ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯುವ ಅಪಾಯ ಎದುರಾಗಿದೆ ಎಂದು ‘SIR ವಿರೋಧಿ ಜಾತ್ಯತೀತ ಪಕ್ಷಗಳು ಹಾಗೂ ಜನಪರ ಸಂಘಟನೆಗಳ ಒಕ್ಕೂಟ’ ಆತಂಕ ವ್ಯಕ್ತಪಡಿಸಿದೆ. ಆಗಸ್ಟ್ 15ರಂದು ರಾಜ್ಯಾದ್ಯಂತ ‘ಮತದಾರರ ಹಕ್ಕು ಪ್ರತಿಪಾದನಾ ದಿನ’ ಆಚರಿಸಲು ನಿರ್ಧರಿಸಿದೆ. ಜೊತೆಗೆ, ಮತದಾನದ ಹಕ್ಕು, ಮತಪಟ್ಟಿಯಿಂದ ಹೆಸರು ಕೈಬಿಡುವ ಅಪಾಯ ಹಾಗೂ ಮತರಕ್ಷಣೆಯ ಕುರಿತು ರಾಜ್ಯಾದ್ಯಂತ ‘15 ದಿನಗಳ ಜನಜಾಗೃತಿ ಅಭಿಯಾನ’ ನಡೆಸಲು ತೀರ್ಮಾನಿಸಿದೆ.
ಬೆಂಗಳೂರಿನಲ್ಲಿ ಶನಿವಾರ ನಡೆದ ‘SIR ಸುನಾಮಿಯಿಂದ ಕರ್ನಾಟಕವನ್ನು ರಕ್ಷಿಸಿಕೊಳ್ಳುವುದು ಹೇಗೆ?’ ಎಂಬ ರಾಜ್ಯಮಟ್ಟದ ದುಂಡುಮೇಜಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣಾ ಆಯೋಗ ಪ್ರಕಟಿಸಿರುವ ಮಾಹಿತಿಯ ಪ್ರಕಾರ 1.10 ಕೋಟಿಗೂ ಅಧಿಕ ಮತದಾರರು ASDDO ಪಟ್ಟಿಯಲ್ಲಿದ್ದು, 34 ಲಕ್ಷ ಜನರು ‘ಅನ್‌ಮ್ಯಾಪಿಂಗ್’ ಪಟ್ಟಿಯಲ್ಲಿರುವುದು ಆಘಾತಕಾರಿ ಬೆಳವಣಿಗೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಸಭೆಯಲ್ಲಿ ಮಾತನಾಡಿದ ಒಕ್ಕೂಟದ ಪದಾಧಿಕಾರಿ ನೂರ್ ಶ್ರೀಧರ್, “ಜನಚಳವಳಿಗಳ ಒತ್ತಡದಿಂದಾಗಿ ಚುನಾವಣಾ ಆಯೋಗ ಮೊದಲ ಹಂತದ ಪ್ರಕ್ರಿಯೆಯನ್ನು 10 ದಿನ ವಿಸ್ತರಿಸಿದೆ. ಆದರೆ, ಈಗ ಎದುರಾಗಿರುವ ಸಮಸ್ಯೆಗಳನ್ನು ಪರಿಹರಿಸಲು ಈ ಅವಧಿ ಸಾಕಾಗುವುದಿಲ್ಲ. ಹೀಗಾಗಿ SIR ಪ್ರಕ್ರಿಯೆಯ ಅವಧಿಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ವಿಸ್ತರಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಕೇವಲ ಕಾಲಾವಕಾಶ ವಿಸ್ತರಿಸಿದರೆ ಸಾಲದು. ಮತದಾರರನ್ನು ಪ್ರಕ್ರಿಯೆಯಲ್ಲಿ ಒಳಗೊಳ್ಳಲು ಚುನಾವಣಾ ಆಯೋಗ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ನೂರ್ ಶ್ರೀಧರ್ ಹೇಳಿದ್ದಾರೆ.
“SIR ಹೆಸರಿನಲ್ಲಿ ಮನೆಮನೆಗೆ ತೆರಳಿ ಮತದಾರರನ್ನು ಒಳಗೊಳ್ಳಬೇಕಿದ್ದ ಚುನಾವಣಾ ಆಯೋಗ, ಮತದಾರರನ್ನು ಡಿಲೀಟ್ ಮಾಡುವ ಕೆಲಸ ಮಾಡಿದೆ. ಸ್ಥಳಾಂತರಗೊಂಡಿದ್ದಾರೆ ಎಂಬ ಕಾರಣಕ್ಕೆ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಬಾರದು. ಅಂತಹ ಮತದಾರರಿಗೆ ನಮೂನೆ-8ರ ಜೊತೆಗೆ ಗಣತಿ ನಮೂನೆಯನ್ನು ನೀಡಿ ಮತಪಟ್ಟಿಯಲ್ಲಿಯೇ ಉಳಿಸಿಕೊಳ್ಳುವ ಕೆಲಸ ಮಾಡಬೇಕು. ASDDO ಪಟ್ಟಿಯಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಲು ಬೂತ್ ಮಟ್ಟದ ಅಧಿಕಾರಿಗಳನ್ನು (BLO) ಮತ್ತೊಮ್ಮೆ ಮನೆಮನೆಗೆ ಕಳುಹಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
“ನಾಗರಿಕರ ಮನವಿಗಳಿಗೆ ಚುನಾವಣಾ ಆಯೋಗ ಸ್ಪಂದಿಸದೆ, ದೊಡ್ಡ ಸಂಖ್ಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ. ಮತಪಟ್ಟಿಯಿಂದ ಹೆಸರು ಡಿಲೀಟ್ ಆದ ಎಲ್ಲ ಅರ್ಹ ಮತದಾರರನ್ನು ಜೊತೆಗೂಡಿಸಿಕೊಂಡು ಚುನಾವಣಾ ಆಯೋಗದ ಮುಂದೆ ಅನಿರ್ದಿಷ್ಟಾವಧಿ ಹೋರಾಟ ನಡೆಸುತ್ತೇವೆ” ಎಂದು ನೂರ್ ಶ್ರೀಧರ್ ತಿಳಿಸಿದ್ದಾರೆ.
