“ಪ್ರಧಾನಿಯೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿಯೇ ಒಬ್ಬ ಪತ್ರಕರ್ತೆಯ ಧ್ವನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ” ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಓಸ್ಲೊದಲ್ಲಿ ಭಾರತ ಮತ್ತು ನಾರ್ವೆ ಪ್ರಧಾನಿಗಳ ಜಂಟಿ ಮಾಧ್ಯಮ ಗೋಷ್ಠಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾಧ್ಯಮ ಸ್ವಾತಂತ್ರ್ಯದ ಕುರಿತು ಪ್ರಶ್ನೆ ಕೇಳಿದ್ದ ನಾರ್ವೆಯ ಪತ್ರಕರ್ತೆ ಹೆಲೆ ಲಿಂಗ್ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಸಸ್ಪೆಂಡ್ ಆಗಿವೆ. ಮೇ 20ರ ಬುಧವಾರದಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ನಾರ್ವೆಯ ಪತ್ರಕರ್ತೆ ಹೆಲೆ ತಮ್ಮ ಎಕ್ಸ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಪೋಸ್ಟ್ ಮಾಡಿರುವ ಹೆಲೆ, “ದಿನವಿಡೀ ನಾನು ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಲಾಗಿನ್ ಆಗಲು ಹೆಣಗಾಡಿದ್ದೇನೆ. ಈಗ ನನ್ನ ಖಾತೆಗಳನ್ನು ಅಮಾನತುಗೊಳಿಸಲಾಗಿದೆ. ಇದು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ನಾನು ತೆತ್ತ ಒಂದು ಸಣ್ಣ ಬೆಲೆ. ಹಿಂದೆದೂ ನನಗೆ ಈ ರೀತಿ ಆಗಿರಲಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ನಾರ್ವೆಯಲ್ಲಿ ಭಾರತಕ್ಕೆ ಮತ್ತೆ ಮುಜುಗರ; ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ಹೊರಬಂದ ಮೋದಿ
ನಾರ್ವೆಯ ‘ಡಾಗ್‌ಸಾವಿಸೆನ್’ ಪತ್ರಿಕೆಯಲ್ಲಿ ಕೆಲಸ ಮಾಡುವ ಹೆಲೆ ಲಿಂಗ್ ಪ್ರಧಾನಿ ಮೋದಿ ಅವರ ನಾರ್ವೆ ಪ್ರವಾಸದ ವೇಳೆ “ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತೀರಾ” ಎಂದು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದ್ದರು. ಈ ವೇಳೆ ಮೋದಿ ಅವರು ಯಾವುದೇ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಹೊರನಡೆದಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಕೆಲ ಭಾರತೀಯರು ಹೆಲೆಯನ್ನು ಪರವಾಗಿ ನಿಂತರೆ ಕೆಲವರು ವಿರೋಧಿಸಿದ್ದರು.
ಇನ್ನು ಈ ಘಟನೆಯ ನಂತರ ಅವರು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಅಧಿಕಾರಿಗಳೊಂದಿಗೂ ಮಾಧ್ಯಮ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಕುರಿತು ವಾಗ್ವಾದ ನಡೆಸಿದ್ದರು. ಇದರ ಬೆನ್ನಲ್ಲೇ ಜಾಲತಾಣಗಳಲ್ಲಿ ಅವರನ್ನು “ವಿದೇಶಿ ಏಜೆಂಟ್” ಅಥವಾ “ಚೀನಾ ಪರ ಪ್ರಚಾರಕಿ” ಎಂದು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಇದೀಗ ಅವರ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಗಳನ್ನು ಮೆಟಾ ಸಸ್ಪೆಂಡ್ ಮಾಡಿದೆ.
ಇದನ್ನು ಓದಿದ್ದೀರಾ? ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!
“ನಾನು ಹೆಚ್ಚಿನ ಭಾರತೀಯರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಉತ್ತರಿಸಲು ಬಯಸಿದ್ದೆ. ಆದರೆ ಈಗ ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳು ಸಸ್ಪೆಂಡ್ ಆಗಿರುವುದರಿಂದ ಪ್ರತಿಕ್ರಿಯಿಸಲು ತಡವಾಗಬಹುದು. ಮೆಟಾ (Meta) ಸಂಸ್ಥೆಯು ಶೀಘ್ರದಲ್ಲೇ ನನ್ನ ಖಾತೆಗಳನ್ನು ಮರುಸ್ಥಾಪಿಸುತ್ತದೆ ಎಂದು ಭಾವಿಸುತ್ತೇನೆ” ಎಂದು ಪತ್ರಕರ್ತೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಹೆಲೆ ಖಾತೆಗಳನ್ನು ಸಸ್ಪೆಂಡ್ ಮಾಡಿರುವುದರ ವಿರುದ್ಧ ಜಾಗತಿಕವಾಗಿ ಮತ್ತು ಭಾರತೀಯ ಸಾಮಾಜಿಕ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕ್ರಮವನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಹಲವರು ಬಣ್ಣಿಸುತ್ತಿದ್ದಾರೆ.
ಹೆಲೆ ಪ್ರಧಾನಿ ಮೋದಿಯವರನ್ನು ಪ್ರಶ್ನಿಸಿದ ನಂತರ, ಭಾರತೀಯ ಮೂಲದ ಸಾವಿರಾರು ಟ್ರೋಲ್ ಖಾತೆಗಳು ಹೆಲೆ ವಿರುದ್ಧ ಮುಗಿಬಿದ್ದಿದ್ದವು. ಈ ಗುಂಪುಗಳು ಸಂಘಟಿತವಾಗಿ ಅವರ ಖಾತೆಗಳ ವಿರುದ್ಧ ‘ಮಾಸ್ ರಿಪೋರ್ಟ್’ (Mass Reporting) ಮಾಡಿವೆ. ಆದರೆ ಮೆಟಾ ಯಾವುದೇ ಸರಿಯಾದ ತನಿಖೆ ನಡೆಸದೆ, ಕೇವಲ ರಿಪೋರ್ಟ್‌ಗಳ ಸಂಖ್ಯೆಯನ್ನು ನೋಡಿ ಖಾತೆಗಳನ್ನು ಸಸ್ಪೆಂಡ್ ಮಾಡಿದೆ ಎಂದು ತಂತ್ರಜ್ಞಾನ ವಿಶ್ಲೇಷಕರು ಮತ್ತು ನೆಟ್ಟಿಗರು ಮೆಟಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೊಂದೆಡೆ ಮೆಟಾ ಸಂಸ್ಥೆಗೆ ಭಾರತವು ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಹೀಗಾಗಿ, ರಾಜಕೀಯ ಒತ್ತಡಕ್ಕೆ ಮಣಿದು ಸಂಸ್ಥೆಯು ಪತ್ರಕರ್ತೆಯ ಖಾತೆಗಳನ್ನು ಮುಚ್ಚಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. “ಪ್ರಧಾನಿಯೊಬ್ಬರನ್ನು ಪ್ರಶ್ನಿಸಿದ್ದಕ್ಕಾಗಿಯೇ ಒಬ್ಬ ಪತ್ರಕರ್ತೆಯ ಧ್ವನಿಯನ್ನು ಅಡಗಿಸುವುದು ಪ್ರಜಾಪ್ರಭುತ್ವ ವಿರೋಧಿ ನಡೆ” ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.




