕಾರರಿಗೆ ಜೀವ ಬೆದರಿಕೆ ಹಾಕಲಾಗಿದೆ” ಎಂಬ ಗಂಭೀರ ಆರೋಪಗಳನ್ನು ಇಲ್ಯಾಸ್ ಮಾಡಿದ್ದರು.
ಈ ಲೇಖನ ಓದಿದ್ದೀರಾ?: ಡಿ.ವೈ.ಚಂದ್ರಚೂಡ್ ಅಧಿಕಾರದಲ್ಲಿದ್ದಾಗ ಉಮರ್ ಖಾಲಿದ್ ಪ್ರಕರಣ ಯಾಕೆ ಕಾಣಲಿಲ್ಲ?
ಆದರೆ ದೆಹಲಿ ಪೊಲೀಸರು, “ಮಿಶ್ರಾ ಮತ್ತು ಇತರರನ್ನು ಈಗಾಗಲೇ ತನಿಖೆ ಮಾಡಲಾಗಿದೆ. ಗಲಭೆಯಲ್ಲಿ ಅವರ ಪಾತ್ರ ಕಂಡುಬಂದಿಲ್ಲ” ಎನ್ನುತ್ತಾರೆ. ಆದಾಗ್ಯೂ, 2024 ರ ಕೊನೆಯಲ್ಲಿ ಈ ವಿಷಯವನ್ನು ವಿಚಾರಣೆ ಮಾಡಲು ಪ್ರಾರಂಭಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ACJM) ವೈಭವ್ ಚೌರಾಸಿಯಾ ಅವರು ತಮ್ಮ 33 ಪುಟಗಳ ಆದೇಶದಲ್ಲಿ, “ಆರೋಪಿಸಿದ ಅಪರಾಧಗಳಿಗೆ ಸಂಬಂಧಿಸಿದಂತೆ ಮಿಶ್ರಾ ಅವರಿಗೆ ಪ್ರಮುಖ ಪ್ರಶ್ನೆಗಳನ್ನು ಕೇಳಿಲ್ಲ ಎಂಬುದು ಸ್ಪಷ್ಟವಾಗಿದೆ. ಮಿಶ್ರಾ ಅವರನ್ನು ತನಿಖೆ ಮಾಡಲಾಗಿದೆ ಎಂದು ನ್ಯಾಯಾಲಯ ನಂಬುವುದಿಲ್ಲ” ಎಂದು ಸ್ಪಷ್ಟಪಡಿಸಿದರು. “ಮಿಶ್ರಾ ಅವರ ಹೆಸರು ಕೆಡಿಸಲು ಮಾಡಲಾದ ಸುಳ್ಳು ಪ್ರಚಾರದ ಭಾಗವಾಗಿ ಅವರ ಹೆಸರನ್ನು ಇಲ್ಲಿ ತರಲಾಗುತ್ತಿದೆ ಎಂದು ಹೇಳುತ್ತಿರುವ ಪೊಲೀಸರ ವಾದಕ್ಕೆ ಯಾವುದೇ ಸಾಕ್ಷ್ಯವಿಲ್ಲ” ಎಂದು ನ್ಯಾಯಾಲಯ ಗಮನಿಸಿತು ಮತ್ತು ಈಶಾನ್ಯ ದೆಹಲಿಯಲ್ಲಿ ಮಿಶ್ರಾ ಇರುವುದನ್ನು ದೃಢಪಡಿಸಿತು. ಉದ್ವಿಗ್ನತೆಯ ಅವಧಿ ಮತ್ತು ದೂರುದಾರ ಇಲ್ಯಾಸ್ ಅವರ ಹೇಳಿಕೆಗೆ ಹೊಂದಿಕೆಯಾಯಿತು. ವಿಚಾರಣೆಯ ಸಮಯದಲ್ಲಿ ದಾಖಲಾಗಿರುವಂತೆ ಮಿಶ್ರಾ ಅವರ ಭಾಷೆಯಲ್ಲಿ ಸ್ಪಷ್ಟವಾಗಿ ಕಂಡುಬರುವ ಕೋಮುವಾದದ ಉಚ್ಚಾರಣೆಗಳನ್ನು ನ್ಯಾಯಾಲಯವು ವಿಶೇಷವಾಗಿ ಗಮನಿಸಿತು.