“ರಾಜ್ಯ ಸರ್ಕಾರ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಮುಂದಾಗಿದೆ. ಜಾತಿ ಪ್ರಮಾಣಪತ್ರಗಳನ್ನು ಮನೆಮನೆಗೆ ವಿತರಿಸುವುದಾಗಿ ಸರ್ಕಾರ ಹೇಳಿಕೊಂಡಿದೆ. ಆದರೆ ಈ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿಲ್ಲ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಅಗತ್ಯ ದಾಖಲೆಗಳನ್ನು ಪಡೆಯಲು ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಪ್ರತಿ ಗ್ರಾಮ ಪಂಚಾಯತ್ ಮತ್ತು ನಗರ ವಾರ್ಡ್‌ನಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಬೇಕು” ಎಂದು ಒಕ್ಕೂಟ ಒತ್ತಾಯಿಸಿದೆ.
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಜಿ.ಸಿ. ಚಂದ್ರಶೇಖರ್, “SIR ವಿಚಾರದಲ್ಲಿ ನಾಗರಿಕ ಸಮಾಜದ ಹೋರಾಟಕ್ಕೆ ಸರ್ಕಾರ ಸಹಕಾರ ನೀಡಲಿದೆ. ಬಿಜೆಪಿ ಮತ್ತು ಜೆಡಿಎಸ್ ಹೊರತುಪಡಿಸಿ ನಾವೆಲ್ಲರೂ ನಿರ್ದಿಷ್ಟ ಸಮಸ್ಯೆಯ ವಿರುದ್ಧ ಹೋರಾಡಲು ಒಟ್ಟಿಗೆ ಸೇರಿದ್ದೇವೆ. ಯಾರ ಮತ ಡಿಲೀಟ್ ಆಗಿದೆಯೋ ಅವರು ಭಯಪಡುವ ಅಗತ್ಯವಿಲ್ಲ; ಅವರೊಂದಿಗೆ ಸರ್ಕಾರ ಇದೆ. ಸರ್ಕಾರದ ಮುಂದೆ ಇಟ್ಟಿರುವ ಹಕ್ಕೊತ್ತಾಯಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಭೆ ಏರ್ಪಡಿಸಲಾಗುವುದು” ಎಂದಿದ್ದಾರೆ.
ಎಸ್‌ಯುಸಿಐನ ಕೆ.ವಿ. ಭಟ್, ಸಿಪಿಎಂನ ಕೆ. ಮಹಾಂತೇಶ್, ಆಮ್ ಆದ್ಮಿ ಪಕ್ಷದ ಸೀತಾರಾಮ ಗುಂಡಪ್ಪ, ಜಮಾತೆ ಇಸ್ಲಾಮಿ ಹಿಂದ್‌ನ ಮುಹಮ್ಮದ್ ಯೂಸುಫ್ ಕನ್ನಿ, ಎದ್ದೇಳು ಕರ್ನಾಟಕದ ತಾರಾ ರಾವ್, ಕೆ.ಎಲ್. ಅಶೋಕ್, ಮಲ್ಲಿಗೆ ಸಿರಿಮನೆ, ಕರ್ನಾಟಕ ಜನಶಕ್ತಿಯ ಕುಮಾರ್ ಸಮತಳ, ಡಾ. ಪೂರ್ಣಾನಂದ, ರಮೇಶ್ ಬೆಲ್ಲಂಕೊಂಡ, ಒಳಮೀಸಲಾತಿ ಹೋರಾಟಗಾರರಾದ ಕರಿಯಪ್ಪ ಗುಡಿಮನಿ, ಅಂಬಣ್ಣ ಅರೋಲಿಕರ್ ಸೇರಿದಂತೆ ಸಭೆಯಲ್ಲಿ ಸಿಪಿಎಂ, ಎಸ್‌ಯುಸಿಐ, ವೆಲ್ಫೇರ್ ಪಾರ್ಟಿ, ವಿವಿಧ ಪಕ್ಷಗಳ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.



