ಬೆಂಗಳೂರಿನ ಸರ್ಕಾರಿ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ದಲಿತ ಸಮುದಾಯದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಶಾಲೆಯ ಮುಖ್ಯ ಶಿಕ್ಷಕನೊಬ್ಬ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 15 ವರ್ಷದ ಬಾಲಕಿಯ ಮೇಲೆ ಈ ದೌರ್ಜನ್ಯ ನಡೆದಿದ್ದು, ಸಂತ್ರಸ್ತೆ ಇದೀಗ ಗರ್ಭಿಣಿಯಾಗಿದ್ದಾಳೆ ಎನ್ನಲಾಗಿದೆ.
ಈ ಶಾಲೆಯನ್ನು ಎನ್‌ಜಿಒ ಒಂದು ಆಶ್ರಯ ತಾಣದ ರೀತಿಯಲ್ಲಿ ನಡೆಸುತ್ತಿತ್ತು ಎನ್ನಲಾಗಿದೆ. ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಿಳಿಯುತ್ತಿದ್ದಂತೆ, ಇಡೀ ಪ್ರಕರಣವನ್ನು ಮುಚ್ಚಿಹಾಕಲು ಸಂಸ್ಥೆ ಮುಂದಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅತ್ಯಾಚಾರದ ಆರೋಪ ಹೊತ್ತಿರುವ ಮುಖ್ಯ ಶಿಕ್ಷಕ ಹಾಗೂ ಎನ್‌ಜಿಒ ಸೇರಿ ಗರ್ಭಿಣಿ ಬಾಲಕಿಯನ್ನು ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದಾರೆ ಎಂದು ಶಂಕಿಸಲಾಗಿದೆ.
ಇದನ್ನು ಓದಿದ್ದೀರಾ? ಗಾಝಾ ಮೇಲಿನ ಇಸ್ರೇಲ್ ಕ್ರೌರ್ಯಕ್ಕೆ ಜಾಗತಿಕ ಆಕ್ರೋಶ; ಮೋದಿಯ ಮೌನವೇಕೆ?
ಈ ಅಮಾನವೀಯ ಘಟನೆ ಹಾಗೂ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಸಂತ್ರಸ್ತೆಯ ಪರ ವಕೀಲರಾದ ಮಹೇಂದ್ರ ಅವರು ‘ಈದಿನ.ಕಾಮ್‘ ಜೊತೆ ಮಾತನಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಶಾಲೆಯಲ್ಲಿಯೇ ಬಾಲಕಿಯ ಮೇಲೆ ಈ ರೀತಿಯ ಕೃತ್ಯ ನಡೆದಿರುವುದು ಅತ್ಯಂತ ಖಂಡನೀಯ. ಸಂತ್ರಸ್ತೆ ದಲಿತ ಸಮುದಾಯದ ಬಾಲಕಿಯಾಗಿದ್ದು, ಆಕೆಗೆ ರಕ್ಷಣೆ ನೀಡಬೇಕಿದ್ದ ಶಾಲಾ ಮುಖ್ಯ ಶಿಕ್ಷಕರೇ ಈ ದೌರ್ಜನ್ಯವೆಸಗಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿಯೂ ಕಠಿಣ ಪ್ರಕರಣ ದಾಖಲಿಸಬೇಕು. ಹಾಗೆಯೇ, ನಾಪತ್ತೆಯಾಗಿರುವ ಗರ್ಭಿಣಿ ಬಾಲಕಿಯನ್ನು ತಕ್ಷಣವೇ ಪತ್ತೆಹಚ್ಚಿ ಆಕೆಗೆ ಸೂಕ್ತ ವೈದ್ಯಕೀಯ ನೆರವು ಮತ್ತು ರಕ್ಷಣೆ ಒದಗಿಸಬೇಕು” ಎಂದು ಮಹೇಂದ್ರ ಅವರು ಆಗ್ರಹಿಸಿದ್ದಾರೆ.