ಕಪಿಲ್ ಮಿಶ್ರಾ ವಿರುದ್ಧ ತನಿಖೆ ನಡೆಸಬೇಕೆಂಬ ಸೂಚನೆ ಕೋರ್ಟ್‌ನಿಂದ ಬಂದಿದ್ದಾದರೂ ಅನುರಾಗ್ ಠಾಕೂರ್ ಮತ್ತು ಇತರರ ಮೇಲಿನ ಪ್ರಕರಣಗಳು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ತಾಂತ್ರಿಕ ಮತ್ತು ಕಾನೂನು ಹೋರಾಟದ ಹಂತದಲ್ಲಿಯೇ ಉಳಿದಿವೆ. ಇನ್ನೊಂದೆಡೆ ಉಮರ್ ಖಾಲಿದ್ ಮತ್ತು ಇತರ ಹೋರಾಟಗಾರರನ್ನು ಜೈಲಿಗೆ ದೂಡಲಾಯಿತು. “ಜೈಲಿನಲ್ಲಿ ಇರಬೇಕಾದವರು ಹೊರಗಿದ್ದರು ಮತ್ತು ಪ್ರಜಾತಾಂತ್ರಿಕವಾಗಿ ದನಿ ಎತ್ತಿದವರು ದೇಶದ್ರೋಹಿಗಳೆಂಬ ಹಣೆಪಟ್ಟಿ ಹಚ್ಚಿಕೊಂಡು ಜೈಲು ಸೇರಿದರು” ಎಂಬುದು ಹೋರಾಟಗಾರರ ಆಕ್ಷೇಪ. ಹೈಕೋರ್ಟ್‌ನಿಂದ ಸುಪ್ರೀಂಕೋರ್ಟ್‌ವರೆಗೆ ಉಮರ್ ಮತ್ತು ಇತರ ಹೋರಾಟಗಾರರ ಜಾಮೀನು ಅರ್ಜಿಗಳ ವಿಚಾರಣೆ ನಡೆದಿರುವ ರೀತಿ ಮತ್ತೊಂದು ಪ್ರಯಾಸದ ಪ್ರಯಾಣವೇ ಸರಿ.

“ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಬರುವ ದಿನಗಳನ್ನೇ ಉದ್ದೇಶಪೂರ್ವಕವಾಗಿ ಆರಿಸಿಕೊಂಡು ಉಮರ್ ಖಾಲಿದ್ ಭಾಷಣ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರಕ್ಕೆ ಮುಜುಗರ ಉಂಟುಮಾಡಲು ಮತ್ತು ಜಾಗತಿಕ ಮಾಧ್ಯಮಗಳ ಗಮನ ಸೆಳೆಯಲು ಈ ಭಾಷಣದ ಮೂಲಕ ಜನರನ್ನು ಪ್ರಚೋದಿಸಿ ರಸ್ತೆ ತಡೆ (Chakka Jam) ಮಾಡಲು ಸಂಚು ರೂಪಿಸಲಾಗಿತ್ತು” ಎಂಬುದು ಪೊಲೀಸರ ವಾದ.
