ಸರ್ಕಾರ ಮತ್ತು ಕೃಷಿ ಇಲಾಖೆಗಳು ತಕ್ಷಣದಲ್ಲಿ ಬೀಜ ಸಂರಕ್ಷಣೆಗೆ ಸಹಾಯ, ವಿಮಾ ಪರಿಹಾರ, ಸಾಲ ಮನ್ನಾ ಅಥವಾ ಪರ್ಯಾಯ ಬೆಳೆ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರ ನಷ್ಟವನ್ನು ಕಡಿಮೆ ಮಾಡಬೇಕಾಗಿದೆ. ಮಳೆಯ ಕೊರತೆಯು ದೀರ್ಘಕಾಲೀನ ಕೃಷಿ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದ್ದು, ಜಲ ಸಂರಕ್ಷಣೆ, ಸೂಕ್ತ ಬೆಳೆ ಆಯ್ಕೆ ಮತ್ತು ಹವಾಮಾನ ನಿರೋಧಕ ಬೆಳೆಗಳತ್ತ ಗಮನಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ರೈತರ ಆದಾಯ ಮತ್ತು ರಾಜ್ಯದ ಕೃಷಿ ಉತ್ಪಾದನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ.
ಮುಂಗಾರು ಮಳೆಯ ನಿರೀಕ್ಷೆಯೊಂದಿಗೆ ನೂರಾರು ಮಂದಿ ರೈತರು ಜೋಳ, ತೊಗರಿ, ಹತ್ತಿ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದರು. ಆದರೆ ನಿರೀಕ್ಷಿತ ಸಮಯಕ್ಕೆ ಮಳೆ ಸುರಿಯದೇ , ಮಳೆ ಕೊರತೆ ಉಂಟಾಗಿರುವುದರಿಂದ ಬಿತ್ತಿದ ಬೀಜಗಳು ಮೊಳಕೆಯೊಡೆಯದೆ ಒಣಗುವ ಭೀತಿ ಎದುರಾಗಿದೆ. ಇದರಿಂದ ರೈತರಲ್ಲಿ ಆತಂಕ ಹೆಚ್ಚಿದ್ದು, ಕೃಷಿ ಚಟುವಟಿಕೆಗಳ ಮೇಲೂ ಅನಿಶ್ಚಿತತೆ ಆವರಿಸಿದೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಉತ್ತಮ ಮಳೆಯಾದರೆ ಬೆಳೆಗಳಿಗೆ ಅನುಕೂಲಕರ ವಾತಾವರಣ ದೊರೆಯುತ್ತದೆ. ಇದೇ ನಂಬಿಕೆಯ ಮೇಲೆ ರೈತರು ಬೀಜ, ಗೊಬ್ಬರ ಮತ್ತು ಭೂಮಿ ಸಿದ್ಧತೆಗೆ ಸಾವಿರಾರು ರೂಪಾಯಿ ವೆಚ್ಚ ಮಾಡಿ ಬಿತ್ತನೆ ನಡೆಸಿದ್ದರು. ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದ ಹೊಲಗಳಲ್ಲಿನ ತೇವಾಂಶ ಕಡಿಮೆಯಾಗಿದ್ದು, ಬೆಳೆ ಉಳಿಯುವ ಬಗ್ಗೆ ರೈತರು ಚಿಂತಿತರಾಗಿದ್ದಾರೆ.
ರೈತರ ಮಾತಿನ ಪ್ರಕಾರ, “ಸಾಲ ಮಾಡಿ ಕೃಷಿ ಮಾಡಿರುವ ಅನೇಕ ಕುಟುಂಬಗಳು ಈಗ ಸಂಕಷ್ಟಕ್ಕೆ ಸಿಲುಕಿವೆ. ಇನ್ನೂ ಕೆಲವು ದಿನಗಳಲ್ಲಿ ಮಳೆ ಬರದಿದ್ದರೆ ಮರುಬಿತ್ತನೆ ಮಾಡುವ ಪರಿಸ್ಥಿತಿ ಎದುರಾಗಬಹುದು. ಇದರಿಂದ ಹೆಚ್ಚುವರಿ ವೆಚ್ಚದ ಜತೆಗೆ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ” ಎಂದು ಹೇಳಿದರು.
ರೈತ ಮಲ್ಲಯ್ಯ ಗೌಡೂರು ಮಾತನಾಡಿ, “ರೋಹಿಣಿ ಮಳೆಗೆ ಹಲವು ರೈತರು ಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಜಲಾಶಯ(ಡ್ಯಾಂ)ಗಳಲ್ಲಿ ನೀರಿನ ಲಭ್ಯತೆಯನ್ನು ಆಧರಿಸಿ ಬಿತ್ತನೆ ಮಾಡಿದ್ದಾರೆ. ಆದರೆ ನಿರೀಕ್ಷಿತ ಮಳೆ ಸುರಿಯದ ಕಾರಣ ಬೆಳೆಗಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ” ಎಂದು ಕಳವಳ ವ್ಯಕ್ತಪಡಿಸಿದರು.
