ಈಗ ಯಾರನ್ನ ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರು ಕರೆಯುತ್ತಿದ್ದಾರೆಯೋ ಅದೇ ಮುಸ್ಲಿಮರು 20 ವರ್ಷಗಳ ಕಾಲ ಕುಮಾರಸ್ವಾಮಿ ಅವರಿಗೆ ಮತಹಾಕಿ, ನಿರಂತರವಾಗಿ ಗೆಲ್ಲಿಸಿದ್ದರು. ಆಗ, ಇವರಾರು ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರಿಗೆ ಅನ್ನಿಸಿರಲಿಲ್ಲ. ಆದ್ರೆ, ಈಗ ಅದೂ ಬಿಜೆಪಿ ಜೊತೆ ಸೇರಿದ ಮೇಲೆ ಈ ಮುಸ್ಲಿಂ ಜನ ಕುಮಾರಸ್ವಾಮಿ ಅವರ ಕಣ್ಣಿಗೆ ಬಾಂಗ್ಲಾದವರ ರೀತಿ ಕಾಣುತ್ತಿದ್ದಾರೆ.
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಗುರುವಾರ ಧಾವಂತಕ್ಕೆ ಬಿದ್ದ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ರಾಮನಗರದಲ್ಲಿ ಎಸ್‌ಐಆರ್ ಪ್ರಕ್ರಿಯೆಗಾಗಿ ಜನರನ್ನು ಒಟ್ಟಾಗಿ ಸೇರಿಸಿ ಎನ್ಯುಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿದ್ದ ವಿಡಿಯೋವನ್ನು ತೋರಿಸಿ, ‘ಇಲ್ಲಿ ನೋಡಿ ರಾಮನಗರದಲ್ಲಿ ಬಿಎಲ್‌ಒಗಳು ಚೌಟ್ರಿಗಳಲ್ಲಿ ಕುಳಿತುಕೊಂಡು ಎನ್ಯುಮರೇಷನ್ ಫಾರ್ಮ್ ತುಂಬುತ್ತಿದ್ದಾರೆ. ಇವರೆಲ್ಲ ಒಂದು ಕೋಮುವಿಗೆ ಸೇರಿದವರು. ಇವರಲ್ಲಿ ಫೇಕ್ ಐಡಿಗಳು ಇರುವವರು, ಬಹುಶಃ ಬಾಂಗ್ಲಾದೇಶದಿಂದ ಬಂದವರು ಬಹಳ ಜನ ಇದ್ದಾರೆ. ಕನಿಷ್ಠ 8ರಿಂದ 10,000 ಬಾಂಗ್ಲಾದೇಶಿಗರು ರಾಮನಗರ-ಚನ್ನಪಟ್ಟಣ ಭಾಗದಲ್ಲಿದ್ದಾರೆ. ಕಳ್ಳಮತಗಳನ್ನು ಸೃಷ್ಠಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.
ತಮ್ಮ ಪಕ್ಷ ಜಾತ್ಯತೀತ ಜನತಾದಳ. ನಮ್ಮದು ಜಾತ್ಯತೀತವಾದ ಪಕ್ಷ ಎಂದು ಪುಂಖಾನುಪುಂಖ ಘೋಷಿಸುತ್ತಿದ್ದ ಎಚ್.ಡಿ ಕುಮಾರಸ್ವಾಮಿ ಅವರು ಈಗ ಬಿಜೆಪಿ ಮಡಿಲು ಸೇರಿದ್ದಾರೆ. ಬಿಜೆಪಿಯ ಧಾಟಿಯಲ್ಲೇ ಮಾತನಾಡುತ್ತಿದ್ದಾರೆ. ಬಿಜೆಪಿಯಂತೆಯೇ ಸುಳ್ಳು-ಆಧಾರರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಇಷ್ಟು ವರ್ಷ ಕುಮಾರಸ್ವಾಮಿ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದ, ಮುಖ್ಯಮಂತ್ರಿ ಆಗೋದಕ್ಕೂ ಅವಕಾಶ ಮಾಡಿಕೊಟ್ಟಿದ್ದ ಇದೇ ರಾಮನಗರದ ಮುಸ್ಲಿಂ ಸಮುದಾಯವನ್ನ ಬಾಂಗ್ಲಾದೇಶಿಗರು, ಕಳ್ಳ ಮತದಾರರು ಅಂತ ಆರೋಪ ಮಾಡಿದ್ದು ಎಷ್ಟು ಸರಿ ಎಂಬ ಚರ್ಚೆ ನಡೆಯುತ್ತಿದೆ.
