ತಾನು ಡಿವೈಎಸ್‌ಪಿ ಎಂದು ಹೇಳಿಕೊಂಡು ಪೊಲೀಸ್ ಉದ್ಯೋಗ ಮತ್ತು ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ನಿರುದ್ಯೋಗಿ ಯುವಜನರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ, ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ ನಕಲಿ ಡಿವೈಎಸ್‌ಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿರುವ ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗೋಡದಿನ್ನಿ ನಿವಾಸಿ ಸಿ. ಸಂಪತ್‌ಕುಮಾರ ಸಿದ್ದನಗೌಡ ಪಾಟೀಲ ಎಂದು ಹೆಸರಿಸಲಾಗಿದೆ. ಈತ ತನ್ನ ಹೆಸರನ್ನು ಗ್ಯಾನನಗೌಡ, ಜ್ಞಾನಗೌಡ, ಗಣೇಶ ಎಂಬ ನಾನಾ ಹೆಸರಿನಲ್ಲಿ ಗುರುತಿಸಿಕೊಂಡು ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
“ಆರೋಪಿ ಸಂಪತ್‌ಕುಮಾರ ತಾನು ಡಿವೈಎಸ್‌ಪಿ ಎಂದು ಪರಿಚಯಿಸಿಕೊಂಡು ಖಾಕಿ ಸಮವಸ್ತ್ರ ಧರಿಸಿ, ನಿರುದ್ಯೋಗಿ ಯುವಜನರಿಗೆ ಪೊಲೀಸ್ ಮತ್ತು ಪಿಎಸ್‌ಐ ಹುದ್ದೆ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ. 2012ರಲ್ಲಿ ಗಾಂಧಿನಗರ ನಿವಾಸಿ ವಿಠ್ಠಲ ಛಾಯಾಗೋಳ ಅವರ ಸಂಬಂಧಿಕರಿಗೆ ಪೊಲೀಸ್ ಉದ್ಯೋಗ ಕೊಡಿಸುವುದಾಗಿ ಹೇಳಿ 1.20 ಲಕ್ಷ ರೂ. ಪಡೆದುಕೊಂಡಿದ್ದ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿಠ್ಠಲ್ ಅವರು ತಮ್ಮ ಹಣವನ್ನು ಹಿಂದಿರುಗಿಸುವಂತೆ ಒತ್ತಾಯಿಸಿದಾಗ, ಅವರನ್ನು 2014ರ ಮಾರ್ಚ್ 26ರಂದು ಅಪಹರಿಸಿದ್ದ ಆರೋಪಿ ಸಂಪತ್ ಕುಮಾರ, ಕೊಪ್ಪಳಕ್ಕೆ ಕರೆದೊಯ್ದು, ಅಲ್ಲಿ ಭೀಕರವಾಗಿ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದ್ದ. ಸಂತ್ರಸ್ತ ವಿಠ್ಠಲ್ ಅವರು ವಿಜಯಪುರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಸಂಪತ್ ಕುಮಾರ ಮತ್ತು ಆತನ ಇಬ್ಬರು ಸಹಚರರನ್ನು ಬಂಧಿಸಿ, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ವಿಚಾರಣೆಗಳಿಗೆ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 12 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಬಳಿಕ, ಆತನ ಬಂಧನಕ್ಕೆ ಕೋರ್ಟ್ ಸೂಚಿಸಿತ್ತು.
ಈ ಲೇಖನ ಓದಿದ್ದೀರಾ?: 20 ವರ್ಷ ಗೆಲ್ಲಿಸಿದವರನ್ನೇ ಬಾಂಗ್ಲಾದೇಶಿಗರು ಎಂದರಾ ಎಚ್‌ಡಿಕೆ?
ಅಲ್ಲದೆ, ತಲೆಮರೆಸಿಕೊಂಡಿದ್ದ ಸಮಯದಲ್ಲಿಯೂ ತನ್ನ ವಂಚನೆಯನ್ನು ಮುಂದುವರೆಸಿದ್ದ ಸಂಪತ್ ಕುಮಾರ, ರೇವಣಸಿದ್ದಪ್ಪ ದೊಡಮನಿ ಎಂಬವರ ಪುತ್ರನಿಗೆ ಜೈಲರ್ ಉದ್ಯೋಗ ಕೊಡಿಸುವುದಾಗಿ ಹೇಳಿ 8 ಲಕ್ಷ ರೂ. ಪಡೆದು ವಂಚಿಸಿದ್ದ. ಈ ಸಂಬಂಧ 2026ರಲ್ಲಿ ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಆರೋಪಿಯ ವಿರುದ್ಧ ಮುದ್ದೇಬಿಹಾಳ, ಆದರ್ಶನಗರ ಪೊಲೀಸ್ ಠಾಣೆಗಳಲ್ಲೂ ವಂಚನೆ, ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ, ಆರೋಪಿಯ ಬಂಧನಕ್ಕೆ ಶೋಧ ಆರಂಭಿಸಿದ್ದ ವಿಜಯಪುರ ಎಪಿಎಂಸಿ ಠಾಣಾ ಪೊಲೀಸರು, ಆರೋಪಿಯ ವಿವಿಧ ಮೊಬೈಲ್ ಸಂಖ್ಯೆಗಳ ವಿಶ್ಲೇಷಣೆ ಆಧರಿಸಿ ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿ ಸಂಪತ್ ಕುಮಾರನನ್ನು ಬಂಧಿಸಿದ್ದಾರೆ.



