ಲೈಂಗಿಕ ಹಗರಣ ಪ್ರಕರಣದ ಆರೋಪಿ, ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣದಲ್ಲಿ ಪ್ರಮುಖ ಪ್ರಾಸಿಕ್ಯೂಷನ್ ಸಾಕ್ಷಿಯಾಗಿರುವ ಮಹಿಳೆಯೊಬ್ಬರಿಗೆ ಜೀವ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಸಾಕ್ಷಿ ಮಹಿಳೆಗೆ ಅಗತ್ಯ ರಕ್ಷಣೆ ನೀಡುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ರಾಜ್ಯ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದೆ.
ಪ್ರಕರಣದಲ್ಲಿ ಸಾಕ್ಷ್ಯ ನುಡಿದಿರುವ 43 ವರ್ಷದ ಸಾಮಾಜಿಕ ಕಾರ್ಯಕರ್ತೆಯು ರಕ್ಷಣೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. “ನಮಗೆ ಅನಾಮಧೇಯ ವ್ಯಕ್ತಿಗಳಿಂದ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಕೊಲೆ ಮಾಡುವುದಾಗಿ ಮತ್ತು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಲಾಗುತ್ತಿದೆ. ನನಗೆ ಅಥವಾ ನನ್ನ ಮಗನಿಗೆ ಯಾವುದೇ ಅನಾಹುತ ಸಂಭವಿಸಿದರೂ ಅದಕ್ಕೆ ಪ್ರಜ್ವಲ್ ರೇವಣ್ಣ ಅವರೇ ನೇರ ಹೊಣೆ” ಎಂದು ಅವರು ನ್ಯಾಯಾಲಯದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರ ಮಹಿಳೆಯು ಪ್ರಜ್ವಲ್ ರೇವಣ್ಣನ ವಿಕೃತ ಕಾಮಕೃತ್ಯಕ್ಕೆ ಬಲಿಯಾಗಿದ್ದ ಸಂತ್ರಸ್ತೆಗೆ ಕಾನೂನು ನೆರವು ನೀಡಿ ಅಧಿಕಾರಿಗಳನ್ನು ಸಂಪರ್ಕಿಸಲು ಸಹಾಯ ಮಾಡಿದ್ದರು. ಕಳೆದ ತಿಂಗಳು (ಜುಲೈ 6) ಅವರು ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿದ್ದರು. ಈ ಪ್ರಕ್ರಿಯೆಯ ಬಳಿಕ ತಮಗೆ ನಿರಂತರ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮಹಿಳೆಯು ನ್ಯಾಯಾಲಯಕ್ಕೆ ಲಿಖಿತ ಮನವಿ ಸಲ್ಲಿಸಿದ್ದರು.
ಆಕೆಯ ಆತಂಕವನ್ನು ಆಲಿಸಿದ ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಈ ಕುರಿತು ಸೂಕ್ತ ತನಿಖೆ ನಡೆಸಿ ಸಾಕ್ಷಿದಾರರಿಗೆ ಕಾನೂನುಬದ್ಧವಾಗಿ ಅಗತ್ಯವಾದ ಪೊಲೀಸ್ ಭದ್ರತೆಯನ್ನು ತಕ್ಷಣವೇ ಒದಗಿಸಬೇಕು ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಕ್ರಿಮಿನಲ್ ತನಿಖಾ ಇಲಾಖೆಯ (ಸಿಐಡಿ) ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಆದೇಶಿಸಿದೆ.
ಕೆಲವೇ ದಿನಗಳ ಹಿಂದಷ್ಟೇ, ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರ ಜೈಲು ಕೊಠಡಿಯಿಂದ ಸ್ಮಾರ್ಟ್‌ಫೋನ್ ಒಂದನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದರು. ಈ ಘಟನೆ ನಡೆದ ಬೆನ್ನಲ್ಲೇ ಸಾಕ್ಷಿಗೆ ಬೆದರಿಕೆ ಕರೆಗಳು ಬಂದಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾರಾಗೃಹದಲ್ಲಿ ಅಕ್ರಮವಾಗಿ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಮತ್ತು ಮತ್ತೊಬ್ಬ ಕೈದಿಯ ವಿರುದ್ಧ ಈಗಾಗಲೇ ಹೊಸ ಪ್ರಕರಣ ದಾಖಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಮೊಮ್ಮಗ, ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರನಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಒಟ್ಟು ನಾಲ್ಕು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. 2024ರ ಮೇ 31ರಿಂದ ಬಂಧನದಲ್ಲಿರುವ ಪ್ರಜ್ವಲ್‌ಗೆ, ಮನೆಕೆಲಸದಾಕೆಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 2025ರ ಆಗಸ್ಟ್‌ನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಪ್ರಸ್ತುತ ಪ್ರಜ್ವಲ್ ನ್ಯಾಯಾಂಗ ಬಂಧನದಲ್ಲಿದ್ದು, ವಿಚಾರಣೆ ಮುಂದುವರಿದಿದೆ.