ವಾಸ್ತವ ಏನು ಗೊತ್ತೇ?
ಬಿಎಲ್‌ಒಗಳು ಮುಸ್ಲಿಂ ಜನರನ್ನು ಒಗ್ಗೂಡಿಸಿ ಎನ್ಯುಮರೇಷನ್ ಫಾರ್ಮ್ ತುಂಬುತ್ತಿರುವ ಸ್ಥಳ ‘ಚೌಟ್ರಿ’ (ಕಲ್ಯಾಣ ಮಂಟಪ) ಅಲ್ಲ. ಅದು ಗ್ಲೋಬಲ್ ಪಬ್ಲಿಕ್ ಶಾಲೆ. ಅಲ್ಲಿ, ರಾಮನಗರ ನಗರಸಭೆಯ ವಾರ್ಡ್ 23ರ ಮತದಾರರನ್ನು ಸೇರಿಸಿ ಎನ್ಯುಮರೇಷನ್ ಫಾರ್ಮ್ ತುಂಬುವ ಈ ಸಭೆಯನ್ನ ಸ್ಥಳೀಯ ಕೌನ್ಸಿಲರ್ ಫಿರೋಜ್ ಆಯೋಜಿಸಿದ್ದರು. ಯಾಕೆ ಅಂದ್ರೆ, ಆ ವಾರ್ಡ್‌ನ ಬಹುಸಂಖ್ಯಾತರು ಕಾರ್ಮಿಕರು. ಬೆಳಗ್ಗೆ ಕೆಲಸಕ್ಕೆ ಹೋದರೆ, ಬರೋದು ಸಂಜೆಯೇ. ಬಿಎಲ್‌ಒಗಳು ಮನೆಗೆ ಬಂದಾಗ, ಇವರಾರೂ ಮನೆಯಲ್ಲಿ ಇರೋದಿಲ್ಲ. ಎನ್ಯುಮರೇಷನ್ ಫಾರ್ಮ್ ತುಂಬೋಕೂ ಆಗುವುದಿಲ್ಲ. ಹಾಗಾಗಿನೇ, ಅವರೆಲ್ಲ ಎಸ್‌ಐಆರ್ ಪ್ರಕ್ರಿಯೆಯಿಂದ ಹೊರಗುಳಿಬಾರದು ಅನ್ನೋ ಕಾರಣ ಸಂಜೆ 4 ಗಂಟೆ ನಂತರ ಬಿಎಲ್‌ಒಗಳನ್ನ ಕರೆಸಿ, ಮತದಾರರನ್ನೂ ಒಗ್ಗೂಡಿಸಿ ಎನ್ಯುಮರೇಷನ್ ತುಂಬುವ ಸಭೆಯನ್ನ ಫಿರೋಜ್ ಆಯೋಜಿಸಿದ್ದರು. ಅವರಾರೂ ಬಾಂಗ್ಲಾದೇಶಿಗರೂ ಅಲ್ಲ, ಅವರಿಗೆ ಬಂಗಾಳಿ ಭಾಷೆನೂ ಬರಲ್ಲ!