ಮತ್ತೊಂದೆಡೆ. ಹೋರಾಟದ ವೇಳೆ ಇಂಕ್ವಿಲಾಬ್ ಜಿಂದಾಬಾದ್ ಎಂದು ಬಳಸಿದ್ದನ್ನು ಪೊಲೀಸರು ಅಸ್ತ್ರವಾಗಿ ಬಳಸಿದ್ದಾರೆ. “ಭಾಷಣದಲ್ಲಿ ಬಳಸಲಾದ ‘ಕ್ರಾಂತಿ’ (Revolution) ಮತ್ತು ‘ಇಂಕ್ವಿಲಾಬ್’ ಎಂಬ ಪದಗಳು ಕೇವಲ ಸಾಹಿತ್ಯಿಕ ಪದಗಳಲ್ಲ. ಅವು ವ್ಯವಸ್ಥೆಯ ವಿರುದ್ಧ ಜನರನ್ನು ಹಿಂಸಾತ್ಮಕವಾಗಿ ದಂಗೆ ಏಳುವಂತೆ ಪ್ರಚೋದಿಸಲು ಬಳಸಲಾದ ಸಂಕೇತಗಳಾಗಿವೆ (Undercurrent of Violence)” ಎನ್ನುತ್ತಾರೆ ಪೊಲೀಸರು. ದೆಹಲಿ ಹೈಕೋರ್ಟ್, “ಈ ಭಾಷಣವು ಅತ್ಯಂತ ಕೀಳು ಮಟ್ಟದ ಅಭಿರುಚಿಯಿಂದ (Bad Taste) ಕೂಡಿದೆ ಮತ್ತು ಆಕ್ಷೇಪಾರ್ಹವಾಗಿದೆ. ಪ್ರಧಾನಿ ಮತ್ತು ಸರ್ಕಾರದ ವಿರುದ್ಧ ಇಂತಹ ಪದಗಳ ಬಳಕೆ ಸರಿಯಲ್ಲ” ಎಂದು ಹೇಳಿತ್ತು. ಆದರೆ ಅದೇ ಸಮಯದಲ್ಲಿ, “ಒಂದು ಭಾಷಣ ಕೀಳು ಮಟ್ಟದ್ದಾಗಿದೆ ಎಂದಮಾತ್ರಕ್ಕೆ ಅದು ಭಯೋತ್ಪಾದನಾ ಕೃತ್ಯ (Terrorist Act) ಆಗುವುದಿಲ್ಲ” ಎಂದೂ ಸ್ಪಷ್ಟಪಡಿಸಿತ್ತು. ವೈಯಕ್ತಿಕವಾಗಿ ಭಾಷಣದಲ್ಲಿ ಹಿಂಸೆಗೆ ಕರೆ ನೀಡದಿದ್ದರೂ, ಗಲಭೆಯ ಹಿಂದಿನ ‘ಬೃಹತ್ ಪಿತೂರಿ’ಯಲ್ಲಿ (Larger Conspiracy) ಅವರ ಪಾತ್ರವಿದೆ ಎಂಬ ಪೊಲೀಸರ ವಾದವನ್ನು ಪುರಸ್ಕರಿಸಿ, ಯುಎಪಿಎ ಕಾಯ್ದೆಯಡಿ ಅವರಿಗೆ ಕೆಳ ನ್ಯಾಯಾಲಯಗಳು ಮತ್ತು ಹೈಕೋರ್ಟ್ ಹಲವು ಬಾರಿ ಜಾಮೀನು ನಿರಾಕರಿಸಿವೆ. ಸುಪ್ರೀಂಕೋರ್ಟ್ ಮುಂದೆ ಜಾಮೀನು ಅರ್ಜಿ ಬಂದಾಗ ಪದೇಪದೇ ಮುಂದೂಡಿಕೆಯಾದರೂ ಕೊನೆಯಲ್ಲಿ ಕೋರ್ಟ್ ನೀಡಿದ್ದ ತೀರ್ಪು ಸಮಾಧಾನಕರವಾಗಿ ಏನೂ ಇರಲಿಲ್ಲ.
