ಪಶ್ಚಿಮ ಬಂಗಾಳದಲ್ಲಿ, ಈ ವರ್ಷದ ಆರಂಭದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೊರದಬ್ಬಲ್ಪಟ್ಟ ಲಕ್ಷಾಂತರ ಮತದಾರರು ಇಂದಿಗೂ ಅನಿಶ್ಚಿತತೆಯಲ್ಲಿದ್ದಾರೆ. ಮತದಾನದ ಹಕ್ಕು ಉಳಿಸಿಕೊಳ್ಳಲು ಮೇಲ್ಮನವಿಗಳನ್ನು ಸಲ್ಲಿಸಿದ್ದಾರೆ. ಆದರೆ, ಈ ಮೇಲ್ಮನವಿಗಳನ್ನು ವಿಲೇವಾರಿ ಮಾಡುವಲ್ಲಿ ಅಪೀಲೇಟ್ ಟ್ರಿಬ್ಯೂನಲ್ (ನ್ಯಾಯ ಮಂಡಳಿ) ಅತ್ಯಂತ ಮಂದಗತಿಯಲ್ಲಿ ಸಾಗುತ್ತಿದೆ. ಆರ್‌ಟಿಐ ಕಾಯ್ದೆಯಡಿ ಲಭ್ಯವಾದ ಅಧಿಕೃತ ಮಾಹಿತಿಯ ಪ್ರಕಾರ, ಮಂಡಳಿಯು ಒಟ್ಟು 38 ಲಕ್ಷ ಮೇಲ್ಮನವಿಗಳಲ್ಲಿ ಕೇವಲ 2.17% ರಷ್ಟನ್ನು ಮಾತ್ರವೇ ಇತ್ಯರ್ಥಪಡಿಸಿದೆ. ಇಂದಿಗೂ 37 ಲಕ್ಷಕ್ಕೂ ಹೆಚ್ಚು ಮತದಾರರ ಆಕ್ಷೇಪಣೆಗಳು ಮತ್ತು ಮೇಲ್ಮನವಿಗಳು ಇನ್ನೂ ಯಾವುದೇ ನಿರ್ಧಾರವಾಗದೆ ಉಳಿದಿವೆ. ಮತದಾರರು ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ.
ಬಂಗಾಳದ ದಕ್ಷಿಣ ಮಾಲ್ಡಾದ ಕಾಂಗ್ರೆಸ್ ಸಂಸದ ಈಶಾ ಖಾನ್ ಚೌಧರಿ ಅವರು ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಕಚೇರಿಯು 28 ಪುಟಗಳ ಸುದೀರ್ಘ ಉತ್ತರ ನೀಡಿದೆ. 2026ರ ಆಗಸ್ಟ್ 7 ರವರೆಗಿನ ಮಾಹಿತಿಯಂತೆ, ಮಂಡಳಿಗೆ ಒಟ್ಟು 38,10,620 ಮೇಲ್ಮನವಿಗಳು ಸಲ್ಲಿಕೆಯಾಗಿದ್ದವು. ಆದರೆ, ಇವುಗಳಲ್ಲಿ ವಿಲೇವಾರಿಯಾಗಿರುವುದು ಕೇವಲ 82,782 ಪ್ರಕರಣಗಳು ಮಾತ್ರ. ಅಂದರೆ ಮೇ ತಿಂಗಳಲ್ಲಿ ರಾಜ್ಯದ ವಿಧಾನಸಭಾ ಚುನಾವಣೆಗಳು ಮುಗಿದು ನಾಲ್ಕು ತಿಂಗಳು ಕಳೆದರೂ 37,27,838 ಪ್ರಕರಣಗಳ ವಿಚಾರಣೆ ಇನ್ನೂ ಬಾಕಿ ಉಳಿದಿದೆ.
