2026–27ನೇ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ‘ಡಿ. ದೇವರಾಜು ಅರಸು ಪ್ರಶಸ್ತಿ’ಗೆ ಖ್ಯಾತ ಇತಿಹಾಸ ತಜ್ಞ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ವಿ. ನಂಜರಾಜ ಅರಸು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಪ್ರಕಟಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, “ಸಾಮಾಜಿಕ ನ್ಯಾಯದ ಪರವಾಗಿ ಪ್ರೊ. ನಂಜರಾಜ ಅರಸು ಅವರು ನಡೆಸಿದ ನಿರಂತರ ಹೋರಾಟ, ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ ತತ್ವ-ಸಿದ್ಧಾಂತಗಳ ಅನುಷ್ಠಾನಕ್ಕೆ ನೀಡಿದ ಶ್ರಮ ಹಾಗೂ ಪ್ರಾಧ್ಯಾಪಕರಾಗಿ ಶೈಕ್ಷಣಿಕ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಪರಿಗಣಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ” ಎಂದು ತಿಳಿಸಿದರು.
ಅರ್ಹರನ್ನು ಗುರುತಿಸಲು ಡಾ. ಸಿ.ಎಸ್. ದ್ವಾರಕಾನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಪ್ರೊ. ನಂಜರಾಜ ಅರಸು ಅವರ ಹೆಸರನ್ನು ಶಿಫಾರಸು ಮಾಡಿತ್ತು. ಪ್ರಶಸ್ತಿಯು ₹5 ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ವಿಧಾನಸೌಧದಲ್ಲಿ ಆಗಸ್ಟ್ 20ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಡಿ. ದೇವರಾಜ ಅರಸು ಅವರ 111ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಚಿವರು ವಿವರಿಸಿದರು.
1936ರ ಜುಲೈ 1ರಂದು ಜನಿಸಿದ ಪ್ರೊ. ಪಿ.ವಿ. ನಂಜರಾಜ ಅರಸು ಅವರು, 1957ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ, 1959ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಹಿಂದಿ ಎಂ.ಎ. ಪದವಿ ಹಾಗೂ 1973ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲೇ ಸತತ 39 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಹಿರಿಮೆ ಇವರದ್ದಾಗಿದೆ.
This video cannot be played in your browser. Open the video directly
ಕರ್ನಾಟಕದ ಇತಿಹಾಸ ಮತ್ತು ಸಂಸ್ಕೃತಿ ಕುರಿತು ಆಳವಾದ ಸಂಶೋಧನೆ ನಡೆಸಿರುವ ನಂಜರಾಜ ಅರಸು ಅವರು, ‘ನಾಲ್ವಡಿ ಕೃಷ್ಣರಾಜ ಒಡೆಯರ್: ಒಂದು ದರ್ಶನ’, ‘ಮರೆಯಲಾಗದ ಮಹಾಚೇತನ ನಾಲ್ವಡಿ ಕೃಷ್ಣರಾಜ ಒಡೆಯರ್’, ‘ಮೈಸೂರು: ನೂರಿನ್ನೂರು ವರ್ಷಗಳ ಹಿಂದೆ’, ‘ಅಲಮೇಲಮ್ಮನ ಶಾಪ: ಒಂದು ಪರೀಕ್ಷೆ’ ಹಾಗೂ ‘ನಾನು ಕನ್ನಂಬಾಡಿ ಕಟ್ಟೆ: ಹೀಗೊಂದು ಆತ್ಮಕಥೆ’ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಮೈಸೂರು ರಾಜಮನೆತನ, ಟಿಪ್ಪು ಸುಲ್ತಾನ್ ಮತ್ತು ನಾಡಿನ ಸಾಮಾಜಿಕ-ರಾಜಕೀಯ ಇತಿಹಾಸದ ಕುರಿತು ವಿಶ್ಲೇಷಣಾತ್ಮಕ ಕೃತಿಗಳನ್ನು ಹೊರತಂದಿದ್ದಾರೆ.