2026ರ ಜನವರಿಯಲ್ಲಿ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ದ್ವಿಸದಸ್ಯ ಪೀಠವು ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನನ್ನು ನಿರಾಕರಿಸಿ, ಇತರ ಐದು ಜನರಿಗೆ (ಗುಲ್ಫೀಶಾ ಫಾತೀಮಾ, ಮೀರಾ ಹೈದರ್, ಶೈಫಾ ಉರ್ ರೆಹಮಾನ್, ಸಲೀಂ ಖಾನ್, ಶದಾಬ್ ಅಹ್ಮದ್) ಜಾಮೀನು ಮಂಜೂರು ಮಾಡಿತು. ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರು ಉಳಿದ ಆರೋಪಿಗಳಿಗಿಂತ ವಿಭಿನ್ನ ಹಂತದಲ್ಲಿದ್ದಾರೆ. ಗಲಭೆಯ ಯೋಜನೆ, ಜನರನ್ನು ಸಜ್ಜುಗೊಳಿಸುವುದು ಮತ್ತು ವ್ಯೂಹಾತ್ಮಕ ನಿರ್ದೇಶನ ನೀಡುವಲ್ಲಿ ಇವರ ಪಾತ್ರ ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂದು ಕೋರ್ಟ್ ಹೇಳಿತು. ಇವರ ವಿರುದ್ಧ ಹೊರಿಸಲಾದ ಆರೋಪಗಳು ಯುಎಪಿಎ ಕಾಯ್ದೆಯ ಅಡಿಯಲ್ಲಿ ‘ಮೇಲ್ನೋಟಕ್ಕೆ ಸತ್ಯ’ (Prima-facie true) ಎಂದು ಕಂಡುಬರುವುದರಿಂದ ಇವರಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜನವರಿ 2026 ರ ತೀರ್ಪು ದೇಶದ ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರು ಈ ಆದೇಶ ಹೊರಬಿದ್ದ ದಿನದಿಂದ ಮುಂದಿನ ಒಂದು ವರ್ಷದವರೆಗೆ (ಅಂದರೆ ಜನವರಿ 2027 ರವರೆಗೆ) ಯಾವುದೇ ಹೊಸ ನಿಯಮಿತ ಜಾಮೀನು ಅರ್ಜಿಯನ್ನು ಸಲ್ಲಿಸುವಂತಿಲ್ಲ ಎಂದು ನಿಬಂಧನೆ ವಿಧಿಸಿದೆ ಕೋರ್ಟ್.
ಜನವರಿಯಲ್ಲಿ ಬಂದ ತೀರ್ಪಿನ ಕುರಿತು ಚಿಂತಕ ಶ್ರೀಪಾದ ಭಟ್ ಹೀಗೆ ಬರೆಯುತ್ತಾರೆ: “ಐವರಿಗೆ ಜಾಮೀನು ದೊರಕಿರುವುದು ಸಮಾನಧಾನಕರ ಸಂಗತಿಯಾದರೂ ಉಮರ್ ಮತ್ತು ಶಾರ್ಜಿಲ್ ಅವರಿಗೆ ನಿರಾಕರಿಸಿರುವುದು ದುಃಖದ ವಿಚಾರ. ಯಾವುದೇ ಸಕಾರಣವಿಲ್ಲದಿದ್ದರೂ ಇವರನ್ನು ಬಂಧನಮುಕ್ತಗೊಳಿಸದಿರುವುದು ನ್ಯಾಯಾಂಗ ವಿಶ್ವಾಸಾರ್ಹತೆ ಕಳೆದುಕೊಂಡಿರುವುದಕ್ಕೆ ಉದಾಹರಣೆ. ಒಂದು ವರ್ಷದ ಒಳಗೆ ಸಂರಕ್ಷಿತ ಸಾಕ್ಷಿಗಳ ಮರು ಪರಿಶೀಲನೆ ನಡೆಸಿದ ನಂತರ ಅಥವಾ ಒಂದು ವರ್ಷದ ನಂತರ ಜಾಮೀನು ಅರ್ಜಿ ಸಲ್ಲಿಸಬಹುದಂತೆ. ಇದೆಂಥ ವಿಚಿತ್ರ ನಿಬಂಧನೆ” ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.