“5 ಎಕರೆ ಹೊಲದಲ್ಲಿ ತೊಗರಿ ಬಿತ್ತನೆ ಮಾಡಿದ್ದೇನೆ. ಆದರೆ ಮಳೆ ಬಾರದ ಕಾರಣಕ್ಕೆ ಬೀಜಗಳು ಕಪ್ಪಾಗಿವೆ. ಸುಮಾರು 50 ಸಾವಿರದವರೆಗೂ ಸಾಲ ಸೂಲ ಮಾಡಿ ಬಿತ್ತನೆಗೆ ಹಾಕಿದರೆ, ಈಗ ಇಂತಹ ಪರಿಸ್ಥಿತಿ ಎದುರಾಗಿದೆ” ಎಂದರು.
“ಈಗಾಗಲೇ ತೊಗರಿ ಬಿತ್ತನೆ ಆಗಿದೆ. ಆದರೆ ಇನ್ನೂ ಒಂದು ವಾರದೊಳಗೆ ಸಮರ್ಪಕ ಮಳೆ ಬರದಿದ್ದರೆ ಬೆಳೆ ಒಣಗುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿ ನಿರ್ಮಾಣವಾದರೆ ಮತ್ತೆ ಹೊಲವನ್ನು ಉಳುಮೆ ಮಾಡಿ, ಮರುಬಿತ್ತನೆ ಮಾಡಬೇಕಾಗುತ್ತದೆ. ಇದರಿಂದ ರೈತರಿಗೆ ಹೆಚ್ಚುವರಿ ವೆಚ್ಚ ಮತ್ತು ಶ್ರಮ ಉಂಟಾಗಲಿದೆ” ಎಂದು ಹೇಳಿದರು.
ಈ ಬಗ್ಗೆ ರೈತ ಮುಖಂಡ ಶಿವಪುತ್ರ ಜಾಗೀರ ನಂದಿಹಾಳ ಮಾತನಾಡಿ, “ತೊಗರಿ, ಎಳ್ಳು, ಸೂರ್ಯಕಾಂತಿ, ಹತ್ತಿ, ಸಜ್ಜೆ ಸೇರಿದಂತೆ ಬಹುತೇಕ ಬೆಳೆಗಳು ಮುಂಗಾರು ಮಳೆಯನ್ನೇ ಅವಲಂಬಿಸಿವೆ. ಆದರೆ ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆಗೂ ಮುನ್ನ ಡೀಸೆಲ್ ಹಾಗೂ ಗೊಬ್ಬರದ ಸಮಸ್ಯೆ ಎದುರಾಯಿತು. ಆ ಸಮಸ್ಯೆಗಳು ಬಗೆಹರಿಯುವಷ್ಟರಲ್ಲಿ ಈಗ ಮಳೆಯ ಕೊರತೆ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ” ಎಂದರು.
“ಮಳೆ ಮತ್ತಷ್ಟು ವಿಳಂಬವಾದರೆ ಬೆಳೆಗಳಷ್ಟೇ ಅಲ್ಲ, ಜಾನುವಾರುಗಳಿಗೂ ಮೇವು ಕೊರತೆಯ ಗಂಭೀರ ಸಮಸ್ಯೆ ಎದುರಾಗಲಿದೆ. ದನಕರುಗಳಿಗೆ ಮೇವು ಸಿಗುವುದು ಕಷ್ಟವಾಗುವುದರ ಜತೆಗೆ ಕುರಿ-ಮೇಕೆ ಸಾಕಾಣಿಕೆ ಮಾಡುತ್ತಿರುವವರೂ ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೆಲವೆಡೆ ಹಸಿರು ಮೇವು ಇರುವ ಪ್ರದೇಶಗಳಿಗೆ ಜಾನುವಾರುಗಳನ್ನು ಮೇಯಿಸಲು ಕರೆದೊಯ್ದರೆ ಅರಣ್ಯ ಇಲಾಖೆಯಿಂದ ನಿರ್ಬಂಧಗಳು ಹಾಗೂ ಕಿರುಕುಳ ಎದುರಾಗುತ್ತಿದೆ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರೈತರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ‘ದುಡಿದು ತಿಂದರೆ ಮನುಷ್ಯರ ಕಾಟ, ಬೇಡಿ ತಿಂದರೆ ನಾಯಿಗಳ ಕಾಟ’ ಎಂಬ ಗಾದೆಯಂತೆ, ಒಂದಲ್ಲ ಒಂದು ಸಮಸ್ಯೆ ರೈತರನ್ನು ನಿರಂತರವಾಗಿ ಕಾಡುತ್ತಿದೆ. ಹಾಗಾಗಿ ಸರ್ಕಾರ ಕೂಡಲೇ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ನೆರವು ಹಾಗೂ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ತಮ್ಮ ಅಳಲನ್ನು ವ್ಯಕ್ತಪಡಿಸಿದರು.