ಆದರೆ, ಈ ಸತ್ಯದ ಅರಿವೂ ಇಲ್ಲದ, ಸತ್ಯವನ್ನ ತಿಳಿದುಕೊಳ್ಳುವ ವ್ಯವದಾನವೂ ಇಲ್ಲದ ಕೋಮುವಾದಿ ಕಿಡಿಗೇಡಿಗಳು ಅದನ್ನ ವಿಡಿಯೋ ಮಾಡಿ, ಬಾಂಗ್ಲಾದೇಶಿ ಅಕ್ರಮ ವಲಸಿಗರೆಲ್ಲ ಒಂದೇ ಕಡೆ ಸೇರಿ, ಎನ್ಯುಮರೇಷನ್ ಫಾರ್ಮ್ ತುಂಬುತ್ತಿದ್ದಾರೆ ಅಂತ ಪುಕಾರು ಹಬ್ಬಿಸಿದ್ದಾರೆ. ಅದೇ ವಿಡಿಯೋವನ್ನು ಇಟ್ಟುಕೊಂಡು ತಾವೊಬ್ಬ ಕೇಂದ್ರ ಸಚಿವ, ಏನೇ ಮಾತನಾಡೋದಕ್ಕೂ ಮುನ್ನ ಸತ್ಯವೇನು ಅಂತ ಪರಿಶೀಲನೆ ಮಾಡಬೇಕು ಅನ್ನುವ ಸಾಮಾನ್ಯ ಪರಿಜ್ಞಾನವೂ ಇಲ್ಲದೆ ಕುಮಾರಸ್ವಾಮಿ ಅವರು ದಿಢೀರ್ ಪತ್ರಿಕಾಗೋಷ್ಠಿ ಕರೆದು, ರಾಮನಗರದಲ್ಲಿ 10,000 ಬಾಂಗ್ಲಾದೇಶಿಗರಿದ್ದಾರೆ. ಅವರೆಲ್ಲ ಕಳ್ಳ ಮತದಾರರು, ಮಣ್ಣು-ಮಸಿ ಅಂತ ಸುಳ್ಳುಗಳ ಸರಮಾಲೆ ಹೆಣೆದೇ ಬಿಟ್ಟರು.
ಇನ್ನೊಂದು ಮುಖ್ಯವಿಚಾರ ಏನು ಅಂದ್ರೆ, ಇದೇ ರಾಮನಗರದಲ್ಲಿ ಎಚ್.ಡಿ ಕುಮಾರಸ್ವಾಮಿ ಅವರು 2004ರಿಂದ 2018ರ ವಿಧಾನಸಭಾ ಚುನಾವಣೆವರೆಗೆ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ರಾಮನಗರ-ಚನ್ನಪಟ್ಟಣ ಎರಡೂ ಕಡೆ ಗೆದ್ದ ಕುಮಾರಸ್ವಾಮಿ ಅವರು ರಾಮನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನ ಕಣಕ್ಕಿಳಿಸಿದ್ದರು. ಅನಿತಾ ಅವರೂ ರಾಮನಗರದಿಂದ ಗೆದ್ದು ಶಾಸಕಿಯಾಗಿದ್ದರು. ಇವರ ಈ 20 ವರ್ಷಗಳ ರಾಜಕೀಯಕ್ಕೆ ಮಣ್ಣು-ಗೊಬ್ಬರ ಎರೆದದ್ದೇ ರಾಮನಗರ ಮತ್ತು ಅಲ್ಲಿನ ಮುಸ್ಲಿಮರೂ ಕೂಡ.
ಈಗ ಯಾರನ್ನ ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರು ಕರೆಯುತ್ತಿದ್ದಾರೆಯೋ ಅದೇ ಮುಸ್ಲಿಮರು 20 ವರ್ಷಗಳ ಕಾಲ ಕುಮಾರಸ್ವಾಮಿ ಅವರಿಗೆ ಮತಹಾಕಿ, ನಿರಂತರವಾಗಿ ಗೆಲ್ಲಿಸಿದ್ದರು. ಆಗ, ಇವರಾರು ಬಾಂಗ್ಲಾದೇಶಿಗರು ಅಂತ ಕುಮಾರಸ್ವಾಮಿ ಅವರಿಗೆ ಅನ್ನಿಸಿರಲಿಲ್ಲ. ಆದ್ರೆ, ಈಗ ಅದೂ ಬಿಜೆಪಿ ಜೊತೆ ಸೇರಿದ ಮೇಲೆ ಈ ಮುಸ್ಲಿಂ ಜನ ಕುಮಾರಸ್ವಾಮಿ ಅವರ ಕಣ್ಣಿಗೆ ಬಾಂಗ್ಲಾದವರ ರೀತಿ ಕಾಣುತ್ತಿದ್ದಾರೆ.
ಇದು 2023ರ ಸೋಲಿನ ಹತಾಶೆ ಮತ್ತು ಮೋದಿ ಸರ್ಕಾರದಲ್ಲಿ ಮಂತ್ರಿಗಿರಿ ಉಳಿಸಿಕೊಳ್ಳುವ ತುಡಿತ
2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ತಮ್ಮ ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಒಂದು ಹೇಳಿಕೆ ಕೊಟ್ಟಿದ್ದರು. ಅದೇನಂದ್ರೆ; “ನಾನು ಬಿಜೆಪಿ ಜೊತೆ ಕೈಜೋಡಿಸಿರಬಹುದು, ಆದರೆ ನನ್ನ ಜಾತ್ಯತೀತ ಸಿದ್ಧಾಂತವನ್ನು ಬಿಟ್ಟಿಲ್ಲ. ನನ್ನ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲಿ ರಾಜ್ಯದಲ್ಲಿ ಯಾವುದೇ ಕೋಮು ಗಲಭೆ ನಡೆಯಲು ನಾನು ಬಿಟ್ಟಿರಲಿಲ್ಲ. ಮುಂದೆಯೂ ಮುಸ್ಲಿಂ ಸಮುದಾಯದ ಹಿತಾಸಕ್ತಿ ಹಾಗೂ ರಕ್ಷಣೆಗೆ ಧಕ್ಕೆ ಬಾರದಂತೆ ನಾನು ನೋಡಿಕೊಳ್ಳುತ್ತೇನೆ” ಅಂತ ಕುಮಾರಸ್ವಾಮಿ ಹೇಳಿದ್ದರು.
ಆದರೆ, ಈಗ 20 ವರ್ಷಗಳ ಕಾಲ ತಮ್ಮನ್ನೇ ಗೆಲ್ಲಿಸಿದ್ದ ಅದೇ ಮುಸ್ಲಿಮರನ್ನ ಬಾಂಗ್ಲಾದವರು, ಕಳ್ಳಮತದಾರರು ಎನ್ನುತ್ತಿದ್ದಾರೆ. ಸ್ಥಳೀಯ ಮತದಾರರ ಪೌರತ್ವವನ್ನು ಪ್ರಶ್ನಿಸಿರುವ ಅವರ ಹೇಳಿಕೆ ಅಕ್ಷರಶಃ ರಾಜಕೀಯ ಪ್ರೇರಿತ ಮತ್ತು ತೀವ್ರ ಹತಾಶೆಯಿಂದ ಕೂಡಿದ್ದು. ಇತ್ತೀಚಿನ ವರ್ಷಗಳಲ್ಲಿ ರಾಮನಗರ, ಚನ್ನಪಟ್ಟಣಗಳಲ್ಲಿ ತಮಗಾಗುತ್ತಿರುವ ರಾಜಕೀಯ ಹಿನ್ನಡೆಯಿಂದ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಇಷ್ಟು ದಿನ ತಮಗೆ ಮತ ಹಾಕಿದವರು, ಈಗ ತಮ್ಮ ವಿರೋಧಿಗಳಿಗೆ ಮತ ಹಾಕುತ್ತಿದ್ದಾರೆ ಎಂಬ ಅಸಹನ ಅವರಲ್ಲಿ ಢಾಳಾಗಿದೆ.
