ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ, ರೈತರ ಎಲ್ಲ ರೀತಿಯ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಧರಣಿ ನಡೆಸಲಾಯಿತು.
ವಾಡಿಕೆ ಮಳೆಯಾಗದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ವಿಬಿಜಿ ರಾಮ್‌ಜಿ ಯೋಜನೆಯಡಿ ಬರ ಪರಿಹಾರ ಕಾಮಗಾರಿಗಳನ್ನು ಜಾರಿಗೊಳಿಸಬೇಕು. ರೈತರ ಸಹಕಾರ ಸಂಘಗಳು, ವಾಣಿಜ್ಯ ಬ್ಯಾಂಕ್‌ಗಳು ಹಾಗೂ ಬಂಗಾರದ ಅಡಮಾನ ಸೇರಿದಂತೆ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಬೆಳೆ ವಿಮೆ ವ್ಯಾಪ್ತಿಗೆ ಒಳಪಡದ ತರಕಾರಿ, ಸಿರಿಧಾನ್ಯ ಹಾಗೂ ತೋಟಗಾರಿಕಾ ಬೆಳೆಗಳಿಗೂ ಬರ ಪರಿಹಾರ ನೀಡಬೇಕು. ಕೇಂದ್ರ ಸರ್ಕಾರದ ಬರ ಪರಿಹಾರ ಮೌಲ್ಯಮಾಪನದ ವೇಳೆ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯಮಗಳನ್ನು ಬೆಲೆ ಏರಿಕೆಗೆ ಅನುಗುಣವಾಗಿ ಪರಿಷ್ಕರಿಸಿ, ಪ್ರತಿ ಎಕರೆಗೆ ಕನಿಷ್ಠ ₹40 ಸಾವಿರದಿಂದ ₹50 ಸಾವಿರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕಡುಬಿಸಿಲನ್ನೂ ಲೆಕ್ಕಿಸದೆ ನೂರಾರು ರೈತರು ಸುಮಾರು ಮೂರು ಗಂಟೆಗಳ ಕಾಲ ಧರಣಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಮಂಜುನಾಥ್ ರೆಡ್ಡಿ ಮಾತನಾಡಿ, ಕಳೆದ 40 ವರ್ಷಗಳಲ್ಲಿ ಕಂಡರಿಯದ ಬರ ಜಿಲ್ಲೆಯನ್ನು ಆವರಿಸಿದೆ. ಆಗಸ್ಟ್ ಮುಗಿಯುತ್ತಾ ಬಂದರೂ ಜಿಲ್ಲೆಯ ಶೇ.80ರಷ್ಟು ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಕೆಲವರು ಬಿತ್ತನೆ ಮಾಡಿದ್ದರೂ ಕಡಿಮೆ ಮಳೆಯಿಂದ ಬೆಳೆ ಹಾನಿಯಾಗಿ ನಷ್ಟ ಅನುಭವಿಸಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರು ಜೀವನ ನಡೆಸಲು ಪರದಾಡುತ್ತಿದ್ದಾರೆ. ಕೂಡಲೇ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಿ, ವೈಜ್ಞಾನಿಕ ರೀತಿಯಲ್ಲಿ ಬೆಳೆ ನಷ್ಟ ಪರಿಹಾರ ನೀಡಬೇಕು ಹಾಗೂ ಎಲ್ಲ ರೀತಿಯ ರೈತರ ಸಾಲ ಮನ್ನಾ ಮಾಡಬೇಕು ರಾಜ್ಯದ ಬರ ಪರಿಸ್ಥಿತಿ ಹಾಗೂ ರೈತರ ಸಂಕಷ್ಟದ ಕುರಿತು ವಿಧಾನಸಭಾ ಅಧಿವೇಶನ ಆರಂಭವಾಗಿರುವ ಹಿನ್ನೆಲೆಯಲ್ಲಿ ಶಾಸಕರು ಕೂಡ ಸದನದಲ್ಲಿ ಬರ ಪರಿಸ್ಥಿತಿಯ ಕುರಿತು ಸಮಗ್ರ ಚರ್ಚೆ ನಡೆಸಬೇಕು.ವಿರೋಧ ಪಕ್ಷಗಳ ಸದಸ್ಯರೂ ರೈತರ ಪರ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.
ಸಹ ಸಂಚಾಲಕ ಲಕ್ಷ್ಮೀನಾರಾಯಣ ಮಾತನಾಡಿ, ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಕೈಬಿಟ್ಟು ರೈತಪರ ಆಡಳಿತ ನಡೆಸಬೇಕು. ರಾಜ್ಯದಲ್ಲಿ ಬರ ಆವರಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ರೈತರ ಸಮಸ್ಯೆಗಳನ್ನು ರಾಜಕೀಯದಿಂದ ಹೊರಗಿಟ್ಟು ಪರಿಹರಿಸಲು ಸರ್ಕಾರ ಮುಂದಾಗಬೇಕು. ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡಿ, ಅವರ ಸಮಸ್ಯೆಗಳಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ರೈತರ ಹತ್ಯೆ ಆರೋಪ: ಅರಣ್ಯಾಧಿಕಾರಿಗಳ ಬಂಧನಕ್ಕೆ ರೈತ ಸಂಘ ಆಗ್ರಹ
ಧರಣಿಯಲ್ಲಿ ಸಂಘದ, ರವಿಚಂದ್ರ ರೆಡ್ಡಿ,ಮುಖಂಡರಾದ ಹೇಮಚಂದ್ರ, ಶ್ರೀನಿವಾಸ್, ನರಸಿಂಹಪ್ಪ,ಆಂಜನೇಯ ರೆಡ್ಡಿ, ಅಶ್ವಥಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರ | ಬರಪೀಡಿತ ಜಿಲ್ಲೆ ಘೋಷಣೆಗೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘ ಪ್ರತಿಭಟನ ಧರಣಿ
ಪೋಸ್ಟ್ ಹಂಚಿಕೊಳ್ಳಿ:
ಪೋಸ್ಟ್ ಹಂಚಿಕೊಳ್ಳಿ:
This video cannot be played in your browser. Open the video directly
ಈ ಹೊತ್ತಿನ ಪ್ರಮುಖ ಸುದ್ದಿ
ವಿಡಿಯೋ