ಫೇಸ್‌ಬುಕ್‌ನಲ್ಲಿ ಶ್ರೀಪಾದ್ ಭಟ್ ಅವರು ಬರೆದ ಮತ್ತೊಂದು ಸುದೀರ್ಘ ಟಿಪ್ಪಣಿಯಲ್ಲಿ ಗಮನಿಸಬೇಕಾದ ಅಂಶಗಳಿವೆ. “ಖಾಲಿದ್ ಮತ್ತು ಇತರ ಆರೋಪಿಗಳ ಪ್ರಕರಣದ ವಿಚಾರಣೆ ಮತ್ತು ನ್ಯಾಯ ಪ್ರಕ್ರಿಯೆಯಲ್ಲಿನ ವಿಳಂಬವು ಶಾಸಕಾಂಗ ಮತ್ತು ನ್ಯಾಯಾಂಗ ಕಾರ್ಯವೈಖರಿಯಲ್ಲಿನ ವೈರುಧ್ಯಗಳಿಗೆ ಉದಾಹರಣೆಯಾಗಿದೆ. ಇಲ್ಲಿ ಯುಎಪಿಎ ಸೆಕ್ಷನ್‌ಗಳು ಸಹ ತೀರಾ ಜಟಿಲವಾಗಿದೆ. ಇದು ಸಹ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ. ಯುಎಪಿಎ ಸೆಕ್ಷನ್ 15ರಲ್ಲಿ ಭಯೋತ್ಪಾದಕ ಕೃತ್ಯವನ್ನು ‘ಭಾರತದ ಏಕತೆ, ಸಮಗ್ರತೆ, ಭದ್ರತೆ, ಆರ್ಥಿಕ ಭದ್ರತೆ ಅಥವಾ ಸಾರ್ವಭೌಮತ್ವವನ್ನು ಬೆದರಿಕೆಗೊಳಿಸುವ ಅಥವಾ ಬೆದರಿಕೆಗೊಳಿಸುವ ಸಾಧ್ಯತೆಯಿರುವ ಉದ್ದೇಶದಿಂದ, ಅಥವಾ ಭಾರತದ ಜನರಲ್ಲಿ ಅಥವಾ ಯಾವುದೇ ವಲಯದ ಜನರಲ್ಲಿ ಭಯ ಹುಟ್ಟಿಸುವ ಅಥವಾ ಭಯ ಹುಟ್ಟಿಸುವ ಸಾಧ್ಯತೆಯಿರುವ ಉದ್ದೇಶದಿಂದ ಮಾಡಿದ ಯಾವುದೇ ಕೃತ್ಯ’ ಎಂದು ವಿವರಿಸುತ್ತದೆ. ಜೊತೆಗೆ ಭಯ ಹುಟ್ಟಿಸುವುದನ್ನು ‘ಬಾಂಬ್ಗಳು, ಡೈನಮೈಟ್ ಅಥವಾ ಇತರ ಸ್ಫೋಟಕ ವಸ್ತುಗಳು ಅಥವಾ ಉರಿಯುವ ವಸ್ತುಗಳು ಅಥವಾ ಇತರ ಮಾರಕ ಶಸ್ತ್ರಾಸ್ತ್ರಗಳು… ಅಥವಾ ಯಾವುದೇ ಇತರ ವಿಧಾನಗಳ ಮೂಲಕ ( any other means)’ ಎಂದು ವ್ಯಾಖ್ಯಾನ ಮಾಡಲಾಗಿದೆ. ಇದನ್ನೇ ಉಲ್ಲೇಖಿಸಿ ನ್ಯಾಯಾಲಯವು ‘ಭಯೋತ್ಪಾದಕ ಕೃತ್ಯ’ವು ಕೇವಲ ಸಾಂಪ್ರದಾಯಿಕ ಹಿಂಸೆ ಅಥವಾ ನಿರ್ದಿಷ್ಟ ಶಸ್ತ್ರಾಸ್ತ್ರಗಳಿಗೆ ಮಾತ್ರ ಸೀಮಿತವಲ್ಲದೆ, ಉದ್ದೇಶ, ಯೋಜನೆ ಮತ್ತು ಪರಿಣಾಮಗಳನ್ನು ಆಧರಿಸಿ ‘ಯಾವುದೇ ಇತರ ವಿಧಾನಗಳ ಮೂಲಕ’ ಎಂಬ ಭಾಗವನ್ನು ಉಲ್ಲೇಖಿಸಿ ಉಮರ್ ಮತ್ತು ಶಾರ್ಜಿಲ್ ಅವರಿಗೆ ಜಾಮೀನು ನಿರಾಕರಿಸುತ್ತಿದೆ.