ಕುಮಾರಸ್ವಾಮಿ ಅವರ ಈ ಹತಾಶೆಯ ಮೂಲ ಇರುವುದು 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ. ತಮ್ಮ ಭದ್ರಕೋಟೆ, ತಮ್ಮ ಕುಟುಂಬದಲ್ಲಿ ಯಾರೇ ಗೆದ್ದರೂ ರಾಮನಗರ ಮಂದಿ ಮತಹಾಕಿ, ನಮ್ಮನ್ನ ವಿಧಾನಸೌಧಕ್ಕೆ ಕಳಿಸುತ್ತಾರೆ ಎಂಬ ಭ್ರಾಂತಿ ಕುಮಾರಸ್ವಾಮಿ ಅವರಿತ್ತು. ಜೊತೆಗೆ, 2019ರಲ್ಲಿ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸೋತಿದ್ದ ತಮ್ಮ ಮಗ ನಿಖಿಲ್‌ಗೂ ರಾಜಕೀಯ ನೆಲೆ ಒದಗಿಸಬೇಕು ಅನ್ನೋ ಧಾವಂತ ಇತ್ತು. 2023ರಲ್ಲಿ ನಿಖಿಲ್‌ನನ್ನು ರಾಮನಗರದಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದ್ದರು. ಆದರೆ, ರಾಮನಗರದ ಪ್ರಬುದ್ಧ ಮತದಾರರು ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಸೋಲಿನ ರುಚಿ ತೋರಿಸಿದರು. ತಮ್ಮದೇ ಹಿಡಿತದಲ್ಲಿದ್ದ ಹಳೆಯ ಸಾಮ್ರಾಜ್ಯದಲ್ಲಿ ಸ್ವಂತ ಮಗನ ಈ ಹೀನಾಯ ಸೋಲು ಕುಮಾರಸ್ವಾಮಿ ಅವರಿಗೆ ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಅರಗಿಸಿಕೊಳ್ಳಲಾಗದ ತೀವ್ರ ಆಘಾತ ನೀಡಿತು.
ಜೊತೆಗೆ, ಇತ್ತೀಚಿನ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳು ಒಕ್ಕಲಿಗ ಸಮುದಾಯದ ನಾಯಕತ್ವದ ವಿಚಾರದಲ್ಲಿ ಕುಮಾರಸ್ವಾಮಿ ಅವರಿಗೆ ಅಭದ್ರತೆಯನ್ನು ಸೃಷ್ಟಿಸಿವೆ. ಹಳೇ ಮೈಸೂರು ಭಾಗದಲ್ಲಿ ಮತ್ತು ಒಕ್ಕಲಿಗ ಸಮುದಾಯದ ಪ್ರಭಾವಿಗಳಲ್ಲಿ ಒಬ್ಬರಾದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದ ಮೇಲೆ, ತಮ್ಮ ಸಾಂಪ್ರದಾಯಿಕ ಒಕ್ಕಲಿಗ ಮತಬ್ಯಾಂಕ್ ಸಂಪೂರ್ಣವಾಗಿ ಕಾಂಗ್ರೆಸ್‌ನತ್ತ ತಿರುಗುತ್ತದೆ ಅನ್ನೋ ಭೀತಿ ಕುಮಾರಸ್ವಾಮಿ ಅವರಿಗೆ ಎದುರಾಗಿದೆ. ರಾಮನಗರವನ್ನ ತಾವು ಕಳೆದುಕೊಂಡರೆ ಮುಂದೇನು ಅಂತ ಆತಂಕ ಅವರಿಗಿದೆ.
ಯಾಕೆ ಅಂದ್ರೆ, ಕುಮಾರಸ್ವಾಮಿ ಅವರಿಗೆ ತಮ್ಮದೇ ಸ್ವಂತ ಜಿಲ್ಲೆ ಹಾಸನಕ್ಕೆ ಎಂಟ್ರಿಯೇ ಇಲ್ಲ. ಅಲ್ಲಿ ಅವರ ಅಣ್ಣ ಎಚ್.ಡಿ. ರೇವಣ್ಣನದ್ದೇ ತೀವ್ರ ಹಿಡಿತ. ಅಲ್ಲಿ ಕುಮಾರಸ್ವಾಮಿ ಮತ್ತು ಅವರ ಕುಟುಂಬ ರಾಜಕೀಯವಾಗಿ ಕಾಲಿಡೋದಕ್ಕೆ ರೇವಣ್ಣ ಬಿಡೋದಿಲ್ಲ. ಇತ್ತ ಮಂಡ್ಯದ ವಾಸ್ತವಗಳು ಬದಲಾಗಿದೆ. ಕುಮಾರಸ್ವಾಮಿ ಅವರ ಕುಟುಂಬದವರಿಗೆ ಮಂಡ್ಯದಲ್ಲಿ ಜನ ಅವಕಾಶ ಕೊಡೋದಿಲ್ಲ. ಹಾಸನ, ರಾಮನಗರ ಮತ್ತು ಮಂಡ್ಯದಲ್ಲಿ ಕಾಂಗ್ರೆಸ್ ಬಲ ಹೆಚ್ಚಾಗುತ್ತಿದೆ. ಇದೆಲ್ಲವೂ ಕುಮಾರಸ್ವಾಮಿ ಅವರಿಗೆ ಅಭದ್ರತೆ ಸೃಷ್ಟಿಸಿದೆ. ತಮಗೆ ಭವಿಷ್ಯದಲ್ಲಿ ಬಲವಾದ ರಾಜಕೀಯ ಅಸ್ತಿತ್ವವೇ ಉಳಿಯುವುದಿಲ್ಲ ಎಂಬ ಸತ್ಯ ಕುಮಾರಸ್ವಾಮಿ ಅವರಿಗೆ ಮನವರಿಕೆಯಾಗಿದೆ.