ಆಶ್ಚರ್ಯಕರ ಸಂಗತಿಯೆಂದರೆ, ವಿಲೇವಾರಿಯಾದ 82,782 ಮೇಲ್ಮನವಿಗಳಲ್ಲಿ 75,443 ಪ್ರಕರಣಗಳಲ್ಲಿ ಅಳಿಸಿಹಾಕಲಾಗಿದ್ದ ಮತದಾರರ ಹೆಸರುಗಳನ್ನು ಮರಳಿ ಪಟ್ಟಿಗೆ ಸೇರಿಸಲು ಆದೇಶಿಸಲಾಗಿದೆ. ಕೇವಲ 7,339 ಪ್ರಕರಣಗಳಲ್ಲಿ ಮಾತ್ರ ಹಕ್ಕು ನಿರಾಕರಣೆಯನ್ನು ಎತ್ತಿಹಿಡಿಯಲಾಗಿದೆ. ಅಂದರೆ ಪರಿಶೀಲನೆಗೆ ಒಳಪಟ್ಟ ಪ್ರಕರಣಗಳಲ್ಲಿ 91.13%ರಷ್ಟು ಜನರನ್ನು ತಪ್ಪಾಗಿ ಮತದಾರರ ಪಟ್ಟಿಯಿಂದ ಹೊರಗಿಡಲಾಗಿತ್ತು ಎಂಬುದು ಸಾಬೀತಾಗಿದೆ. ಅಧಿಕಾರಿಗಳ ಈ ಅಪಾರ ಪ್ರಮಾಣದ ಪ್ರಮಾದದಿಂದಾಗಿ ಅರ್ಹ ನಾಗರಿಕರು ತಮ್ಮ ಪವಿತ್ರವಾದ ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂಬ ಸತ್ಯವನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.
ಹಲವು ನೈಜ ಘಟನೆಗಳು ಈ ವ್ಯವಸ್ಥೆಯ ವೈಫಲ್ಯಕ್ಕೆ ಕನ್ನಡಿ ಹಿಡಿಯುತ್ತವೆ. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ದೇಶಕ್ಕಾಗಿ ಗುಂಡೇಟು ತಿಂದ ನಿವೃತ್ತ ಯೋಧ ಮೊಹಮ್ಮದ್ ದುಆಲ್ ಅಲಿ ಮತ್ತು ಅವರ ಮೂವರು ಮಕ್ಕಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್ ಮೊಹಮ್ಮದ್ ಶಮೀಮ್ ಅಖ್ತರ್ ಅವರು ಮಾಜಿ ಸೈನಿಕರ ಗುರುತಿನ ಚೀಟಿ, ಪಾಸ್‌ಪೋರ್ಟ್ ಹಾಗೂ ಪಿಪಿಒ ಸಂಖ್ಯೆಯನ್ನು ಹೊಂದಿದ್ದರೂ, ಯಾವುದೇ ನೋಟಿಸ್ ಅಥವಾ ವಿಚಾರಣೆ ಇಲ್ಲದೆ ಅವರ ಹೆಸರನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಮತ್ತೊಂದೆಡೆ, ಅನಕ್ಷರಸ್ಥೆಯಾದ ಫಿರೋಜಾ ಬೀಬಿ ಅವರ ಬ್ಯಾಂಕ್ ಪಾಸ್‌ಬುಕ್ ಮತ್ತು ಆಧಾರ್ ಕಾರ್ಡ್‌ನಲ್ಲಿ ಹೆಸರಿನ ಕಾಗುಣಿತದ ಸಣ್ಣ ವ್ಯತ್ಯಾಸದ (Firoza ಬದಲು Firoja ಎಂದಿತ್ತು) ಕಾರಣಕ್ಕೆ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ಇಂತಹ ಸಣ್ಣಪುಟ್ಟ ಲಿಪ್ಯಂತರ ಅಥವಾ ತಾಂತ್ರಿಕ ವ್ಯತ್ಯಾಸಗಳು ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಮತದಾನದ ಹಕ್ಕು ನಿರಾಕರಿಸಲು ಮಾನದಂಡವಾಗಬಾರದು ಎಂಬ ನಿಯಮವಿದ್ದರೂ ಇಂತಹ ಘಟನೆಗಳು ಜರುಗಿವೆ.
ಇದಲ್ಲದೆ, 2002ರ ಮತದಾರರ ಪಟ್ಟಿಯ ದಾಖಲೆಗಳೊಂದಿಗೆ ಪ್ರಸ್ತುತ ಮತದಾರರ ವಿವರಗಳನ್ನು ಜೋಡಿಸುವ ಪ್ರಕ್ರಿಯೆಯಲ್ಲಿನ ಗೊಂದಲವೂ ಸಹ ಈ ಬೃಹತ್ ಮಟ್ಟದ ಅಮಾನವೀಯ ಹೊರಗಿಡುವಿಕೆಗೆ ಕಾರಣವಾಗಿದೆ. 2008ರ ಕ್ಷೇತ್ರ ಮರುವಿಂಗಡಣೆ ವೇಳೆ ಕ್ಷೇತ್ರಗಳ ಸಂಖ್ಯೆ ಮತ್ತು ಗಡಿಗಳು ಬದಲಾಗಿರುವುದರಿಂದ ಸರಿಯಾದ ವಿವರ ಸಲ್ಲಿಸಿದರೂ ತಾಂತ್ರಿಕವಾಗಿ ‘ಹೊಂದಾಣಿಕೆಯಾಗುತ್ತಿಲ್ಲ’ ಎಂದು ತೋರಿ ಹೆಸರುಗಳನ್ನು ತೆಗೆದುಹಾಕಲಾಗಿದೆ.