ಯಾವುದೇ ಇತರ ವಿಧಾನಗಳು(any other means) ಎನ್ನುವ ಅಮೂರ್ತವಾದ, ಮುಖ್ಯವಲ್ಲದ ತೀರಾ ಸಾಧಾರಣ(trivial) ವಿಚಾರವೇ ಉಮರ್ ಮತ್ತು ಶಾರ್ಜಿಲ್ ಅವರ ಜಾಮೀನು ನಿರಾಕರಣೆಗೆ ಮುಖ್ಯ ಕಾರಣ ಎನ್ನುವುದಾದರೆ ಇಲ್ಲಿ ಜನಸಾಮಾನ್ಯರ ಪಾಲಿಗೆ ನ್ಯಾಯದ ಬಾಗಿಲು ಮುಚ್ಚಿದಂತೆಯೇ? ಪ್ರಾಸಿಕ್ಯೂಷನ್, ‘ ಖಾಲಿದ್ ಮತ್ತು ಇತರ ಆರೋಪಿಗಳು ಆಯೋಜಿಸಿದ್ದ ‘ಚಕ್ಕಾ ಜಾಮ್’ (ರಸ್ತೆ ತಡೆಗಟ್ಟುವಿಕೆ ಅಥವಾ ಟ್ರಾಫಿಕ್ ಜಾಮ್ ಮಾಡುವ ಪ್ರತಿಭಟನೆ) ಸಹ ಯುಎಪಿಎ ಸೆಕ್ಷನ್ 15ರಲ್ಲಿ ಹೇಳಿರುವ ‘ಯಾವುದೇ ಇತರ ವಿಧಾನಗಳ, ದಾರಿಗಳ ಮೂಲಕ'(any other means) ಎಂಬ ವ್ಯಾಖ್ಯಾನದ ಅಡಿಯಲ್ಲಿ ಬರುತ್ತದೆ ಎಂದು ವಾದಿಸಿದ್ದಾರೆ. ಖಾಲಿದ್ ಮತ್ತು ಇತರರು ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ‘ಪ್ರಜಾಪ್ರಭುತ್ವದಲ್ಲಿ ಚಕ್ಕಾ ಜಾಮ್ ಅಥವಾ ರಸ್ತೆ ತಡೆಗಟ್ಟುವಿಕೆಗಳಂತ ಮಾರ್ಗಗಳನ್ನು ಪ್ರತಿಭಟನೆಯ ಕಾನೂನುಬದ್ಧ ರೂಪವೆಂದು ಪರಿಗಣಿಸಬೇಕು. ಇದು ಭಾರತದಲ್ಲಿ ರೈತ ಪ್ರತಿಭಟನೆಗಳು, ಇತರ ಸಾಮಾಜಿಕ ಚಳವಳಿಗಳಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಅಹಿಂಸಾತ್ಮಕ ವಿಧಾನವಾಗಿದೆ’ ಎಂದು ಹೇಳಿದರು. ಇದನ್ನು ಪೀಠ ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತದೆ. ಅಂದರೆ ರಸ್ತೆ ತಡೆ ಎನ್ನುವ ಲಾಗಾಯ್ತಿನಿಂದ ನಡೆದುಕೊಂಡು ಬಂದಿರುವ ಪ್ರಜಾತಾಂತ್ರಿಕ ಹೋರಾಟ ಭಯೋತ್ಪಾದನೆಗೆ ಸಮ ಎಂದು ಉಮರ್ ಮತ್ತು ಇತರರ ಪ್ರಕರಣದಲ್ಲಿ ಸಾಬೀತಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಪ್ರಾಸಿಕ್ಯೂಷನ್ನ ಈ ದುರ್ಬಲ ವ್ಯಾಖ್ಯಾನವನ್ನು ಒಪ್ಪಿಕೊಂಡು ‘ಅಂತಹ ಕೃತ್ಯಗಳನ್ನು ಎಸಗುವ ಸಾಧನಗಳು ಬಾಂಬ್ಗಳು, ಸ್ಫೋಟಕ ವಸ್ತುಗಳು, ಶಸ್ತ್ರಾಸ್ತ್ರಗಳು ಅಥವಾ ಇತರ ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಎಂದು ಹೇಳಬೇಕಿಲ್ಲ. ಉದ್ದೇಶಪೂರ್ವಕವಾಗಿ ‘ಯಾವುದೇ ಇತರ ಸಾಧನಗಳ ಮೂಲಕ, ಯಾವುದೇ ಸ್ವರೂಪದಲ್ಲಿ’ ಎಂಬ ಪದಪ್ರಯೋಗವನ್ನು ಬಳಸಿದೆ. ಇದನ್ನು ನಿರ್ಲಕ್ಷಿಸಲಾಗದು. ಆದ್ದರಿಂದ ಕಾನೂನಿನ ಅಡಿಯಲ್ಲಿ ಕೇವಲ ಬಳಸಿದ ಸಾಧನ ಅಥವಾ ಉಪಕರಣದ ಮೇಲೆ ಮಾತ್ರವಲ್ಲದೆ, ಕೃತ್ಯದ ‘ಉದ್ದೇಶ (design/intent), ಯೋಜನೆ ಮತ್ತು ಪರಿಣಾಮದ (effect)’ ಮೇಲಿನ ವ್ಯಾಖ್ಯಾನವನ್ನು ಪರಿಗಣಿಸಲಾಗುತ್ತದೆ ‘ ಎಂದು ತೀರ್ಪಿನಲ್ಲಿ ಹೇಳಿದೆ.

ಅಂದರೆ, ಪ್ರಭುತ್ವ ನೀತಿಗಳನ್ನು ವಿರೋಧಿಸಿ ಹೋರಾಟ ಮಾಡುವುದು ಸರ್ಕಾರವನ್ನು ಬುಡಮೇಲುಗೊಳಿಸುವ ಕೃತ್ಯ, ಇದು ಭಯೋತ್ಪಾದನೆಗೆ ಸಮ ಎಂದು ವಾದಿಸುವ ಮೋದಿ ನೇತೃತ್ವದ ಸರ್ಕಾರವನ್ನು ನ್ಯಾಯಾಂಗವು ಬೆಂಬಲಿಸುತ್ತದೆ ಎಂದು ಶ್ರೀಪಾದ್ ಅಭಿಪ್ರಾಯಪಡುತ್ತಾರೆ. ಹಲವು ಕಾನೂನು ತಜ್ಞರು ಎತ್ತಿರುವ ಪ್ರಶ್ನೆಯೂ ಇದಾಗಿದೆ.
