ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತಪಟ್ಟಿಯಿಂದ 1.27 ಕೋಟಿ ಹಿಂದು ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪದೇ-ಪದೇ ಆರೋಪ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ (CEO) ನವದೀಪ್ ರಿನ್ವಾ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. “ಚುನಾವಣಾ ಆಯೋಗವು ಮತದಾರರ ಧರ್ಮ ಅಥವಾ ಜಾತಿಗೆ ಸಂಬಂಧಿಸಿದ ಯಾವುದೇ ದತ್ತಾಂಶವನ್ನು ನಿರ್ವಹಿಸುವುದಿಲ್ಲ. ಅಂತಹ ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡುವುದಿಲ್ಲ. ಧರ್ಮ, ಜಾತಿ, ಸಮುದಾಯ ಅಥವಾ ನಿರ್ದಿಷ್ಟ ಗ್ರಾಮ ಮತ್ತು ಪ್ರದೇಶದ ಆಧಾರದ ಮೇಲೆ ಯಾವುದೇ ಮತದಾರರ ಹೆಸರನ್ನು ಪಟ್ಟಿಯಿಂದ ಅಳಿಸಿಲ್ಲ” ಎಂದು ಹೇಳಿದ್ದಾರೆ.
ಲಕ್ನೋದ ಚುನಾವಣಾ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನವದೀಪ್ ರಿನ್ವಾ, “ಚುನಾವಣಾ ಆಯೋಗದ ದತ್ತಾಂಶದಲ್ಲಿ ಧರ್ಮ ಅಥವಾ ಜಾತಿಯಂತಹ ಯಾವುದೇ ವಿವರಗಳು ಇರುವುದಿಲ್ಲ. ಆದ್ದರಿಂದ ಅಂತಹ ಅಂಕಿಅಂಶಗಳನ್ನು ಬಿಡುಗಡೆ ಮಾಡಲು ಹೇಗೆ ಸಾಧ್ಯ? ಮತದಾರರ ಪಟ್ಟಿಯಲ್ಲಿ ಕೇವಲ ಮತದಾರರ ಹೆಸರು, ಸಂಬಂಧದ ವಿವರ, ವಯಸ್ಸು, ಜನ್ಮ ದಿನಾಂಕ, ಲಿಂಗ ಹಾಗೂ ಮನೆ ಸಂಖ್ಯೆಯ ಮಾಹಿತಿ ಮಾತ್ರ ಇರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಸಾಫ್ಟ್‌ವೇರ್‌ಗಳನ್ನು ಬಳಸಿಕೊಂಡು ಮತದಾರರ ಪಟ್ಟಿಯಲ್ಲಿರುವ ಹೆಸರುಗಳ ಆಧಾರದ ಮೇಲೆ ಧರ್ಮವನ್ನು ವಿಶ್ಲೇಷಿಸಬಹುದಾಗಿದ್ದು, ಈ ರೀತಿಯ ಆರೋಪ ಮಾಡುತ್ತಿರುವವರು ಅಂತಹ ತಂತ್ರಜ್ಞಾನವನ್ನು ಬಳಸಿರಬಹುದು” ಎಂದಿದ್ದಾರೆ.
ಉತ್ತರ ಪ್ರದೇಶದ ಅಂದಾಜು ಜನಸಂಖ್ಯೆ 24.28 ಕೋಟಿಯಾಗಿದ್ದು, ಇದರಲ್ಲಿ 18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅರ್ಹ ಮತದಾರರ ಸಂಖ್ಯೆ 16.16 ಕೋಟಿಯಷ್ಟಿದೆ. ಆದರೆ, ಮಂಗಳವಾರ ಪ್ರಕಟವಾದ ಕರಡು ಮತದಾರರ ಪಟ್ಟಿಯಲ್ಲಿ 13.58 ಕೋಟಿ ಹೆಸರುಗಳು ಮಾತ್ರ ಇದ್ದು, ಸುಮಾರು 2.58 ಕೋಟಿ ಮತದಾರರು ಪಟ್ಟಿಯಿಂದ ಹೊರಗುಳಿದಿದ್ದಾರೆ. ಮತಪಟ್ಟಿಯಿಂದ ಹೊರಗುಳಿದಿರುವ ಅರ್ಹರನ್ನು ಪಟ್ಟಿಗೆ ಸೇರಿಸಲು ವಿಶೇಷ ಒತ್ತು ನೀಡಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ನವದೀಪ್ ರಿನ್ವಾ ತಿಳಿಸಿದ್ದಾರೆ.