ಈ ಲೇಖನ ಓದಿದ್ದೀರಾ?: ರಾಮ ಮಂದಿರ ದೇಣಿಗೆ ದಗಾ: ಬಿಜೆಪಿಯ ಅವನತಿ ಆರಂಭ
ಈ ಅಭದ್ರತೆಯಲ್ಲಿರುವ ಕುಮಾರಸ್ವಾಮಿ, ರಾಮನಗರವನ್ನು ಹೇಗಾದರೂ ತಮ್ಮ ಹಿಡಿತದ್ದೇ ಉಳಿಸಿಕೊಳ್ಳಬೇಕು ಅನ್ನೋ ಧಾವಂತ ಇದೆ. ಅದಕ್ಕಾಗಿ, ಬಿಜೆಪಿ ಹಾದಿಯಲ್ಲಿ ಬಹುಸಂಖ್ಯಾತರು ಮತ್ತು ಅಲ್ಪಸಂಖ್ಯಾತ ಮತದಾರರ ನಡುವೆ ಬಿರುಕು ಮೂಡಿಸುವ ಕೋಮು ಧ್ರುವೀಕರಣದ ತಂತ್ರಕ್ಕೆ ಶರಣಾಗಿದ್ದಾರೆ.
ಬಿಜೆಪಿಯ ಹಳಸಿದ ಹೂರಣವೇ ಬಯಲಾಗಿರುವಾಗ, ಎಚ್‌ಡಿಕೆಯ ಸುಳ್ಳು ಫಲಿಸುವುದೇ?
ಹಾಗೆ ನೋಡಿದ್ರೆ, ಬಿಜೆಪಿ ಈ ಹಿಂದೆ ಬಿಹಾರ ಮತ್ತು ಪಶ್ಚಿಮ ಬಂಗಾಳದ ಗಡಿ ಜಿಲ್ಲೆಗಳಲ್ಲಿ ಲಕ್ಷಾಂತರ ಬಾಂಗ್ಲಾದೇಶಿ ಹಾಗೂ ರೋಹಿಂಗ್ಯಾ ನುಸುಳುಕೋರರು ಅಕ್ರಮವಾಗಿ ನೆಲೆಸಿದ್ದಾರೆ. ಅವರೆಲ್ಲ ಭಾರತೀಯ ಮತದಾರರ ಪಟ್ಟಿಗೆ ಸೇರಿಕೊಂಡಿದ್ದಾರೆ ಎಂದು ಭಾರಿ ಪ್ರಚಾರ ಮಾಡಿತ್ತು. ಎಸ್‌ಐಆರ್ ಮೂಲಕ ನುಸುಳುಕೋರರು ಹಿಡಿದು ಹಾಕಲಾಗುತ್ತದೆ ಅಂತನೂ ಬಡಬಡಾಯಿಸಿತ್ತು.