“ರೈತರು ಸರ್ಕಾರದಿಂದ ಅಗತ್ಯ ನೆರವು, ಬೆಳೆವಿಮೆ ಕುರಿತು ಜಾಗೃತಿ ಮತ್ತು ಪರಿಸ್ಥಿತಿ ಹದಗೆಟ್ಟರೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮುಂಗಾರು ಮಳೆ ಶೀಘ್ರವಾಗಿ ಆರಂಭವಾದರೆ ಬೆಳೆಗಳು ಉಳಿಯುವ ಸಾಧ್ಯತೆ ಇದ್ದರೂ, ಮಳೆ ಮತ್ತಷ್ಟು ವಿಳಂಬವಾದರೆ ರೈತರ ಆರ್ಥಿಕ ಸಂಕಷ್ಟ ಗಂಭೀರವಾಗುವ ಆತಂಕ ವ್ಯಕ್ತವಾಗಿದೆ. ಮುಂಗಾರು ಮಳೆಯ ಮೇಲಿನ ನಂಬಿಕೆಯಿಂದ ಬಿತ್ತನೆ ಮಾಡಿದ ರೈತರು ಈಗ ಆಕಾಶದತ್ತ ಮುಖಮಾಡಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಸುರಿಯುವ ಮಳೆಯೇ ಈ ಹಂಗಾಮಿನ ಭವಿಷ್ಯವನ್ನು ನಿರ್ಧರಿಸಲಿದೆ” ಎಂದರು.
ಮಳೆ ಕೊರತೆಯಿಂದ ಬಿಳೆ ಬಿತ್ತನೆ ವಿಳಂಬ ಮತ್ತು ಬೆಳೆಹಾನಿ ಕುರಿತ ವಿಷಯವಾಗಿ ಮಾಹಿತಿ ಪಡೆಯಲು ಈ ದಿನ.ಕಾಮ್ ಕೃಷಿ ಇಲಾಖೆ ಜಂಟಿ ನಿರ್ದೇಶಕರನ್ನು ಸಂಪರ್ಕಿಸಿದೆಯಾದರೂ ಅವರು ಯಾವುದೇ ಕರೆ ಸ್ವೀಕರಿಸಲಿಲ್ಲ.
ಜಿಲ್ಲೆಯಲ್ಲಿ ಮುಂಗಾರು ಕೈಕೊಟ್ಟಿದ್ದು, ಒಣಹವೆ ಮುಂದುವರೆದಿದೆ. ಕೆಲವೇ ಕೆಲವು ಪ್ರವೇಶಗಳಲ್ಲಿ ಮಾತ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗುತ್ತಿದ್ದು, ಅಲ್ಲಲ್ಲಿ ವರುಣ ಆರ್ಭಟಿಸುತ್ತಿದ್ದಾನೆ. ಹಾಗೆಯೇ ಮುಂದಿನ ಐದು ದಿನ ಕೆಲವೆಡೆ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿದ್ದೀರಾ? ಕೈಕೊಟ್ಟ ಮುಂಗಾರು: ಬಾಡಿತು ರೈತರ ಬದುಕು
ಸರ್ಕಾರ ಮತ್ತು ಕೃಷಿ ಇಲಾಖೆಗಳು ತಕ್ಷಣದಲ್ಲಿ ಬೀಜ ಸಂರಕ್ಷಣೆಗೆ ಸಹಾಯ, ವಿಮಾ ಪರಿಹಾರ, ಸಾಲ ಮನ್ನಾ ಅಥವಾ ಪರ್ಯಾಯ ಬೆಳೆ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ರೈತರ ನಷ್ಟವನ್ನು ಕಡಿಮೆ ಮಾಡಬೇಕಾಗಿದೆ. ಮಳೆಯ ಕೊರತೆಯು ದೀರ್ಘಕಾಲೀನ ಕೃಷಿ ಸಮಸ್ಯೆಯನ್ನು ಎತ್ತಿ ತೋರಿಸುತ್ತಿದ್ದು, ಜಲ ಸಂರಕ್ಷಣೆ, ಸೂಕ್ತ ಬೆಳೆ ಆಯ್ಕೆ ಮತ್ತು ಹವಾಮಾನ ನಿರೋಧಕ ಬೆಳೆಗಳತ್ತ ಗಮನಹರಿಸುವ ಅಗತ್ಯವಿದೆ. ಇಲ್ಲದಿದ್ದರೆ ರೈತರ ಆದಾಯ ಮತ್ತು ರಾಜ್ಯದ ಕೃಷಿ ಉತ್ಪಾದನೆಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಹೆಚ್ಚಿದೆ.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್