ಇದೆಲ್ಲದ ನಡುವೆ ತೀರಾ ಇತ್ತೀಚೆಗೆ, ಅಂದರೆ ಮೇ 18, 2026ರಂದು, ಮತ್ತೊಂದು ಪ್ರಕರಣದ (ನಾರ್ಕೋ-ಭಯೋತ್ಪಾದನೆ ಪ್ರಕರಣ) ವಿಚಾರಣೆ ನಡೆಸುವಾಗ ಸುಪ್ರೀಂಕೋರ್ಟ್ ಮಹತ್ವ ನಿಲುವು ತಾಳಿದೆ. ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಉಮರ್ ಖಾಲಿದ್ ಅವರಿಗೆ ಜಾಮೀನು ನಿರಾಕರಿಸಿದ ಜನವರಿ ತಿಂಗಳ ತೀರ್ಪಿನ ವಿರುದ್ಧ “ಗಂಭೀರ ಆಕ್ಷೇಪಗಳನ್ನು” (Serious Reservations) ವ್ಯಕ್ತಪಡಿಸಿರುವುದನ್ನು ಭರವಸೆಯ ಬೆಳಕ್ಕೆಂದು ಭಾವಿಸಬಹುದೇ?
“ಜಾಮೀನೇ ನಿಯಮ, ಜೈಲು ಅಪವಾದ (Bail is the rule, jail is the exception) ಎಂಬುದು ಸಂವಿಧಾನದ ವಿಧಿ 21 ಮತ್ತು 22 ರಿಂದ ಹರಿದುಬರುವ ಮೂಲಭೂತ ತತ್ವವಾಗಿದೆ” ಎಂದಿರುವುದು ಉಮರ್ ಮತ್ತು ಶಾರ್ಜಿಲ್ ಅವರಿಗೆ ಈಗಲಾದರೂ ಜಾಮೀನು ದೊರಕಿಸಬಲ್ಲವೇ? ಈಗಲೇ ಏನನ್ನೂ ಹೇಳಲು ಸಾಧ್ಯವಾಗದು. ಜಾಮೀನು ಸಿಕ್ಕಾಗಲಷ್ಟೇ ಅದು ಸತ್ಯ. ಯಾಕೆಂದರೆ ದೆಹಲಿ ಪೊಲೀಸರು ಮತ್ತೆ ತಕರಾರು ತೆಗೆದಿದ್ದಾರೆ. “ಯುಎಪಿಎ ಕಾಯ್ದೆಯಡಿ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಅಥವಾ ಅದರ ಮೇಲೆ ನಿರ್ಬಂಧ ಹೇರುವ ವಿಷಯದಲ್ಲಿ ಸುಪ್ರೀಂಕೋರ್ಟ್‌ನ ಸಮಾನ ಪೀಠಗಳು ನೀಡಿರುವ ತೀರ್ಪುಗಳಲ್ಲಿ ಪರಸ್ಪರ ವಿರೋಧಾಭಾಸಗಳಿವೆ” ಎಂದು ದೆಹಲಿ ಪೊಲೀಸರು ವಾದಿಸಿದ್ದಾರೆ. ಈ ಗೊಂದಲವನ್ನು ಬಗೆಹರಿಸಲು ಈ ವಿಷಯವನ್ನು ಐದು ಅಥವಾ ಅದಕ್ಕಿಂತ ಹೆಚ್ಚಿನ ನ್ಯಾಯಾಧೀಶರಿರುವ ‘ಬೃಹತ್ ಸಾಂವಿಧಾನಿಕ ಪೀಠಕ್ಕೆ’ ಉಲ್ಲೇಖಿಸಬೇಕು ಎಂದು ಪೊಲೀಸರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದಾರೆ. ಆ ಮೂಲಕ ಉಮರ್ ಮತ್ತು ಶಾರ್ಜಿಲ್ ಜಾಮೀನು ಪ್ರಶ್ನೆ ಮತ್ತಷ್ಟು ವಿಳಂಬವಾಗುವಂತೆ ತೋರುತ್ತಿದೆ.



