ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಅಂಕೋಲಾ ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜಗಳು ಕಾಣಿಸಿಕೊಂಡಿದ್ದು, ಕೆಲಕಾಲ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು. ನಗರದ ಬಬ್ರುವಾಡ ಮಸೀದಿ ಆವರಣದಿಂದ ಆರಂಭಗೊಂಡ ಮೆರವಣಿಗೆ ವಿವಿಧ ಪ್ರಮುಖ ರಸ್ತೆಗಳಲ್ಲಿ ಸಾಗಿತು.
ಈ ಸಂದರ್ಭದಲ್ಲಿ ಕೆಲ ಯುವಕರು ಪ್ಯಾಲೆಸ್ಟೈನ್ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಇಸ್ರೇಲ್–ಪ್ಯಾಲೆಸ್ಟೈನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೆಲ ಘೋಷಣೆಗಳು ಕೇಳಿಬಂದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮೆರವಣಿಗೆ ಸಾಗುತ್ತಿದ್ದ ವೇಳೆ ಪ್ಯಾಲೆಸ್ಟೈನ್ ಧ್ವಜ ಹಿಡಿದಿದ್ದ ಯುವಕರ ಗುಂಪನ್ನು ಪೊಲೀಸರು ಗಮನಿಸಿದರು. ಧ್ವಜ ಪ್ರದರ್ಶನದಿಂದಾಗಿ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಅಥವಾ ವಾಗ್ವಾದ ಉಂಟಾಗುವ ಸಾಧ್ಯತೆಯನ್ನು ಮನಗಂಡ ಪೊಲೀಸರು ಮುನ್ನೆಚ್ಚರಿಕೆ ವಹಿಸಿದರು.
ಈ ಸುದ್ದಿ ಓದಿದ್ದೀರಾ? ಕಾರವಾರ | ಕೈಗಾ ರಸ್ತೆಯಲ್ಲಿ ಭಾರಿ ವಾಹನಗಳಿಗೆ ಕಡಿವಾಣ; ಶಾಸಕ ಸತೀಶ ಸೈಲ್, ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ
ಈ ಹಿನ್ನೆಲೆಯಲ್ಲಿ ಪೊಲೀಸರು ಕೆಲ ಧ್ವಜಗಳನ್ನು ವಶಕ್ಕೆ ಪಡೆದುಕೊಂಡು ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ನೋಡಿಕೊಂಡರು. ಮೆರವಣಿಗೆಗೆ ಯಾವುದೇ ಅಡ್ಡಿಯಾಗದಂತೆ ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ಹಾಗೂ ನಿಗಾ ಮುಂದುವರಿಸಿದರು.
ಪೊಲೀಸರ ಮಧ್ಯಪ್ರವೇಶದ ಬಳಿಕ ಯಾವುದೇ ದೊಡ್ಡ ಅಹಿತಕರ ಘಟನೆ ನಡೆಯದೆ ಈದ್ ಮೆರವಣಿಗೆ ಮುಂದುವರಿಯಿತು. ಸದ್ಯ ಅಂಕೋಲ ನಗರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಸ್ಥಳದಲ್ಲಿ ನಿಗಾ ವಹಿಸಿದ್ದಾರೆ.