ಆದರೆ, ಎಸ್‌ಐಆರ್‌ನಲ್ಲಿ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ 1.5 ಕೋಟಿ ಮತದಾರರನ್ನು ಮತಪಟ್ಟಿಯಿಂದ ಹೊರಹಾಕಲಾಗಿದೆ. ಆದರೆ, ಅವರಲ್ಲಿ ಪತ್ತೆಯಾದ ನುಸುಳುಕೋರರ ಸಂಖ್ಯೆ ಎಷ್ಟು ಗೊತ್ತೇ? ಕೇವಲ ನಾಲ್ಕೈದು ಮಂದಿ ಮಾತ್ರ. ಇದು ಗುಡ್ಡ ಅಗೆದು ಇಲಿ ಹಿಡಿದಂತಿದೆ.
ಬಾಂಗ್ಲಾ ಗಡಿಯಲ್ಲಿರುವ ಬಿಹಾರ, ಪಶ್ಚಿಮ ಬಂಗಾಳದಲ್ಲೇ ಬಾಂಗ್ಲಾ ಪ್ರಜೆಗಳು, ನುಸುಳುಕೋರರು ಇಲ್ಲದಿರುವಾಗ, ಕರ್ನಾಟಕದಲ್ಲಿ ಅದರಲ್ಲೂ ರಾಮನಗರದಲ್ಲಿ 10,000 ಬಾಂಗ್ಲಾದೇಶಿಗರು ಬಂದುಬಿಡುವರೇ? 10,000 ಬಾಂಗ್ಲಾದೇಶಿಗರು ಇದ್ದಾರೆ ಎನ್ನುವ ಕುಮಾರಸ್ವಾಮಿ ಅವರೇ, “ನೀವು ಕೇಂದ್ರ ಸಚಿವರಾಗಿದ್ದೀರಿ. ರಾಮನಗರದಲ್ಲಿ ನಿಜಕ್ಕೂ ಬಾಂಗ್ಲಾದೇಶಿ ಪ್ರಜೆಗಳು ಇದ್ದರೆ, ಅವರನ್ನು ಗುರುತಿಸಿ, ಪ್ರಕರಣ ದಾಖಲಿಸಿ, ಬಂಧಿಸಿ, ಬಾಂಗ್ಲಾಗೆ ವಾಪಸ್ ಕಳಿಸಿ. ಆ ತಾಕತ್ತು ನಿಮಗೆ ಇದೆ ಅಲ್ವೇ. ಆದರೆ, ಅವರನ್ನ ಬಾಂಗ್ಲಾದೇಶಿಗರು ಅನ್ನೋದಕ್ಕೆ ನಿಮ್ಮತ್ರ ಪುರಾವೆ ಇಲ್ಲ. ಯಾಕಂದ್ರೆ ನೀವು ಹೇಳ್ತಿರೋದೇ ಸುಳ್ಳು”.
ಮತ್ತೊಂದು ವಿಚಾರವೆಂದರೆ, ಕರ್ನಾಟಕದಲ್ಲಿ ಬಿಜೆಪಿ ತನ್ನದೇ ಆಂತರಿಕ ಕಚ್ಚಾಟದಲ್ಲಿ ಒದ್ದಾಡುತ್ತಿದೆ. ಪ್ರಬಲ ನಾಯಕತ್ವ ಇಲ್ಲದೆ ಹೆಣಗಾಡುತ್ತಿದೆ. ಆದ್ದರಿಂದ, ಕುಮಾರಸ್ವಾಮಿ ಅವರು ಬಿಜೆಪಿಯ ಮೌತ್ ಪೀಸ್ ಆಗಿದ್ದಾರೆ. ಬಿಜೆಪಿ ರೂಪಿಸುವ ಕೋಮುವಾದಿ ದ್ವೇಷವನ್ನ ಕುಮಾರಸ್ವಾಮಿ ಅವರು ಹರಿಬಿಡೋದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಇದು ಕುಮಾರಸ್ವಾಮಿ ಅವರು ಅಸೂಯೆ, ಅಸಹನೆ, ಅಭದ್ರತೆ ಹಾಗೂ ಹತಾಶೆಯಲ್ಲದೆ ಬೇರೇನೂ ಅಲ್ಲ.