ಈ ಲೇಖನ ಓದಿದ್ದೀರಾ?: ಕಾಂಗ್ರೆಸ್‌ನದ್ದು ವೋಟ್ ಬ್ಯಾಂಕ್ ರಾಜಕಾರಣವಾದರೆ, ಧರ್ಮ-ʼದೇಶಭಕ್ತಿʼಯ ಹೆಸರಿನಲ್ಲಿ ಬಿಜೆಪಿ ಮಾಡುತ್ತಿರುವುದೇನು?
ಜಿಲ್ಲಾವಾರು ಮೇಲ್ಮನವಿಗಳ ವಿಲೇವಾರಿ ದರವನ್ನು ಗಮನಿಸಿದರೆ ಅಸಮಾನತೆ ಎದ್ದು ಕಾಣುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಮುಸ್ಲಿಂ ಮತದಾರರಿರುವ ಮುರ್ಷಿದಾಬಾದ್ ಮತ್ತು ಮಾಲ್ಡಾದಂತಹ ಜಿಲ್ಲೆಗಳಲ್ಲಿ 12.7 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗಿದ್ದರೂ ಕೇವಲ 1,958 ಪ್ರಕರಣಗಳು ಮಾತ್ರವೇ ಇತ್ಯರ್ಥವಾಗಿವೆ. ಅಂದರೆ ಈ ಜಿಲ್ಲೆಗಳು ಪಟ್ಟಿಯ ತಳಮಟ್ಟದಲ್ಲಿವೆ. ಅದೇ ರೀತಿ ಬೀರ್‌ಭೂಮ್ ಮತ್ತು ಪಶ್ಚಿಮ ಮೇದಿನಿಪುರದಂತಹ ಕೆಲವು ಜಿಲ್ಲೆಗಳಲ್ಲಿ ಬಹುತೇಕ ಮೇಲ್ಮನವಿಗಳನ್ನು ತಿರಸ್ಕರಿಸಿ ಹೊರಗಿಡುವಿಕೆಯನ್ನು ಎತ್ತಿಹಿಡಿಯಲಾಗಿದೆ. ಇನ್ನು ಕೆಲವೆಡೆ 100%ರಷ್ಟು ಹೆಸರುಗಳನ್ನು ಮರಳಿ ಮತಪಟ್ಟಿಗೆ ಸೇರಿಸಲಾಗಿದೆ.
ಅಂದಹಾಗೆ, ಚುನಾವಣೆ ಮುಗಿದು ಹೋಗಿರುವುದರಿಂದ, ಈಗ ಮಂಡಳಿಯು ಧನಾತ್ಮಕ ತೀರ್ಪು ನೀಡಿದರೂ, ಕಳೆದ ಚುನಾವಣೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಈ ಲಕ್ಷಾಂತರ ನಾಗರಿಕರು ಕಳೆದುಕೊಂಡ ತಮ್ಮ ಪ್ರಜಾಸತ್ತಾತ್ಮಕ ಹಕ್ಕನ್ನು ಮತ್ತೆ ಮರಳಿಸಲು ಸಾಧ್ಯವಿಲ್ಲ. ಸರ್ಕಾರಿ ಯೋಜನೆಗಳು ಮತ್ತು ಪಡಿತರ ಸೌಲಭ್ಯಗಳಿಂದಲೂ ಹೊರಗುಳಿಯುವ ಭೀತಿಯಲ್ಲಿರುವ ಈ ಜನರು, ತಾವೇ ಈ ದೇಶದ ಪ್ರಜೆಗಳು ಎಂದು ನಿರೂಪಿಸಲು ಕಚೇರಿಗಳಿಗೆ ಅಲೆದಾಡುವ ದುಸ್ಥಿತಿ ಮಾತ್ರವೇ ಅವರ ಮುಂದಿದೆ.



